ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಇಂತಹ ಕೂಗು ಮೇಲೇಳಲು ಸನ್ನಿವೇಶದ ಒತ್ತಡ ಕಾರಣವೆಂಬುದು ರಹಸ್ಯವಲ್ಲ. ಹೀಗಾಗಿಯೇ ದಲಿತ ನಾಯಕರಾದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರ ಹೆಸರು ರೇಸಿಗೆ ಬಂದಿವೆ.
ಅಂದ ಹಾಗೆ ಇಪ್ಪತ್ತು ತಿಂಗಳ ಹಿಂದೆ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ೨೦೨೮ ರ ತನಕ ಅವರು ಈ ಹುದ್ದೆಯಲ್ಲಿಯೇ ಮುಂದುವರಿಯುವುದು ಖಚಿತವಾದರೆ ದಲಿತ ಸಿಎಂ ಕೂಗು ಇಷ್ಟು ಬೇಗ ಮೇಲೇಳುತ್ತಿರಲಿಲ್ಲ ಎಂಬುದು ನಿಜ.
ಅಹಿಂದ ವರ್ಗಗಳ ನಾಯಕರಾಗಿ ಸಿದ್ದರಾಮಯ್ಯ ಯಾವ ರೀತಿ ಎಮರ್ಜ್ ಆಗಿದ್ದಾರೆಂದರೆ ಈ ವಿಷಯದಲ್ಲಿ ಅವರದು ನಂಬರ್ ಒನ್ ಸ್ಥಾನ. ಹೀಗೆ ನಂಬರ್ ಒನ್ ಸ್ಥಾನದಲ್ಲಿರುವ ಸಿದ್ದರಾಮಯ್ಯ ೨೦೨೮ ರವರೆಗೆ ಮುಖ್ಯಮಂತ್ರಿ ಹುದ್ದೆಯಲ್ಲಿ ಮುಂದುವರಿದರೆ ಪರ್ಯಾಯ ನಾಯಕತ್ವದ ಪ್ರಶ್ನೆ ಏಳುವುದಿಲ್ಲ. ಆದರೆ ಇತ್ತೀಚೆಗೆ ಕಾಣಿಸಿಕೊಂಡ ಎರಡು ಸಂಗತಿಗಳು ಕರ್ನಾಟಕಕ್ಕೆ ಪರ್ಯಾಯ ಮುಖ್ಯಮಂತ್ರಿ ಬರಬಹುದು ಎಂಬ ಸಾಧ್ಯತೆಯನ್ನು ತೋರಿಸಿರುವುದರಿಂದ ಮತ್ತೊಮ್ಮೆ ಕರ್ನಾಟಕದಲ್ಲಿ ದಲಿತ ಸಿಎಂ ಕೂಗು ಮೇಲೆದ್ದಿದೆ.
ಅಂದ ಹಾಗೆ ಈ ಎರಡು ಸಂಗತಿಗಳು ಯಾವುವು ಎಂಬುದು ರಹಸ್ಯವೇನಲ್ಲ. ಮೊದಲನೆಯದಾಗಿ ಮೈಸೂರಿನ ಮುಡಾ ಪ್ರಕರಣದ ಅಂತ್ಯ ಹೇಗಾಗಬಹುದು? ಎಂಬ ಬಗೆಗಿನ ಅನುಮಾನ. ಮತ್ತೊಂದು ಮುಖ್ಯಮಂತ್ರಿ ಹುದ್ದೆಯ ವಿಷಯದಲ್ಲಿ ಅಧೀಕಾರ ಹಂಚಿಕೆ ಒಪ್ಪಂದವಾಗಿದೆ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಹೇಳಿಕೆ.
ಮುಡಾ ಪ್ರಕರಣಕ್ಕೆ ಸಂಬಂಧೀಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಗುರುತರವಾದ ಸಾಕ್ಷ್ಯಗಳೇನೂ ಸಿಕ್ಕಿಲ್ಲ. ಇಷ್ಟಾದರೂ ಕೆಲ ದಿನಗಳ ಹಿಂದೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಅದು ಶಂಕಿಸಿದ ರೀತಿಯನ್ನು ನೋಡಿದರೆ ತನಿಖೆಯ ಆಟ ಯಾವ ಸ್ವರೂಪಕ್ಕೆ ತಿರುಗಬಹುದು ಎಂಬ ಸಂದೇಹ ಉಳಿದುಕೊಂಡೇ ಇದೆ.
ಇದೇ ರೀತಿ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯ ವಿಷಯ ವರಿಷ್ಠರಿಗೆ ತಲೆ ನೋವಾಗಿತ್ತಲ್ಲ? ಆಗ ಪೈಪೋಟಿಯಲ್ಲಿದ್ದ ಸಿದ್ದರಾಮಯ್ಯ ಮತ್ತು ಶಿವಕುಮಾರ್ ಅವರಿಬ್ಬರಿಗೂ ಈ ಹುದ್ದೆಯನ್ನು ಹಂಚಲಾಗಿದೆ ಎಂಬ ಮಾತು ಈ ಕ್ಷಣದವರೆಗೂ ಜೀವಂತವಾಗಿದೆ.
ಮೂಲಗಳ ಪ್ರಕಾರ, ಇಂತಹ ಒಪ್ಪಂದವಾಗಿದೆ ಎಂಬುದರ ಬಗ್ಗೆ ಆಪ್ತರು ಕೇಳಿದಾಗ; ಅಂತಹದೇನೂ ಒಪ್ಪಂದವಾಗಿಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹೀಗೆ ಸಿದ್ದರಾಮಯ್ಯ ಅವರು ಹೇಳಿದರೂ ಡಿಕೆಶಿ ಹೇಳಿಕೆಯ ಬಿಸಿ ಹಾಗೇ ಉಳಿದಿರುವ ಪರಿಣಾಮವಾಗಿ ಮುಖ್ಯಮಂತ್ರಿ ಹುದ್ದೆ ಖಾಲಿಯಾಗಬಹುದು ಎಂಬ ಸಂಶಯ ಕಾಂಗ್ರೆಸ್ ಪಾಳೆಯದಲ್ಲಿ ಉಳಿದುಕೊಂಡಿದೆ.
ಈ ಸಂಶಯ ಉಳಿದುಕೊಂಡಿದೆ ಎಂಬ ಕಾರಣಕ್ಕಾಗಿಯೇ ಗೃಹ ಸಚಿವ ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಮತ್ತು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಆಗಿಂದಾಗ್ಗೆ ರಹಸ್ಯ ಸಭೆ ನಡೆಸುತ್ತಿದ್ದಾರೆ ಮತ್ತು ಮುಂದಿನ ದಾರಿಯ ಬಗ್ಗೆ ಚರ್ಚಿಸುತ್ತಿದ್ದಾರೆ. ಈಗಿರುವ ಮಾಹಿತಿಯ ಪ್ರಕಾರ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿರುವವರೆಗೆ ನಾವು ಆ ಹುದ್ದೆಯ ಆಕಾಂಕ್ಷಿಗಳಲ್ಲ. ಆದರೆ ಒಂದು ಸಲ ಅವರೇನಾದರೂ ಕೆಳಗೆ ಇಳಿಯುತ್ತಾರೆ ಎಂದರೆ ಪರ್ಯಾಯ ನಾಯಕತ್ವಕ್ಕೆ ನಮ್ಮಲ್ಲಿ ಒಬ್ಬರು ಅಣಿಯಾಗಲೇಬೇಕು ಎಂದು ಈ ಮೂವರೂ ನಾಯಕರು ನಿರ್ಧರಿಸಿದ್ದಾರೆ.
ಅಂದ ಹಾಗೆ ಮುಂದಿನ ಮುಖ್ಯಮಂತ್ರಿಯಾಗುವ ವಿಷಯದಲ್ಲಿ ಈ ಮೂವರೂ ನಾಯಕರಿಗೆ ವಿಶೇಷ ಕ್ವಾಲಿಟಿಗಳಿವೆ. ಈ ಪೈಕಿ ಪರಮೇಶ್ವರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ ಅನುಭವವಿದ್ದರೆ, ಮಹದೇವಪ್ಪ ಅವರಿಗೆ ಸಾಮಾಜಿಕ ನ್ಯಾಯದ ರಥವನ್ನು ಸಮರ್ಥವಾಗಿ ಎಳೆಯುವ ಶಕ್ತಿಯಿದೆ. ಸಾಮಾಜಿಕ ನ್ಯಾಯದ ರಥ ಎಳೆಯುವ ಪ್ರಶ್ನೆ ಬಂದಾಗ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ನಂಬರ್ ಒನ್ ಅರ್ಹ ಸಚಿವರಿದ್ದರೆ ಅದು ಮಹದೇವಪ್ಪ. ಹೀಗಾಗಿ ಪರ್ಯಾಯ ನಾಯಕತ್ವದ ವಿಷಯ ಬಂದಾಗ ರೇಸಿನಲ್ಲಿ ಅವರು ಕಾಣಿಸಿಕೊಳ್ಳುವುದು ಸಹಜ.
ಇನ್ನು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ಕೂಡ ಭವಿಷ್ಯದ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಕಾಣಿಸಿಕೊಳ್ಳುತ್ತಾರಾದರೂ ಅಂತಿಮವಾಗಿ ಅವರ ಹೆಸರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಡೆಯುತ್ತಿರುವ ರೇಸಿನ ಟ್ರ್ಯಾಕಿಗೆ ಹೋಗಬಹುದು. ಹೀಗೆ ಸಿದ್ದರಾಮಯ್ಯ ಅವರ ಜಾಗ ತೆರವಾಗುವುದು ಅನಿವಾರ್ಯವಾದರೆ ಆ ಜಾಗಕ್ಕೆ ಬರಲು ತಾವು ಸಿದ್ಧ ಎಂಬ ಸಂದೇಶ ಈ ಮೂವರೂ ನಾಯಕರಿಂದ ರವಾನೆಯಾಗಿರುವುದರಿಂದ ಸಹಜವಾಗಿಯೇ ಶಿವಕುಮಾರ್ ಆತಂಕದಲ್ಲಿದ್ದಾರೆ. ಅವರ ಪ್ರಕಾರ, ಸಿದ್ದರಾಮಯ್ಯ ಅವರ ಜಾಗಕ್ಕೆ ತಾವು ಬಿಟ್ಟು ಇನ್ನೊಬ್ಬರು ಬರುವುದು ಸಾಧ್ಯವಿಲ್ಲ. ಕಾರಣವೇನೆಂದರೆ ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ಕರ್ನಾಟಕದ ನೆಲೆಯಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಅಗತ್ಯವಾದ ರಣತಂತ್ರ ಹೆಣೆದವರು ತಾವು. ವಿಧಾನಸಭಾ ಚುನಾವಣೆ ಎಂಬ ಯುದ್ಧಕ್ಕೆ ಎಲ್ಲರಿಗಿಂತ ಹೆಚ್ಚಿನ ಶಸ್ತ್ರಾಸ್ತ್ರಗಳನ್ನು ಪೂರೈಸಿದವರು ತಾವು. ಹೀಗಾಗಿ ತಾವು ಸಹಜವಾಗಿ ಪರ್ಯಾಯ ನಾಯಕತ್ವಕ್ಕೆ ಅರ್ಹರು ಎಂಬುದು ಶಿವಕುಮಾರ್ ಅವರ ವಾದ.
ಆದರೆ ಅವರೆಷ್ಟೇ ವಾದ ಮಾಡಿದರೂ ಅದರ ವಿರುದ್ಧ ಧ್ವನಿ ಎತ್ತುವವರ ಪಡೆಯೇ ಇದೆ. ಆದ್ದರಿಂದ ಪಕ್ಷದ ನಾಯಕತ್ವ ಎಂಬುದು ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಬೇಕೇ ಹೊರತು, ದಿಲ್ಲಿಯಿಂದಲ್ಲ ಎಂಬುದು ಬಹುತೇಕರ ವಾದ. ಈ ವಾದವನ್ನು ಒಪ್ಪಿದ್ದೇ ಆದರೆ ಕರ್ನಾಟಕದ ನೆಲೆಯಲ್ಲಿ ದಲಿತ ಸಿಎಂ ಅಽಕಾರಕ್ಕೆ ಬರುವುದು ಅಸಂಭವವಲ್ಲ. ಹೀಗಾಗಿ ಸಿದ್ದರಾಮಯ್ಯ ಅವರು ಕೆಳಗಿಳಿಯುವುದು ನಿಶ್ಚಿತವಾದರೆ ದಲಿತ ಸಿಎಂ ಕೂಗು ಮತ್ತಷ್ಟು ಪ್ರಬಲವಾಗುತ್ತದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಕೇಂದ್ರದ ಜಾರಿ ನಿರ್ದೇಶನಾಲಯಕ್ಕೆ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಗುರುತರವಾದ ಸಾಕ್ಷ್ಯಗಳೇನೂ ಸಿಕ್ಕಿಲ್ಲ. ಇಷ್ಟಾದರೂ ಕೆಲ ದಿನಗಳ ಹಿಂದೆ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಅದು ಶಂಕಿಸಿದ ರೀತಿಯನ್ನು ನೋಡಿದರೆ ತನಿಖೆಯ ಆಟ ಯಾವ ಸ್ವರೂಪಕ್ಕೆ ತಿರುಗಬಹುದು ಎಂಬ ಸಂದೇಹ ಉಳಿದುಕೊಂಡೇ ಇದೆ.





