Mysore
29
scattered clouds
Light
Dark

“ಚಿತ್ರತುರಗ ನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ

• ಚಿತ್ರಾ ವೆಂಕಟರಾಜು

ಕಲೆ, ಕಲಾವಿದ ಮತ್ತು ಸಮಾಜ ಮತ್ತದರ ಸಂಬಂಧಗಳು ಪದೇ ಪದೇ ರವಿಶ್ಲೇಷಣೆಗೆ ಒಳಪಡುತ್ತಿರುತ್ತವೆ. ಪುನರ್ವ್ಯಾಖ್ಯಾನಗೊಳ್ಳುತ್ತಿರುತ್ತವೆ.

ಬದಲಾದ ಕಾಲದಲ್ಲಿ ಈ ವ್ಯಾಖ್ಯೆಗಳು ಬದಲಾದರೂ ಕಲಾಸೃಷ್ಟಿಯಲ್ಲಿ ತೊಡಗಿರುವ ಕಲಾವಿದ ಬದುಕುವ ಕಲ್ಲಾನಾ ಜಗತ್ತಿಗೂ ಮತ್ತು ಕಣ್ಣೆದುರಿರುವ ಕಟುವಾಸ್ತವಗಳಿಗೂ ಇರುವ ಅಂತರ ಎಲ್ಲ ಕಾಲಕ್ಕೂ ಇರುವಂಥದ್ದೇ. ಕಲಾವಿದನ ಜೀವನದ ಇಂಥ ಸೂಕ್ಷ್ಮ ವಿಷಯವನ್ನು ಕುರಿತ ನಾಟಕ ‘ಚಿತ್ರತುರಗನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ’ ಕಳೆದ ವಾರ (ಆ.27 ಮತ್ತು ಆ.28) ಮೈಸೂರಿನ ಕಲಾ ಮಂದಿರದ ಆವರಣದ ಕಿರುರಂಗ ಮಂದಿರದಲ್ಲಿ ಪ್ರದರ್ಶನಗೊಂಡಿತು.

ಇಂಗ್ಲಿಷ್‌ನ ಖ್ಯಾತ ನಾಟಕಕಾರ ಅರ್ನಾಲ್ಡ್ ಬೆನ್ನೆಟ್ ಅವರ ‘ದ ಗ್ರೇಟ್ ಅಡ್ಡೆಂಚರ್’ ನಾಟಕದ ಅನುವಾದ ‘ಚಿತ್ರತುರಗ ನ್ಯಾಯ ಅರ್ಥಾತ್ ಕೀರ್ತಿಯ ಅವಾಂತರ’. ಇದನ್ನು ಕನ್ನಡಕ್ಕೆ ಶ್ರೀಧರ ಹೆಗ್ಗೋಡು ಅವರು ಅನುವಾದ ಮಾಡಿದ್ದಾರೆ. ಈ ಪ್ರಯೋಗದ ಮೂಲಕ ಕ ಕನ್ನಡಕ್ಕೊಂದು ಹೊಸ ನಾಟಕ ಬಂದಂತಾಗಿದೆ.

ಕೀರ್ತಿಗೆ ಬೆನ್ನು ಮಾಡಿದ ಚಿತ್ರ ಕಲಾವಿದ ಉಲ್ಲಾಸ್ ಕೀರ್ತಿ. ಸಮಾಜದ ಪೊಳ್ಳುತನಕ್ಕೆ, ಪ್ರಸಿದ್ದಿಗೆ- ಅದೊಂದು ಕಾಯಿಲೆಯೋ ಎಂಬಷ್ಟು- ಹೆದರು ವವ. ಅವನ ಸಹಾಯಕನನ್ನೇ ಉಲ್ಲಾಸ್ ಕೀರ್ತಿ ಎಂದು ತಿಳಿದ ಡಾಕ್ಟರರ ತಪ್ಪು ತಿಳಿವಳಿಕೆಯನ್ನೇ ಮುಂದುವರಿಸುವ ಉಲ್ಲಾಸ್ ಕೀರ್ತಿಯ ಅವಾಂತರಗಳೇ ಈ ನಾಟಕದ ತಿರುಳು.

ಈ ರೀತಿ ಕಲಾವಿದ ಮತ್ತು ಸೇವಕ ಅದಲು ಬದಲಾಗುವುದು ನಾಟಕದ ತಂತ್ರವಷ್ಟೆ, ತನ್ನ ಸಾವಿನ ನಂತರ ಸಮಾಜ ತನ್ನ ಹೆಸರಿನೊಂದಿಗೆ ಹೇಗೆಲ್ಲಾ ಆಟವಾಡುತ್ತದೆ ಎಂದು ನೋಡಿದ ಕಲಾವಿದ ಕೊನೆಗೆ ತನ್ನ ಸ್ವಭಾವ, ಮುಜುಗರ ಎಲ್ಲವನ್ನೂ ಬಿಟ್ಟು ಕಲ್ಲಿನಂತಾಗುತ್ತಾನೆ. ಹಣ, ಅಧಿಕಾರ, ಹೆಸರು ಇಂಥ ಸಮಾಜದ ವಾಸ್ತವಗಳು ಹೇಗೆ ಒಬ್ಬ ಕಲಾವಿದನ ಸಂವೇದನೆಯನ್ನು ಕೊಂದು ಹಾಕುತ್ತವೆ ಎನ್ನುವುದು ಯಾವುದೇ ಕಾಲದ ದುರಂತ ‘ಕೇವಲ ತನ್ನ ಕಲೆಯೇ ತನ್ನ ಗುರುತಾಗಬೇಕು’ ಎಂದು ಹೇಳಿಕೊಳ್ಳುವ ಉಲ್ಲಾಸ್ ಕೀರ್ತಿಯ ಸಹಾಯಕನನ್ನು ಉಲ್ಲಾಸ್ ಕೀರ್ತಿ ಎಂದು ಭಾವಿಸಿ ಕಲಾವಿದನಿಗೆ ಕೊಡುವ ‘ಗೌರವ’ದ ಹೆಸರಿನಲ್ಲಿ ಸರ್ಕಾರ ಅದ್ದೂರಿಯಾಗಿ ಸಕಲ ಸರ್ಕಾರಿ ಗೌರವದೊಂದಿಗೆ ಶವಸಂಸ್ಕಾರ ಮಾಡುತ್ತದೆ. ಆದರೆ ಉಲ್ಲಾಸ್ ಕೀರ್ತಿ ಬದುಕಿರುವ ವಿಷಯ ತಿಳಿದೆ ನಂತರ ಸರ್ಕಾರ, ಸರ್ಕಾರದ ಅಧಿಕಾರಿಗಳು, ಅವರ ದಲ್ಲಾಳಿಗಳಂತೆ ವರ್ತಿಸುವ ಸನ್ಯಾಸಿಗಳು, ಹೇಗೆ ಅವನನ್ನು ಮತ್ತೆ ಮತ್ತೆ ಕೊಲ್ಲುತ್ತಾರೆ ಮತ್ತು ಈ ರಾಜಕೀಯದಾಟದಲ್ಲಿ ಒಬ್ಬ ಕಲಾವಿದನ ಬದುಕು ಹೇಗೆ ದುರಂತದಲ್ಲಿ ಕೊನೆಯಾಗುತ್ತದೆ ಎಂಬುದನ್ನು ನಾಟಕದುದ್ದಕ್ಕೂ ಎಳೆ

ಎಳೆಯಾಗಿ ಬಿಡಿಸಿದ್ದಾರೆ. ಸಹಾಯಕನನ್ನು ಮದುವೆಯಾಗಲು ಬರುವ ಜಾನಕಿಯು ಉಲ್ಲಾಸ್ ಕೀರ್ತಿಯನ್ನೇ ಅವನ ಸಹಾಯಕ ಎಂದು ತಿಳಿಯುತ್ತಾಳೆ. ಜಾನಕಿಯ ಸಾಮಿಪ್ಯದಿಂದ ಅವನುಬೇರೆಯೇ ಮನುಷ್ಯನಾಗುತ್ತಾನೆ.

ಕಲೆಯ ಬಗ್ಗೆ ಏನೂ ತಿಳಿಯದ ಹೆಣ್ಣಿನೊಡನೆ ಬದುಕು ನಡೆಸುತ್ತಾನೆ. ನಾಟಕದಲ್ಲಿ ಕಟ್ಟಿಕೊಟ್ಟಿರುವ ರೂಪಕಗಳು ಮನಸಿನಲ್ಲಿ ಉಳಿಯುವಂಥವು ಮತ್ತು ರಂಗಭೂಮಿಯಲ್ಲಿ ಮಾತ್ರ ಸಾಧ್ಯವಾಗುವಂತಹದ್ದು. ಸರ್ಕಾರದ ದಲ್ಲಾಳಿಯಾಗಿ ಬರುವ ಸನ್ಯಾಸಿಯ ಹಿಂದೆ ನಿಂತಿರುವುದು ರೌಡಿಯಂಥ ಪಾತ್ರ. ಕೊನೆಯಲ್ಲಿ ಹತಾಶ ಉಲ್ಲಾಸ್ ಕೀರ್ತಿಯನ್ನು ಈಗಷ್ಟೆ ಕಣ್ಣುಬಿಟ್ಟಿರುವ ಮಗುವಿನಂತೆ ಕರೆದುಕೊಂಡು ಹೋಗುವ ಜಾನಕಿ, ಸಮಾಜದ ಕೊಳಕುಗಳಿಂದ ಅವನನ್ನು ಮೇಲೆತ್ತುವ ತಾಯಿಯಂತೆ ಕಾಣುತ್ತಾಳೆ. ಇಬ್ಬರೂ ರಂಗದಿಂದ ಇಳಿದು ಪ್ರೇಕ್ಷಕರ ಮಧ್ಯದಲ್ಲಿ ನಡೆದುಕೊಂಡು ಹೋಗುವುದು ಎಂಥ ಹತಾಶೆಯಲ್ಲೂ ಇರುವ ಜೀವನೋತ್ಸಾಹ ಅನಿಸುತ್ತದೆ. ನಾಟಕ ಮುಗಿದ ಮೇಲೂ ನಮ್ಮನ್ನು ಕಾಡುತ್ತದೆ.

ಸುಮಾರು ಎರಡು ಗಂಟೆಗಳ ಅವಧಿಯ ಸುದೀರ್ಘ ನಾಟಕವನ್ನು ರಂಗಭೂಮಿಗೆ ಹೊಸದಾಗಿ ಕಾಲಿಡುತ್ತಿರುವ ನಟ ನಟಿಯರು ಯಶಸ್ವಿಯಾಗಿ ಅಭಿನಯಿಸಿದರು. ತಮ್ಮ ವಯಸ್ಸಿಗೆ, ಅನುಭವಕ್ಕೆ ಮೀರಿದ ಪಾತ್ರಗಳನ್ನು ದಕ್ಕಿಸಿಕೊಂಡು ಅದನ್ನು ಪ್ರೇಕ್ಷಕರೆದುರು ಇಟ್ಟ ಪರಿ ಮೆಚ್ಚುವಂಥದ್ದು. ಪ್ರದರ್ಶನದುದ್ದಕ್ಕೂ ಕೇವಲ ಮುಖ್ಯ ಪಾತ್ರಗಳೇ ಮುನ್ನೆಲೆಗೆ ಬರದೆ ಚಿಕ್ಕ ಚಿಕ್ಕ ಪಾತ್ರಗಳನ್ನೂ ಅದರ ಸ್ವಭಾವಗಳನ್ನೂ ಬಹಳ ಕಾಳಜಿಯಿಂದ ನಿರ್ದೇಶಕರು ನಿರ್ವಹಿಸಿದ್ದಾರೆ.

ಇಡೀ ನಾಟಕದ ವಿನ್ಯಾಸ ಮತ್ತು ಅನುಸಂಧಾನದಲ್ಲಿ ಎಲ್ಲೂ ಅಬ್ಬರವಿಲ್ಲದೆ ಮನುಷ್ಯ ಸ್ವಭಾವವೇ ಮುನ್ನೆಲೆಗೆ ಬರುವಂತೆ ನಿರ್ದೇಶಕರಾದ ದಿಗ್ವಿಜಯ ಹೆಗ್ಗೋಡು ನಾಟಕವನ್ನು ಕಟ್ಟಿದ್ದಾರೆ. ವಸ್ತ್ರವಿನ್ಯಾಸ, ಪರಿಕರ, ಸಂಗೀತ ಮತ್ತು ಉಳಿದ ಎಲ್ಲವೂ ನಟನಿಗೆ ಪೂರಕ ಎನ್ನುವುದನ್ನು ಅಷ್ಟೇ ಸಮರ್ಥವಾಗಿ ತಮ್ಮ ನಿರ್ದೇಶನದಲ್ಲಿ ತೋರಿಸಿದ್ದಾರೆ.

ರಂಗಸಂಗೀತ, ಯಕ್ಷಗಾನ, ಕೂಡಿಯಾಟ್ಟಂ ಪ್ರಕಾರಗಳಲ್ಲಿ ಪ್ರಾವೀಣ್ಯ ಪಡೆದಿದ್ದರೂ ಅದೇ ಶೈಲಿಯಲ್ಲಿ ನಾಟಕ ಮಾಡಿಸುವ ಸುಲಭದ ದಾರಿಗಳನ್ನು ಬಿಟ್ಟು ಹೊಸದೊಂದು ಪ್ರಯೋಗಕ್ಕೆ ಒಗ್ಗುವ ಹೊಸದೇ ರೀತಿಯ ಶೈಲಿ, ಅಭಿನಯವನ್ನು ಹುಡುಕಿಕೊಂಡಿದ್ದಾರೆ.

ಉಲ್ಲಾಸ್ ಕೀರ್ತಿಯಾಗಿ ರೋಹನ್, ಜಾನಕಿಯಾಗಿ ಪಾವನಾ, ಜಗದಾ ನಂದನಾಗಿ ಸಾಗರ್ ಎಸ್.ಗುಂಬಳ್ಳಿ ಈ ನಾಟಕದ ಮೂಲಕ ರಂಗ ಸಾಧ್ಯತೆಗಳನ್ನು ವಿಸ್ತರಿಸಿಕೊಂಡಿದ್ದಾರೆ. ಆತ್ಮಾನಂದ ವಾಸನ್ ಚಿಕ್ಕ ಪಾತ್ರದ ಮೂಲಕವೇ ಗಮನ ಸೆಳೆಯುತ್ತಾರೆ.

ಈ ನಾಟಕದ ಮೂಲಕವೇ ಮೊದಲ ಬಾರಿಗೆ ರಂಗವನ್ನು ಪ್ರವೇಶಿಸಿದ ವರ್ಷಾ ರಾಜ್, ಪ್ರಿಯಾ, ಸಂದೇಶ್, ಮನೋಜ್ ಎಂ.ಎಸ್.ಮಲ್ಲೇಶ್ ಎಂ. ಪರೀಕ್ಷಿತ್, ಸುಶೀಂ ಸಂಘಸೇನ, ಪ್ರವೀಣ್ ಅವರ ಅಭಿನಯ

ಮೆಚ್ಚುವಂತಹದು. ಯುವಕರು ಮತ್ತು ಹೊಸಬರೇ ಇರುವ ರಂಗತಂಡಕ್ಕೆ ಎರಡು ಗಂಟೆಗಳ ಪೂರ್ಣಾವಧಿ ನಾಟಕವನ್ನು ಮಾಡಿಸಿದ ದಿಗ್ವಿಜಯ ಹೆಗ್ಗೋಡು ಹಾಗೂ ಇದನ್ನು ಆಗುಮಾಡಿದ ಸಂಚಲನ ತಂಡದ ದೀಪಕ್ ಮತ್ತು ತಂಡದ ಎಲ್ಲ ನಟನಟಿಯರೂ ಅಭಿನಂದನಾರ್ಹರು.