Mysore
24
broken clouds

Social Media

ಗುರುವಾರ, 15 ಜನವರಿ 2026
Light
Dark

ಸಂಶೋಧನೆ, ನಾವೀನ್ಯತೆಗಳಿಗೆ ಸರ್ಕಾರದ ನಿಧಿ 

Research, Development and Innovation

ಕೇಂದ್ರ ಸರ್ಕಾರವು ಖಾಸಗಿ ಕಂಪೆನಿಗಳಲ್ಲಿ ಸಂಶೋಧನೆ, ಅಭಿವೃದ್ಧಿ ಮತ್ತು ನಾವೀನ್ಯತೆಗಳನ್ನು (Research, Development and
Innovation) ಪ್ರೋತ್ಸಾಹಿಸಲು ಹೊಸ ಯೋಜನೆಗಳನ್ನು ರೂಪಿಸಿದೆ. ಕಳೆದ ವಾರದ ಸಚಿವ ಸಂಪುಟ ಸಭೆಯ ಒಂದು ನಿರ್ಣಯದಂತೆ ಈ ಉದ್ದೇಶಗಳಿಗೆ ದೀರ್ಘಾವಧಿ ಸಾಲ ಒದಗಿಸಲು ಒಂದು ಲಕ್ಷ ಕೋಟಿ ರೂಪಾಯಿಗಳ ನಿಧಿಯೊಂದನ್ನು ಸ್ಥಾಪಿಸಲಾಗುವುದು. ಈ ನಿಧಿಯಿಂದ ಮರು ಸಾಲ ವ್ಯವಸ್ಥೆಯೂ (Refinancing) ಇದೆ ಎಂದು ಪ್ರಕಟಿಸಲಾಗಿದೆ. ಅಂದರೆ ಈ ಉದ್ದೇಶಗಳಿಗಾಗಿ ಸಾಲ ಕೊಡುವ ಪರ್ಯಾಯ ಬಂಡವಾಳ, ಬಂಡವಾಳ ನಿಧಿಗಳು, ಉದ್ಯಮಶೀಲತಾ ನಿಧಿಗಳು ಮತ್ತು ಬ್ಯಾಂಕೇತರ ಹಣಕಾಸು ಕಂಪೆನಿಗಳಿಗೆ ಮರು ಹಣಕಾಸು ಒದಗಿಸಲಾಗುವುದು. ಅಭಿವೃದ್ಧಿ ಹಣಕಾಸು ಸಂಸ್ಥೆಗಳಿಗೂ ಈ ಸೌಲಭ್ಯ ವಿರುತ್ತದೆ.

ವಿಶೇಷವಾಗಿ ರಕ್ಷಣೆ, ಶಕ್ತಿ ಮೂಲ (Energy) ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ (Artificial intelligence) ಯಂತಹ ಹೊಸ ತಲೆ ಮಾರಿನ (SunRise) ಉದ್ದಿಮೆಗಳಲ್ಲಿಯ ಸಂಶೋಧನೆ ಮತ್ತು ನಾವೀನ್ಯತೆಗಳಿಗೆ ಆದ್ಯತೆ ಕೊಡಲಾಗುವುದು.

ಈ ನಿಧಿಯ ನಿರ್ವಹಣೆಯನ್ನು ಆತ್ಮ ನಿರ್ಭರ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನಕ್ಕೆ ವಹಿಸಲಾಗುತ್ತಿದ್ದು, ಅದರ ಅಧ್ಯಕ್ಷರು ಪ್ರಧಾನ ಮಂತ್ರಿಗಳೇ ಆಗಿರುತ್ತಾರೆ ಎಂದು ಹೇಳಲಾಗಿದೆ. ಒಟ್ಟಾರೆ ಖಾಸಗಿ ವಲಯದಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳಲ್ಲಿ ಹೂಡಿಕೆಗಳು ಹೆಚ್ಚಾಗಬೇಕು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿರಬೇಕು ಎಂಬುದು ಯೋಜನೆಯ ಉದ್ದೇಶ.

ಸಂಶೋಧನೆ ಮತ್ತು ನಾವೀನ್ಯ: ಸಾಮಾನ್ಯವಾಗಿ ಸಂಶೋಧನೆ ಎಂದರೆ ಜ್ಞಾನ ಮತ್ತು ಅನುಭವ ಬಳಸಿಕೊಂಡು ಸತತ ಪ್ರಯತ್ನದಿಂದ ಹೊಸ ಆವಿಷ್ಕಾರಗಳನ್ನು (Inventions) ಅಸ್ತಿತ್ವಕ್ಕೆ ತರುವುದು. ಇದು ಸಾಮಾಜಿಕ, ಆರ್ಥಿಕ , ವಿಜ್ಞಾನಗಳೂ ಸೇರಿದಂತೆ ಎಲ್ಲ ವಿಜ್ಞಾನಗಳಲ್ಲಿಯೂ ಅತ್ಯವಶ್ಯಕ. ಹೊಸದನ್ನು ಹುಡುಕಲು ಹುಚ್ಚು ಹಿಡಿದಂತೆ ಒಂದೇ ವಿಷಯದಲ್ಲಿ ಚಿಂತನ, ಅಧ್ಯಯನ, ವಿಚಾರ ಮಂಥನ, ಪ್ರಯೋಗ ಮತ್ತು ಪಾರದರ್ಶಕತೆ ನಿರಂತರವಾಗಿ ನಡೆಯುತ್ತಿರಬೇಕು. ಇವೆಲ್ಲದರ ಪರಿಣಾಮವಾಗಿ ಕಂಡು ಹಿಡಿದ ಸೂತ್ರಗಳು ಮತ್ತು ಆವಿಷ್ಕಾರಗಳು ಮಾನವಾಭಿವೃದ್ಧಿಗೆ ಉಪಯುಕ್ತವಾಗಬೇಕು. ಸಮಸ್ಯೆಗಳಿಗೆ ಪರಿಹಾರಗಳನ್ನು ಒದಗಿಸಬೇಕು. ಆದ್ದರಿಂದ ಶ್ರೇಷ್ಠ ಸಂಶೋಧಕರಾದ ಗೆಲಿಲಿಯೋ, ಐನ್‌ಸ್ಟನ್, ಆಡಂ ಸ್ಮಿತ್‌ಮತ್ತು ಜಾನ್ ಮೆಯ್ನಾರ್ಡ್ ಕೀನ್ಸ್ ಮುಂತಾದ ಮಹಾನ್ ವ್ಯಕ್ತಿಗಳು ಇಂದಿಗೂ ಪ್ರಸ್ತುತರು ಮತ್ತು ಮುಂದೆಯೂ ಪ್ರಸ್ತುತರಾಗಿರುತ್ತಾರೆ.

ಸಂಶೋಧನೆಯಲ್ಲಿ ಎರಡು ವಿಧ. ಒಂದು ಮೂಲ ಸಂಶೋಧನೆ (Basic or Fundamental Research) ಮತ್ತು ಇನ್ನೊಂದು ಅನ್ವಯಿಕ ಸಂಶೋಧನೆ (Applied Research) ಮೂಲ ಸಂಶೋಧನೆಯು ವಿಶ್ವವಿದ್ಯಾನಿಲಯಗಳಲ್ಲಿ, ಸಂಶೋಧನಾ ಸಂಸ್ಥೆಗಳಲ್ಲಿ ಮತ್ತು ಪ್ರಯೋಗಾಲಯಗಳಲ್ಲಿ ನಡೆಯುತ್ತದೆ. ಇದರಿಂದ ಸಮಸ್ಯೆಗಳಿಗೆ ಪರಿಹಾರ ರೂಪವಾಗಿ ಸೂತ್ರಗಳು ಮತ್ತು ಸಿದ್ಧಾಂತಗಳು ಹೊರ ಬರುತ್ತವೆ. ಮಾಹಿತಿ ಕಣಜಗಳು ಇಲ್ಲಿ ಇರುತ್ತವೆ.

ಈ ಸೂತ್ರ ಸಿದ್ಧಾಂತಗಳನ್ನು ಉಪಯೋಗಿಸಿಕೊಂಡು ಯಂತ್ರ ಉಪಕರಣ ಮತ್ತು ನೀತಿಗಳನ್ನು ರೂಪಿಸಲು ನಡೆಯುತ್ತಿರುವ ನಿರಂತರ ಯತ್ನಗಳೇ ಅನ್ವಯಿಕ ಸಂಶೋಧನೆ. ಇದು ಕಾರ್ಖಾನೆಗಳು , ಕಾರ್ಯಾಗಾರಗಳು ಮತ್ತು ಇತರ ಆರ್ಥಿಕ , ಸಾಮಾಜಿಕ ಚಟುವಟಿಕೆಗಳಲ್ಲಿ ನಡೆಯುತ್ತಿರುತ್ತದೆ. ನಿರಂತರವಾಗಿ ಸುಧಾರಣೆಗಳೂ ಮುಂದುವರಿಯುತ್ತಿರುತ್ತವೆ. ಎಲ್ಲ ಸಂಶೋಧನೆಗಳೂ ಮಾನವನ ಕಲ್ಯಾಣಕ್ಕೆ , ಜೀವ ವೈವಿಧ್ಯತೆಯ ರಕ್ಷಣೆಗೆ ಮತ್ತು ಪರಿಸರ ರಕ್ಷಣೆಗೆ ಬಳಕೆಯಾಗಬೇಕು. ಅಣು ಶಕ್ತಿಯಿಂದ ವಿದ್ಯುತ್ತನ್ನೂ ಉತ್ಪಾದಿಸಬಹುದು, ಅಣು ಬಾಂಬನ್ನೂ ತಯಾರಿಸಬಹುದು. ಅಣು ಬಾಂಬನ್ನು ದೇಶ ರಕ್ಷಣೆಗೂ ಬಳಸಬಹುದು. ಅಲ್ಲದೇ ವಿದ್ವಂಸಕ ಕೃತ್ಯಗಳಿಗೂ ಬಳಸಬಹುದು. ಸಂಶೋಧನೆಯ ಉಪಯೋಗ ಯಾವಾಗಲೂ ಸಕಾರಾತ್ಮಕವಾಗಿರಬೇಕು. ನಕಾರಾತ್ಮಕವಾಗಿರಬಾರದು.

ನಾವೀನ್ಯತೆ ಎಂದರೆ ಹೊಸತನಕ್ಕೆ ಇನ್ನಷ್ಟು ಹೊಸತನ ತುಂಬಿ ಹೆಚ್ಚು ಉಪಯುಕ್ತ ಮತ್ತು ಆಕರ್ಷಕಗೊಳಿಸುವುದು ಎಂದೆನ್ನಬಹುದು. ವಿನ್ಯಾಸಗಳಲ್ಲಿ ಸುಧಾರಣೆ ತರುವುದೂ ನಾವೀನ್ಯತೆಯೇ. ಇದನ್ನು ಸಂಶೋಧನೆಯ ಮುಂದುವರಿದ ಭಾಗ ಎಂದರೂ ಸರಿಯೆ ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡುವ ತಂತ್ರಗಳು ಮತ್ತು ವಿಧಾನಗಳೂ ನಾವೀನ್ಯತೆಯ ಹುಡುಕಾಟಗಳೇ ಆಗಿವೆ.

ಖಾಸಗಿ ವಲಯದಲ್ಲಿ ಸಂಶೋಧನೆಗಾಗಿ ಹೂಡಿಕೆ: ರಾಷ್ಟ್ರೀಯ ಒಟ್ಟಾದಾಯದ (ಜಿ.ಡಿ.ಪಿ.) ಲೆಕ್ಕದಲ್ಲಿ ಜಗತ್ತಿನಲ್ಲಿಯೇ ನಾಲ್ಕನೇ ಅತಿ ದೊಡ್ಡ ದೇಶವೆಂದು ಹೇಳಿಕೊಳ್ಳುವ ನಾವು ಸಂಶೋಧನೆ ಮತ್ತು ಅಭಿವೃದ್ಧಿಗಾಗಿ (ನಾವೀನ್ಯವೂ ಸೇರಿ) ಮಾಡುವ ವೆಚ್ಚ ತೀರಾ ಕಡಿಮೆ. ಅದು ಜಿ.ಡಿ.ಪಿ.ಯ ಕೇವಲ ಶೇ.೦೧.೦ರ ಆಚೆ ಈಚೆ. ನಮ್ಮಂತೆ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಶೇ. ೨.೫ಕ್ಕಿಂತ ಹೆಚ್ಚು ವಾರ್ಷಿಕ ಖರ್ಚು ಮಾಡುತ್ತಿವೆ. ದಕ್ಷಿಣ ಕೊರಿಯಾ, ಜಪಾನ್ ಮತ್ತು ಚೀನಾದಂತಹ ದೇಶಗಳು ಶೇ. ೬.೦ರಿಂದ ಶೇ.೮.೦ವರೆಗೆ ಖರ್ಚು ಮಾಡುತ್ತಿವೆ.

ನಮ್ಮ ಒಟ್ಟು ಸಂಶೋಧನಾ ವೆಚ್ಚದಲ್ಲಿ ಬಹುತೇಕ ಎಲ್ಲವೂ ಸರ್ಕಾರದ ವೆಚ್ಚವೇ. ಎಲ್ಲೋ ಅಲ್ಲೊಂದು ಇಲ್ಲೊಂದು ಟಾಟಾ ಕಂಪೆನಿಗಳಂತಹ ಕೆಲವು ಖಾಸಗಿ ಕಂಪೆನಿಗಳು ಸ್ವಲ್ಪ ಮೊತ್ತವನ್ನು ಖರ್ಚು ಮಾಡುತ್ತಿವೆ. ಅದು ಯಾವುದಕ್ಕೂ ಸಾಲದು. ಬೇರೆ ದೇಶಗಳಲ್ಲಿ ಒಟ್ಟು ಸಂಶೋಧನಾ ವೆಚ್ಚದಲ್ಲಿ ದೊಡ್ಡ ಪಾಲು ಖಾಸಗಿ ವಲಯದ್ದೇ ಆಗಿರುತ್ತದೆ. ಅಷ್ಟೇ ಉಪಯುಕ್ತವೂ ಆಗಿರುತ್ತದೆ.

ಈಗ ಸರ್ಕಾರ ಪ್ರಕಟಿಸಿರುವ ಯೋಜನೆಯ ಉದ್ದೇಶ ಖಾಸಗಿಯವರನ್ನು ಸಂಶೋಧನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಮತ್ತು ಉಪಯುಕ್ತ ಪರಿಣಾಮಗಳನ್ನು ಹೊರತರಲು ಉತ್ತೇಜಿಸುವುದೇ ಆಗಿದೆ. ವಿಶೇಷವಾಗಿ ರಕ್ಷಣಾ ಉತ್ಪಾದನೆ, ಶಕ್ತಿ ಮೂಲ, ಕೌಶಲಾಭಿವೃದ್ಧಿ, ರೋಬೋಟಿಕ್ಸ್ ಸೇರಿ ಕೃತಕ ಬುದ್ಧಿಮತ್ತೆ ಮುಂತಾದ ವಲಯಗಳ ಕಂಪೆನಿಗಳ ಸಂಶೋಧನಾ ಯೋಜನೆಗಳ ಗಾತ್ರಗಳನ್ನು ಆಧರಿಸಿ ಒಂದು ಕೋಟಿ ರೂ.ಗಳ ವರೆಗೆ ದೀರ್ಘಾವಧಿ ಸಾಲಗಳನ್ನು ಕಡಿಮೆ ಬಡ್ಡಿಯಲ್ಲಿ ಅಥವಾ ಬಡ್ಡಿರಹಿತವಾಗಿ ಒದಗಿಸಲಾಗುವುದು. ಇದಕ್ಕಾಗಿ ಸಾಲ ಕೊಡುವ ಹಣಕಾಸು ಸಂಸ್ಥೆಗಳಿಗೆ ಆ ಸಾಲಗಳ ಮೇಲೆ ಮರು ಸಾಲ ಕೊಡುವ ವ್ಯವಸ್ಥೆಯೂ ಇರುತ್ತದೆ. ನಿಧಿಯ ನಿರ್ವಹಣೆ ಮತ್ತು ಸಾಲ ಮಂಜೂರಾತಿ ವಿಷಯದಲ್ಲಿ ಒಂದು ಮಾತು, ನಿಧಿಯ ನಿರ್ಧಾರ ತೆಗೆದುಕೊಳ್ಳುವ ಮಂಡಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿವಿಧ ವಿಷಯಗಳಲ್ಲಿ ಸಂಶೋಧನಾ ಅನುಭವವುಳ್ಳವರು ಮತ್ತು ಸಂಶೋಧನಾ ಆಡಳಿತಗಾರರು ಇರಬೇಕು. ಮತ್ತು ಅವರ ಅಭಿಪ್ರಾಯಗಳಿಗೆ ನಿರ್ಧಾರಗಳಲ್ಲಿ ಮನ್ನಣೆ ಇರಬೇಕು. ಯೋಜನೆಗಳ ಮೌಲ್ಯಮಾಪನ ತಜ್ಞರಿಂದಲೇ ಇರಲಿ.

ಒಂದು ಮಾತು: ನಿರ್ದಿಷ್ಟ ಗಾತ್ರದ ಕಂಪೆನಿಗಳಿಗೆ ವಾರ್ಷಿಕ ನಿವ್ವಳ ಲಾಭದಲ್ಲಿ ನಿರ್ದಿಷ್ಟ ಪ್ರಮಾಣದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡಬೇಕೆಂದು ಕಡ್ಡಾಯಗೊಳಿಸಬೇಕು.

” ನಾವೀನ್ಯತೆ ಎಂದರೆ ಹೊಸತನಕ್ಕೆ ಇನ್ನಷ್ಟು ಹೊಸತನ ತುಂಬಿ ಹೆಚ್ಚು ಉಪಯುಕ್ತ ಮತ್ತು ಆಕರ್ಷಕಗೊಳಿಸುವುದು ಎಂದೆನ್ನಬಹುದು. ಇದನ್ನು ಸಂಶೋಧನೆಯ ಮುಂದುವರಿದ ಭಾಗ ಎಂದರೂ ಸರಿಯೆ ಉತ್ಪಾದನಾ ವೆಚ್ಚಗಳನ್ನು ಕಡಿಮೆ ಮಾಡುವ ತಂತ್ರಗಳು ಮತ್ತು ವಿಧಾನಗಳೂ ನಾವೀನ್ಯತೆಯ ಹುಡುಕಾಟಗಳೇ ಆಗಿವೆ.”

– ಪ್ರೊ.ಆರ್.ಎಂ. ಚಿಂತಾಮಣಿ

Tags:
error: Content is protected !!