ಪ್ರೊ.ಆರ್.ಎಂ.ಚಿಂತಾಮಣಿ ಮೂಲ ಉದ್ಯಮ ವಲಯವೆಂದೇ (Core Sector) ಕರೆಯಲ್ಪಡುವ ಕಲ್ಲಿದ್ದಲು, ಕಚ್ಚಾ ತೈಲ, ತೈಲ ಶುದ್ಧೀಕರಿಸಿದ ಉತ್ಪನ್ನಗಳು, ನೈಸರ್ಗಿಕ ಅನಿಲ, ರಸಗೊಬ್ಬರಗಳು, ಉಕ್ಕು, ಸಿಮೆಂಟ್ ಮತ್ತು ವಿದ್ಯುಚ್ಛಕ್ತಿ ಈ ಎಂಟು ಉದ್ದಿಮೆಗಳು ದೇಶದ ಆರ್ಥಿಕ ಬೆಳವಣಿಗೆಗೆ ಆಧಾರ ಒದಗಿಸುತ್ತವೆ. ದೇಶದ ಕೈಗಾರಿಕಾ ಉತ್ಪಾದನಾ ಸೂಚ್ಯಂಕದಲ್ಲಿ ಇವುಗಳ ಮಹತ್ವ (Weightage) ಶೇ. ೪೦.೪೭ರಷ್ಟಿದೆ.
ಕಳೆದ ವರ್ಷದ ಮೇ ತಿಂಗಳ ಬೆಳವಣಿಗೆಗೆ ಹೋಲಿಸಿದರೆ ಈ ಮೇನಲ್ಲಿ ನಾಲ್ಕರಲ್ಲಿ ಮುನ್ನಡೆ ಕಂಡು ಬಂದಿದ್ದರೆ ಇತರ ನಾಲ್ಕರಲ್ಲಿ ಹಿನ್ನಡೆಯಾಗಿದೆ. ಒಟ್ಟಾರೆ ಸರಾಸರಿ ಶೇ.೦೭ರಷ್ಟು ಮಾತ್ರ ಬೆಳವಣಿಗೆಯಾಗಿದ್ದು ಕಂಡುಬರುತ್ತದೆ. ಇದೇ ಏಪ್ರಿಲ್ ತಿಂಗಳಲ್ಲಿ ಈ ಉದ್ದಿಮೆಗಳ ಉತ್ಪಾದನೆಯಲ್ಲಿ ಹೇಳಿಕೊಳ್ಳುವಂತಹ ಬೆಳವಣಿಗೆ ಕಂಡಿಲ್ಲವಾದರೂ ಶೇ.೦೧. ೦ರಷ್ಟು ದಾಖಲಾಗಿದೆ ಎಂದು ಕಳೆದ ವಾರಾಂತ್ಯದಲ್ಲಿ (ಶುಕ್ರವಾರ) ಬಿಡುಗಡೆಯಾಗಿರುವ ಅಧಿಕೃತ ಅಂಕಿ ಸಂಖ್ಯೆಗಳಿಂದ ತಿಳಿದು ಬರುತ್ತದೆ. ಇವುಗಳನ್ನು ಇತರ ಎಲ್ಲ ಕೈಗಾರಿಕೆಗಳು, ಕೃಷಿ ಮತ್ತು ಇತರ ಆರ್ಥಿಕ ಚಟುವಟಿಕೆಗಳ ಶಕ್ತಿ ಮೂಲಗಳೆಂದೂ ಕರೆಯಬಹುದು. ಇಲ್ಲಿರುವ ಸಂಖ್ಯಾ ಪಟ್ಟಿಯಲ್ಲಿ ಈ ಉದ್ದಿಮೆಗಳ ಇದೇ ಮೇ ತಿಂಗಳಲ್ಲಿಯ ಬೆಳವಣಿಗೆಯ ಪ್ರಮಾಣವನ್ನು ಕೊಡಲಾಗಿದೆ.
ಅತಿ ಹೆಚ್ಚು ಹಿನ್ನಡೆಯಾಗಿರುವುದು (ಶೇ.೫.೯)ಗೊಬ್ಬರಗಳ ಉತ್ಪಾದನೆಯಲ್ಲಿ. ಏಪ್ರಿಲ್‌ನಲ್ಲಿಯೂ ಪರಿಸ್ಥಿತಿ ಅಂಥ ಉತ್ತಮವಾಗೇನೂ ಇರಲಿಲ್ಲ. ಮುಂಗಾರು ಮಳೆ ಈ ವರ್ಷ ಒಂದು ವಾರ ಮೊದಲೇ ಬಂದಿದ್ದು, ಉತ್ತಮ ಮಳೆಗಾಲದ ಅಂದಾಜುಗಳಿವೆ. ರೈತರು ಮುಂಗಾರು ಬಿತ್ತನೆ ಮತ್ತು ನಂತರದ ಬೆಳೆ ಪೋಷಣೆಗಾಗಿ ಈಗಾಗಲೇ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಈ ಹಂಗಾಮಿನಲ್ಲಿ ಗೊಬ್ಬರಗಳಿಗೆ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದೆ. ಬರುವ ತಿಂಗಳುಗಳಲ್ಲಿ ಗೊಬ್ಬರಗಳ ಉತ್ಪಾದನೆ ಹೆಚ್ಚಾಗದಿದ್ದರೆ ಕೊರತೆ ಉಂಟಾಗುವ ಆತಂಕವಿದೆ. ಆದ್ದರಿಂದ ಗೊಬ್ಬರಗಳ ಉತ್ಪಾದನೆಯನ್ನು ಮುಂದಿನ ತಿಂಗಳುಗಳಲ್ಲಿ ಹೆಚ್ಚಿಸುವ ಅವಶ್ಯಕತೆ ಇದೆ. ಅಲ್ಲದೆ ರೈತರಿಗೆ ಸರಿಯಾದ ಸಮಯದಲ್ಲಿ ಲಭ್ಯವಾಗುವಂತೆ ಸರ್ಕಾರ ಕ್ರಮ ತೆಗೆದುಕೊಂಡು ಖಾಸಗಿ ಮತ್ತು ಸರ್ಕಾರಿ (ಸಹಕಾರ ಸಂಘಗಳೂ ಸೇರಿ) ಗೋಡೌನ್‌ಗಳಿಂದ ಗೊಬ್ಬರಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವಂತೆ ವ್ಯವಸ್ಥೆ ಮಾಡಬೇಕಾಗುತ್ತದೆ.
ಉಳಿದವುಗಳಲ್ಲಿ ಮೂರರ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿರುವುದು ಶೇ.೫.೮ರಷ್ಟು ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಮೇ ಕೊನೆ ವಾರದಲ್ಲಿ ಮಾನ್ಸೂನ್ ಒಂದು ವಾರ ಬೇಗ ಬಂದಿದ್ದರಿಂದ ಮಳೆ ಹೆಚ್ಚಾಗಿದ್ದರಿಂದ ಹೀಗಾಗಿರಬಹುದೆಂದು ನಂಬಲಾಗಿದೆ. ಅರ್ಥ ವ್ಯವಸ್ಥೆಯಲ್ಲದೆ ಜನಜೀವನದ ಎಲ್ಲ ರಂಗಗಳಲ್ಲಿಯೂ ವಿದ್ಯುಚ್ಛಕ್ತಿ ಅನಿವಾರ್ಯದ ಅವಶ್ಯಕತೆಯಾಗಿದೆ. ಮುಂದಿನದಿನಗಳಲ್ಲಿ ಇದರ ಉತ್ಪಾದನೆ ಮತ್ತು ಪೂರೈಕೆಯಲ್ಲಿ ವ್ಯತ್ಯಾಸವಾಗದಂತೆ ಎಚ್ಚರ ವಹಿಸಬೇಕಾದ ಅವಶ್ಯಕತೆ ಇದೆ.
ಈ ಎಂಟು ಚಾಲಕ ಉದ್ಯಮಗಳ ಉತ್ಪಾದನಾ ಬೆಳವಣಿಗೆ ಸೂಚ್ಯಂಕ (Index of Core Industries)ಕಳೆದ ಮೇ ತಿಂಗಳಲ್ಲಿ ಶೇ.೬.೯ರಷ್ಟು ಬೆಳೆದಿತ್ತು. ಇದಕ್ಕೆ ಹೋಲಿಸಿದಾಗ ಮೇ ತಿಂಗಳಿನಲ್ಲಿಯ ಬೆಳವಣಿಗೆ ತೀರಾ ಕಡಿಮೆ ಎನಿಸುತ್ತದೆ. ವಾಸ್ತವವಾಗಿ ಬೆಳವಣಿಗೆಯಾಗುತ್ತಿದ್ದು, ಸ್ವಲ್ಪ ಕಡಿಮೆಯಾಗಿದೆ. ಏಪ್ರಿಲ್ ವಿಷಯದಲ್ಲಿಯೂ ಇದನ್ನೇ ಹೇಳಬಹುದು ಒಟ್ಟಾರೆ ಜಿಡಿಪಿ (ರಾಷ್ಟ್ರೀಯ ಒಟ್ಟಾದಾಯ Gross Domestic Prouduct) ಬೆಳವಣಿಗೆಯಲ್ಲಿ ಇವುಗಳ ಪಾತ್ರ ಮಹತ್ವದ್ದು.
ಜಿಡಿಪಿ ಬೆಳವಣಿಗೆ ಮೇಲೆ ಪರಿಣಾಮ ಬೀರಬಹುದೇ?: ಈ ಹಣಕಾಸು ವರ್ಷದ (೨೦೨೫-೨೬) ಮೊದಲೆರಡು ತಿಂಗಳು ಚಾಲಕ ಉದ್ದಿಮೆಗಳ ಬೆಳವಣಿಗೆ ತೀರಾ ಕಡಿಮೆ ಇರುವುದರಿಂದ ಅವು ಮುಂದಿನ ಹತ್ತು ತಿಂಗಳುಗಳಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಸಾಧಿಸುತ್ತವೆ ಎಂದರೂ ಈ ಎರಡು ತಿಂಗಳ ಕೊರಕಲನ್ನು ತುಂಬಿಕೊಂಡು ಜಿ.ಡಿ.ಪಿ.ಹೆಚ್ಚಿನ ಬೆಳವಣಿಗೆ ಸಾಧಿಸಲು ಸಾಧ್ಯವಾದೀತೆ ಎಂಬುದು ತಜ್ಞರ ಅನುಮಾನ. ಈಗಾಗಲೇ ರಿಸರ್ವ್ ಬ್ಯಾಂಕ್ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳು ನಮ್ಮ ಜಿ.ಡಿ.ಪಿ. ೨೦೨೫-೨೬ರಲ್ಲಿ ಶೇ.೬.೦ಯಿಂದ ಶೇ.೬.೫ರವರೆಗೆ ಬೆಳವಣಿಗೆ ಕಾಣಬಹುದೆಂದು ಅಂದಾಜುಗಳನ್ನು ಪ್ರಕಟಿಸಿವೆ. ನಮ್ಮ ‘ವಿಕಸಿತ ಭಾರತ’ ದ ಗುರಿಯನ್ನು ನಿಗದಿತ ಅವಧಿಯಲ್ಲಿ ಸಾಧಿಸಲು ಇದು ಏನೇನೂ ಸಾಲದು. ೨೦೩೦ರ ಹೊತ್ತಿಗಾದರೂ ನಾವು ಜಿ.ಡಿ.ಪಿ.ಯ ವಾರ್ಷಿಕ ಬೆಳವಣಿಗೆ ಯನ್ನು ಶೇ.೯.೫-೧೦.೦ಕ್ಕೆ ತಲುಪಿಸಬೇಕು. ಅಂದರೆ ನಾವು ಮುಂದಿನ ೧೭ ವರ್ಷಗಳಲ್ಲಿ ಮೇಲ್ಮಧ್ಯಮ ವರ್ಗದ ದೇಶಗಳನ್ನು ದಾಟಿ ಅಭಿವೃದ್ಧಿ ಹೊಂದಿದ ದೇಶಗಳ ಗುಂಪಿಗೆ ಸೇರಬಹುದು. ಇದಕ್ಕೆ ಸಾಕಷ್ಟು ಪರಿಶ್ರಮಬೇಕು.
ನಮ್ಮ ರಾಜಕೀಯ ಪಕ್ಷಗಳೂ ಸೇರಿ ಎಲ್ಲರೂ ಒಂದೇ ಮನಸ್ಸಿನಿಂದ ಗುರಿಯತ್ತ ನಡೆಯಬೇಕಾಗುತ್ತದೆ. ಜಿ.ಡಿ.ಪಿ. ಬೆಳೆದರೆ ಸಾಲದು, ಅದು ದೇಶದ ಎಲ್ಲ ಜನರಲ್ಲಿ ಸಮರ್ಪಕವಾಗಿ ಹಂಚಲ್ಪಟ್ಟು ವಾರ್ಷಿಕ ರಾಷ್ಟ್ರೀಯ ಸರಾಸರಿ ತಲಾ ಆದಾಯ ಹೆಚ್ಚಬೇಕು. ಅಲ್ಲದೆ ಅತಿ ಶ್ರೀಮಂತ ಮತ್ತು ಕಟ್ಟಕಡೆಯ ವ್ಯಕ್ತಿಯ ಆದಾಯಗಳ ನಡುವಿನ ಅಂತರ ಕಡಿಮೆಯಾಗಬೇಕು. ದೇಶದ ಸಂಪತ್ತು ಎಲ್ಲರಲ್ಲಿಯೂ ನ್ಯಾಯಯುತವಾಗಿ ಹಂಚಲ್ಪಡಬೇಕು, ಎಲ್ಲರೂ ನೆಮ್ಮದಿಯಿಂದ ಬದುಕಲು ಬೇಕಾಗುವ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲು ಸಾಕಷ್ಟು ಸಂಪನ್ಮೂಲ ಹೊಂದುವಂತೆ ಮಾಡಬೇಕು. ಆಗ ‘ಕಲ್ಯಾಣ ರಾಜ್ಯ’ ವಾದಕ್ಕೆ (Welfare State) ಮತ್ತು ಗಾಂಧೀಜಿಯವರ ‘ರಾಮರಾಜ್ಯ’ ಪರಿಕಲ್ಪನೆಗೆ ಅರ್ಥ ಬರುತ್ತದೆ.
ಇದಕ್ಕಾಗಿ ಚಾಲಕ ಉದ್ದಿಮೆಗಳಲ್ಲಿಯ ಉತ್ಪಾದನೆ ನಿರಂತರವಾಗಿ ವೇಗವಾಗಿ ಬೆಳೆಯುತ್ತಿರಬೇಕು.ಸ್ವಲ್ಪ ಏರುಪೇರಾದರೂ ಇತರ ಕೈಗಾರಿಕೆಗಳು ಮತ್ತು ಆರ್ಥಿಕ ಚಟುವಟಿಕೆಗಳ ಮೇಲೆ ಪರಿಣಾಮವಾಗುತ್ತದೆ. ಹೊಗೆಯುಗುಳುವ ಕಲ್ಲಿದ್ದಲು ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಉಪಯೋಗ ಇನ್ನಷ್ಟು ಅವಧಿ ಅನಿವಾರ್ಯವಾದರೂ ಪರಿಸರ ಸ್ನೇಹಿ ಪರ್ಯಾಯ ಇಂಧನ ಮತ್ತು ಶಕ್ತಿ ಮೂಲಗಳ ಹುಟುಕಾಟ ತೀವ್ರಗೊಳ್ಳಬೇಕು. ಎಲ್ಲರೂ ಚಿಂತಿಸಬೇಕು.
” ಈ ಹಣಕಾಸು ವರ್ಷದ (೨೦೨೫-೨೬) ಮೊದಲೆರಡು ತಿಂಗಳು ಚಾಲಕ ಉದ್ದಿಮೆಗಳ ಬೆಳವಣಿಗೆ ತೀರಾ ಕಡಿಮೆ ಇರುವುದರಿಂದ ಅವು ಮುಂದಿನ ಹತ್ತು ತಿಂಗಳುಗಳಲ್ಲಿ ನಿರೀಕ್ಷಿತ ಬೆಳವಣಿಗೆಯನ್ನು ಸಾಽಸುತ್ತವೆ ಎಂದರೂ ಈ ಎರಡು ತಿಂಗಳ ಕೊರಕಲನ್ನು ತುಂಬಿಕೊಂಡು ಜಿ.ಡಿ.ಪಿ.ಹೆಚ್ಚಿನ ಬೆಳವಣಿಗೆ ಸಾಧಿಸಲು ಸಾಧ್ಯವಾದೀತೆ ಎಂಬುದು ತಜ್ಞರ ಅನುಮಾನ. ಈಗಾಗಲೇ ರಿಸರ್ವ್ ಬ್ಯಾಂಕ್ ಸೇರಿದಂತೆ ವಿವಿಧ ಸಂಶೋಧನಾ ಸಂಸ್ಥೆಗಳು ನಮ್ಮ ಜಿ.ಡಿ.ಪಿ. ೨೦೨೫-೨೬ರಲ್ಲಿ ಶೇ.೬.೦ಯಿಂದ ಶೇ.೬.೫ರವರೆಗೆ ಬೆಳವಣಿಗೆ ಕಾಣಬಹುದೆಂದು ಅಂದಾಜುಗಳನ್ನು ಪ್ರಕಟಿಸಿವೆ”
– ಪ್ರೊ.ಆರ್.ಎಂ.ಚಿಂತಾಮಣಿ





