ವೈಡ್ ಆಂಗಲ್
‘ಶಿಕ್ಷಣದಲ್ಲಿ ಚಲನಚಿತ್ರ; ಚಲನಚಿತ್ರದಲ್ಲಿ ಶಿಕ್ಷಣ’ ಚಲನಚಿತ್ರ ಅಕಾಡೆಮಿಯ ಮೂಲ ಆಶಯಗಳಲ್ಲಿ ಒಂದು . ಚಲನಚಿತ್ರ ಮಾಧ್ಯಮಕ್ಕೆ ಪೂರಕವಾದ ಎಲ್ಲ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳುವ ಜೊತೆಗೆ ಈ ಆಶಯದತ್ತ ಹೆಚ್ಚು ಗಮನ ಕೊಡುವುದರಲ್ಲಿ, ಅಕಾಡೆಮಿ, ಶಿಕ್ಷಣ ಇಲಾಖೆ ವಿಫಲವಾಗಿವೆ.
ಉಳಿದ ಶಿಕ್ಷಣದ ಮಾತು ಒತ್ತಟ್ಟಿಗಿರಲಿ, ಚಲನಚಿತ್ರ ಶಿಕ್ಷಣದ ವಿಷಯಕ್ಕೆ ಬಂದರೆ, ಮೊದಲು ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಆಗಿದ್ದು, ಈಗ ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ ಆಗಿ ಛಾಯಾಗ್ರಹಣ ಮತ್ತು ಧ್ವನಿಮುದ್ರಣ-ಎಂಜಿನಿಯರಿಂಗ್ ವಿಷಯಗಳಲ್ಲಿ ಡಿಪ್ಲೊಮೊ ತರಬೇತಿ ನೀಡುತ್ತದೆ. ವಿಶ್ವೇಶ್ವರಯ್ಯನವರ ಕನಸಿನ ಕೂಸಿದು. ೧೯೪೩ರ ಆಗಸ್ಟ್ ತಿಂಗಳಲ್ಲಿ ಆರಂಭವಾದ ಈ ಸಂಸ್ಥೆಯ ಮೊದಲ ಬ್ಯಾಚಿನಲ್ಲಿದ್ದ ವಿದ್ಯಾರ್ಥಿಗಳಲ್ಲಿ ಮುಂದೆ ದೇಶದಲ್ಲೇ ಹೆಸರುವಾಸಿಯಾದ ಫಾಲ್ಕೆ ಪ್ರಶಸ್ತಿ ಪುರಸ್ಕೃತ ವಿ.ಕೆ.ಮೂರ್ತಿ ಅವರೂ ಇದ್ದರು.
ತಾವು ಅಲ್ಲಿ ಛಾಯಾಗ್ರಹಣ ಶಿಕ್ಷಣ ಪಡೆಯುವ ವೇಳೆ ಅಲ್ಲಿ ಕ್ಯಾಮೆರಾ ಇರಲಿಲ್ಲ; ಸಹಪಾಠಿಯೊಬ್ಬ ತರುವ ಕ್ಯಾಮೆರಾ ನಮಗೆ ನೆರವಾಗುತ್ತಿತ್ತು ಎಂದು ಆರಂಭದ ದಿನಗಳನ್ನು ಮೈಸೂರಿನವರೇ ಆದ ವಿ.ಕೆ.ಮೂರ್ತಿ ಅವರು ಮೆಲುಕು ಹಾಕಿದ್ದರು. ಬೆಂಗಳೂರಿನ ಕೃಷ್ಣರಾಜೇಂದ್ರ ವೃತ್ತದ ಬಳಿ ಇರುವ ಶ್ರೀ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್‌ನಿಂದ, ‘ಸರ್ಕಾರಿ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆ’ ಆಗಿ ಇದು ೧೯೯೬ರಲ್ಲಿ ಬದಲಾಯಿತು. ಮಾತ್ರವಲ್ಲ, ಹೆಸರಘಟ್ಟದಲ್ಲಿ ತನ್ನದೇ ಆದ ಸ್ವಂತ ಕಟ್ಟಡದಲ್ಲಿ ಕಾರ್ಯನಿರ್ವಹಿಸತೊಡಗಿತು.
ಹೆಸರಘಟ್ಟದ ಜಾಗದ ಕುರಿತು: ೧೯೬೮ರಲ್ಲಿ ಕರ್ನಾಟಕ ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಚಿತ್ರ ನಗರಿ ಸ್ಥಾಪನೆಗಾಗಿ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆ (AHVS)ಯಿಂದ ದೀರ್ಘಾವಧಿ ಗುತ್ತಿಗೆಯ ಮೇಲೆ ಸುಮಾರು ೩೯೦ ಎಕರೆ ಜಾಗವನ್ನು ಪಡೆದಿತ್ತು. ಅಲ್ಲಿ ಮೂರು ಹಂತಗಳಲ್ಲಿ ಚಿತ್ರನಗರಿ ಸ್ಥಾಪಿಸುವ ಯೋಜನೆ. ೧೯೭೨ರ ಮಾರ್ಚ್ ತಿಂಗಳಲ್ಲಿ ಅಲ್ಲಿ ಚಿತ್ರನಗರಿಗೆ ಶಿಲಾನ್ಯಾಸವನ್ನು ದೇವರಾಜ ಅರಸು ಅವರು ಮಾಡಿದ್ದರು. ಅದಾಗಿ ೫೩ ವರ್ಷಗಳು ಕಳೆದಿವೆ.
ದೇಶದಲ್ಲೇ ಮೊದಲು ಚಿತ್ರನಗರಿಯ ಯೋಜನೆ ಹಾಕಿದ್ದು ಕರ್ನಾಟಕ (ಆಗ ಮೈಸೂರು) ರಾಜ್ಯ. ಕರ್ನಾಟಕದ ಹೊರತಾಗಿ ದೇಶದ ಎಲ್ಲ ರಾಜ್ಯಗಳಲ್ಲೂ ಈಗ ಚಿತ್ರನಗರಿಗಳಿವೆ. ಕೆಲವು ರಾಜ್ಯ ಸರ್ಕಾರದವು, ಕೆಲವು ಖಾಸಗಿಯವು. ಚಿತ್ರನಗರಿಗೆ ಮೀಸಲಿಟ್ಟ ಜಾಗದಲ್ಲಿ ಚಲನಚಿತ್ರ ತರಬೇತಿ ಸಂಸ್ಥೆ ಇರುವುದು ಸೂಕ್ತ ಎಂದು ತಿಳಿದು ಅದಕ್ಕೆ ೨೫ ಎಕರೆ ಜಾಗವನ್ನು ನೀಡಲಾಯಿತು. ವಿಶ್ವ ಬ್ಯಾಂಕ್‌ನ ಆರ್ಥಿಕ ನೆರವು (ಸುಮಾರು ೧೩ ಕೋಟಿ ರೂ.) ಅದಕ್ಕಿತ್ತು. ಸುಮಾರು ೨೦ ವರ್ಷಗಳವರೆಗೆ ಅಲ್ಲಿ ತಕರಾರೇನೂ ಇದ್ದಂತಿರಲಿಲ್ಲ.
೨೦೧೬ರಿಂದ ಅಪಸ್ವರ. ನಗರ ಕೇಂದ್ರದಿಂದ ದೂರ, ಉದ್ಯಮದ ಸಂಪರ್ಕ ಇಲ್ಲ, ಸಾರಿಗೆ ವ್ಯವಸ್ಥೆ ಇಲ್ಲ, ಕ್ಯಾಂಟೀನ್ ಸೌಲಭ್ಯ ಇಲ್ಲ, ಇತ್ಯಾದಿ ಆಕ್ಷೇಪಗಳು. ಜೊತೆಗೆ ಹಾಸ್ಟೆಲ್ ಕಟ್ಟಡ ಸಿದ್ಧವಾದರೂ ಅಲ್ಲಿ ವಾಸ್ತವ್ಯಕ್ಕೆ ಅನುಕೂಲವಿರಲಿಲ್ಲ. ಎಲ್ಲಕ್ಕೂ ಮಿಗಿಲಾಗಿ, ಸೆಲ್ಯುಲಾಯಿಡ್ ದಿನಗಳಿಂದ ಡಿಜಿಟಲ್‌ಗೆ ಹೊರಳಿರುವ ತಂತ್ರಜ್ಞಾನಕ್ಕೆ ಪೂರಕ ಕಲಿಕೆಯ ವ್ಯವಸ್ಥೆಯೂ ಅಲ್ಲಿ ಇಲ್ಲ ಎನ್ನುವ ದೂರುಗಳಿದ್ದವು.
ರಾಜ್ಯ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾಗಿದ್ದ ರಾಜೇಂದ್ರ ಸಿಂಗ್ ಬಾಬು ಅವರ ಅವಧಿಯಲ್ಲಿ, ಈ ಸಂಸ್ಥೆಯನ್ನು ವಿಶ್ವದರ್ಜೆಯ ತರಬೇತಿ ಕೇಂದ್ರವಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾಪವಿತ್ತು. ಆ ನಿಟ್ಟಿನ ಪತ್ರವ್ಯವಹಾರ ಸರ್ಕಾರದ ಜೊತೆ ಆಗಿತ್ತು. ನಡುವೆ ತಜ್ಞರ ಸಮಿತಿಯನ್ನು ರಚಿಸಿ, ಸಂಸ್ಥೆ ಯನ್ನು ಮೇಲ್ದರ್ಜೆಗೇರಿಸಲು ಬೇಕಾದ ವರದಿ ಪಡೆಯಲು ಇಲಾಖೆಯ ಅಂದಿನ ಕಾರ್ಯದರ್ಶಿಗಳು ಚರ್ಚಿಸಿದ್ದರು. ಆ ನಡುವೆ ಅವರ ವರ್ಗವಾಯಿತು. ಮೊದಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಅಧಿನದಲ್ಲಿದ್ದ ಈ ತರಬೇತಿ, ನಂತರ ತಾಂತ್ರಿಕ ಶಿಕ್ಷಣ ಇಲಾಖೆಯ ಸುಪರ್ದಿಗೆ ಬಂತು. ಅಕಾಡೆಮಿಯ ಕೋರಿಕೆಯನ್ನು ತಾಂತ್ರಿಕ ಶಿಕ್ಷಣ ಇಲಾಖೆ ಆಗ ಒಪ್ಪಿಲ್ಲ ಎಂಬುದಾಗಿ ವರದಿಯಾಗಿತ್ತು.
ಕಳೆದ ವಾರ ಅಲ್ಲಿನ ಹಳೆಯ ವಿದ್ಯಾರ್ಥಿಗಳಲ್ಲಿ ಕೆಲವರು, ನಟ ಶ್ರೀನಾಥ್ ಅವರ ನೇತೃತ್ವದಲ್ಲಿ ಸಂಬಂಧಪಟ್ಟ ಸಚಿವರನ್ನು ಭೇಟಿಯಾಗಿದ್ದರು. ಹೆಸರಘಟ್ಟದಲ್ಲಿ ಸಾಕಷ್ಟು ಸೌಲಭ್ಯಗಳು ಇಲ್ಲದೇ ಇರುವುದರಿಂದ ಸಂಸ್ಥೆಯನ್ನು ನಗರದ ಕೇಂದ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿದ್ದರು. ಸಚಿವರು ತಾವು ಪರಿಶೀಲಿಸವುದಾಗಿ ಆಶ್ವಾಸನೆ ನೀಡಿದ್ದಾರೆ. ಈ ನಿಯೋಗದ ಒತ್ತಾಯಕ್ಕೆ ಇನ್ನೂ ಒಂದು ಕಾರಣವಿದೆ. ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ನಿವಾಸಿಗಳ ತೆರವು) ಕಾಯ್ದೆ, ೧೯೭೪ರ ಪ್ರಕಾರ ಸಂಸ್ಥೆಗೆ ೨೦೧೮ರಲ್ಲಿ ಜಾಗ ಖಾಲಿ ಮಾಡಲು ನೋಟೀಸನ್ನು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಇಲಾಖೆ ನೀಡಿದೆಯಂತೆ!
ಈ ಇಲಾಖೆಯ ಪ್ರಕಾರ, ಅದು ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮಕ್ಕೆ ನೀಡಿದ ಜಾಗವನ್ನು ನಿಗಮ ಉಪಗುತ್ತಿಗೆ ನೀಡಿದೆ. ಅಭಿವೃದ್ಧಿ ನಿಗಮ ಈಗಿಲ್ಲ. ಕಂಠೀರವ ಸ್ಟುಡಿಯೋ ಅದರ ಪರವಾಗಿ ಎಲ್ಲ ಕಾರ್ಯಗಳನ್ನು ನಿರ್ವಹಿಸುತ್ತದೆ. ಈ ನಡುವೆ ಹಸಿರು ಸಂಸ್ಥೆಯೊಂದು ಅಲ್ಲಿ ಸಕ್ರಿಯವಾಗಿದೆ. ಹ್ಞಾಂ, ಆದರ್ಶ ಚಲನಚಿತ್ರ ಸಂಸ್ಥೆಗೂ ಅಲ್ಲಿ ೧೦ ಎಕರೆ ಜಾಗ ನೀಡಲಾಗಿತ್ತು. ಅದು ಅಲ್ಲಿ ಕೂಡಾ ತರಗತಿಗಳನ್ನು ನಡೆಸುತ್ತಿತ್ತು. ಅದರ ಆಡಳಿತದಲ್ಲಿ ಏರುಪೇರುಗಳನ್ನು ಕಂಡು ಸ್ಥಾಪನೆಯಾಗಿ ೪೮ ವರ್ಷಗಳ ನಂತರ ಅದು ಅಂಕದ ಪರದೆ ಎಳೆದಿದೆ. ಪರಿಸರವಾದಿಗಳ ವಿರೋಧ ಎಂದಾಗ ಚಿತ್ರರಂಗದಲ್ಲಿ ನಡೆದ ಘಟನೆಯೊಂದು ನೆನಪಾಗುತ್ತದೆ. ೧೯೮೫ರಲ್ಲಿ ನಡೆದ ೨ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ. ಅಂದು ಪ್ರಧಾನಿಯಾಗಿದ್ದ ರಾಜೀವ ಗಾಂಧಿ ಚೌಡಯ್ಯ ಸ್ಮಾರಕ ಭವನದಲ್ಲಿ ಉದ್ಘಾಟನೆ ನೆರವೇರಿಸಿದ್ದರು. ಚಿತ್ರೋತ್ಸವದ ಜೊತೆಯಲ್ಲೇ ಮಕ್ಕಳ ಚಲನಚಿತ್ರ ಸಂಕೀರ್ಣಕ್ಕಾಗಿ ಸ್ಯಾಂಕಿ ಕೆರೆಯ ದಡದಲ್ಲಿ ಶಿಲಾನ್ಯಾಸವೂ ನಡೆದಿತ್ತು. ಭಾರತ ಮಕ್ಕಳ ಚಿತ್ರ ಸಮಾಜದ ಸದಸ್ಯರಲ್ಲಿ ಒಬ್ಬರಾಗಿದ್ದ ನರಸಿಂಹನ್ ಅವರು ಏಷ್ಯಾದಲ್ಲೇ ಮೊದಲು ಎನ್ನಲಾದ ಈ ಸಂಕೀರ್ಣ ಬೆಂಗಳೂರಲ್ಲಿ ತಲೆ ಎತ್ತಬೇಕು ಎಂದು ಹರಸಾಹಸ ಮಾಡಿದ್ದರು. ಮಕ್ಕಳ ಚಲನಚಿತ್ರಗಳು, ಮಕ್ಕಳ ಮನೋವಿಕಾಸಕ್ಕೆ ಪೂರಕ ಕಾರ್ಯಕ್ರಮಗಳ ಕೇಂದ್ರವದು. ಆದರೆ ಸ್ಯಾಂಕಿ ಕೆರೆಯ ತಟದಲ್ಲಿ ಅದನ್ನು ಕಟ್ಟಲು ಪರಿಸರವಾದಿಗಳು ಸುತಾರಾಂ ಒಪ್ಪಲಿಲ್ಲ. ಯಾವುದೇ ಮರಗಳಿಗೆ ಹಾನಿ ಮಾಡದೆ ಈ ಕಟ್ಟಡ ಕಟ್ಟುವ ಯೋಜನೆ ಇತ್ತು ಅದಾಗಲಿಲ್ಲ. ಹತ್ತು ವರ್ಷಗಳ ಕಾಲ ಪರ್ಯಾಯ ನಿವೇಶನದ ವಿಫಲ ಹುಡುಕಾಟ ನಡೆಯಿತು. ಆ ವೇಳೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಾವು ಜಾಗ ಕೊಡುವುದಾಗಿ ಹೇಳಿದರು. ಅಲ್ಲಿ ಈ ಸಂಕೀರ್ಣ ತಲೆ ಎತ್ತುತ್ತದೆ ಎಂದು ಹೇಳಲಾಗಿತ್ತು. ಅದಿನ್ನೂ ಕಾರ್ಯಗತ ಆಗುತ್ತಲೇ ಇದೆ! ಎರಡು ವರ್ಷಗಳಿಗೊಮ್ಮೆ ನಡೆಯುವ ಅಂತಾರಾಷ್ಟ್ರೀಯ ಮಕ್ಕಳ ಚಿತ್ರೋತ್ಸವವೂ ೨೦೧೫ರ ನಂತರ ನಡೆದಂತಿಲ್ಲ.
ಚಲನಚಿತ್ರ ಶಿಕ್ಷಣ ಕುರಿತಂತೆ, ಹಿಂದೆ ಕುಮಾರಸ್ವಾಮಿ ಅವರು ರಾಮನಗರದಲ್ಲಿ ಚಲನಚಿತ್ರ ವಿಶ್ವವಿದ್ಯಾನಿಲಯ ಸ್ಥಾಪಿಸುವ ತಮ್ಮ ಯೋಚನೆ ಯನ್ನು ಹೇಳಿದ್ದರು. ಆಗಿನ್ನೂ ಮೈಸೂರಿನಲ್ಲಿ ಚಿತ್ರನಗರಿಗಾಗಿ ೧೧೦ ಎಕರೆ ಜಾಗವನ್ನು ಕಾಯ್ದಿರಿಸಿದ ಸುದ್ದಿಯ ದಿನಗಳು. ಬೆಂಗಳೂರು-ಮೈಸೂರು ನಡುವೆ, ರಾಮನಗರದಲ್ಲಿ ಚಿತ್ರನಗರಿ, ವಿಶ್ವವಿದ್ಯಾನಿಲಯದ ವರ್ತಮಾನ. ಈಗ ಮೈಸೂರಲ್ಲಿ ಚಿತ್ರ ನಗರಿ ತಲೆ ಎತ್ತುವ ನಿಟ್ಟಿನಲ್ಲಿ ಕೆಲಸ ಸಾಗಿದೆ.
ಚಲನಚಿತ್ರ ಶಿಕ್ಷಣಕ್ಕೆ ಸಂಬಂಽಸಿದಂತೆ, ಸರ್ಕಾರದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸಬೇಕಾದ ಅಗತ್ಯ ಇದೆ. ಎಲ್ಲ ರಾಜ್ಯಗಳಲ್ಲೂ ಚಲನಚಿತ್ರ ತರಬೇತಿ ಸಂಸ್ಥೆಗಳಿವೆ, ಚಿತ್ರನಗರಿಗಳಿವೆ. ಅದಕ್ಕೆ ಪೀಠಿಕೆ ಹಾಕಿದ್ದು ಕರ್ನಾಟಕ. ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮವನ್ನು ಲಾಭದಾಯಕ ಸಂಸ್ಥೆ ಅಲ್ಲ ಎನ್ನುವ ನೆಪ ನೀಡಿ ಮುಚ್ಚಲಾಗಿದೆ. ಬಹುತೇಕ ರಾಜ್ಯ ಸರ್ಕಾರಗಳು ಚಲನಚಿತ್ರೋದ್ಯಮ ಅಭಿವೃದ್ಧಿ ನಿಗಮ ಸ್ಥಾಪಿಸಿ, ಆ ಮೂಲಕ ಚಿತ್ರೋದ್ಯಮಕ್ಕೆ ಬೇಕಾದ ಕೆಲಸ ಮಾಡುತ್ತಿವೆ.
ಕೇರಳದಲ್ಲಿ ಚಲನಚಿತ್ರ ಅಕಾಡೆಮಿ ಮತ್ತು ಅಭಿವೃದ್ಧಿ ನಿಗಮಗಳಿವೆ. ನಿಗಮ ಒಟಿಟಿ ಸ್ಥಾಪಿಸಿದೆ, ಚಿತ್ರಗಳನ್ನು ನಿರ್ಮಿಸುತ್ತಿದೆ, ಚಿತ್ರಮಂದಿರಗಳನ್ನು ಕಟ್ಟಿ ಮೇಲುಸ್ತವಾರಿ ನೋಡಿಕೊಳ್ಳುತ್ತಿದೆ. ಸದಭಿರುಚಿಯ ಚಿತ್ರಗಳ ಪರಂಪರೆಗೆ ಒತ್ತಾಸೆಯಾಗಿದೆ. ಅಕಾಡೆಮಿ, ಚಲನಚಿತ್ರ ಮಾಧ್ಯಮಕ್ಕೆ ಸಂಬಂಧಪಟ್ಟ ಕೆಲಸ ಮಾಡುತ್ತಿದೆ.
ಚಲನಚಿತ್ರ ಸಂಸ್ಥೆಯಲ್ಲಿ ಬೇಕಾದ ಸೌಲಭ್ಯಗಳು ಇಲ್ಲ ಎಂದಾದರೆ ಅದನ್ನು ಪೂರೈಸುವ ಕೆಲಸ ಆಗಬೇಕೇ ಹೊರತು, ಅಲ್ಲಿಂದ ಗುಳೆ ಹೋಗುವುದಲ್ಲ. ಉತ್ತಮ ದರ್ಜೆಯ ಚಲನಚಿತ್ರ ತರಬೇತಿ ಸಂಸ್ಥೆಗಳು ಇದ್ದ ರಾಜ್ಯಗಳಲ್ಲಿ ತಯಾರಾಗುತ್ತಿರುವ ಚಿತ್ರಗಳು ದೇಶವಿದೇಶಗಳಲ್ಲಿ ಹೆಸರು ಮಾಡುತ್ತಿವೆ, ಗಲ್ಲಾಪೆಟ್ಟಿಗೆಯಲ್ಲೂ. ಮರಾಠಿ, ಮಲಯಾಳ, ತಮಿಳು, ಬಂಗಾಲಿ, ಮತ್ತಿತರ ಈಶಾನ್ಯ ಭಾರತೀಯ ಭಾಷಾ ಚಿತ್ರರಂಗಗಳಲ್ಲಿ ತರಬೇತಿ ಪಡೆದ ಪ್ರತಿಭಾವಂತರು ಬಂದಿದ್ದಾರೆ. ನಮ್ಮ ಚಿತ್ರಗಳನ್ನೇಕೆ ಜನ ನೋಡುತ್ತಿಲ್ಲ ಎನ್ನುವುದಕ್ಕೆ ಇದೂ ಒಂದು ಕಾರಣ ಆಗಿರಬಹುದಲ್ಲವೆ?
ಪೂನಾ ಮತ್ತು ಕೊಲ್ಕತ್ತಾಗಳಲ್ಲಿ ಇರುವ ಚಲನಚಿತ್ರ ಸಂಸ್ಥೆಗಳೀಗ ವಿಶ್ವವಿದ್ಯಾಲಯಗಳಾಗಲಿವೆ. ಸ್ನಾತಕೋತ್ತರ ಡಿಪ್ಲೊಮೊ ಬದಲು ಪದವಿ, ಸ್ನಾತಕೋತ್ತರ ಪದವಿ, ಸಂಶೋಧನೆಗಳಿಗೆ ಅಲ್ಲಿ ಅವಕಾಶ ಆಗಲಿದೆ. ನಿನ್ನೆ ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಕಾರ್ಯದರ್ಶಿಗಳು ಇದನ್ನು ಪೂನಾದಲ್ಲಿ ಹೇಳಿದ್ದಾರೆ. ರಾಷ್ಟ್ರೀಯ ಚಲನಚಿತ್ರ ಪ್ರಾಚ್ಯಾಗಾರ ಮತ್ತು ಚಲನಚಿತ್ರ ತರಬೇತಿ ಕೇಂದ್ರಗಳಿಗೆ ಇನ್ನಷ್ಟು ನೆರವು, ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಭಾರತದ ಸಾಂಸ್ಕೃತಿಕ ಮತ್ತು ಸೃಜನಶೀಲ ಆರ್ಥಿಕತೆಗೆ ಕೊಡುಗೆ ನೀಡುವಲ್ಲಿ ಸಿನಿಮಾ ಮತ್ತು ಮಾಧ್ಯಮ ಶಿಕ್ಷಣ ಮಹತ್ವದ್ದು ಎಂದು ಅವರು ಅಲ್ಲಿ ಹೇಳಿದ್ದಾರೆ. ಕರ್ನಾಟಕದಲ್ಲಿನ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯ ಕುರಿತಂತೆ ಇಂತಹ ಯೋಚನೆ ಬರಬಾರದೇಕೆ?
” ಚಲನಚಿತ್ರ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಸರ್ಕಾರದ ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯನ್ನು ಮೇಲ್ದರ್ಜೆಗೆ ಏರಿಸುವ ನಿಟ್ಟಿನಲ್ಲಿ ಸಂಬಂಧಪಟ್ಟವರು ತುರ್ತಾಗಿ ಗಮನ ಹರಿಸಬೇಕಾದ ಅಗತ್ಯ ಇದೆ.”
: ಬಾ.ನಾ.ಸುಬ್ರಹ್ಮಣ್ಯ