Mysore
15
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ಭಿನ್ನಮತ ಶಮನಕ್ಕೆ ಬಿಜೆಪಿ ಹೈಕಮಾಂಡ್ ಹೊಸ ಲೆಕ್ಕಾಚಾರ

v somanna

ಬೆಂಗಳೂರು ಡೈರಿ

ವಿಜಯೇಂದ್ರ ಜಾಗಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಬಂದು ಕೂರುವ ಲಕ್ಷಣ ದಟವಾಗಿದೆ 

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಡೆಯುತ್ತಿರುವ ಕದನ ಪ್ರತಿಪಕ್ಷ ಬಿಜೆಪಿ ಪಾಳೆಯದಲ್ಲಿ ಹೊಸ ಸಂಚಲನಕ್ಕೆ ಕಾರಣವಾಗಿದೆ.

ಇಂತಹ ಸಂಚಲನದ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಹೆಸರು ಕೇಳಿಬರುತ್ತಿರುವುದು ವಿಶೇಷ. ಅಂದ ಹಾಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋಲು ಅನುಭವಿಸಿದಾಗ ಬಿಜೆಪಿಯ ಕೇಂದ್ರ ನಾಯಕರು ಅಸಮಾಧಾನಗೊಂಡಿದ್ದರು. ಅಷ್ಟೇ ಅಲ್ಲ, ಹಲವು ತಿಂಗಳುಗಳ ಕಾಲ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಹೊಸಬರ ನೇಮಕಾತಿ ಕಾರ್ಯ ಮಾಡದೆ ಮೌನವಾಗಿದ್ದರು. ಆದರೆ ಅಂತಿಮವಾಗಿ ವಿಧಾನಸಭೆಯ ಪ್ರತಿಪಕ್ಷ ನಾಯಕನ ಸ್ಥಾನಕ್ಕೆ ಆರ್.ಅಶೋಕ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ಮಾಜಿ ಸಿಎಂ ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರನ್ನು ತಂದು ಕೂರಿಸಿದ್ದರು.

ಆದರೆ ಹೀಗೆ ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಗೆ ವಿಜಯೇಂದ್ರ ಅವರನ್ನು ತಂದು ಕೂರಿಸಿದ ದಿನದಿಂದಲೂ ಅಪಸ್ವರ ತಪ್ಪುತ್ತಿಲ್ಲ. ಏಕೆಂದರೆ ಪಕ್ಷದ ಅಧ್ಯಕ್ಷರಾಗಿ ಸಂಘಟನೆಯಲ್ಲಿ ಯುವಕರಿಗೆ ಆದ್ಯತೆ ಕೊಡಿ ಎಂಬ ವರಿಷ್ಠರ ಮಾತನ್ನು ವಿಶೇಷ ಅರ್ಥದಲ್ಲಿ ಗ್ರಹಿಸಿದ ವಿಜಯೇಂದ್ರ ಅವರು ಪಕ್ಷದಲ್ಲಿದ್ದ ಹಿರಿಯರನ್ನು ದೂರವಿಟ್ಟರು. ಒಂದು ಕಾಲದಲ್ಲಿ ತಲೆ ಎತ್ತಲು ಪರದಾಡುತ್ತಿದ್ದ ಬಿಜೆಪಿಯನ್ನು ಕರ್ನಾಟಕದಲ್ಲಿ ಕಟ್ಟಿ ಬೆಳೆಸಿದ ಯಡಿಯೂರಪ್ಪ ಅವರಿಗೆ ದೊಡ್ಡ ಮಟ್ಟದಲ್ಲಿ ಸಹಕಾರ ನೀಡಿದ ಹಲವು ನಾಯಕರು ವಿಜಯೇಂದ್ರ ಅವರ ಈ ನಡೆಯಿಂದ ಬೇಸತ್ತರು. ಈ ಪೈಕಿ ಕೆಲವರು ಬಹಿರಂಗ ವಾಗಿಯೇ ವಿಜಯೇಂದ್ರ ಅವರ ವಿರುದ್ಧ ತಿರುಗಿ ಬಿದ್ದರು. ಹೀಗೆ ತಲೆ ಎತ್ತಿದ ವಿಜಯೇಂದ್ರ ಅವರ ವಿರೋಧಿಗಳು ನಿರಂತರ ವಾಗಿ ಒಂದೇ ಬೇಡಿಕೆಯನ್ನು ಮುಂದಿಡುತ್ತಾ ಬರುತ್ತಿದ್ದಾರೆ. ಅದೆಂದರೆ, ವಿಜಯೇಂದ್ರ ಅವರನ್ನು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ, ಬೇರೊಬ್ಬರನ್ನು ಆ ಜಾಗಕ್ಕೆ ತನ್ನಿ ಎಂಬುದು.

ಆದರೆ ಹೀಗೆ ಹೋರಾಟ ಮಾಡುತ್ತಿದ್ದ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ವರಿಷ್ಠರು ಪಕ್ಷದಿಂದ ಉಚ್ಚಾಟಿಸಿದಾಗ, ಇನ್ನೇನು ವಿಜಯೇಂದ್ರ ದರ್ಬಾರು ನಿರಾತಂಕವಾಗಿ ಮುಂದುವರಿಯಲಿದೆ ಎಂಬ ಭಾವನೆ ದಟ್ಟವಾಗಿತ್ತು. ಆದರೆ ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ನಡುವೆ ಅಧಿಕಾರ ಹಂಚಿಕೆಯ ವಿಷಯದಲ್ಲಿ ಕದನ ನಡೆದಾಗ ಬಿಜೆಪಿ ಹೈಕಮಾಂಡ್ ಪುನಃ ತಲೆ ಮೇಲೆತ್ತಿ ನೋಡುತ್ತಿದೆ. ಅರ್ಥಾತ್, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಡುವಣ ಕದನ ಮುಂದುವರಿಯಲಿದೆ ಮತ್ತು ಅದು ಮುಂದುವರಿಯುವುದರಲ್ಲೇ ತಮ್ಮ ಪಕ್ಷದ ಹಿತ ಅಡಗಿದೆ ಎಂಬುದು ಬಿಜೆಪಿ ವರಿಷ್ಠರ ಹೊಸ ಲೆಕ್ಕಾಚಾರ.

ಅದರ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದ ಆಗಿಯೇ ಇಲ್ಲ ಮತ್ತು ಡಿಕೆಶಿ ಅವರಿಗೆ ಶಾಸಕರ ಬೆಂಬಲವಿಲ್ಲ. ಹೀಗಾಗಿ ನಾನೇ ಐದು ವರ್ಷ ಗಳ ಕಾಲ ಮುಖ್ಯಮಂತ್ರಿ ಅಂತ ಸಿದ್ದರಾಮಯ್ಯ ಹೇಳಿದ್ದರೂ, ನವೆಂಬರ್ ಹೊತ್ತಿಗೆ ಈ ವಿಷಯ ಘನಘೋರ ಸಂಘರ್ಷಕ್ಕೆ ಕಾರಣವಾಗಲಿದೆ. ಇಂತಹ ಸಂಘರ್ಷದ ನಡುವೆ ಸಿದ್ದರಾಮಯ್ಯ ಅವರು ಅಧಿಕಾರ ಬಿಟ್ಟುಕೊಡಲಿ, ಇಲ್ಲವೇ ಅಧಿಕಾರ ಬಿಟ್ಟು ಕೊಡದೆ ಇರಲಿ, ಆದರೆ ಮುಂದಿನ ವರ್ಷದ ಶುರುವಿನಲ್ಲಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ಉರುಳಿ ಬೀಳಲಿದೆ ಎಂದು ಬಿಜೆಪಿ ವರಿಷ್ಠರು ಲೆಕ್ಕ ಹಾಕಿದ್ದಾರೆ. ಹೀಗೆ ಸರ್ಕಾರ ಉರುಳಿದರೆ ಮಧ್ಯಂತರ ವಿಧಾನಸಭೆ ಚುನಾವಣೆಗೆ ಅಣಿಯಾಗುವುದು ಒಳ್ಳೆಯದು ಎಂಬ ಲೆಕ್ಕಾಚಾರಕ್ಕೆ ಬಂದಿರುವ ಬಿಜೆಪಿ ಹೈಕಮಾಂಡ್, ಇದೇ ಅಂದಾಜಿನ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿಯ ನಾಯಕತ್ವವನ್ನು ವಿಜಯೇಂದ್ರ ಅವರ ಕೈಯಿಂದ ಕೇಂದ್ರ ಸಚಿವ ವಿ.ಸೋಮಣ್ಣ ಅವರ ಕೈಗೆ ಹಸ್ತಾಂತರಿಸಲು ಸಿದ್ಧತೆ ನಡೆಸಿದೆ. ಅಂದ ಹಾಗೆ ವಿಜಯೇಂದ್ರ ಅವರ ಜಾಗಕ್ಕೆ ವಿ.ಸೋಮಣ್ಣ ಅವರನ್ನು ತರಲು ಕರ್ನಾಟಕದ ಸಂಘ ಪರಿವಾರದ ನಾಯಕರು ಸರ್ವಥಾ ಸಿದ್ಧರಿದ್ದಾರೆ. ಇದೇ ರೀತಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ-ಜಾ.ದಳ ಮೈತ್ರಿಕೂಟ ಒಗ್ಗಟ್ಟಿನಿಂದ ಕಾಂಗ್ರೆಸ್ ವಿರುದ್ಧ ಹೋರಾಡಬೇಕೆಂದರೆ ಸೋಮಣ್ಣ ಅವರು ಬಿಜೆಪಿ ಅಧ್ಯಕ್ಷರಾಗಬೇಕು ಎಂಬ ಆಕಾಂಕ್ಷೆ ಜಾ.ದಳ ನಾಯಕ, ಕೇಂದ್ರದ ಉಕ್ಕು ಮತ್ತು ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಲ್ಲಿದೆ.

ಅಂದ ಹಾಗೆ ಚುನಾವಣೆಯಲ್ಲಿ ಮಿತ್ರ ಪಕ್ಷ ಬಿಜೆಪಿಯ ಸಾರಥ್ಯವನ್ನು ವಿಜಯೇಂದ್ರ ಬದಲು ಸೋಮಣ್ಣ ವಹಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಬಯಸಲು ಕಾರಣವಿದೆ. ಅದೆಂದರೆ, ಮುಂದಿನ ಚುನಾವಣೆಯಲ್ಲಿ ಜಾ.ದಳದ ಜತೆ ಸೇರಿ ಹೋಗುವುದು ವಿಜಯೇಂದ್ರ ಅವರಿಗೆ ಇಷ್ಟವಿಲ್ಲ. ಏಕೆಂದರೆ ಜಾ.ದಳ ಜತೆ ಸೇರಿ ಚುನಾವಣೆಗೆ ಹೋದರೆ ಮತ್ತು ಚುನಾವಣೆಯಲ್ಲಿ ಪಕ್ಷ ಗೆಲುವು ಗಳಿಸಿದರೆ ಸಹಜವಾಗಿಯೇ ಕುಮಾರಸ್ವಾಮಿ ಸಿಎಂ ಹುದ್ದೆ ರೇಸಿನಲ್ಲಿ ಮುಂದಿರುತ್ತಾರೆ. ಆದರೆ ಅವರು ಸಿಎಂ ಆಗುವ ಸಲುವಾಗಿ ನಾವೇಕೆ ಕಷ್ಟಪಡಬೇಕು ಎಂಬುದು ವಿಜಯೇಂದ್ರ ಅವರ ಯೋಚನೆ.

ಹೀಗಾಗಿ ಅವರು ಇವತ್ತು ಚುನಾವಣೆಗೆ ಹೋದರೂ ಬಿಜೆಪಿ ಸ್ವಯಂ ಶಕ್ತಿಯಿಂದ ನೂರಾ ನಲವತ್ತರಷ್ಟು ಸ್ಥಾನಗಳನ್ನು ಗೆಲ್ಲಲಿದೆ. ಹೀಗಿರುವಾಗ ಜಾ.ದಳದ ಸಖ್ಯ ನಮಗೇಕೆ ಬೇಕು ಎಂಬುದು ವಿಜಯೇಂದ್ರ ಅವರ ವಾದ. ಅವರಿಗೆ ಇಂತಹ ಮನಸ್ಸಿದೆ ಎಂಬ ಕಾರಣಕ್ಕಾಗಿಯೇ ಬಿಜೆಪಿಯಲ್ಲಿರುವ ಅವರ ವಿರೋಧಿಗಳು ಅಮಿತ್ ಶಾ ಅವರಿಗೆ ದೂರು ನೀಡಿದ್ದಾರೆ. ಇಂತಹ ದೂರನ್ನು ಗಂಭೀರವಾಗಿ ಪರಿಗಣಿಸಿರುವ ಅಮಿತ್ ಶಾ ಅವರು, ಮುಂದಿನ ಚುನಾವಣೆಯಲ್ಲಿ ನಾವು ಜಾ.ದಳದ ಜತೆ ಸೇರಿ ಹೋಗಬೇಕು ಅಂತಲೇ ವಿಜಯೇಂದ್ರ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಹೀಗೆ ಅಮಿತ್ ಶಾ ಅವರು ಜಾ.ದಳ ಜತೆಗಿನ ಸಖ್ಯದ ವಿಷಯದಲ್ಲಿ ಪರ್ಟಿಕ್ಯುಲರ್ ಆಗಿರುವುದರಿಂದ ವಿಜಯೇಂದ್ರ ಒಲ್ಲದ ಮನಸ್ಸಿನಿಂದ ಒಪ್ಪಿಕೊಂಡಿದ್ದಾರಾದರೂ, ತಮ್ಮ ಪಕ್ಷದಿಂದ ದೂರವಿರುವ ವಿಜಯೇಂದ್ರ ಅವರ ಮನಸ್ಸು ಕುಮಾರಸ್ವಾಮಿಯವರಿಗೆ ಕಿರಿಕಿರಿ ಮಾಡಿದೆ. ಹೀಗಾಗಿ ಅವರು ಕೂಡ ವಿಜಯೇಂದ್ರ ಅವರ ಜಾಗಕ್ಕೆ ಕೇಂದ್ರ ಸಚಿವ ವಿ.ಸೋಮಣ್ಣ ಅವರು ಬರಲಿ ಎಂದೇ ಬಯಸುತ್ತಿದ್ದಾರೆ.

ಗಮನಿಸಬೇಕಾದ ಸಂಗತಿ ಎಂದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಮಣ್ಣ ತುಮಕೂರು ಕ್ಷೇತ್ರದಿಂದ ಗೆಲುವು ಸಾಧಿಸಿದರಲ್ಲ ಆ ಗೆಲುವಿನಲ್ಲಿ ದೇವೇಗೌಡ-ಕುಮಾರಸ್ವಾಮಿ ಅವರ ಪಾಲು ದೊಡ್ಡದಿತ್ತು. ಹೀಗಾಗಿ ಸಹಜವಾಗಿಯೇ ಸೋಮಣ್ಣ ಮತ್ತು  ಕುಮಾರಸ್ವಾಮಿ ಅವರ ಮಧ್ಯೆ ಒಳ್ಳೆಯ ಕೆಮಿಸ್ಟ್ರಿ ಇದೆ. ಮುಂದಿನ ಚುನಾವಣೆಯಲ್ಲಿ ಮಿತ್ರಕೂಟ ನಿರಾಳವಾಗಿ ಮುನ್ನಡೆಯಲು ಇದು ಪೂರಕ ಎಂಬ ಭಾವನೆಯಿದೆ ಮತ್ತು ಇಂತಹ ಭಾವನೆ ವರಿಷ್ಠರ ಮುಂದೆ ಮಂಡನೆ ಯಾಗಿರುವುದರಿಂದ ವಿಜಯೇಂದ್ರ ಅವರ ಜಾಗಕ್ಕೆ ಸೋಮಣ್ಣ ಬಂದು ಕೂರುವ ಲಕ್ಷಣಗಳು ದಟ್ಟವಾಗುತ್ತಿವೆ.

ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆಗಾಗಿ ನಡೆಯುತ್ತಿರುವ ಹೋರಾಟ ತಾರ್ಕಿಕ ಅಂತ್ಯ ಕಂಡರೆ, ಅದೇ ರೀತಿ ಕರ್ನಾಟಕ ವಿಧಾನಸಭೆಗೆ ಮಧ್ಯಂತರ ಚುನಾವಣೆ ನಡೆಯುವುದು ಖಚಿತವಾದರೆ ಸೋಮಣ್ಣ ಪಟ್ಟಾಭಿಷೇಕ ಕಾರ್ಯ ನಿರುಮ್ಮಳವಾಗಿ ನಡೆಯಲಿದೆ ಎಂಬುದು ಮೂಲಗಳ ಮಾತು. ಮುಂದೇನಾಗುತ್ತದೋ ಕಾದು ನೋಡಬೇಕು

“ಮುಂಬರುವ ಚುನಾವಣೆಯಲ್ಲಿ ಮಿತ್ರ ಪಕ್ಷ ಬಿಜೆಪಿಯ ಸಾರಥ್ಯವನ್ನು ವಿಜಯೇಂದ್ರ ಬದಲು ಸೋಮಣ್ಣ ವಹಿಸಿಕೊಳ್ಳಲಿ ಎಂದು ಕುಮಾರಸ್ವಾಮಿ ಅವರು ಬಯಸಲು ಕಾರಣವಿದೆ. ಅದೆಂದರೆ, ಮುಂದಿನ ಚುನಾವಣೆಯಲ್ಲಿ ಜಾ.ದಳದ ಜತೆ ಸೇರಿ ಹೋಗುವುದು ವಿಜಯೇಂದ್ರ ಅವರಿಗೆ ಇಷ್ಟವಿಲ್ಲ”

– ಆರ್.ಟಿ. ವಿಠ್ಠಲಮೂರ್ತಿ 

Tags:
error: Content is protected !!