Mysore
24
few clouds

Social Media

ಸೋಮವಾರ, 26 ಜನವರಿ 2026
Light
Dark

ಅಧಿಕಾರ ಹಂಚಿಕೆ ಗೊಂದಲ; ಬಿಜೆಪಿ, ಜಾ.ದಳದಲ್ಲಿ ಆತ್ಮವಿಶ್ವಾಸ ಹೆಚ್ಚಳ 

ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ವಿದ್ಯಮಾನಗಳಿಗೆ ಕಾರಣವಾಯಿತೇ ಹೈಕಮಾಂಡ್ ಮೌನ?

ರಾಜ್ಯ ಕಾಂಗ್ರೆಸ್‌ನಲ್ಲಿ ಮುಂದುವರಿದಿರುವ ಗೊಂದಲ ಬಿಜೆಪಿ ಮತ್ತು ಜಾ.ದಳ ಪಾಳೆಯಗಳ ಆತ್ಮವಿಶ್ವಾಸ ಹೆಚ್ಚಿಸಿದೆ. ಅಂದ ಹಾಗೆ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳು ಕಳೆದಿರುವ ಕಾಂಗ್ರೆಸ್‌ನಲ್ಲಿ ಸಿಎಂ ಹುದ್ದೆಯ ವಿಷಯ ಪೈಪೋಟಿಗೆ ಕಾರಣವಾಗಿದೆ. ಇಂತಹ ಪೈಪೋಟಿ ತಾರಕಕ್ಕೇರಲು ಪಕ್ಷದ ಹೈಕಮಾಂಡ್ ವರಿಷ್ಠರೂ ಕಾರಣ. ಎರಡೂವರೆ ವರ್ಷಗಳ ಹಿಂದೆ ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ ಹುದ್ದೆಗಾಗಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಮಧ್ಯೆ ಪೈಪೋಟಿ ನಡೆಯಿತಲ್ಲ ಆ ಸಂದರ್ಭದಲ್ಲಿ ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ವಿಷಯವನ್ನು ಅವರು ಸ್ಪಷ್ಟವಾಗಿ ಹೇಳಬೇಕಿತ್ತು. ಆದರೆ ಶಾಸಕಾಂಗ ನಾಯಕನ ಆಯ್ಕೆಗಾಗಿ ಮತದಾನ ಮಾಡಿಸಿದ ವರಿಷ್ಠರು ಸಿದ್ದರಾಮಯ್ಯ ಅವರ ಆಯ್ಕೆ ಐದು ವರ್ಷಗಳಿಗೆ ಎಂದು ಸ್ಪಷ್ಟವಾಗಿ ಹೇಳಬೇಕಿತ್ತು.

ಆದರೆ ಆ ಕೆಲಸ ಮಾಡದ ಕಾಂಗ್ರೆಸ್ ವರಿಷ್ಠರು ಅಧಿಕಾರ ಹಂಚಿಕೆ ಒಪ್ಪಂದದ ಮಾತು ಶುರುವಾದಾಗ ಕೂಡ ಸ್ಪಷ್ಟ ಧ್ವನಿಯಲ್ಲಿ ಮಾತನಾಡಲಿಲ್ಲ. ಈ ವಿಷಯದಲ್ಲಿ ಅವರು ಸ್ಪಷ್ಟವಾಗಿದ್ದಿದ್ದರೆ, ಅಧಿಕಾರ ಹಂಚಿಕೆ ಒಪ್ಪಂದವಾಗಿದೆ ಅಥವಾ ಆಗಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರೆ ಗೊಂದಲ ಮುಂದುವರಿಯುತ್ತಿರಲಿಲ್ಲ.

ಹೋಗಲಿ ಎಂದರೆ, ಸ್ವತಃ ಸಿದ್ದರಾಮಯ್ಯನವರೇ ದಿಲ್ಲಿಯಲ್ಲಿ ಕುಳಿತು ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದಾಗಲಾದರೂ ಸ್ಪಷ್ಟ ಧ್ವನಿಯಲ್ಲಿ ವರಿಷ್ಠರು ಇದು ಸರಿ ಅಥವಾ ಸರಿಯಲ್ಲ ಎಂದು ಹೇಳಬೇಕಿತ್ತು. ಆದರೆ ಆಗಲೂ ಕಾಂಗ್ರೆಸ್ ವರಿಷ್ಠರ ಮೌನ ಮುಂದುವರಿಯಿತು. ಇವತ್ತು ಈ ಸಮಸ್ಯೆ ತಲೆನೋವಾಗಿ ಪರಿಣಮಿಸಲು ಇದೇ ಮುಖ್ಯ ಕಾರಣ. ಈಗ ಪರಿಸ್ಥಿತಿ ಎಲ್ಲಿಗೆ ಬಂದಿದೆ ಎಂದರೆ ಸಿದ್ದರಾಮಯ್ಯ ಅವರನ್ನು ಇಳಿಸಲು ರಾಹುಲ್ ಗಾಂಧಿ ಅವರಿಗೆ ಇಷ್ಟವಿಲ್ಲ. ಆದರೆ ಡಿ.ಕೆ. ಶಿವಕುಮಾರ್ ಅವರಿಗೆ ಈ ಬಗ್ಗೆ ಸ್ಪಷ್ಟವಾಗಿ ಹೇಳಲು ಆಗುತ್ತಿಲ್ಲ. ಹೀಗಾಗಿ ಭುಗಿಲೆದ್ದಿರುವ ಸಮಸ್ಯೆ ತಪ್ಪು ಸಂದೇಶ ರವಾನಿಸುತ್ತಿರುವು ದರಿಂದ ನೀವೇ ಉಪಾಹಾರ ಕೂಟ ನಡೆಸಿ ಶಾಂತಿ ಸಂದೇಶ ರವಾನಿಸಿ ಎಂದು ವರಿಷ್ಠರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಸೂಚನೆ ನೀಡಿದರು.

ಇದನ್ನು ಓದಿ: ಕೊಡವ ಕೌಟುಂಬಿಕ ಕ್ರಿಕೆಟ್‌ ಉತ್ಸವಕ್ಕೆ ಸಿದ್ಧತೆ 

ಅದರ ಪ್ರಕಾರ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್ ಅವರಿಗೆ ತಿಂಡಿ ತಿನ್ನಿಸಿದರೆ, ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಯ್ಯ ಅವರಿಗೆ ತಿಂಡಿ ತಿನ್ನಿಸಿದರು. ಇದರಿಂದ ಸರ್ಕಾರ ಸುಭದ್ರವಾಗಿದೆ ಅಂತಲೋ, ಸಿದ್ದರಾಮಯ್ಯ-ಡಿ.ಕೆ.ಶಿವಕುಮಾರ್ ಬ್ರದರ್ಸ್ ಆದರು ಅಂತಲೋ ಸಂದೇಶ ರವಾನೆಯಾಗಲಿಲ್ಲ. ಬದಲಿಗೆ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಬಿಟ್ಟುಕೊಟ್ಟು ಬಿಟ್ಟರೇ? ಎಂಬ ಸಂದೇಹವು ನಾಯಕರಲ್ಲಿ ಶುರುವಾಯಿತು. ಹಾಗೆ ನೋಡಿದರೆ ಸಿದ್ದರಾಮಯ್ಯ ಅವರ ಜತೆ ನಿಂತಿರುವ ಬಹುತೇಕ ಸಚಿವರು ಮತ್ತು ಶಾಸಕರಿಗೆ ಡಿ.ಕೆ.ಶಿವಕುಮಾರ್ ಸಿಎಂ ಆಗುವುದು ಬೇಕಿಲ್ಲ. ಕಾರಣ ಅವರು ಮುಖ್ಯಮಂತ್ರಿಯಾದರೆ ತಮ್ಮನ್ನು ಮೂಲೆಗುಂಪು ಮಾಡುತ್ತಾರೆ ಎಂಬ ಅನುಮಾನ.

ಹೀಗಾಗಿಯೇ ಇವರೆಲ್ಲ ಹಿಂದಿನಿಂದಲೂ ಸಿಎಂ-ಡಿಸಿಎಂ ಮಧ್ಯೆ ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದು ಗಟ್ಟಿಯಾಗಿ ಹೇಳುತ್ತಿದ್ದರು. ಆದರೆ ಯಾವಾಗ ವರಿಷ್ಠರ ಸೂಚನೆಯಂತೆ ಉಪಾಹಾರ ಕೂಟಗಳು ಶುರುವಾದವೋ ಇದಾದ ನಂತರ ಬೇರೆ ಬೇರೆ ಸಂದೇಶಗಳು ರವಾನೆಯಾಗತೊಡಗಿದವು. ಮೊದಲು ಸಿದ್ದರಾಮಯ್ಯ ಅವರ ಮನೆಗೆ ತಿಂಡಿ ತಿನ್ನಲು ಡಿ.ಕೆ. ಶಿವಕುಮಾರ್ ಹೋದರಲ್ಲ, ಇದಾದ ನಂತರ ಅವರ ಸಹೋದರ, ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, ಎಲ್ಲವೂ ಸುಸೂತ್ರವಾಗಿ ನಡೆಯುತ್ತಿದೆ ಎಂದು ಹೇಳಿದರು. ಸುಸೂತ್ರ ಅಂದರೆ ಏನು? ಡಿ.ಕೆ. ಶಿವಕುಮಾರ್ ಯಾವ ಪಟ್ಟು ಹಾಕಿದ್ದಾರೋ ಆ ಪಟ್ಟಿಗೆ ಪೂರಕವಾದ ಬೆಳವಣಿಗೆಗಳು ನಡೆಯುತ್ತಿವೆ ಅಂತ ತಾನೇ? ಇದಾದ ನಂತರ ಸದಾಶಿವನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸಕ್ಕೆ ತಿಂಡಿ ತಿನ್ನಲು ಹೋದ ಸಿದ್ದರಾಮಯ್ಯ ಏನು ಹೇಳಿದರು? ರಾಹುಲ್ ಗಾಂಧಿಯವರು ಹೇಳಿದಾಗ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ ಎಂದರು. ಅಷ್ಟೇ ಅಲ್ಲ,ಇದಾದ ಕೆಲವೇ ಹೊತ್ತಿನಲ್ಲಿ ಅಧಿಕಾರ ಶಾಶ್ವತವಲ್ಲ, ರಾಜಕೀಯ ನಮ್ಮಪ್ಪನ ಮನೆಯ ಆಸ್ತಿಯೂ ಅಲ್ಲ. ಏನಾಗುತ್ತೋ ಆಗಲಿ ನೋಡೋಣ ಎಂದರು.

ಯಾವಾಗ ಅವರು ಈ ಮಾತು ಹೇಳಿದರೋ ಆಗ ಸಿದ್ದರಾಮಯ್ಯ ಅವರ ಬೆಂಬಲಿಗರ ಪಡೆ ಜಾಗೃತ ಸ್ಥಿತಿಯಲ್ಲಿ ಕುಳಿತಿದೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ಅವರ ಹೇಳಿಕೆಯೇ ಇದಕ್ಕೆ ಸಾಕ್ಷಿ. ಅಂದ ಹಾಗೆ ಅವರು ಹೇಳಿದ್ದೇನು? ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರ ನಡುವಿನ ಬ್ರೇಕ್ ಫಾಸ್ಟ್ ಮೀಟಿಂಗುಗಳು ಬೀಗತನ ಬೆಳೆಸುವಂತಿದೆ ಅಂತ ತಾನೇ? ಸಿದ್ದರಾಮಯ್ಯ-ಡಿಕೆಶಿ ಮಧ್ಯೆ ಅಽಕಾರ ಹಸ್ತಾಂತರದ ಕತೆ ನಡೆದುಬಿಟ್ಟರೆ? ಎಂಬ ಅನುಮಾನವೇ ಇದಕ್ಕೆ ಕಾರಣ. ಯಾವಾಗ ಸಿದ್ದರಾಮಯ್ಯ ಬೆಂಬಲಿಗರಲ್ಲಿ ಇಂತಹ ಅನುಮಾನ ಶುರುವಾಯಿತೋ ಇದಾದ ನಂತರ ಸಹಜವಾಗಿಯೇ ಬಿಜೆಪಿ ಮತ್ತು ಜಾ.ದಳ ಪಾಳೆಯಗಳಲ್ಲಿ ಆತ್ಮವಿಶ್ವಾಸ ಹೆಚ್ಚಾಗಿದೆ. ಅರ್ಥಾತ್, ಕಾಂಗ್ರೆಸ್‌ನ ಮತ ಬ್ಯಾಂಕ್ ಏನಿದೆ ಅದು ಪಲ್ಲಟಕ್ಕೆ ಸಜ್ಜಾಗುತ್ತಿದೆ ಎಂಬುದು ಅವರಿಗೆ ಮನವರಿಕೆ ಆಗಿದೆ.

ಇದನ್ನು ಓದಿ: ರಿಂಗ್ ರಸ್ತೆಯಲ್ಲಿ ಸಿಗ್ನಲ್ ಲೈಟ್‌ಗಳ ಅಳವಡಿಕೆ

ಒಂದು ಅಂದಾಜಿನ ಪ್ರಕಾರ, ನಾಳೆ ಸಿದ್ದರಾಮಯ್ಯ ಅವರು ಕೆಳಗಿಳಿಯಲಿ ಅಥವಾ ಇನ್ನಷ್ಟು ಕಾಲದ ನಂತರ ಅವರನ್ನು ಇಳಿಸಿ ಡಿ.ಕೆ.ಶಿವಕುಮಾರ್‌ಗೆಪಟ್ಟ ಕೊಡುವ ಭರವಸೆ ಸಿಗಲಿ, ಈ ಪೈಕಿ ಏನೇ ಆದರೂ ಅಹಿಂದಮತಬ್ಯಾಂಕ್ ಒಡೆಯುತ್ತದೆ. ಹೀಗೆ ಅಹಿಂದ ಮತ ಬ್ಯಾಂಕಿನ ಶೇಕಡಾ ಹತ್ತು, ಹದಿನೈದರಷ್ಟು ಮತಗಳು ಬಿಜೆಪಿ-ಜಾ.ದಳ ಮಿತ್ರಕೂಟದ ಪಾಲಾದರೂ ಸಾಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಿರಾಯಾಸವಾಗಿನೂರೈವತ್ತು ಸೀಟು ಗೆಲ್ಲುತ್ತೇವೆ ಎಂಬುದು ಬಿಜೆಪಿ-ಜಾ.ದಳ ನಾಯಕರ ಆತ್ಮವಿಶ್ವಾಸ.

ಅಂದ ಹಾಗೆ ಇವತ್ತು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಪಾಳೆಯಗಳಿಂದ ಹೊರಡುತ್ತಿರುವ ಸಂದೇಶ ಸಿದ್ದರಾಮಯ್ಯ ಅವರನ್ನು ತಕ್ಷಣ ಇಳಿಸಬೇಕೆಂದಿಲ್ಲ. ಆ ತರಹದ ಸಣ್ಣ ಅನುಮಾನವೂ ಅಹಿಂದ ಮತ ಬ್ಯಾಂಕಿನ ಪಲ್ಲಟಕ್ಕೆ ಕಾರಣವಾಗುತ್ತದೆ. ಈ ಹಿಂದೆ ಜನತಾದಳ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗಡೆ ಮತ್ತು ಎರಡು ಬಾರಿ ಮುಖ್ಯಮಂತ್ರಿ ಹುದ್ದೆಯಿಂದ ಬಲವಂತವಾಗಿ ಯಡಿಯೂರಪ್ಪ ಕೆಳಗಿಳಿದಾಗ ಪ್ರಬಲ ಲಿಂಗಾಯತ ಸಮುದಾಯ ಕಾಂಗ್ರೆಸ್‌ ಹೊರಗಡೆ ಹೊರಳಿತ್ತು.

೧೯೮೦ರಲ್ಲಿ ದೇವರಾಜ ಅರಸರನ್ನು ಬಲವಂತವಾಗಿ ಸಿಎಂ ಹುದ್ದೆ ಯಿಂದ ಕೆಳಗಿಳಿಸಿದಾಗ ಅಹಿಂದ ಮತ ಬ್ಯಾಂಕು ಕಾಂಗ್ರೆಸ್ ವಿರುದ್ಧ ತಿರುಗಿ ಬಿದ್ದಿತ್ತು. ಈಗ ಸಿದ್ದರಾಮಯ್ಯ ಸಿಎಂ ಹುದ್ದೆಯಿಂದ ಇಳಿಯಲಿ ಅಥವಾ ಇಳಿಯದೆ ಇರಲಿ, ಆದರೆ ಈಗ ಪಟ್ಟಕ್ಕಾಗಿ ನಡೆಯುತ್ತಿರುವ ಕದನದ ಸ್ವರೂಪ ಅಹಿಂದ ಮತ ಬ್ಯಾಂಕಿನಲ್ಲಿ ಗಟ್ಟಿಯಾದ ಅನುಮಾನ ಮೂಡಿಸಿದೆ.ಅರ್ಥಾತ್ ಸಿದ್ದರಾಮಯ್ಯ ಅವರು ಎಷ್ಟು ದಿನ ಸಿಎಂ ಆಗಿರುತ್ತಾರೋ? ಅದರೆ ಅವರು ೨೦೨೮ರಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಎಂಬುದು ಅಹಿಂದ ಮತ ಬ್ಯಾಂಕಿಗೆ ಖಚಿತವಾಗಿದೆ. ಪರಿಣಾಮ ಕೈ ಪಾಳೆಯದಿಂದ ವಲಸೆ ಪ್ರಾರಂಭಿಸಲು ಈ ಮತ ಬ್ಯಾಂಕಿಗೆ ಒಂದು ಪ್ರೇರಣೆಯಂತೂ ಸಿಕ್ಕಿದೆ. ಇವತ್ತು ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜಾ.ದಳ ಪಾಳೆಯಗಳಲ್ಲಿ ಆತ್ಮವಿಶ್ವಾಸ ಕಾಣಿಸಿಕೊಳ್ಳಲು ಇದಕ್ಕಿಂತ ಇನ್ನೇನು ಬೇಕು?

” ಸ್ವತಃ ಸಿದ್ದರಾಮಯ್ಯನವರೇ ದಿಲ್ಲಿಯಲ್ಲಿ ಕುಳಿತು ಅಧಿಕಾರ ಹಂಚಿಕೆ ಒಪ್ಪಂದ ಆಗಿಲ್ಲ ಎಂದಾಗಲಾದರೂ ಸ್ಪಷ್ಟ ಧ್ವನಿಯಲ್ಲಿ ವರಿಷ್ಠರು ಇದು ಸರಿ ಅಥವಾ ಸರಿಯಲ್ಲ ಎಂದು ಹೇಳಬೇಕಿತ್ತು. ಆದರೆ ಆಗಲೂ ಕಾಂಗ್ರೆಸ್ ವರಿಷ್ಠರ ಮೌನ ಮುಂದುವರಿಯಿತು. ಇವತ್ತು ಈ ಸಮಸ್ಯೆ ತಲೆನೋವಾಗಿ ಪರಿಣಮಿಸಲು ಇದೇ ಮುಖ್ಯ ಕಾರಣ”

-ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ 

Tags:
error: Content is protected !!