Mysore
28
overcast clouds

Social Media

ಶನಿವಾರ, 06 ಜೂನ್ 2026
Light
Dark

ಗಾಂಧಿ ಅಭಿಯಾನ ಅರಿವಿನಯಾನ | ಹುಟ್ಟೂರು ಕಲ್ಲಹಳ್ಳಿಗೆ ಗಾಂಧಿ ಮಾರ್ಗ ತಂದ ಚದುರಂಗ

• ವಿಕ್ರಂ ಚದುರಂಗ, ಮೈಸೂರು
ಪ್ರಸಿದ್ಧ ಕನ್ನಡ ಲೇಖಕ ಚದು ರಂಗರು, ಗಾಂಧೀಜಿ ಅವರನ್ನು ಅವರ ಒಳ ಮನಸ್ಸಿಗೆ ತೆರೆದು ಕೊಂಡಿದ್ದು ಯಾವಾಗ? ಎಲ್ಲಿ? ಗಾಂಧೀಜಿ ಅವರ ತತ್ವಾದರ್ಶಗಳನ್ನು ಚದುರಂಗರು ತಮ್ಮ ಬದುಕಿಗೆ ಅಳವಡಿಸಿಕೊಂಡು ಭಾರತದ ರೈತಾಪಿ ಜನರ ಅಭಿವೃದ್ಧಿಯ ಹೆಜ್ಜೆಯಲ್ಲಿ ಹಾದಿಯನ್ನು ತುಳಿದದ್ದು ಯಾವ ಊರಿನಲ್ಲಿ? ಎಂದು ನೋಡಿದಾಗ ಚದುರಂಗ ಅವರ ಬದುಕಿನಲ್ಲಿ ಗಾಂಧೀಜಿ ಬಂದ ರೀತಿ ಇವತ್ತಿಗೂ ನನ್ನ ನೆನಪಿನಲ್ಲಿದೆ.

ಮಹಾತ್ಮ ಗಾಂಧೀಜಿ ಮತ್ತು ಇತರ ದೇಶಭಕ್ತರ ಸ್ವಾತಂತ್ರ್ಯದ ಚಳವಳಿ 1940ರ ಆದಿಯಲ್ಲಿ ಬ್ರಿಟೀಷ್ ಸರ್ಕಾರವನು ಅಲುಗಾಡಿಸುತ್ತಿರುವ ಹೊತ್ತಿನಲ್ಲಿ ಚದುರಂಗ ಅವರು ಪೂನಾದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದರು. ಗಾಂಧೀಜಿ ಅವರ ಆದರ್ಶಗಳು, ಅವರ ಅಹಿಂಸಾ ಮಾರ್ಗ, “ಲಿಬರ್ಟಿ’, ‘ಈಕ್ವಾಲಿಟಿ’ ಮತ್ತು ‘ಫ್ರಾಟರ್ನಿಟಿ’ಯ ಮೂಲ ಸೂತ್ರಗಳು ‘ಚದುರಂಗ’ರನ್ನು ಸೂಜಿಗಲ್ಲಿನಂತೆ ಸೆಳೆಯಿತು.

ಮೈಸೂರು ಸಿಟಿಗೆ ಹತ್ತಿರವಿರುವ ಹುಣಸೂರು ಟೌನ್‌ ಗೆ ಸಮೀಪವಿರುವ ಕಲ್ಲಹಳ್ಳಿ ಚದುರಂಗ ಅವರು ಹುಟ್ಟಿ, ಬಾಲ್ಯ ಕಳೆದ ಊರು. ಗಾಂಧೀಜಿ ಕಲಿಸಿಕೊಟ್ಟ ಹಳ್ಳಿಯ ರೈತರ ಸರ್ವತೋಮುಖವಾದ ಅಭಿವೃದ್ಧಿಯ ಕಡೆಗೆ ಚದುರಂಗ ಅವರು ಶ್ರಮಪಟ್ಟು ದುಡಿದರು. ಶೌಚಾಲಯದ ನಿರ್ಮಾಣ, ‘ಅಂಡರ್‌ಸ್ಯಂಡ್ ಸೀವೇಜ್‌ ಸಿಸ್ಟಮ್’, ಹೊಸ ರಸ್ತೆಗಳು, ಊರಿನ ಸ್ವಚ್ಛತೆ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ದಲಿತರಿಗೆ ಅವರದೇ ಆದ ಸ್ವಾಭಿಮಾನವಿದೆ ಎಂದು ಮೇಲು ವರ್ಗದ ಜಾತಿಯವರಿಗೆ ತೋರಿಸಿ, ಎಲ್ಲಾ ಜಾತಿಯವರೂ ಒಂದೇ ಎಂಬ ಗಾಂಧೀಜಿಯ ತತ್ವವನ್ನು ಆಧರಿಸಿ, ಯಾವುದೇ ಸ್ವಾರ್ಥ ವಿಲ್ಲದೇ, ಊರಿಗೆ ಉಪಕಾರವನ್ನು ಮಾಡಿದವರಲ್ಲಿ ಚದುರಂಗರು ಮೊದಲಿಗರು. ಇವತ್ತಿಗೂ ನಮ್ಮ ಕಲ್ಲಹಳ್ಳಿಯ ಜನ ಚದುರಂಗರನ್ನು ಜ್ಞಾಪಿಸಿಕೊಳ್ಳುತ್ತಾರೆ.

ಗಾಂಧೀಜಿ ಅವರ ಅಹಿಂಸಾ ತತ್ವ, ಸ್ವಚ್ಛತೆ, ಅಪಾರವಾದ ಜೀವನಪ್ರೀತಿ, ಎಲ್ಲ ಜಾತಿಯವರನ್ನೂ ಒಟ್ಟಾಗಿ ನೋಡುವ ರೀತಿ ಈ ಅಪರೂಪವಾದ ಗುಣಗಳು ಚದುರಂಗರ ಗ್ರಹಿಕೆಯಲ್ಲಿ ತುಂಬಾ ಮುಖ್ಯವಾಗುತ್ತವೆ. ‘ಚದುರಂಗ’ರಲ್ಲಿ ಗಾಂಧೀಜಿ ‘ಫಿಗರ್’ ಅನ್ನು ನಾನು ಈ ರೀತಿ ಕಾಣುತ್ತಿದ್ದೇನೆ. ಚದುರಂಗ ಅವರು ಗಾಂಧೀಜಿ ಅವರನ್ನು ಹೀಗೆ ಕಂಡಿದ್ದ 1940ರ ದಶಕದಲ್ಲಿ ಭಾರತೀಯ ಸಮಾಜದ ಎಲ್ಲಾ ವಲಯಗಳ ಬದಲಾವಣೆ ಆಗಬೇಕು, ಪ್ರಗತಿ ಸಾಧಿಸಬೇಕು, ಅಹಿಂಸೆ ಮತ್ತು ಮನುಷ್ಯ ಸಹಜ ಪ್ರೀತಿ ಎನ್ನುವ ಮಾನವ ಧರ್ಮಕ್ಕೆ ಅನುಗುಣವಾಗಿ, ನೈತಿಕವಾಗಿ ಗಾಂಧೀಜಿ ಅವರು ದಿಟ್ಟ ಹೆಜ್ಜೆಗಳನ್ನಿಟ್ಟರು. ‘ಇಂಟರ್‌ನಲ್ ಚೇಂಜ್ ಫಾರ್ ದ ಬೆಟರ್‌ಮೆಂಟ್ ಆಫ್ ಹೂಮನ್ ಬೀಯಿಂಗ್’ ಎಂಬ ಬದಲಾವಣೆಯನ್ನು ಗಾಂಧೀಜಿ ಅವರು ಅವರ ಜೀವನದಲ್ಲಿ ಮಾಡಿ ಪ್ರಪಂಚಕ್ಕೆ ತೋರಿಸಿದರು.

ಎಲ್ಲ ಕಾಲಕ್ಕೂ ಸಲ್ಲುವ ‘ಸತ್ಯ’ದ ಶೋಧನೆ, ಅವರ, ‘ಮೈ ಪಿರಿಮೆಂಟ್ಸ್ ವಿತ್ ಟ್ರುಥ್. ಜಡ್ಡುಗಟ್ಟಿದ ಭಾರತದ ಸಮಾಜದ ಬದಲಾವಣೆಗಾಗಿ, ಸಮ ಸಮಾಜದ ಕ್ರಾಂತಿಗಾಗಿ, ಅಕ್ಷರವೇ, ಅಂದರೆ ಶಿಕ್ಷಣವೇ ಬದಲಾವಣೆಯ ಹೊಸ ಆರಂಭ ಮತ್ತು ಹೀಗೆ ಮಾಡಿದರೆ ಭಾರತೀಯ ಸಂಸ್ಕೃತಿ ಪುನರುಜ್ಜಿವನ ಗೊಳ್ಳುತ್ತದೆ ಹಾಗೂ ಪರಿವರ್ತನೆ ಯಾಗುತ್ತದೆ ಎಂಬ ಭಾವನೆಗಳಿಂದ 1940ರ ದಶಕದಿಂದ ಗಾಂಧೀಜಿ ಅನೇಕ ತಲೆಮಾರುಗಳನ್ನು, ಅವರ, ‘ಮಾರಲ್ ಫೋರ್ಸ್ ಅಂಡ್ ಇಂಪೆಕೇಬಲ್ ಪರ್ಸನಲ್ ಇಂಟಿಗ್ರಿಟಿ’ಯ ಮೂಲಕ ರೂಪಿಸಿದರು.

ಗಾಂಧೀಜಿ ಎಂಬ ಶಕ್ತಿ ಈಗ ಹೇಗಿದೆ? ಭಾರತ ಸ್ವಾತಂತ್ರ್ಯ ಆದ ಮೇಲೆ(1947) ಸಮಾಜದಲ್ಲಿ ಅನೇಕ ಸ್ಥಿತ್ಯಂತರಗಳಾಗಿ ಹೊಸ ಪೀಳಿಗೆಗೆ ನಾಂದಿಯಾಯಿತು. ಗಾಂಧೀಜಿಯ ಇಮೇಜ್ ಈಗ ಏನಾಗಿದೆ? ಐನೂರು ರೂಪಾಯಿ ಕರೆನ್ಸಿ ನೋಟಿನಲ್ಲಿ ಒಂದು ಮೂಲೆಯಲ್ಲಿ ಗಾಂಧೀಜಿ ನಗುತ್ತಾ ಕುಳಿತಿದ್ದಾರೆ. ಆ ನೋಟಿನ ಹಿಂಭಾಗದಲ್ಲಿ ಗಾಂಧೀಜಿ ಅವರ ಕನ್ನಡಕ ಇದೆ. ಗಾಂಧೀಜಿಯ ಕನ್ನಡಕದ ‘ಪ್ರೇಮ್’ ಒಳಗಡೆ ಇರುವ ಗ್ಲಾಸ್‌ನಲ್ಲಿ ‘ಸ್ವಚ್ಛ ಭಾರತ (ಇದು ಹಿಂದಿಯಲ್ಲಿದೆ) ಎಂದು ಸ್ಪಷ್ಟವಾಗಿ ಬರೆದಿದೆ. ಗಾಂಧೀಜಿ ಕಂಡ ‘ಭಾರತ’, ಗಾಂಧೀಜಿ ಕಂಡ ‘ಬದಲಾವಣೆ’, ಸಾಮಾನ್ಯ ಪ್ರಜೆಗಳಾದ ನಾವು 21 ನೇ ಶತಮಾನದ ಆದಿಯಲ್ಲಿ, ಆ ವ್ಯಕ್ತಿತ್ವವನ್ನು ಬರೀ ಐನೂರು ರೂಪಾಯಿಗಳಲ್ಲಿ ಕಾಣುತ್ತಿದ್ದೇವೆ… ಎಂತಹ ಬದಲಾವಣೆ ಇದು?

 

Tags:
error: Content is protected !!