Mysore
27
light rain

Social Media

ಶನಿವಾರ, 24 ಅಕ್ಟೋಬರ್ 2026
Light
Dark

ಜ್ಞಾನೇಶ್ ಕುಮಾರ್‌ರನ್ನು ಜನರ ಎದುರು ನಿಲ್ಲಿಸೀಪ್ಪಾ!

ಇಂಡಿಯಾ ಟುಡೇ ಸಂದರ್ಶನದಲ್ಲಿ ಪ್ರಕಾಶ್‌ ರಾಜ್‌ ಆಗ್ರಹ 

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಕಾರಿನಲ್ಲಿ ಸಾಗುತ್ತಿದ್ದಾಗ ಇಂಡಿಯಾ ಟುಡೇಯ ರಾಜದೀಪ್ ಸರ್ದೇಸಾಯಿ ಅವರು ನಡೆಸಿದ ಸಂವಾದದ ಕನ್ನಡಾನುವಾದವನ್ನು ಹಿರಿಯ ಲೇಖಕ ನಾಗೇಶ್ ಹೆಗಡೆ ಅವರು ಮಾಡಿದ್ದು, ಅದರ ಪೂರ್ಣಪಾಠ ಇಲ್ಲಿದೆ.

ರಾಜದೀಪ್ ಸರ್ದೇಸಾಯಿ: ದಿಲ್ಲಿಯ ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ನಲ್ಲಿ ತಿರಂಗಾ ಝಂಡಾ ಹಾರಿಸದಂತೆ ಸರ್ಕಾರ ಪ್ರತಿಬಂಧನೆ ಹಾಕಿದೆ. ಅದಕ್ಕೇ ಅಭಿಜೀತ್ ದಿಪ್ಕೆ, ನೇಹಾ ಬೋರಾ ಅವರನ್ನು ಪ್ರತಿಬಂಧಿಸಲಾಗಿದೆ. ಅದೇ ಮುನ್ನೆಚ್ಚರಿಕೆಯ ಅಶುತೋಷ್ ರಂಕಾ, ಸೌರವ್ ದಾಸ್ ಅವರನ್ನೂ ಒಳಕ್ಕೆ ಹಾಕಲಾಗಿದೆ. ತಿರಂಗಾ ಚಳವಳಿಯ ಬಗ್ಗೆ ಪ್ರಕಾಶ್ ರಾಜ್ ನೀವೇನಂತೀರಿ?

ಪ್ರಕಾಶ್ ರಾಜ್: ನಾನು ಮೋದೀಜಿಯವರನ್ನೇ ಕೇಳುತ್ತೇನೆ: ಹರ್ ಘರ್ ತಿರಂಗಾ’ (ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ) ಎಂಬ ಸ್ಲೋಗನ್ನನ್ನು ದೇಶಕ್ಕೆ ಕೊಟ್ಟವರು ನೀವು. ಈಗ ಯುವಜನರು ಶಾಂತಿಯುತವಾಗಿ ತ್ರಿವರ್ಣ ಧ್ವಜವನ್ನು ಹಾರಿಸಲೆಂದು ಹೊರಟಾಗ ನೀವೇ ಅದನ್ನು ಹಿಂಸಾತ್ಮಕ ಮಾಡ್ತಾ ಇದೀರಲ್ಲ ಯಾಕೆ? ಅವರು ತಮ್ಮ ಹಕ್ಕನ್ನು ತೋರಿಸಲೆಂದು ಅಹಿಂಸಾತ್ಮಕ ಪ್ರತಿಭಟನೆಗೆ ಹೊರಟಿದ್ದರು. ಅಹಿಂಸಾತ್ಮಕ ಏಕೆಂದರೆ ಅವರು ಗಾಂಧಿಯನ್ನು, ಅಂಬೇಡ್ಕರರನ್ನು, ಸಂವಿಧಾನವನ್ನು ನಂಬಿದ್ದಾರೆ. ಅವರನ್ನು ನೀವು ಹತ್ತಿಕ್ಕುತ್ತಿದ್ದೀರಿ, ಅವರ ಮುಂದಾಳುಗಳನ್ನು ಪ್ರತಿಬಂಧಿಸಿದ್ದೀರಿ. ದಿಪ್ಕೆ ಮನೆಯಿಂದ ಹೊರಡುತ್ತಲೇ ಬಂಧಿಸಿದಿರಿ, ನೇಹಾ ಬೋರಾ ಅವರನ್ನ ಎಳೆದು ಬಸ್‌ಗೆ ತುರುಕಿದ್ದೀರಿ. ಅವರು ಸೆಂಟ್ರಲ್ ಪಾರ್ಕಿಗೆ ಬರುವ ಮುನ್ನವೇ ನಿಮ್ಮ ಪೊಲೀಸರು, ಸೈನಿಕರು ಅಲ್ಲಿಗೆ ಮುತ್ತಿಗೆ ಹಾಕಿದ್ದಾರೆ.

ರಾಜದೀಪ್ ಸರ್ದೇಸಾಯಿ: ಸರ್ಕಾರ ಹೇಳುವ ಪ್ರಕಾರ, ಕಾನೂನು ಭಂಗ ಆಗದಂತೆ ಶಿಸ್ತು ಕಾಯಲೆಂದು ಪೊಲೀಸರ ನಿಯೋಜನೆ ಆಗಿದೆ. ಹಿಂದೆ ಜುಲೈ ೨೦ರ ಜಂತರ್ ಮಂತರ್ ಪ್ರತಿಭಟನೆಯಲ್ಲಿ ಗಲಾಟೆ ಆಗಿತ್ತಲ್ಲ? ಅಂಥದ್ದು ಮತ್ತೊಮ್ಮೆ ಆಗಬಾರದು ಅಂತ ಸೆಂಟ್ರಲ್ ಪಾರ್ಕನ್ನು ಕ್ಲೋಸ್ ಮಾಡಿ, ನಿಷೇಧಾಜ್ಞೆ ಹೊರಡಿಸಿದ್ದಾರೆ. ಶಾಂತಿಭಂಗ ಮಾಡಬಲ್ಲವರನ್ನು ಮುಂಚಿತವಾಗಿ ಬಂಧಿಸಲಾಗಿದೆ.

ಪ್ರಕಾಶ್ ರಾಜ್: ಎಂಥ ತಮಾಷೆ! ಯಾರು ಹಿಂಸಾಕೃತ್ಯ ಮಾಡ್ತಿರೋದು? ಯಾರು ಈ ಮಕ್ಕಳ ಮೇಲೆ ಲಾಠಿ ಚಾರ್ಜ್ ಮಾಡಿದ್ದು? ಯಾರು ಜೈಲಿನಲ್ಲಿದ್ದ ಖೂಳರನ್ನು ಹೊರತಂದು ಅವರ ಕೈಗೆ ಲಾಠಿ ಕೊಟ್ಟಿದ್ದು? ಯಾರು ಪೆಲೆಟ್ ಗನ್ ಬಳಸಿದ್ದು? ಯಾರು ಎಕೆ-೪೭ ಬಳಸಿದ್ದು? ಈ ಯುವಜನರ ಬಳಿ ಎಂಥ ಶಸ್ತ್ರಾಸ್ತ್ರ ಇದೆ? ಅವರ ಕೈಲಿರೋದು ‘ಸಂವಿಧಾನ’ ಎಂಬ ಅಸ್ತ್ರ ಅಷ್ಟೆ. ಈ ಬಾರಿ ದೇಶದ ಯುವಜನರು ಜ್ಞಾನೇಶ್ ಕುಮಾರ್‌ಗೆ ಕೆಲವು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನೀವೇಕೆ ಅದಕ್ಕೆ ಅಡ್ಡಿ ಮಾಡುತ್ತಿದ್ದೀರಿ ಎಂದು ನಾನು ಸರ್ಕಾರವನ್ನೇ ಕೇಳುತ್ತೇನೆ.

ರಾಜದೀಪ್ ಸರ್ದೇಸಾಯಿ: ಸರ್ಕಾರಿ ವಾದದ ಪ್ರಕಾರ ಕನಾಟ್ ಪ್ಲೇಸ್‌ನ ಸೆಂಟ್ರಲ್ ಪಾರ್ಕ್ ಅನ್ನೋದು ಪ್ರತಿಭಟನೆಗೆ ನಿಗದಿಪಡಿಸಿದ ಸ್ಥಳ ಅಲ್ಲ. ಅಲ್ಲಿ ಜನಸಂದಣಿ ಸೇರಿದರೆ ಅದು ಕಾನೂನು ಭಂಗ ಆಗುತ್ತದೆ.

ಪ್ರಕಾಶ್ ರಾಜ್: ಸುಪ್ರೀಂ ಕೋರ್ಟ್ ಏನು ಹೇಳಿದೆ? ‘ಪ್ರತಿಭಟನೆ ಅಡ್ಡಿ ಇಲ್ಲ’ ಎಂದು ಅದು ಹೇಳಿದ ನಂತರವೇ ನೀವು ಈ ಹೊಸ ನಿಯಮವನ್ನು ತಂದಿದ್ದೇಕೆ? ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸುತ್ತಿರುವುದು ಈ ಪೊಲೀಸರು, ಈ ಸೈನಿಕರು, ಈ ಪ್ರಭುತ್ವ ತಾನೆ?

ರಾಜದೀಪ್ ಸರ್ದೇಸಾಯಿ: ಜನರ ನಿತ್ಯದ ಓಡಾಟಕ್ಕೆ, ವ್ಯಾಪಾರ ವಹಿವಾಟಿಗೆ ತೊಂದರೆ ಆಗಬಾರದೆಂದು ಈ ನಿರ್ಬಂಧ ಹಾಕಿದ್ದಾಗಿ ಸರ್ಕಾರ ಹೇಳುತ್ತಿದೆ.

ಪ್ರಕಾಶ್ ರಾಜ್: ಸರ್ಕಾರವನ್ನು ನಡೆಸುವವರೆಲ್ಲ ಜೋಕರ್‌ಗಳು. ದಿಲ್ಲಿಗೆ ಬರಬೇಕಿದ್ದ ಟ್ರೇನ್‌ಗಳನ್ನೆಲ್ಲ ನಿಲ್ಲಿಸಿದ್ದು ಸರ್ಕಾರ. ನಗರದ ಮೆಟ್ರೊಗಳನ್ನೆಲ್ಲ ಬಂದ್ ಮಾಡಿದ್ದು ಸರ್ಕಾರ. ಇಡೀ ದಿಲ್ಲಿ ನಗರವನ್ನೇ ಜಂತರ್‌ಮಂತರ್ ಮಾಡಿ ದಿಗ್ಬಂಧನ ಹಾಕಿದ್ದು ಸರ್ಕಾರ. ಅದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗಿಲ್ಲವೆ? ನಮ್ಮ ಈ ಪ್ರಧಾನ ಮಂತ್ರಿ ಚುನಾವಣಾ ಮೆರವಣಿಗೆ ಹೊರಟಾಗ ಸಂಚಾರ ಸ್ಥಗಿತ ಮಾಡೋದಿಲ್ವೆ? ತೊಂದರೆ ಆಗೋದಿಲ್ಲವೆ?

ರಾಜದೀಪ್ ಸರ್ದೇಸಾಯಿ: ನೀವು ನಿನ್ನೆ ಇಲ್ಲಿದ್ದಿರಿ, ಇಂದು ತ್ರಿವೆಂದ್ರಮ್ನಲ್ಲಿ ಯುವಜನರ ಮೇಳ ನಡೆಸುತ್ತಿದ್ದೀರಿ. ಮೊನ್ನೆ ಬೆಂಗಳೂರಿನಲ್ಲಿದ್ದಿರಿ. ನಿಮ್ಮ ಉದ್ದೇಶ ಏನು, ಈ ನಿಮ್ಮ ಚಳವಳಿಯ ಗುರಿ ಏನು? ನೀಟ್ ಪೇಪರ್ ಲೀಕ್ನಿಂದ ಆರಂಭವಾದ ಜೆನ್ ಝೀ ಪ್ರತಿಭಟನೆ ಈಗ ಜ್ಞಾನೇಶ್ ರಾಜೀನಾಮೆ ಕಡೆ ತಿರುಗಿದೆ. ನಿನ್ನೆ ಇಲ್ಲಿ ನಿಮ್ಮೊಂದಿಗಿದ್ದ ಪ್ರಶಾಂತ್ ಭೂಷಣ್ ‘ವ್ಯವಸ್ಥೆಯ ಬದಲಾವಣೆ’ / ರೆಜೀಮ್ ಚೇಂಜ್ ಬಗ್ಗೆ ಮಾತಾಡಿದರು. ನಿಮ್ಮ ಗುರಿ ಏನು?

ಪ್ರಕಾಶ್ ರಾಜ್: ಜನರ ಸಂಕಷ್ಟಗಳ ಬಗ್ಗೆ ದನಿ ಎತ್ತುವುದೇ ಗುರಿ. ಹಿಂದೆ ಶಿಕ್ಷಣ ಸಚಿವರಿಂದಾಗಿ ಯುವಜನರ ಸಂಕಷ್ಟ ಹೆಚ್ಚಾಗಿತ್ತು. ಈಗ ಎಸ್‌ಐಆರ್ನಿಂದಾಗಿ ಇಡೀ ದೇಶ ಸಂಕಷ್ಟದಲ್ಲಿದೆ. ೧೩ ಕೋಟಿ ಜನ ಮತದಾನದ ಹಕ್ಕು ಕಳ್ಕೊಂಡಿದ್ದಾರೆ. ಬಂಗಾಲ್‌ನಲ್ಲಿ ಅರ್ಹ ಮತದಾರರ ಹೆಸರನ್ನು ಕಳಚಿಹಾಕಿ ಚುನಾವಣೆ ನಡೆಸಿದ್ದು ಏಕೆ? ಮೂಲತಃ ಈ ಜ್ಞಾನೇಶ್ ಕುಮಾರ್ ಕೈಗೆ ಎಸ್ ಐಆರ್ ಕೊಟ್ಟಿದ್ದು ಏಕೆ? ಕಾನೂನಿನ ತಿದ್ದುಪಡಿ ತಂದು ಆತನನ್ನು ಈ ಪೀಠಕ್ಕೆ ತಂದಿದ್ದೇಕೆ? ರಾಷ್ಟ್ರಪತಿಗೂ ಇಲ್ಲದ, ಪ್ರಧಾನಿಗೂ ಇಲ್ಲದ ರಕ್ಷಾಕವಚವನ್ನು ಆತನಿಗೆ ತೊಡಿಸಿದ್ದು ಏಕೆ? ಈ ಪ್ರಶ್ನೆ ಹೇಗೂ ಇರಲಿ. ಈಗ ನಾವು ಎಸ್‌ಐಆರ್ ಅಧ್ವಾನಕ್ಕೆ ಈತನನ್ನು ಪ್ರಶ್ನಿಸುತ್ತಿದ್ದೇವೆ. ಸರ್ಕಾರ ಮಧ್ಯಪ್ರವೇಶ ಮಾಡುವುದು ಏಕೆ? ಪ್ರಧಾನಿ, ಅಮಿತ್ ಶಾಗಳೇ ಈತನನ್ನು ಪ್ರಶ್ನಿಸಬೇಕಿತ್ತು: ಅರೆ ಜ್ಞಾನೂ! ಹೊರಗಡೆ ಬಾ ಅಪ್ಪಾ, ಮಾತಾಡು ಎಂದು ಹೇಳಬೇಕಿತ್ತು. ಅದರ ಬದಲು ಆತನಿಗೂ ದಿಗ್ಬಂಧನ ಹಾಕಲಾಗಿದೆ. ಈಗ ನಮ್ಮ ಮೇಲೆ ಲಾಠಿ ಬೀಸ್ತಾ ಇದಾರೆಂದರೆ ಏನೋ ಒಳಸಂಚು ಇದೆ. ಅದಕ್ಕೇ ನಾವು ‘ರೆಜೀಮ್ ಚೇಂಜ’ ಬೇಕೆಂದು ಹೇಳೋದು. ಅದನ್ನು ನಾವು ಮತಗಳ ಮೂಲಕವೇ ಸಾಧಿಸುತ್ತೇವೆ. ನೇಪಾಳದಂತಲ್ಲ, ಬಾಂಗ್ಲಾದೇಶದಂತಲ್ಲ. ನಮ್ಮ ಬೆಂಬಲಕ್ಕೆ ಗಾಂಧೀಜಿ, ಅಂಬೇಡ್ಕರ್, ಭಗತ್ ಸಿಂಗ್ ಇದ್ದಾರೆ. ಮುಂದಿನ ವರ್ಷ ಉತ್ತರ ಪ್ರದೇಶದಲ್ಲೂ ೨೦೨೯ರಲ್ಲಿ ಕೇಂದ್ರದಲ್ಲೂ ನಾವು ರೆಜೀಮ್ ಚೇಂಜ್ ಮಾಡುತ್ತೇವೆ.

ರಾಜದೀಪ್ ಸರ್ದೇಸಾಯಿ: ಇಲ್ಲಿ ‘ನಾವು’ ಎಂದರೆ ಯಾರು? ಜನರ ಬಹುಮತ ಪಡೆದೇ ೧೨ ವರ್ಷಗಳಿಂದ ಅಧಿಕಾರದಲ್ಲಿದ್ದೇವೆ ಎಂದು ಸರ್ಕಾರ ಹೇಳುತ್ತದೆ. ಎಲ್ಲ ಚುನಾವಣೆಗಳಲ್ಲೂ ಜನ ಬೆಂಬಲ ತಮಗೇ ಇದೆ ಎಂದು ಅವರು ಹೇಳುತ್ತಾರಲ್ಲ?

ಪ್ರಕಾಶ್ ರಾಜ್: ಅದು ಸುಳ್ಳು! ಜನ ಬೆಂಬಲ ಎಲ್ಲಿದೆ ಸರ್ಕಾರಕ್ಕೆ? ಚಾರ್ ಸೌ ಪಾರ್ ಎಂದು ಹೇಳಿದವರಿಗೆ ೨೪೦ ಸೀಟ್ ಬಂದಿವೆ. ನೀವು ಈಗ ನಿತೀಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರ ಊರುಗೋಲಿನ ಮೇಲೆ ನಿಂತಿದ್ದೀರಿ. ನೀವು ಸಂಸದರನ್ನು ಖರೀದಿ ಮಾಡ್ತಿದೀರಿ. ಈ ಚುನಾವಣಾಧಿಕಾರಿಯ ಬೆಂಬಲದಿಂದ ಛೇಡ್‌ಛಾಡ್ ಮಾಡಿ ನೀವು ಇಲೆಕ್ಷನ್ ಗೆಲ್ಲುತ್ತಿದ್ದೀರಿ. ನಿಮಗೆ ಜನ ಬೆಂಬಲ ಇರುವುದೇ ನಿಜವಾದರೆ ಹೊರಬಂದು ನಮ್ಮೆಲ್ಲರ ಪ್ರಶ್ನೆಗಳಿಗೆ ಉತ್ತರಿಸಿ. ನಾವು ಮಾಡುತ್ತಿರುವ ಆರೋಪಗಳಿಗೆಲ್ಲ ನಮ್ಮ ಬಳಿ ಪ್ರೂಫ್ ಇವೆ! ನಾವು ಅದರ ಬಲದಿಂದ ಹೋರಾಡುತ್ತೇವೆ.

ರಾಜದೀಪ್ ಸರ್ದೇಸಾಯಿ: ನಿಮ್ಮ ಹೋರಾಟ ಎಂದರೆ ಬೀದಿ ಹೋರಾಟವಾ? ಅದು ಶಾಂತಿಯುತವಾಗಿರುತ್ತದೆ ಎಂಬ ಖಾತ್ರಿ ಇದೆಯಾ?

ಪ್ರಕಾಶ್ ರಾಜ್: ಪ್ರತಿಪಕ್ಷದಲ್ಲಿರುವ ನಮ್ಮ ಜನ ಪ್ರತಿನಿಧಿಗಳು ಮುಂಬರುವ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನಲ್ಲಿ ಸರ್ಕಾರವನ್ನು ಪ್ರಶ್ನಿಸುತ್ತಾರೆ. ನಾವು ಜನಸಾಮಾನ್ಯರು ಬೀದಿಗಿಳಿದು ಪ್ರಶ್ನಿಸುತ್ತೇವೆ. ಈಗ ನಮ್ಮೊಂದಿಗೆ ರೈತರೂ ಸೇರಿದ್ದಾರೆ. ಎಸ್‌ಕೆಎಮಎಸ್ ನಮ್ಮೊಂದಿಗಿದೆ. ‘ನಮ್ಮ ಮಕ್ಕಳನ್ನು ಬಡಿಯಬೇಡಿ’ ಎಂದು ಕಿಸಾನ್ ಮಝ್ದೂರ್ ಸಂಘಟನ ಹೇಳಿದೆ. ನಾವೆಲ್ಲ ಒಂದಾಗಿ ಬೀದಿಗಿಳಿಯುತ್ತೇವೆ.

ರಾಜದೀಪ್ ಸರ್ದೇಸಾಯಿ: ನೀವು (ಪ್ರಕಾಶ್ ರಾಜ) ಅರಾಜಕತೆ ಹಬ್ಬಿಸ್ತಾ ಇದೀರಿ ಎಂಬ ಆಪಾದನೆ ಇದೆ. ಪ್ರತಿಭಟನಾಕಾರರು ಮಹಿಳಾ ಪೊಲೀಸರನ್ನು ಅಟ್ಟಾಡಿಸಿದ್ದನ್ನು ನೋಡಿ ನೀವು ನಕ್ಕರಂತಲ್ಲ? ಕಿರಣ್ ರಿಜುಜೂ ಮೊನ್ನೆ ‘ಇದ್ಯಾವ ನಾಚಿಕೆಗೇಡಿ ವಿಲನ್ ಗಹಗಹಿಸಿ ನಗ್ತಾನಲ್ಲ, ಇದು ಭಾರತೀಯ ಸಂಸ್ಕೃತಿಯೆ?’ ಎಂದು ಕೇಳ್ತಾ ಇದ್ದರು.

ಪ್ರಕಾಶ್ ರಾಜ್: ಭಾರತೀಯ ಸಂಸ್ಕೃತಿ ಎಂದರೆ ಈತ ಏನಂದುಕೊಂಡಿದ್ದಾನೆ? ಪೊಲೀಸರಲ್ಲದ ಗೂಂಡಾಗಳ ಕೈಗೆ ಲಾಠಿ ಕೊಟ್ಟು ಹೆಣ್ಣುಮಕ್ಕಳನ್ನು ಬಡಿಯವುದು ಈ ದೇಶದ ಸಂಸ್ಕೃತಿಯೆ? (ಬಿಲ್ಕಿಸ್ ಬಾನೊ ಪ್ರಕರಣದಲ್ಲಿ) ಅತ್ಯಾಚಾರ ಮಾಡಿ ಜೈಲಲ್ಲಿದ್ದವರು ಹೊರಬಂದಾಗ ಅವರಿಗೆ ಹೂಮಾಲೆ ಹಾಕುವುದು ಈ ದೇಶದ ಸಂಸ್ಕೃತಿಯೆ?

ರಾಜದೀಪ್ ಸರ್ದೇಸಾಯಿ: ಅಂತೂ ದೇಶದ ಉದ್ದಗಲಕ್ಕೂ ಜನಧ್ವನಿಯನ್ನು ಸಾರುತ್ತ ಹೋಗುವುದೇ ನಿಮ್ಮ ಉದ್ದೇಶವೆ ಪ್ರಕಾಶ್ ರಾಜ?

ಪ್ರಕಾಶ್ ರಾಜ್: ಅದು ನನಗೆ ನಾನೇ ಹೇರಿಕೊಂಡ ಹೊಣೆ. ನಾನು ದೇಶಕ್ಕಾಗಿ ಇಷ್ಟನ್ನಾದರೂ ಮಾಡಬೇಕು. ನಾನು ದೇಶಭಕ್ತ, ನನಗೆ ನನ್ನ ದೇಶದ ಮೇಲೆ ಪ್ರೀತಿಯಿದೆ. ಪ್ರಜತಂತ್ರವನ್ನು ಚಿಂದಿ ಮಾಡಹೊರಟ ಈ ಗೂಂಡಾಗಳಿಂದ ದೇಶವನ್ನು ರಕ್ಷಿಸಬೇಕಾದ ಹೊಣೆ ನನ್ನ ಮೇಲಿದೆ.

ರಾಜದೀಪ್ ಸರ್ದೇಸಾಯಿ: ನಿಮ್ಮ ಈ ಆಟದ ಮುಕ್ತಾಯ ಹೇಗೆ? ಜ್ಞಾನೇಶ್ ಕುಮಾರ್ ಜಪ್ಪೆಂದರೂ ಕುರ್ಚಿ ಬಿಡುವುದಿಲ್ಲ. ದೇಶವನ್ನು ಅಸ್ಥಿರಗೊಳಿಸಲು ಹೊರಟ ವಿದೇಶೀ ಶಕ್ತಿಗಳ ಬಲದಲ್ಲಿ ಕುಣಿಯುವ ಇವರಿಗೆ ತಾನು ಬಗ್ಗುವುದಿಲ್ಲ, ಮೆಜರಿಟಿ ನಮ್ಮದೇ -ಪ್ರಕಾಶ್ ರಾಜ್ ಏನೂ ಮಾಡಲಾರ’ ಎಂದು ಸರ್ಕಾರ ಹೇಳುತ್ತಿದೆ. ಹೇಗೆ ಮುಗಿಯಲಿದೆ ನಿಮ್ಮ ಆಟ?

ಪ್ರಕಾಶ್ ರಾಜ್: ಯೂ ಆರ್ ಡನ್ ಬ್ರೋ! ನಿಮ್ಮೊಳಗಿನ ಅಳಕು ನಮಗೆ ಕಾಣುತ್ತಿದೆ. ಎಸ್‌ಐಆರ್ ಅನ್ನೋದು ಕೇವಲ ಮತದಾರರ ಹಕ್ಕನ್ನು ಕೀಳುವುದಷ್ಟೇ ಅಲ್ಲ, ೨೦೨೪ರ ನಂತರದ ಎಲ್ಲ ಚುನಾವಣೆಗಳಲ್ಲೂ ಆಯೋಗ ನಡೆಸಿದ ಅವಾಂತರಗಳು ನಮಗೆ ಗೊತ್ತಿವೆ. ನಮ್ಮ ಬಳಿ ಸಾಕ್ಷ್ಯಗಳಿವೆ.

ರಾಜದೀಪ್ ಸರ್ದೇಸಾಯಿ: ಸರಿ ಹಾಗಿದ್ದರೆ, ನಿಮ್ಮಲ್ಲಿರುವ ಸಾಕ್ಷ್ಯಗಳನ್ನೆಲ್ಲ ಬಹಿರಂಗ ಮಾಡಿರಲ್ಲ ಮತ್ತೆ…

ಪ್ರಕಾಶ್ ರಾಜ್: ಅದಕ್ಕೂ ಮೊದಲು ಆ ಜ್ಞಾನೇಶ್ ಕುಮಾರ್‌ನನ್ನು ಅಕ್ರಮ ಬಂಧನದಿಂದ ಹೊರಕ್ಕೆ ಬಿಡಿ. ಅವನೇ ನಮ್ಮ ಮುಖ್ಯ ಸಾಕ್ಷಿ. ಅವನನ್ನು ಹೊರಗೆ ತಂದು ಜನತಾ ನ್ಯಾಯಾಲಯದ ಎದುರು ನಿಲ್ಲಿಸೀಪ್ಪಾ! ನಾವು ನೋಡ್ಕೋತೀವಿ.

” ಒಂದು ವಿಲಕ್ಷಣ ಡಿಜಿಟಲ್ ತಾಂಡವ ನಮ್ಮೆದುರು ಮೈದಳೆಯುತ್ತಿದೆ. ದಿನವೂ ಎಂಬಂತೆ ಲಕ್ಷೋಪಲಕ್ಷ ಜನ ಬೀದಿಗೆ ಬರುತ್ತಿದ್ದಾರೆ. ಒಂದೇ ಒಂದು ಬೀದಿ ದೀಪ ಒಡೆದಿಲ್ಲ, ಒಂದೇ ಒಂದು ಬಸ್ ಹೊತ್ತಿ ಉರಿದಿಲ್ಲ. ಒಂದೇ ಒಂದು ಪೆಟ್ರೋಲ್ ಬಂಕ್‌ಗೆ, ಒಂದೇ ಒಂದು ಅಂಗಡಿಮುಂಗಟ್ಟಿಗೆ ಬೆಂಕಿ ಬಿದ್ದಿಲ್ಲ. ಒಂದೇ ಒಂದು ಕೈ ಬಾಂಬ್ ಸಿಡಿದಿಲ್ಲ. ಪೊಲೀಸರ, ಮತ್ತಿತರ ಸಮವಸದವರ ದುಂಡಾವರ್ತನೆಯಲ್ಲೂ ಸಾಕಷ್ಟು ಸಂಯಮ ಕಾಣುತ್ತಿದೆ. ಎಲ್ಲೂ ಭಯಾನಕ ಹಿಂಸೆಯ ಹೇಳ ಹೆಸರಿಲ್ಲ. ಹೀಗೂ ಇದ್ದೀತೆ ಸದ್ದಿಲ್ಲದ ತಾಂಡವ? ಭಾರತಕ್ಕೇ ವಿಶಿಷ್ಟವೆನಿಸಿದ ಈ ಜೆನ್ ಝೀ ಈ ಚಳವಳಿಯ ದೀಪ್ಕೆ, ರಂಕಾ, ಬೋರಾ, ದಾಸ್ ಇವರನ್ನೆಲ್ಲ ಪೊಲೀಸರು ಒಳಕ್ಕೆ ಹಾಕಿದ ಮೇಲೆ ವಾರ್ತಾ ಚಾನೆಲ್‌ಗಳು ಬೇರೆ ವಕ್ತಾರರನ್ನು ಹುಡುಕುತ್ತಿದ್ದಾಗ ನಿನ್ನೆ (ಶುಕ್ರವಾರ) ರಾತ್ರಿ ‘ಇಂಡಿಯಾ ಟುಡೇ’ಯ ರಾಜದೀಪ್ ಸರ್ದೇಸಾಯಿಗೆ ಸಿಕ್ಕಿದ್ದು ಪ್ರಕಾಶ್ ರಾಜ. ಅವರು ಎ ಕಾರಿನಲ್ಲಿ ಸಾಗುತ್ತಿದ್ದಾಗ ಸರ್ದೇಸಾಯಿ ಜೊತೆ ನಡೆದ ಸಂವಾದ.”

 

 

Tags:
error: Content is protected !!