Mysore
22
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದೀಪಾವಳಿ: ಮಲೆ ಮಹದೇಶ್ವರ ಬೆಟ್ಟದಲ್ಲಿ ಪರಿಷೆ ಪ್ರಭಾವಳಿ

ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳಗಳಲ್ಲಿ ಒಂದಾದ ಹನೂರು ತಾಲ್ಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ದೀಪಾವಳಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತಿದೆ. ದೀಪಾವಳಿ ಎಂದರೆ ಇಲ್ಲಿನವರಿಗೆ ಮೊದಲು ನೆನಪಾಗುವುದೇ ಹಾಲ್ಹರವಿ ಸೇವೆ.

ಇದರ ಐತಿಹ್ಯವನ್ನು ನೋಡುವುದಾದರೆ, ಮಜ್ಜನ ಮಲೆಯಲ್ಲಿ ಕುಳಿತು ಮಹದೇಶ್ವರರು ತನ್ನ ಸೇವಕರೂ ಆದ ಶಿಶು ಮಕ್ಕಳು ಕಾರಯ್ಯ ಮತ್ತು ಬಿಲ್ಲಯ್ಯರಿಗೆ ಮಜ್ಜನ ಮಾಡಲು ಏಳು ಬಿಂದಿಗೆಗಳಷ್ಟು ಹಸುವಿನ ಹಾಲನ್ನು ಕರೆದು ತರಲು ಹೇಳುತ್ತಾರೆ. ಅವರ ಮಾತಿನಂತೆಯೇ ಕಾರಯ್ಯ, ಬಿಲ್ಲಯ್ಯರು ಎಲ್ಲೆಡೆ ಹುಡುಕಿ ಎಲ್ಲೂ ಹಸುವಿನ ಹಾಲು ಸಿಗದಿದ್ದಾಗ, ಏಳು ಬಿಂದಿಗೆ ಗಳಲ್ಲಿ ಎಮ್ಮೆಯ ಹಾಲನ್ನು ಕರೆದು ತರುತ್ತಾರೆ. ತಮ್ಮ ದಿವ್ಯ ದೃಷ್ಟಿಯಿಂದ ಅದು ಎಮ್ಮೆಯ ಹಾಲೆಂಬುದನ್ನು ಮನಗಂಡ ಮಹದೇಶ್ವರರು, ಕಾರಯ್ಯ, ಬಿಲ್ಲಯ್ಯರು ಹಿಂತಿರುಗಿ ಬಂದಾಗ ವಿಶ್ರಾಂತಿ ಪಡೆಯುವ ರೀತಿ ನಟಿಸುತ್ತಾರೆ.

ವಿಶ್ರಾಂತಿ ಪಡೆಯುತ್ತಿದ್ದದ್ದನ್ನು ನೋಡಿದ ಶಿಶು ಮಕ್ಕಳು ಎಚ್ಚರವಾದ ಮೇಲೆ ಕೊಡೋಣವೆಂದು ತಂದ ಹಾಲನ್ನು ಅವರ ಪಾದದ ಬಳಿ ಇಟ್ಟು ಅಲ್ಲೇ ಕುಳಿತಿರುವಾಗ, ಮಹದೇಶ್ವರರು ಗೊತ್ತಿಲ್ಲದೆ ಒದ್ದ ಹಾಗೆ ಪಾದದ ಬಳಿಯಿದ್ದ ಹಾಲನ್ನು ಬೇಕಂತಲೇ ಒದೆಯುತ್ತಾರೆ. ಆ ಏಳು ಬಿಂದಿಗೆಗಳ ಹಾಲೆಲ್ಲವೂ ಪಕ್ಕದಲ್ಲೇ ಹರಿಯುತ್ತಿದ್ದ ಹಳ್ಳಕ್ಕೆ ಚೆಲ್ಲುತ್ತದೆ… ಇದನ್ನೂ ನೋಡಿದ ಶಿಶು ಮಕ್ಕಳು, ತಮ್ಮ ತಪ್ಪೊಪ್ಪಿಗೆಯ ಜೊತೆಗೆ ಕಷ್ಟಪಟ್ಟು ಕರೆದು ತಂದಿದ್ದ ಹಾಲನ್ನು ಹೀಗೆ ಚೆಲ್ಲಿಬಿಟ್ಟರಲ್ಲ ಎಂದು ತುಂಬಾ ನೊಂದುಕೊಂಡಾಗ ಮಹದೇಶ್ವರರು, ಶಿಶು ಮಕ್ಕಳಿಗೆ ಮುಖ್ಯ ಸಂದೇಶವೊಂದನ್ನು ನೀಡುತ್ತಾರೆ. “ಪ್ರತಿ ವರ್ಷ ದೀಪಾವಳಿಯ ಸಮಯದಲ್ಲಿ ಅಮಾವಾಸ್ಯೆಯ ದಿನದಂದು ಈ ಹಳ್ಳದಲ್ಲಿ ಹರಿದು ಹೋದ ಹಾಲನ್ನು ಬೇಡಗಂಪಣ ಸಮುದಾಯಕ್ಕೆ ಸೇರಿದ ೧೦೧ ಋತುಮತಿಯರಿಂದ ಹಾಲರವಿ ಸೇವೆಯ ಮೂಲಕ ನನ್ನ ಸನ್ನಿಧಿಗೆ ತರಿಸಿಕೊಳ್ಳುವೆ” ಎಂಬ ಮಾತನ್ನು ಕಾರಯ್ಯ ಬಿಲ್ಲಯ್ಯರಿಗೆ ಕೊಡುತ್ತಾರೆ. ಹಾಗೆಯೇ “ಈ ಹಳ್ಳ, ಹಾಲಹಳ್ಳ ಎಂದು ಪ್ರಸಿದ್ಧಿಯಾಗಲಿ” ಎಂದು ನುಡಿಯುತ್ತಾರೆ.

ಅದರಂತೆಯೇ ಪ್ರತೀ ವರ್ಷದ ದೀಪಾವಳಿಯ ಅಮಾವಾಸ್ಯೆಯ ಸಮಯದಲ್ಲಿ ನಡೆಯುವ ಹಾಲರವಿ ಸೇವೆಯಲ್ಲಿ, ಹಾಲರವಿ ಉತ್ಸವಕ್ಕೆ ನಿಯೋಜನೆಗೊಂಡ ಸ್ಥಳೀಯ ಬೇಡಗಂಪಣ ಸಮುದಾಯದ ೧೦ ರಿಂದ ೧೨ ವರ್ಷದ ೧೦೧ ಹೆಣ್ಣು ಮಕ್ಕಳು ಉಪವಾಸವಿದ್ದು, ಮಡಿಯಲ್ಲಿಯೇ ಹಸಿರು ಸೀರೆಯುಟ್ಟು, ಸೂರ್ಯೋದಯಕ್ಕೂ ಮುನ್ನ ಬೆಟ್ಟದಿಂದ ೭ ಕಿ.ಮೀ. ಅರಣ್ಯದೊಳಗೆ ಕಾಲು ದಾರಿಯಲ್ಲಿ ನಡೆದು ಹಾಲಹಳ್ಳ ತಲುಪಿ, ಪೂಜೆ ಮಾಡಿ ಹಾಲರವಿ ಕಳಸವನ್ನು ತಲೆಯ ಮೇಲೆ ಹೊತ್ತು ಪಾದಯಾತ್ರೆಯ ಮೂಲಕ ದೇವಾಲಯದ ಕಡೆಗೆ ಬರಬೇಕು. ತಲೆತಲಾಂತರದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯದಂತೆ ಈ ಸೇವೆಯಲ್ಲಿ ಇಂದಿಗೂ ಹೆಣ್ಣು ಮಕ್ಕಳು ಛಲಬಿಡದೆ ಭಾಗವಹಿಸುತ್ತಲೇ ಇರುವುದು ವಿಶೇಷ.

ಇದನ್ನು ಓದಿ: ಕೊಡಗು ಜಿಲ್ಲೆಯಲ್ಲಿ ದೀಪಾವಳಿ ಆಚರಣೆ ಸಂಭ್ರಮ..!

ಹಾಲ್ಹರವಿ ಹೊತ್ತ ಹೆಣ್ಣು ಮಕ್ಕಳು ತಂಬಡಿಗೇರಿ ಗ್ರಾಮದ ಮುಖ್ಯದ್ವಾರ ಪ್ರವೇಶಿಸುತ್ತಿದ್ದ ಹಾಗೆಯೇ, ಅಲ್ಲಿ ದೊಡ್ಡಪಾಲಿನ ಬೇಡಗಂಪಣ ಸಮುದಾಯದವರಿಂದ ಕತ್ತಿ ಪವಾಡ ನಡೆಯುತ್ತದೆ. ಇಬ್ಬರು ಕತ್ತಿಯನ್ನು ಹಿಡಿದು ನಿಂತರೆ, ಮತೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುವ, ಅವರ ಬೆನ್ನ ಮೇಲೆ ಬೇಡಗಂಪಣ ಸಮುದಾಯದ ಪ್ರಮುಖ ವ್ಯಕ್ತಿ ಕಾಲನ್ನಿಡುವ ದೃಶ್ಯ ಮೈ ರೋಮಾಂಚನಗೊಳಿಸುತ್ತದೆ. ಹೆಣ್ಣುಮಕ್ಕಳು ನಡೆದು ಹೋಗುವ ಮಾರ್ಗದಲ್ಲಿ ದುಷ್ಟ ಶಕ್ತಿಗಳ ಕಣ್ಣು ಬೀಳದಂತೆ ಪವಾಡ ನಡೆಯುತ್ತದೆ ಎಂಬುದು ಇಲ್ಲಿನ ಪ್ರತೀತಿ.

ಅಲ್ಲಿಂದ ಸಾಲೂರು ಮಠದ ಶ್ರೀಗಳ ಸಮ್ಮುಖದಲ್ಲಿ ಇನ್ನೊಮ್ಮೆ ಪೂಜೆ ಸಲ್ಲಿಸಿ ಮಂಗಳವಾದ್ಯ, ಮೇಳದೊಂದಿಗೆ ಮೆರವಣಿಗೆ ಹೊರಟು ಪಟ್ಟದ ಆನೆ, ಡೊಳ್ಳು ಕುಣಿತ, ಛತ್ರಿ – ಚಾಮರಗಳೊಂದಿಗೆ ದೇವಾಲಯ ಪ್ರದಕ್ಷಿಣೆ ಹಾಕಿ ಕಳಸಗಳಲ್ಲಿರುವ ನೀರನ್ನು ಮಾದಪ್ಪನಿಗೆ ಅಭಿಷೇಕ ಮಾಡುವ ಮೂಲಕ ಅಭಿಷೇಕದ ತೀರ್ಥವನ್ನು ಭಕ್ತಾದಿಗಳಿಗೆ ಹಂಚಿದ ಮೇಲೆ ಹಾಲ್ಹರವಿ ಉತ್ಸವ ಸಂಪನ್ನಗೊಳ್ಳುತ್ತದೆ. ಮೊದಲಿಗೆ ಮಹದೇಶ್ವರನಿಗೆ ಎಣ್ಣೆ ಮಜ್ಜನ ಸೇವೆ ಹಾಗೂ ಉತ್ಸವಾದಿಗಳು ನೆರವೇರುತ್ತವೆ. ತದನಂತರ ನರಕ ಚತುರ್ದಶಿ, ಅದಾದ ಬಳಿಕ ಅಮಾವಾಸ್ಯೆ ಪ್ರಯುಕ್ತ ಹಾಲ್ಹರವಿ ಉತ್ಸವ ಜರುಗುತ್ತದೆ.ನಂತರ ಕೊನೆಯ ದಿನ ಬೆಳಿಗ್ಗೆ ಮಹದೇಶ್ವರ ಸ್ವಾಮಿಯ ಮಹಾ ರಥೋತ್ಸವ ನಡೆಯುತ್ತದೆ.

ಪ್ರತಿ ವರ್ಷವೂ ಸಾಂಪ್ರದಾಯಿಕವಾಗಿ ಕಾಡಿನಿಂದ ಬಿದಿರು ತಂದು, ಅಚ್ಚೆಗಳನ್ನು ಒಪ್ಪವಾಗಿ ಜೋಡಿಸಿ ೫೬ ಅಡಿ ಎತ್ತರದ ರಥ ನಿರ್ಮಿಸುತ್ತಾರೆ. ರಥೋತ್ಸವದ ದಿನ ಗುರು ಬ್ರಹ್ಮೋತ್ಸವ, ಅನ್ನ ಬ್ರಹ್ಮೋತ್ಸವ ಹಾಗೂ ರಾತ್ರಿ ಮಹಾ ನೈವೇದ್ಯ ಸಮರ್ಪಣೆಯಾಗಲಿದ್ದು, ಅದ್ಧೂರಿ ತೆಪ್ಪೋತ್ಸವದ ಮೂಲಕ ದೀಪಾವಳಿ ಜಾತ್ರೋತ್ಸವಕ್ಕೆ ತೆರೆ ಎಳೆಯುತ್ತಾರೆ.

” ಐದು ದಿನಗಳು ನಡೆಯುವ ಉತ್ಸವದಲ್ಲಿ ಕರ್ನಾಟಕದ ಮೂಲೆ-ಮೂಲೆಗಳಿಂದ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆಯುತ್ತಾರೆ. ಈ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಈಗಾಗಲೇ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಕಾಲ್ನಡಿಗೆಯಲ್ಲಿ ಕ್ಷೇತ್ರ ತಲುಪುತ್ತಿದ್ದು, ಎಲ್ಲೆಡೆ ಮಾದಪ್ಪನ ಸ್ಮರಣೆ ಅನುರಣಿಸುತ್ತಿದೆ.”

ಮಹಾದೇವ್, ಪೊನ್ನಾಚಿ

Tags:
error: Content is protected !!