ಒಂದಕ್ಕೊಂದು ಸಂಬಂಧವಿಲ್ಲ. ಆದರೂ ಎರಡು ಚಿತ್ರಗಳ ಪ್ರಸ್ತಾಪ. ‘ಕಾಂತಾರ’ ಮತ್ತು ‘ಕೊರಗಜ್ಜ’. ಅದು ಚಿತ್ರಗಳ ಕುರಿತಂತೆ ಅಲ್ಲ. ಅದರ ನಿರ್ಮಾಪಕರ ಬಗೆಗೂ ಅಲ್ಲ. ಸಂಪೂರ್ಣವಾಗಿ ನಿರ್ದೇಶಕರ ಬಗೆಗೂ ಅಲ್ಲ. ದೈವಗಳನ್ನು ತೆರೆಯ ಮೇಲೆ ತರುವ ವಿಚಾರ. ಲೋಕೋತ್ತರ ಆಗುತ್ತಿರುವ ವಿಷಯ.
ಇದು ಆರಂಭವಾದದ್ದು ‘ಕಾಂತಾರ : ಒಂದು ದಂತ ಕಥೆ’ ಚಿತ್ರ ತೆರೆ ಕಂಡ ನಂತರ. ಕ್ಲೈಮಾಕ್ಸ್ ಆರಂಭ ‘ಕಾಂತಾರ ಒಂದು ದಂತ ಕಥೆ: ಅಧ್ಯಾಯ ೧’ ಈ ಚಿತ್ರದ ಚಿತ್ರೀಕರಣದ ವೇಳೆ. ರಿಷಭ್ ಶೆಟ್ಟಿ ಅವರು ತಮ್ಮ ಚಿತ್ರದ ಆರಂಭಕ್ಕೆ ಮೊದಲು ದೈವಾರಾಧನೆ, ದೈವಗಳ ಕುರಿತಂತೆ ಸಾಕಷ್ಟು ಮಂದಿಯ ಜೊತೆ ಚರ್ಚಿಸಿದ್ದರು. ಭೂತ ಕಟ್ಟುವ ಮಂದಿಯ ಜೊತೆ, ಇತರ ಪ್ರಾಜ್ಞರ ಜೊತೆ ಮಾತನಾಡಿ ಆ ಕುರಿತಂತೆ ಸಾಕಷ್ಟು ತಿಳಿದುಕೊಂಡಿದ್ದರು. ಮೊದಲ ‘ಕಾಂತಾರ’ದ ಗೆಲುವನ್ನು ಅರಗಿಸಿಕೊಳ್ಳಲು ಕೆಲವರಿಗೆ ಸಾಧ್ಯವಾಗಲಿಲ್ಲ.
ತಮಗೆ ಅವಕಾಶ ಸಿಕ್ಕಿಲ್ಲ ಎನ್ನುವ ಕಾರಣವೋ, ತಮಗೇ ಎಲ್ಲ ತಿಳಿದಿದೆ ಎನ್ನುವ ಭಾವವೋ ಒಟ್ಟಿನಲ್ಲಿ ‘ಕಾಂತಾರ’ದ ಮೊದಲ ಅಧ್ಯಾಯ ಚಿತ್ರೀಕರಣ ಆರಂಭವಾಗಿ ಮುಗಿಯುವವರೆಗೆ ಅದರ ವಿರುದ್ಧ ಒಂದು ರೀತಿಯ ಸಂಘಟಿತ ವಿರೋಧ ಇದೆ ಎನ್ನುವ ರೀತಿಯಲ್ಲಿ ಪ್ರಚಾರ ನಡೆದಿತ್ತು. ಇದೇನಿದ್ದರೂ ಫೇಕ್ ಸುದ್ದಿಗಳ ದಿನಗಳು ಎಂದರೂ ತಪ್ಪಿಲ್ಲ. ಪ್ರಚಾರದಲ್ಲಿ ಕಾಳೆಷ್ಟು ಜೊಳ್ಳೆಷ್ಟು ತಿಳಿಯುವುದೂ ಕಷ್ಟ. ತುಳುನಾಡಿನ ದೈವಗಳನ್ನು ತೆರೆಯಮೇಲೆ ತರಬಾರದು, ಅದರ ವ್ಯಾಪಾರೀಕರಣ ಆಗಕೂಡದು ಎನ್ನುವ ವಾದ ಒಂದು ವರ್ಗದ್ದು. ನಮ್ಮ ಸಂಸ್ಕೃತಿಯನ್ನು ಹೊರಗಿನವರಿಗೆ ಚಿತ್ರಗಳ ಮೂಲಕ ತಿಳಿಸುವುದರಲ್ಲಿ ತಪ್ಪೇನಿದೆ ಎನ್ನುವುದು ಇನ್ನೊಂದು ವರ್ಗದ ವಾದ.
ಇದನ್ನು ಓದಿ: ಮೂಲಸೌಕರ್ಯ ವಂಚಿತ ಹಣ್ಣಿನ ತೋಟ , ಕಾರ್ಯರೂಪಕ್ಕೆ ಬರದ ಸಿದ್ದಾಪುರ ಜನಪ್ರತಿನಿಧಿಳು
ಅವರವರಿಗೆ, ಅವರವರ ತಿಳಿವಳಿಕೆಗೆ ಅದು ಸರಿ ಇರಬಹುದು. ಇಲ್ಲವೇ ಹಾಗೆ ಹೇಳುವುದರ ಹಿಂದೆ ಇನ್ನೇನೋ ಲೆಕ್ಕಾಚಾರವೂ ಇರಬಹುದು. ಮೆರವಣಿಗೆಗಳಲ್ಲಿ, ಛದ್ಮವೇಶ ಸ್ಪರ್ಧೆಗಳಲ್ಲಿ ಮತ್ತಿತರ ಮನರಂಜನಾ ಕಾರ್ಯಕ್ರಮಗಳಲ್ಲಿ ದೈವನರ್ತನಗಳು ಕೂಡದು ಎಂದು ಕೇರಳದಲ್ಲಿ ಸಾರಲಾಗಿದೆ. ಆದರೂ ಅಲ್ಲಲ್ಲಿ ಅವು ನಡೆದೇ ಇದೆ. ನವರಾತ್ರಿ ದಿನಗಳಲ್ಲಿ, ಬೇರೆ ಬೇರೆ ವೇಷ ಹಾಕಿ ಬೀದಿಗಳಲ್ಲಿ ಬೇಡುವುದು ಹಿಂದೆ ಇತ್ತು. ಈಗಲೂ ಇದೆ. ಹುಲಿ ವೇಷಕ್ಕೆ ನವರಾತ್ರಿ ದಿನಗಳಲ್ಲಿ ಎಲ್ಲಿಲ್ಲದ ಬೇಡಿಕೆ. ಕೊರಗ ವೇಷ ಹಾಕುವ ಪದ್ಧತಿಯನ್ನು ಸರ್ಕಾರ ನಿಷೇಧಿಸಿದೆ. ‘ಕಾಂತಾರ’ ಚಿತ್ರದ ಚಿತ್ರೀಕರಣದ ಸಂದರ್ಭದಲ್ಲಿ ಎರಡು ಮೂರು ಘಟನೆಗಳು ನಡೆದವು.
ಒಂದೆರಡು ಸಾವೂ ಸೇರಿದಂತೆ. ದೈವಗಳ ಕಥೆಗಳನ್ನು ತೆರೆಯ ಮೇಲೆ ತರುವುದವನ್ನು ವಿರೋಧಿಸುವ ಮಂದಿಗೆ ಇದೇ ಸಾಕಾಯಿತು. ಈ ಸಾವು ಚಿತ್ರೀಕರಣ ವೇಳೆ ಸಂಭವಿಸಿತು ಎನ್ನುವಂತೆ ಒಟ್ಟಿನಲ್ಲಿ ಪ್ರಚಾರವಾಯಿತು. ಒಬ್ಬಾತ ಮದ್ಯಪಾನ ಮಾಡಿ, ಗೆಳೆಯರಜೊತೆ ಹೊಳೆಯಲ್ಲಿ ಸ್ನಾನ ಮಾಡಲು ಹೋದ ವೇಳೆ ಸತ್ತಿದ್ದನಂತೆ. ಮತ್ತೊಬ್ಬ ಜನಪ್ರಿಯ ಹಾಸ್ಯ ನಟನಿಗೆ, ಗೆಳೆಯರೊಬ್ಬರ ಮದುವೆ ಮನೆಗೆ ಬಂದ ಸಂದರ್ಭದಲ್ಲಿ ಹೃದಯಾಘಾತವಾಗಿತ್ತು. ಆದರೆ ಸುದ್ದಿಯಾದದ್ದು ಮಾತ್ರ ಚಿತ್ರೀಕರಣದಲ್ಲಿ ಎಂದಾಗಿತ್ತು.
‘ಕಾಂತಾರ’ದ ಮೊದಲ ಅಧ್ಯಾಯ ಚಿತ್ರ ತೆರೆ ಕಾಣದಂತೆ ಮಾಡಬೇಕು ಎಂದು ಭೂತದ ಮೊರೆಹೋದವರು, ಹರಕೆ ಹೊತ್ತವರೂ ಇದ್ದರು ಎನ್ನುವುದು ನಿಜವೇ ಆದರೆ ಅದರಷ್ಟು ಚೋದ್ಯದ ವಿಷಯ ಇನ್ನೊಂದಿಲ್ಲ.ತುಳುನಾಡಿನ ಯಾವ ದೈವಗಳೂ, ಒಬ್ಬರಿಗೆ ಕೆಡುಕು ಮಾಡಲು ಬೆನ್ನಿಗೆ ನಿಲ್ಲುವುದಿಲ್ಲ. ಏನಿದ್ದರೂ ಒಳಿತಷ್ಟೇ. ‘ತನ್ನನ್ನು ಆರಾಧಿಸುವ, ನಂಬುವ ಕುಟುಂಬ, ಸಂಸಾರಗಳ ಮಂದಿಗೆ ಎಲ್ಲ ವಿಷಯಗಳಲ್ಲೂ ಅಭಯ ನೀಡುವ, ರಕ್ಷಿಸುವ, ಅವರ ಏಳಿಗೆಗೆ ಒತ್ತಾಸೆಯಾಗುತ್ತಾ ಇರುವ ಜವಾಬ್ದಾರಿ’ ಅವುಗಳದು ಎನ್ನುವುದು ಅಲ್ಲಿನ ನಂಬಿಕೆ. ‘ಕಾಂತಾರ’ ಚಿತ್ರದಲ್ಲಿ ಪಂಜುರ್ಲಿ ಮತ್ತು ಗುಳಿಗನ ಪಾತ್ರಗಳ ಕುರಿತಂತೆ, ದೈವಗಳನ್ನು ತೆರೆಯ ಮೇಲೆ ತರಬಾರದು ಎಂದು ವಾದಿಸುವ ಮಂದಿಯ ವಾದವೇನೇ ಇದ್ದರೂ, ಆ ಚಿತ್ರ ತುಳುನಾಡಿನ ಕುರಿತಂತೆ ವಿಶ್ವಾದ್ಯಂತ ಗಮನಹರಿಸುವಂತೆ ಮಾಡಿದ್ದು ಸುಳ್ಳಲ್ಲ.
ಇದನ್ನು ಓದಿ: ಸಾಲುಮರದ ತಿಮ್ಮಕ್ಕ ಇನ್ನಿಲ್ಲ
ಭೂತಾರಾಧನೆಯ ಕುರಿತಂತೆಕುತೂಹಲಿಗಳು ಅದನ್ನುನೋಡಲೆಂದೇ ಬಂದ ಸಾಕಷ್ಟು ಪ್ರಸಂಗಗಳು ವರದಿಯಾಗಿವೆ. ಅಧ್ಯಾಯ-೧ರ ಪ್ರದರ್ಶನ ನೋಡುವ ವೇಳೆ ಒಂದೆರಡು ಕಡೆ ಪ್ರೇಕ್ಷಕರು ಮೈಮೇಲೆ ಬಂದಂತೆ ನಡೆದದ್ದು ಸಾಕಷ್ಟು ಗಮನಸೆಳೆದಪ್ರಸಂಗ. ಅದನ್ನೇ ಬಂಡವಾಳ ಮಾಡಿಕೊಂಡು, ಚಿತ್ರತಂಡವನ್ನು, ಪತ್ರಿಕಾಗೋಷ್ಠಿ ನಡೆಸಲು ಬೇಡಿಕೆ ಇಟ್ಟದ್ದು, ನಿರ್ಮಾಣ ಸಂಸ್ಥೆ ಕೋರಿದ್ದು ಎಲ್ಲ ಆಯಿತು. ಮೊದಲ ಕಾಂತಾರ ಚಿತ್ರ ಯಶಸ್ವಿಯಾದ ಹಿನ್ನೆಲೆಯಲ್ಲಿ ಹರಕೆ ತೀರಿಸಲು ಚಿತ್ರತಂಡ ದೈವಾರಾಧನೆ ಮಾಡಿತು. ಚಿತ್ರ ಪ್ರಾರಂಭಕ್ಕೆ ಮೊದಲೂ ಯಶಸ್ಸನ್ನು ಕೋರಿ ಇಂತಹದೇ ನೇಮ ಮಾಡಿಸಿತ್ತು ಸಂಸ್ಥೆ. ಇಂತಹದೇ ಆರಾಧನೆ, ಮತ್ತೊಂದು ದೈವದ ಚಿತ್ರವನ್ನು ನಿರ್ಮಿಸುತ್ತಿರುವ ತಂಡವೂ ಆಯೋಜಿಸಿದೆ. ಅದು ‘ಕೊರಗಜ್ಜ’ಚಿತ್ರತಂಡ.
ಇತ್ತೀಚಿನ ದಿನಗಳಲ್ಲಿ ಕಾರಣಿಕದ ದೈವ ಎಂದು ಸಾಕಷ್ಟು ಕೇಳಿಬರುತ್ತಿರುವ‘ಕೊರಗಜ್ಜ’ನನ್ನುತೆರೆಯ ಮೇಲೆ ತರುತ್ತಿರುವುದು ಸುಧಿರ್ ಅತ್ತಾವರ. ಈ ಕಥೆಯನ್ನು ತೆರೆಯ ಮೇಲೆ ತರಲು ಸಾಕಷ್ಟು ಮಂದಿ ತಜ್ಞರ ಜೊತೆ ಚರ್ಚಿಸಿ, ವಿವರಗಳನ್ನು ತಿಳಿದುಕೊಂಡಿರುವುದಾಗಿ ಅವರ ಅಂಬೋಣ. ವಿಶ್ವಾದ್ಯಂತ ಬೇರೆಬೇರೆ ದೇಶಗಳಲ್ಲಿ, ಬೇರೆ ಜನಾಂಗಗಳಲ್ಲಿ ಆಯಾಸ್ಥಳೀಯ ನಂಬಿಕೆಗಳು ಆರಾಧನೆಗಳ ಕುರಿತಂತೆ ಅಧ್ಯಯನ ಮಾಡಿದ್ದಾಗಿ ಹೇಳುವ ಅವರು ತಮ್ಮ ಚಿತ್ರವನ್ನು ಕೊರಗ ಜನಾಂಗದ ಬಯೋಪಿಕ್ ಎಂದು ಹೇಳುತ್ತಾರೆ. ಮೊನ್ನೆ ಚಿತ್ರದ ಆಡಿಯೋ ಬಿಡುಗಡೆ ಮತ್ತು ಕೊರಗಜ್ಜನ ಕೋಲವನ್ನು ಚಿತ್ರ ತಂಡ ಆಯೋಜಿಸಿತ್ತು.
ಮಂಗಳೂರಿನಲ್ಲಿ. ಕನ್ನಡ ಮಾತ್ರವಲ್ಲದೆ ತುಳು ಮತ್ತು ಇತರ ಭಾಷೆಗಳಿಗೆ ಡಬ್ ಆಗಿರುವ ಈ ಚಿತ್ರದ ಹಾಡುಗಳ ಹಕ್ಕನ್ನುಝೀ ಮ್ಯೂಸಿಕ್ ಪಡೆದುಕೊಂಡಿದೆ. ಕನ್ನಡ ಚಿತ್ರವೊಂದರ ಆಡಿಯೋಹಕ್ಕನ್ನು ಆ ಸಂಸ್ಥೆ ಪಡೆಯುತ್ತಿರುವುದು ಇದೇ ಮೊದಲಂತೆ. ಅಖಿಲ ಭಾರತವ್ಯಾಪ್ತಿಯ ಚಿತ್ರವಾದ್ದರಿಂದ ಅಂದು ಕನ್ನಡ ಮಾತ್ರವಲ್ಲದೆ, ಇತರ ಭಾಷೆಗಳ ಪತ್ರಕರ್ತರನ್ನೂ ಕರೆಸಿಕೊಂಡಿದ್ದರು ನಿರ್ಮಾಪಕರು. ಕೊರಗಜ್ಜನ ಕೋಲವನ್ನು ಈ ಹಿಂದೆ ಚಿತ್ರೀಕರಣ ಮುಗಿದಾಗಲೂ ಒಮ್ಮೆ ಮಾಡಿಸಿದ್ದರಂತೆ ನಿರ್ಮಾಪಕರು. ಈ ಕಥೆಯನ್ನು ತೆರೆಗೆ ತರುವುದು ಸುಲಭವಲ್ಲ ಎನ್ನುವುದು ಅದರನ್ನು ಕೈಗೆತ್ತಿಕೊಂಡು ನಂತರ ಬಿಟ್ಟ ನಿರ್ಮಾಪಕರಾದ ಜೈಜಗದೀಶ್ ದಂಪತಿಯ ಮಾತು. ಚಿತ್ರೀಕರಣ ಮಾಡಲು ಹೊರಟವರಿಗೆ ಒಂದಿಲ್ಲೊಂದು ವಿಘ್ನ ಎದುರಾಗುತ್ತಿತ್ತು.
ಇದನ್ನು ಓದಿ: ಮೆಗ ಗೆಲುವಿನತ್ತ ಎನ್‌ಡಿಎ ದಾಪುಗಾಲು ; ಮಹಾಘಟ್ಬಂಧನ್‌ಗೆ ಭಾರಿ ಹಿನ್ನೆಡೆ
ಕೊನೆಗೆ ಇದರ ಕುರಿತಂತೆ ‘ಪ್ರಶ್ನೆ’ ಕೇಳಿದಾಗ ಇದು ನಿಮಗೆ ಆಗಿಬರುವುದಿಲ್ಲ ಎಂದು ಉತ್ತರ ಸಿಕ್ಕಿತಂತೆ. ಹಾಗಾಗಿ ‘ಕೊರಗಜ್ಜ’ ಶೀರ್ಷಿಕೆಯನ್ನು ಸುಽರ್ ಅವರಿಗೆ ನೀಡಿದ್ದಾಗಿ ಸಮಾರಂಭದಲ್ಲಿದ್ದ ವಿಜಯಲಕ್ಷ್ಮೀ ಸಿಂಗ್ ಹೇಳಿದರು. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ. ಅಲ್ಲಿನ ಪತ್ರಕರ್ತರಿಗೆ ಪರ-ವಿರೋಧಗಳ ಮಾಹಿತಿ ಇತ್ತು. ತುಳುನಾಡಿನ ದೈವಗಳ ಚಿತ್ರಗಳು ಬಂದಾಗ ಅದನ್ನು ನೋಡಿದ ಪ್ರೇಕ್ಷಕರಲ್ಲಿ ಕೆಲವರ ವರ್ತನೆ, ಅದರಂತೆ ನಟನೆ ಇವೆಲ್ಲ ಸರಿಯಲ್ಲ, ವೇದಿಕೆಯ ಮೇಲೆ, ಸ್ಪರ್ಧೆಗಳಲ್ಲಿ ಈ ವೇಷಗಳನ್ನು ಹಾಕಬಾರದು ಎಂದು ಚಿತ್ರದ ನಿರ್ದೇಶಕರು ಪ್ರಕಟಿಸಬಾರದೇಕೆ ಎನ್ನುವ ಪ್ರಶ್ನೆ ಅಲ್ಲಿತ್ತು. ಆದರೆ ಸುಧಿರ್ ಅತ್ತಾವರ ಅವರ ಉತ್ತರ ಪ್ರಶ್ನೆಯ ರೂಪದಲ್ಲೇ ಇತ್ತು. ದೇವರು, ದೈವ ಎಲ್ಲ ಒಂದೇ ಎಂದು ನಂಬುತ್ತೀರಿ.
ರಾಮನ ವೇಷ ಹಾಕಿ ಮೆರವಣಿಗೆಯಲ್ಲಿ, ವೇದಿಕೆಯಲ್ಲಿ ಕಾಣಿಸಿಕೊಳ್ಳುವುದು ಸರಿ ಎಂದಾದರೆ ಕೊರಗಜ್ಜನನ್ನು ಯಾಕೆ ವಿರೋಧಿಸಬೇಕು? ಸಾಕಷ್ಟು ವಾದ ವಿವಾದಗಳಿಗೆ ಮೂಲವಾಗಿರುವ ವಿಷಯಗಳಲ್ಲಿ ಇದೂ ಒಂದು. ಹೊಸ ವರ್ಷದ ಮೊದಲ ವಾರ ಕೊರಗಜ್ಜ ತೆರೆಯ ಮೇಲೆ ಬರುವುದನ್ನು ನಿರ್ಮಾಪಕರು ಪ್ರಕಟಿಸಿದರು. ಅಖಿಲ ಭಾರತ ವ್ಯಾಪ್ತಿಯ ಚಿತ್ರ ಎನ್ನುವುದನ್ನು ಸಾದರಪಡಿಸಲೋ ಎಂಬಂತೆ ಮುಂಬೈಯಿಂದಲೇ ನಿರೂಪಕಿ ಕೂಡಾ ಇದ್ದರು. ಆಕೆಗೆ ಹಿಂದಿಮೋಹ. ಕರ್ನಾಟಕದಲ್ಲಿ ದ್ವಿಭಾಷಾ ನೀತಿ ಸಾಧ್ಯತೆಯ ಕುರಿತು ಚರ್ಚಿಸುತ್ತಿರುವ ವಿಷಯ ಪಾಪ ಆಕೆಗೆ ಗೊತ್ತಿದ್ದಂತಿಲಿಲ್ಲ.
ಕೊನೆಗೆ ಮಾಧ್ಯಮದ ಮಂದಿಯೇ ಆಕೆಯ ಹಿಂದಿ ಪ್ರೀತಿಯನ್ನು ಅಲ್ಲಿ ನಿಯಂತ್ರಿಸಿದರು. ಹ್ಞಾಂ, ದೈವಗಳನ್ನು ತೆರೆಯ ಮೇಲೆ ತರಬಾರದು ಎಂದು ಹೇಳುವವರ ಪೈಕಿ, ಹಿಂದೆ ಅದೇ ಪಾತ್ರದಲ್ಲಿ ನಟಿಸಿದ್ದನ್ನು ಅವರು ಮರೆತದ್ದು ಮಾತ್ರಚೋದ್ಯ ಎನ್ನುವುದು ಈ ಬೆಳವಣಿಗೆಯ ಒಳಹೊರಗನು ಬಲ್ಲವರ ಅಂಬೋಣ. ಅನುಕೂಲ ಸಿಂಧು ಎನ್ನುವ ಮಾತು ಇಂತಹವರಿಂದಲೇ ಬಂದಿರಬೇಕು ಎಂದು ಹೇಳುತ್ತಾರೆ ಅವರು. ” ತುಳುನಾಡಿನ ದೈವಗಳನ್ನು ತೆರೆಯ ಮೇಲೆ ತರಬಾರದು, ಅದರ ವ್ಯಾಪಾರೀಕರಣ ಆಗಕೂಡದುಎನ್ನುವ ವಾದ ಒಂದು ವರ್ಗದ್ದು. ನಮ್ಮ ಸಂಸ್ಕೃತಿಯನ್ನು ಹೊರಗಿನವರಿಗೆ ಚಿತ್ರಗಳ ಮೂಲಕ ತಿಳಿಸುವುದರಲ್ಲಿತಪ್ಪೇನಿದೆ ಎನ್ನುವುದು ಇನ್ನೊಂದು ವರ್ಗದ ವಾದ. ಅವರವರಿಗೆ, ಅವರವರ ತಿಳಿವಳಿಕೆಗೆ ಅದು ಸರಿ ಇರಬಹುದು”
–ವೈಡ್ ಆಂಗಲ್ ಬಾ.ನಾ.ಸುಬ್ರಹ್ಮಣ್ಯ





