ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಕಳೆದ ವಾರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರಾಡಿದ ಮಾತು ಕೈ ಪಾಳೆಯದಲ್ಲಿ ಸಂಚಲನ ಮೂಡಿಸಿತು. ಯಾರೇನೇ ಮಾಡಿದರೂ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ ಎಂಬುದು ವೀರಪ್ಪ ಮೊಯ್ಲಿ ಅವರ ಮಾತು. ಅವರು ಇಂತಹ ಮಾತನಾಡುವ ಕೆಲವೇ ದಿನಗಳ ಮುನ್ನ ರಾಜ್ಯದಲ್ಲಿ ಅಧಿಕಾರ ಹಂಚಿಕೆಯ ಮಾತು ವಿಪರೀತಕ್ಕೆ ಹೋಗಿತ್ತು. ಅದರಲ್ಲೂ ನವೆಂಬರ್ ಹೊತ್ತಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅವಧಿ ಮುಗಿಯಲಿದೆ. ಅವರು ಅವಧಿ ಪೂರೈಸಿದ ನಂತರ ಡಿ.ಕೆ.ಶಿವಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಲಿದ್ದಾರೆ ಅಂತ ಖುದ್ದು ಡಿಕೆಶಿ ಬೆಂಬಲಿಗರೇ ಮಾತನಾಡತೊಡಗಿದ್ದರು.
ಅವರ ಈ ಮಾತನ್ನು ಸಿದ್ದರಾಮಯ್ಯ ಸರ್ಕಾರದ ಫೋರ್‌ಮ್ಯಾನ್ ಆರ್ಮಿ ಎಷ್ಟು ಗಂಭೀರವಾಗಿ ಪರಿಗಣಿಸಿತೆಂದರೆ; ಈ ಆರ್ಮಿಯಲ್ಲಿರುವ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಸೀದಾ ದಿಲ್ಲಿಗೆ ಹೋಗಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದರು. ಹೀಗೆ ಭೇಟಿ ಮಾಡಿದವರು; ಸಿದ್ದರಾಮಯ್ಯ ಅವರನ್ನು ಯಾವ ಕಾರಣಕ್ಕೂ ಇಳಿಸಬಾರದು. ಒಂದು ವೇಳೆ ಅವರು ಕೆಳಗಿಳಿಯುವುದೇ ಆದರೆ ಅವರ ಜಾಗಕ್ಕೆ ನೀವು ಬರಬೇಕು. ಹಾಗೊಂದು ವೇಳೆ ಅದು ಸಾಧ್ಯವಿಲ್ಲದಿದ್ದರೆ ನಾವು ಹೇಳಿದವರಿಗೆ ಸಿಎಂ ಹುದ್ದೆ ಸಿಗಬೇಕು ಅಂತ ಒತ್ತಾಯಿಸಿದ್ದರು. ಅವರ ಈ ಮಾತು ಕೊನೆಗೆ ಎಲ್ಲಿಗೆ ಹೋಯಿತೆಂದರೆ ಡಿಕೆಶಿ ಅವರನ್ನೇನಾದರೂ ಸಿಎಂ ಮಾಡಲು ಕಾಂಗ್ರೆಸ್ ಹೈಕಮಾಂಡ್ ತಯಾರಾದರೆ ನಾವು ಐವತ್ತರಿಂದ ಅರವತ್ತು ಮಂದಿ ಪಕ್ಷ ತೊರೆಯಲಿದ್ದೇವೆ ಎಂಬ ಲೆವೆಲ್ಲಿಗೆ ಹೋಯಿತು.
ಗಮನಿಸಬೇಕಾದ ಸಂಗತಿ ಎಂದರೆ ಈ ಮಾತನ್ನು ಸತೀಶ್ ಜಾರಕಿಹೊಳಿ ಮಾತ್ರವಲ್ಲ, ಸಿದ್ದರಾಮಯ್ಯ ಸರ್ಕಾರದಲ್ಲಿರುವ ಫೋರ್‌ಮ್ಯಾನ್ ಆರ್ಮಿಯ ಎಲ್ಲ ಸದಸ್ಯರೂ ಖರ್ಗೆಯವರಿಗೆ ಈ ಕುರಿತು ಸ್ಪಷ್ಟ ಸಂದೇಶ ರವಾನಿಸಿದರು. ಯಾವಾಗ ಫೋರ್‌ಮ್ಯಾನ್ ಆರ್ಮಿ ಇಂತಹ ಸಂದೇಶವನ್ನು ರವಾನಿಸಿತೋ ಇದಾದ ನಂತರ ನಡೆದ ಒಂದು ಬೆಳವಣಿಗೆ ಡಿಕೆಶಿ ಹತಾಶರಾಗಿದ್ದಾರೆ ಎಂಬಂತೆ ಬಿಂಬಿಸತೊಡಗಿತು.
ಇದಕ್ಕೆ ಕಾರಣ, ಕೊಯಮತ್ತೂರಿನಲ್ಲಿ ನಡೆದ ಕಾರ್ಯಕ್ರಮ. ಈ ಕಾರ್ಯಕ್ರಮದಲ್ಲಿ ಕೇವಲ ಡಿಕೆಶಿ ಮಾತ್ರವಲ್ಲ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಕೂಡ ಭಾಗವಹಿಸಿದ್ದರು. ಯಾವಾಗ ಒಂದು ವೇದಿಕೆಯಲ್ಲಿ ಡಿಕೆಶಿ ಮತ್ತು ಅಮಿತ್ ಶಾ ಕಾಣಿಸಿಕೊಂಡರೋ ಇದಾದ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ಮತ್ತೊಂದು ವದಂತಿ ಶುರುವಾಯಿತು. ಅದೆಂದರೆ, ಸಿದ್ದರಾಮಯ್ಯ ಅವರು ಯಾವ ಕಾರಣಕ್ಕೂ ಮುಖ್ಯಮಂತ್ರಿ ಹುದ್ದೆಯನ್ನು ಬಿಟ್ಟುಕೊಡುವುದಿಲ್ಲ. ಹೀಗಾಗಿ ತಮ್ಮ ಬೆಂಬಲಿಗ ಸಚಿವರ ಮೂಲಕ ಅವರು ಅಡ್ಡಗಾಲು ಹಾಕಿಸುವ ಕೆಲಸ ಮಾಡುತ್ತಿದ್ದಾರೆ.
ಹೀಗಾಗಿ ಇದೆಲ್ಲವನ್ನೂ ನೋಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹತಾಶರಾಗಿದ್ದು, ಮೆಲ್ಲಗೆ ಬಿಜೆಪಿ ಜತೆ ಸೇರಿಕೊಳ್ಳಲು ಹೊರಟಿದ್ದಾರೆ. ನಿರ್ದಿಷ್ಟ ಸಂಖ್ಯೆಯ ಶಾಸಕರೊಂದಿಗೆ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿಕೊಂಡರೆ ಮುಖ್ಯಮಂತ್ರಿಯಾಗುವುದು ಅಸಂಭವವಲ್ಲ ಎಂಬುದು ಈ ಮಾತು.
ಯಾವಾಗ ಈ ವದಂತಿ ಶುರುವಾಯಿತೋ ಇದಾದ ನಂತರ ಕರ್ನಾಟಕದ ರಾಜಕಾರಣ ಇನ್ಯಾವುದೋ ರೂಪಕ್ಕೆ ತಿರುಗಲಿದೆ ಎಂಬ ಮಾತು ಶುರುವಾಯಿತು. ಆದರೆ ಇಂತಹ ಮಾತನಾಡುವವರು ಗಮನಿಸದ ಸಂಗತಿ ಎಂದರೆ, ಡಿಕೆಶಿ ಯಾವ ಕಾರಣಕ್ಕೂ ಕಾಂಗ್ರೆಸ್ ತೊರೆಯುವುದಿಲ್ಲ ಎಂಬುದು. ಏಕೆಂದರೆ ಕಾಂಗ್ರೆಸ್ ತೊರೆದು ಹೋಗಲು ಡಿಕೆಶಿ ಅವರ ಬಳಿ ಸಮರ್ಪಕ ಶಾಸಕ ಬಲವಿಲ್ಲ. ಹೀಗಾಗಿ ಅವರು ಹೋದರೂ ಅವರ ಹಿಂದಿದ್ದವರಿಗೆ ಅಪಾಯ ತಪ್ಪಿದ್ದಲ್ಲ. ಹೀಗಾಗಿ ಡಿಕೆಶಿ ಯಾವ ಕಾರಣಕ್ಕೂ ಕಾಂಗ್ರೆಸ್ ಬಿಡುವುದಿಲ್ಲ.
ಹಾಗೇನಾದರೂ ಅವರು ಕಾಂಗ್ರೆಸ್ ಬಿಡುವುದಿದ್ದರೆ ಈ ಹಿಂದೆಯೇ ಬಿಡಬೇಕಿತ್ತು. ಆದರೆ ಅಂತಹ ಒತ್ತಡದ ಸಂದರ್ಭದಲ್ಲೇ ಡಿಕೆಶಿ ಕಾಂಗ್ರೆಸ್ ತೊರೆಯಲಿಲ್ಲ. ಹೀಗಿರುವಾಗಿ ಈಗೇಕೆ ತೊರೆಯುತ್ತಾರೆ? ಹೀಗೆ ಡಿಕೆಶಿ ಬಗ್ಗೆ ಹರಡಿದ್ದ ಎಲ್ಲ ಪ್ರಶ್ನೆಗಳು ಈ ಮಾತಿನಿಂದ ಕುಸಿದು ಹೋದ ನಂತರ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದ್ದಕ್ಕಿದ್ದಂತೆ ಮಾತನಾಡಿದರು. ಡಿಕೆಶಿ ಸಿಎಂ ಆಗುವುದನ್ನು ಯಾವ ಶಕ್ತಿಯೂ ತಡೆಯಲು ಆಗುವುದಿಲ್ಲ ಎಂದರು. ಯಾವಾಗ ಅವರು ಇಂತಹ ಮಾತುಗಳನ್ನಾಡಿದರೋ ಸಹಜವಾಗಿಯೇ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದೆ. ಮತ್ತು ನವೆಂಬರ್, ಡಿಸೆಂಬರ್ ಹೊತ್ತಿಗೆ ಡಿ.ಕೆ.ಶಿವಕುಮಾರ್ ಕರ್ನಾಟಕದ ಮುಖ್ಯಮಂತ್ರಿಯಾದರೂ ಅಚ್ಚರಿಯೇನಿಲ್ಲ ಎಂಬ ಮಾತುಗಳು ಕೇಳಿ ಬರತೊಡಗಿವೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಹುದ್ದೆಗೆ ಲಗ್ಗೆ ಹಾಕಿರುವ ಡಿಕೆಶಿಯನ್ನು ತಡೆಯಲು ವಿಶೇಷ ಯತ್ನಗಳೂ ಆರಂಭವಾಗಿವೆ. ಅದೇ ಸದ್ಯದ ವಿಶೇಷ
” ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಇದ್ದಕ್ಕಿದ್ದಂತೆ ಡಿಕೆಶಿ ಸಿಎಂ ಆಗುವುದನ್ನು ಯಾವ ಶಕ್ತಿಯೂ ತಡೆಯಲು ಆಗುವುದಿಲ್ಲ ಎಂದರು. ಯಾವಾಗ ಅವರು ಇಂತಹ ಮಾತುಗಳನ್ನಾಡಿದರೋ ಸಹಜವಾಗಿಯೇ ರಾಜ್ಯ ಕಾಂಗ್ರೆಸ್ ಪಾಳೆಯದಲ್ಲಿ ಮತ್ತೊಂದು ಸುತ್ತಿನ ಚರ್ಚೆ ಆರಂಭವಾಗಿದೆ. ಮತ್ತು ನವೆಂಬರ್ ಡಿಸೆಂಬರ್ ಹೊತ್ತಿಗೆ ಡಿ.ಕೆ.ಶಿವಕುಮಾರ್ಕರ್ನಾಟಕದ ಮುಖ್ಯಮಂತ್ರಿಯಾದರೂ ಅಚ್ಚರಿಯೇನಿಲ್ಲ ಎಂಬ ಮಾತುಗಳು ಕೇಳಿ ಬರತೊಡಗಿವೆ. ಅಷ್ಟೇ ಅಲ್ಲ, ಮುಖ್ಯಮಂತ್ರಿ ಹುದ್ದೆಗೆ ಲಗ್ಗೆ ಹಾಕಿರುವ ಡಿಕೆಶಿಯನ್ನು ತಡೆಯಲು ವಿಶೇಷ ಯತ್ನಗಳೂ ಆರಂಭವಾಗಿವೆ.”





