Mysore
22
clear sky

Social Media

ಶನಿವಾರ, 27 ಡಿಸೆಂಬರ್ 2025
Light
Dark

ಸೇವಾ ಕೈಂಕರ್ಯದ ಪ್ರತಿರೂಪ ಚೈತನ್ಯ ಚಾರಿಟಬಲ್ ಟ್ರಸ್ಟ್‌ 

ಮಹಿಳೆಯರು, ಮಕ್ಕಳ ಸಬಲೀಕರಣವೇ ಸಂಸ್ಥೆಯ ಧ್ಯೇಯ

ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸೇವೆ ಮಾಡುವ ಸಂಸ್ಥೆಗಳು ವಿರಳ. ಅಂತಹ ವಿರಳಾತೀತ ವಿರಳ ಸಂಸ್ಥೆಗಳಲ್ಲಿ ಚೈತನ್ಯ ಚಾರಿಟಬಲ್ ಸಂಸ್ಥೆ ಒಂದು. ೨೦೦೦ ಇಸವಿಯಿಂದ ನಿರಂತರವಾಗಿ ಸಮಾಜಮುಖಿ ಕೆಲಸ ಮಾಡುತ್ತಿರುವ ಈ ಸಂಸ್ಥೆಯ ಬಗ್ಗೆ ಕೆಲವು ಅಂಶಗಳನ್ನು ಹಂಚಿಕೊಳ್ಳಲು ನನಗೆ ಹೆಮ್ಮೆ ಅನಿಸುತ್ತಿದೆ. ನನಗೆ ಈ ಸಂಸ್ಥೆಯ ಸಂಪರ್ಕ ಬಂದದ್ದು, ೨೦೦೧ರ ಪ್ರಾರಂಭ ದಲ್ಲಿ. ಈ ಸಂಸ್ಥೆಯ ಸಹೋದರಿ ಜೇನ್ ಮ್ಯಾಥ್ಯೂ ನಮ್ಮ ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆಗೆ ತಮ್ಮ ಆರೋಗ್ಯ ಸಮಸ್ಯೆ ನಿಮಿತ್ತ ಬಂದಿದ್ದರು. ಅವರು ಗುಣ ಮುಖ ರಾದಾಗ ತಮ್ಮ ಗ್ರಾಮವಾದ ವ್ಯಾಸರಾಜಪುರದಲ್ಲಿ ಒಂದು ಉಚಿತ ವೈದ್ಯಕೀಯ ಶಿಬಿರವನ್ನು ನಡೆಸಿ ಕೊಡಬೇಕೆಂದು ಕೋರಿದಾಗ – ಅವರಲ್ಲಿದ್ದ ಸೇವಾ ಮನೋಭಾವನೆ, ಸಮಾಜಮುಖಿಯಾಗಿ ಚಿಂತಿಸುವುದರ ಜತೆಗೆ ಕಾರ್ಯ ತತ್ಪರರಾಗುವಂತಹ ಮನೋ ಅಭಿಲಾಷೆಯನ್ನು ಗಮ ನಿಸಿದ ನನಗೆ, ಅವರ ಸಂಸ್ಥೆಯ ಆರೋಗ್ಯ ಕಾರ್ಯ ಕ್ರಮಗಳಲ್ಲಿ ಭಾಗವಹಿಸಬೇಕೆಂಬ ಮನಸ್ಸಾಯಿತು.

ಅಂದಿನಿಂದ ನಿರಂತರವಾಗಿ ಇಂದಿನವರೆಗೂ ಆ ಸಂಸ್ಥೆಯ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಭಾಗವಹಿಸುತ್ತಿದ್ದೇನೆ. ಈ ಸಂಸ್ಥೆಯೊಂದಿಗೆ ೨೦೦೧ರಿಂದ ಜೆಎಸ್‌ಎಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯರು, ವಿದ್ಯಾರ್ಥಿಗಳೂ ನಿರಂತರವಾಗಿ ನಡೆಯುವಂತಹ ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ. ಪ್ರಾರಂಭದ ದಿನಗಳಲ್ಲಿ ಸಿಸ್ಟರ್ ಜೇನ್ ಮ್ಯಾಥ್ಯೂ ಅವರೊಂದಿಗೆ ಸಿಸ್ಟರ್ ರೂಬಿ ಮ್ಯಾಥ್ಯೂ ಅವರು, ನಂತರದ ದಿನಗಳಲ್ಲಿ ಆ ಸಂಸ್ಥೆಯ ಇತರ ಸಿಸ್ಟರ್ ಗಳು ಆರೋಗ್ಯ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದಾರೆ.

೨೦೦೦ದಲ್ಲಿ ಪ್ರಾರಂಭವಾದ ಈ ಸಂಸ್ಥೆಯು ಈ ವರ್ಷ ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿರುವುದು ಸಂತಸದ ವಿಷಯ. ಈ ಸಂಸ್ಥೆಯ, ಗ್ರಾಮೀಣ ಜನತೆಯ ಆರೋಗ್ಯ, ಮಹಿಳಾ ಸಬಲೀಕರಣ ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಯ ಕಾರ್ಯಕ್ರಮಗಳ ಅನುಷ್ಠಾನ, ವಯೋ ವೃದ್ಧರ ಸಮಸ್ಯೆಗಳ ಪರಿಹಾರ ನೀಡುವುದು, ಇಲ್ಲಿ ಕೆಲಸ ಮಾಡುವ ಸಹೋದರಿಯರಸೇವಾ ಕೈಂಕರ್ಯ, ವಾತ್ಸಲ್ಯಪೂರ್ಣ ಸಹಾಯ ಮತ್ತು ಅಭಯ ಹಸ್ತ ನಿರ್ಗತಿಕರಿಗೂ ದೊರೆಯುತ್ತಿರುವುದು ಭಗವಂತನು ಇವರುಗಳ ಸ್ವರೂಪದಲ್ಲಿ ಇದ್ದಾನೆ ಅನಿಸುತ್ತದೆ.

ಇದನ್ನು ಓದಿ: ಲೆವಿಸ್ಟಾ ಕೊಡವ ಹಾಕಿ ಚಾಂಪಿಯನ್ಸ್‌ ಟ್ರೋಫಿಗೆ ಚಾಲನೆ

ಚೈತನ್ಯ ಚಾರಿಟಬಲ್ ಟ್ರಸ್ಟ್ ನೆಲೆ- ಹಿನ್ನೆಲೆ: ಮಹಿಳೆಯರು ಮತ್ತು ಮಕ್ಕಳ ಸಬಲೀಕರಣವನ್ನು ಗುರಿಯಾಗಿಸಿಕೊಂಡು ಚೈತನ್ಯ ಚಾರಿಟಬಲ್ ಟ್ರಸ್ಟ್ ಕಾರ್ಯನಿರ್ವಹಿಸುತ್ತಿದೆ. ನರಸೀಪುರ ತಾಲ್ಲೂಕಿನ ವ್ಯಾಸರಾಜಪುರದಲ್ಲಿ ಬಾಡಿಗೆ ಮನೆಯಲ್ಲಿ ಟ್ರಸ್ಟ್ ಮಹಿಳೆಯರಿಗೆ ಹೊಲಿಗೆ ತರಬೇತಿ, ಕಂಪ್ಯೂಟರ್ ತರಬೇತಿಯನ್ನು ನೀಡುತ್ತಿದೆ.

ಟ್ರಸ್ಟ್‌ನ ರೂವಾರಿಗಳಾದ ಸಿಸ್ಟರ್ ಜೇನ್ ಮ್ಯಾಥ್ಯೂ ಮತ್ತು ಸಿಸ್ಟರ್ ರೂಬಿ ಅವರು ೨೦೦೦ದಲ್ಲಿ ಕೇರಳದಿಂದ ಮೈಸೂರು ಜಿಲ್ಲೆಗೆ ಆಗಮಿಸುತ್ತಾರೆ. ಅವರಿಗೆ ಕೇರಳದ ಡಿಪಿಎಂಟಿಯ ಸುಪೀರಿಯರ್ ಜನರಲ್ ಆಗಿದ್ದ ಸಿ. ಮರಿನಾ ಕೋಲಾರಥ್ ಅವರು ಉತ್ತೇಜನ ನೀಡಿ, ಮೈಸೂರು ಜಿಲ್ಲೆಯಲ್ಲಿ ಉತ್ತಮ ಸ್ಥಳ ನೋಡಿ, ಮಹಿಳೆಯರು ಮತ್ತು ಮಕ್ಕಳ ಆರ್ಥಿಕ, ಶೈಕ್ಷಣಿಕ ಏಳಿಗೆಗಾಗಿ ಸೇವೆ ಸಲ್ಲಿಸಲು ಸಲಹೆ ಕೊಟ್ಟು ಕಳುಹಿಸುತ್ತಾರೆ.ಜೇನ್ ಮತ್ತು ರೂಬಿ ಅವರು ಮೈಸೂರು ಜಿಲ್ಲೆಯ ಹಲವೆಡೆ ಸಂಚರಿಸಿ, ಸ್ಥಳೀಯ ಜನರು ಬದುಕು- ಬವಣೆಯನ್ನು ಕುರಿತು ಅಧ್ಯಯನ ಮಾಡಿ, ಅಂತಿಮವಾಗಿ ೨೦೦೧ರಲ್ಲಿ ವ್ಯಾಸರಾಜಪುರದಲ್ಲಿ ಜನರ ಒತ್ತಾಯದ ಮೇರೆಗೆ ನೆಲೆಯಾಗುತ್ತಾರೆ.

ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾನ ಕೊಡುವುದಲ್ಲದೆ, ಮನೆಪಾಠಕ್ಕೂ ಅವಕಾಶ ಕಲ್ಪಿಸಿದ್ದೇವೆ. ಕೆಲ ವರ್ಷಗಳ ಹಿಂದೆ ಹಿರಿಯ ನಾಗರಿಕರಿಗಾಗಿ ‘ತವರು ಮನೆ’ ಎಂಬುದಾಗಿ ವಿಭಾಗವನ್ನು ತೆರೆದಿದ್ದೇವೆ. ನೊಂದವರು ಅಥವಾ ವಾರಸುದಾರರು ಇಲ್ಲದ ಹಿರಿಯ ಪುರುಷರು, ಮಹಿಳೆಯರಿಗೆ ಇಲ್ಲಿ ಆಶ್ರಯ ನೀಡಿದ್ದೇವೆ ಎಂಬುದಾಗಿ ಜೇನ್ ಮ್ಯಾಥ್ಯೂ ಸವಿನಯದಿಂದ ಹೇಳುತ್ತಾರೆ. ಟ್ರಸ್ಟ್ ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವುದು ಹರ್ಷ ತಂದಿದೆ. ನಮ್ಮ ಸೇವೆಯನ್ನು ಇನ್ನಷ್ಟು ವಿಸ್ತರಿಸಲು ಪ್ರೋತ್ಸಾಹ ನೀಡಿದೆ ಎನ್ನುತ್ತಾರೆ ಅವರು.

(ಲೇಖಕರು, ಮೈಸೂರಿನ ಜೆಎಸ್‌ಎಸ್ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಮುಖ್ಯ ವೈದ್ಯಾಧಿಕಾರಿ)

” ಡಾ.ಗುರುಬಸವರಾಜ ಅವರು, ಜೆಎಸ್ ಎಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾಗ ೨೦೦೧ರಲ್ಲಿ ನನಗೆ ಪರಿಚಯವಾದರು. ಅವರನ್ನು ನಮ್ಮ ಸಂಸ್ಥೆಯಲ್ಲಿ ಆರೋಗ್ಯ ಶಿಬಿರ ಆಯೋಜಿಸಲು ಮನವಿ ಮಾಡಿದೆ. ಕೂಡಲೇ ಒಪ್ಪಿದ ಅವರು, ಪ್ರತಿ ವರ್ಷ ಎರಡು ಬಾರಿ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾ ಬಂದಿದ್ದಾರೆ.”
-ಸಿಸ್ಟರ್ ಜೇನ್ ಮ್ಯಾಥ್ಯೂ, ಚೈತನ್ಯ ಚಾರಿಟಬಲ್ ಟ್ರಸ್ಟ್

ಡಾ.ಬಿ.ಗುರುಬಸವರಾಜ

Tags:
error: Content is protected !!