Mysore
18
broken clouds

Social Media

ಮಂಗಳವಾರ, 14 ಜನವರಿ 2025
Light
Dark

ಬಾಲ್ಯಕಾಲದ ಬಾಬಾಬುಡನಗಿರಿಯ ಯಾತ್ರೆ

ಕೊಟ್ಟೂರು ಸೀಮೆಯಲ್ಲಿ ಎಲ್ಲಿ ನಿಂತಾದರೂ `ಕೊಟ್ರಪ್ಪಾ’ ಎಂದು ಕೂಗಿದರೆ ಐದಾರು ಜನ ಓಗೊಡುತ್ತಾರಂತೆ. ಅಂತೆಯೇ ನಮ್ಮ ಸೀಮೆಯಲ್ಲಿ ದಾದಾಪೀರ್ ಎಂದರೆ ಹಲವಾರು ಜನ ಓಗೊಡುವರು. ಇದಕ್ಕೆಲ್ಲ ಕಾರಣ, ದಾದಾಪೀರ್ ಎಂಬ ಸೂಫಿಸಂತನ ದರ್ಗಾ ಇರುವ ಬಾಬಾಬುಡನಗಿರಿ. ಇದನ್ನು ದಾದಾಕ ಪಹಾಡ್ (ಅಜ್ಜನ ಗಿರಿ) ಎನ್ನುವರು. ಈ ಗಿರಿಗೆ ಜನ ಮಳೆಗಾಲ ಬಿಟ್ಟು ಉಳಿದಂತೆ ವರ್ಷವಿಡೀ ಹೋಗುವರು. ಮಕ್ಕಳು ಪಾಸಾದರೆ, ವಾಹನ ಖರೀದಿಸಿದರೆ, ಲಗ್ನವಾದರೆ, ಸಂತಾನವಾದರೆ, ಮಗುವಿನ ಜವಳ ತೆಗೆಸಲು, ಕಾಯಿಲೆಬಿದ್ದವರು ಎದ್ದರೆ- ನಾನಾ ಹರಕೆ ಹೊತ್ತವರಿವರು. ಅಮ್ಮ, ನಾನು ಎಸೆಸೆಲ್ಸಿ ಪಾಸಾದರೆ, ಸಂತನ ಪಾದುಕೆಗಳ ಕೆಳಗೆ ಹಾಸಲು ಸ್ವಂತ ಕೈಯಿಂದ ಬಿಳಿಯ ಬಟ್ಟೆಯ ಮೇಲೆ ಕ್ರಾಸ್‍ಸ್ಟಿಚ್ ಮಾಡಿದ ಚಾದರ ಅರ್ಪಿಸುವ ವ್ರತಹಿಡಿದು ಪೂರೈಸಿದ್ದಳು.

ಅಪ್ಪನಿಗೆ ಗಿರಿಗೆ ಹೋಗಬೇಕೆಂದರೆ ಹತ್ತುರೆಕ್ಕೆ ಮೂಡುತ್ತಿದ್ದವು. ಅವನು ಹಾಸಿಗೆ ಹಿಡಿದ  ದಿನಗಳಲ್ಲಿ ನಮ್ಮನೆಲ್ಲ ಕರೆದು ಕೂರಿಸಿಕೊಂಡು, ಎಲ್ಲರೂ ಒಮ್ಮೆ ಗಿರಿಗೆ ಹೋಗಿಬರೋಣ ಎಂದನು. ಜನವರಿ ಮಾಸ. ಅವನ ಸ್ಥಿತಿಯಲ್ಲಿ ಅಲ್ಲಿನ ಚಳಿ ತಡೆವುದು ಕಷ್ಟವಿತ್ತು.  ಆದರೆ ಅದವನ ಅಂತಿಮ ಬಯಕೆಯಾಗಿತ್ತು. ಕರೆದೊಯ್ದೆವು. ಅವನು ತನ್ನ ಮುಪ್ಪನ್ನು ಮರೆತು ಗಿರಿಯಲ್ಲಿ ಮುದಿಜಿಂಕೆಯಂತೆ ನಡುಗುತ್ತ ಓಡಾಡಿದನು. ರಾತ್ರಿ ಭೀಕರ ಚಳಿ ಬೀಳುವಾಗ ಬೆಂಕಿಹಾಕಿ ಅದರ ಮುಂದೆಯೇ ಕೂರುವಂತೆ ವ್ಯವಸ್ಥೆ ಮಾಡಿದೆವು. ಮುಲುಕುತ್ತ ಕೆಮ್ಮುತ್ತ ಕ್ಯಾಕರಿಸುತ್ತ ಆತ ಗಿರಿಯ ಯಾತ್ರೆ ಮುಗಿಸಿ ಕೆಳಗಿಳಿದನು. ಇಳಿದ ಕೆಲವು ದಿನಗಳಲ್ಲಿ ನಿಧನನಾದನು. ಸತ್ತಾಗ ಅವನ ಮುಖದ ಮೇಲೆ ವಿಶಿಷ್ಟ ನೆಮ್ಮದಿಯಿದ್ದಂತೆ  ಕಂಡಿತು.

ಗಿರಿಯಲ್ಲಿ ಮಳೆಗಾಲವೆಂದರೆ ಧಾರಾಕಾರ ನೀರು. ಚಳಿಗಾಲದಲ್ಲಿ ಪ್ರಾಣಹೋಗುವ ಥಂಡಿ. ಹೀಗಾಗಿ ಜನ ಬೇಸಿಗೆಯಲ್ಲಿ ಹೆಚ್ಚು ಹೋಗುತ್ತಿದ್ದರು. ಉರುಸೂ ಬೇಸಗೆಯಲ್ಲೇ ಬರುತ್ತದೆ. ಚಳಿಗಾಲದಲ್ಲಿ ಹೋಗುವ ಅನುಭವವೇ ಬೇರೆ. ಇಡೀ ಪರ್ವತಶ್ರೇಣಿ ಮಂಜಿನಲ್ಲಿ ಮುಸುಕಿ, ನಾಲ್ಕಡಿ ದೂರದ ವಸ್ತುವೂ ಕಾಣುವುದಿಲ್ಲ. ನೀರುಮುಟ್ಟಿದರೆ ಬೆರಳು ಸೆಟೆತುಕೊಳ್ಳುವವು. ಎಲುಬನ್ನು ಕೊರೆವ ಚಳಿಗೆ ಹಲ್ಲು ಒಂದೆಡೆ ನಿಲ್ಲದೆ ಕಟಕಟಿಸುವವು. ಒಮ್ಮೆ ಚಳಿಗಾಲದಲ್ಲಿ ನಾವು ಕುರಿಬೇಟೆಯ ಹರಕೆ ಪೂರೈಸಲು ಹೋಗಿದ್ದೆವು. ನಾವು ಹುಡುಗರು ಹಾಸುಗಲ್ಲಿನ ಮೇಲೆ ಉರುಳುಗುಂಡಿನಲ್ಲಿ ಕಾರವನ್ನು ಕಡೆಯತೊಡಗಿದೆವು. ಎರಡುಬಟ್ಟಲು ತೆಂಗಿನಕಾಯಿ ಅರೆದಂತೆಲ್ಲ ಜಿಡ್ಡಾಗಿ ಬಂಡೆಗಲ್ಲಿಗೆ ಹತ್ತಿಕೊಂಡು ಕಣ್ಮರೆಯಾಯಿತು. ಜಿಡ್ಡನ್ನು ಕಲ್ಲಿನಿಂದ ಗೀಸಿ ತೆಗೆದದ್ದಾಯಿತು.

ಬಾಬಾಬುಡನಗಿರಿ ಉರುಸಿಗೆ ಊರಿನ ಸಿರಿವಂತರು ಲಾರಿಗಳನ್ನು ಹೊರಡಿಸಿದರೆ, ನಾವು  ಅದನ್ನು ಹತ್ತಿಕೊಂಡು ಕೇಕೆ ಹಾಕುತ್ತ ಹೋಗುತ್ತಿದ್ದೆವು. ಘಟ್ಟದ ತಿರುವುಗಳಲ್ಲಿ ಲಾರಿ ಸುತ್ತುವಾಗ ಒಬ್ಬರ ಮೇಲೊಬ್ಬರು ಬಿದ್ದು `ಹೋ’ ಅರಚುತ್ತಿದ್ದೆವು. ಒಂದೇ ಕಷ್ಟವೆಂದರೆ, ಚೆಕ್‍ಪೋಸ್ಟುಗಳಲ್ಲಿ ವೈದ್ಯಕೀಯ ಇಲಾಖೆಯವರು ಕೊಡುತ್ತಿದ್ದ ಇಂಜೆಕ್ಷನ್ನು. ದೊಡ್ಡಸಿರಿಂಜಿನಲ್ಲಿ ಮದ್ದನ್ನು ತುಂಬಿಕೊಂಡು, ನಾವಿದ್ದ ಬಸ್ಸು ಇಲ್ಲವೇ ಲಾರಿಯೊಳಗೇ ಹತ್ತಿ, ಹತ್ತುಹದಿನೈದು ಜನರಿಗೆ ಒಟ್ಟಿಗೆ ಶೂಲ ಚುಚ್ಚುತ್ತಿದ್ದರು. ಸಂಜೆ ಹೊತ್ತಿಗೆ ಅಲುಗಿಸಲಾರದಂತೆ ರಟ್ಟೆ ಊದಿಕೊಳ್ಳುತ್ತಿತ್ತು. ಕೆಲವೊಮ್ಮೆ, ನಾವು ಕೆಲವರು, ಮಕ್ಕಳು ಮಹಿಳೆಯರು ಮುದುಕರನ್ನು ಗಿರಿಯ ಬಸ್ಸಿಗೆ ಹತ್ತಿಸಿ, ಗಿರಿಗೆ ನಡೆದು ಹೋಗುತ್ತಿದ್ದೆವು. ತರೀಕೆರೆ- ಚಿಕ್ಕಮಗಳೂರು ರಸ್ತೆಯಲ್ಲಿ ಬರುವ ಎಮ್ಮೆಕಾನಲ್ಲಿ ಇಳಿದು, ಶೋಲಾಕಾಡುಗಳನ್ನು ಹಾದು, ಕಾಫಿತೋಟಗಳನ್ನು ಹೊಕ್ಕು, ಕಿತ್ತಲೆ ಹಲಸು ಚಕ್ಕೋತ ಹಣ್ಣುಗಳನ್ನು ತಿನ್ನುತ್ತ ಗಿರಿಯ ಬುಡ ಮುಟ್ಟುತ್ತಿದ್ದೆವು. ಬುಡದಿಂದ ಗಿರಿಯ ಶಿಖರ ಹೆಡೆಯೆತ್ತಿದ ಸರ್ಪದಂತೆ ತೋರುತ್ತಿತ್ತು. ಅದನ್ನು ಜನ್ನತ್‍ಸಿಡಿ ಎನ್ನಲಾಗುತ್ತಿತ್ತು. ಈ ಸ್ವರ್ಗದಮೆಟ್ಟಿಲುಗಳನ್ನು ಏರುವಾಗ ಹೆಗಲಿಗೆ ಕಟ್ಟಿದ ಬ್ಯಾಗುಗಳು ಹರಿದುಬಿದ್ದು ಕಣ್ಮುಂದೆಯೇ ಪ್ರಪಾತವನ್ನು ಸೇರುತ್ತಿದ್ದುಂಟು. ಚಾರಣ ಮುಗಿದು ಶಿಖರವನ್ನೇರಿ, ಮೂಡಣಕ್ಕೆ ದಿಟ್ಟಿ ಹಾಯಿಸಿದರೆ, 180 ಡಿಗ್ರಿಯ ನೋಟದ ವಿಶಾಲ ಕಣಿವೆ. ಅದರೊಳಗಿನ ಎಸ್ಟೇಟು, ಊರು, ಇರುವೆಯಂತೆ ಹರಿವ ಬಸ್ಸು, ನಡುವೆ ಉಗುಚಿಬಿದ್ದ ಕಪ್ಪು ದಾರದಂತಿರುವ ರಸ್ತೆ, ಹೊಳೆವ ಕನ್ನಡಿಗಳಂತೆ ಫಳಫಳಿಸುವ- ಮದಗದ ಕೆರೆ, ಅಯ್ಯನಕೆರೆಗಳು. ಚಾರಣದ ದಣಿವನ್ನು ಸಾರ್ಥಕಗೊಳಿಸುವ ಅಪೂರ್ವ ನೋಟವದು.

ಗಿರಿಯನ್ನು ಮುಟ್ಟಿದೊಡನೆ ಮಾಡುವ ಮೊದಲ ಕೆಲಸವೆಂದರೆ, ಸರಿಯಾದ ಜಾಗವನ್ನು ಹಿಡಿದು ಟೆಂಟು ಹಾಕುವುದು. ಬಳಿಕ ಒಲೆಹೂಡುವುದು, ಕಣಿವೆಗೆ ಇಳಿದು ಕಟ್ಟಿಗೆ ಸಂಗ್ರಹಿಸುವುದು, ಕೋಳಿ ಕುರಿ ಕೊಯ್ದು ಚೊಕ್ಕಗೊಳಿಸುವುದು, ಅಡುಗೆ, ಊಟ. ಗಿರಿಗೆ ಕರ್ನಾಟಕದ ನಾನಾ ಮೂಲೆಗಳಿಂದ ಜನ ಬರುತ್ತಿದ್ದರು. ಅದು ಅಖಿಲ ಕರ್ನಾಟಕ ಭಾಷೆ ಊಟ ಉಡುಗೆಗಳ ಮೆರವಣಿಗೆ. ಕರ್ನೂಲು ಬಳ್ಳಾರಿಯವರ ಉರ್ದು ಒಂದು ಬಗೆಯಾದರೆ, ಬಿಜಾಪುರದವರದ್ದು ಇನ್ನೊಂದು ತೆರ. ಕನ್ನಡ ಮನೆಮಾತಿನ ಮುಸ್ಲಿಮರಿದ್ದಾರೆಂದು ನಮಗೆ ತಿಳಿದಿದ್ದು ಅಲ್ಲೇ. ಉತ್ತರ ಕರ್ನಾಟಕದವರಿಂದ ಜೋಳದರೊಟ್ಟಿ ಬದನೆಪಲ್ಯ ಪಡೆದು ನಮ್ಮ ಸಾರು ಮುದ್ದೆಗಳನ್ನು ಕೊಡುತ್ತಿದ್ದೆವು.

ಬಯಲು ಸೀಮೆಯಿಂದ ಬಂದ, ಇಲ್ಲಿನ ನಿಸರ್ಗದಿಂದ ಪುಳಕಿತರಾಗಿರುತ್ತಿದ್ದರು. `ಯಾ ದಾದಾ ನೂರಿ ಕರದೇ ಮೇರಿ  ಮುರಾದ್ ಪೂರಿ’ (ತೇಜವಂತ ಸಂತ ದಾದಾ, ಈಡೇರಿಸು ನಮ್ಮ ಹರಕೆ) ಎಂದು ಘೋಷಿಸುತ್ತ ಗಾಳಿಕೆರೆ, ಮಂಚದಕರೆ ಮತ್ತು ಮಾಣಿಕ್ಯ ಧಾರೆಗಳಿಗೆ ನಡೆದು ಹೋಗುತ್ತಿದ್ದರು. ಮಂಚದ ಕೆರೆಯ ಅಂಗಳದಲ್ಲಿ ಒಲೆಹೂಡಿ, ಅಲ್ಲಿದ್ದ ಸೊಪ್ಪುಸದೆ ಕಿತ್ತು ಬೇಯಿಸಿ, ರೊಟ್ಟಿ ಮಾಡುತ್ತಿದ್ದರು. ಒಬ್ಬ ದುಷ್ಟನು ಬಾಬಾ ಅವರ ಶಿಷ್ಯೆ ಮಾಮಾ ಜಿಗನಿಯವರನ್ನು ಪಲ್ಲಂಗದ ಸಮೇತ ಹೊತ್ತು ಒಯ್ಯುವಾಗ, ಅವರು ಜಾಡಿಸಿ ಒದೆಯಲು ಮಂಚವು ಬಿದ್ದು ಕೆರೆಯಾಯಿತಂತೆ. ಪ್ರಪಾತದೆಡೆಗೆ ಚಾಚಿರುವ ಶಿಖರದ ಬಂಡೆಯಿಂದ ಕೆಳಗೆ ಬೀಳುವ ಮಾಣಿಕ್ಯಧಾರೆಯ ಕೆಳಗೆ ನಿಂತರೆ, ನೀರ್ಗಲ್ಲುಗಳಿಂದ ಹೊಡೆದಂತಾಗುತ್ತಿತ್ತು. ನೀರಿನ ಶೀತಲತೆಗೂ ಮೇಲಿಂದ ಬೀಳುವ ಪೆಟ್ಟಿಗೂ ದೇಹ  ತತ್ತರಿಸುತ್ತಿತ್ತು. ಕಲ್ಲುಬಂಡೆಯ ಶಿಖರದಲ್ಲಿ ನೀರುಹುಟ್ಟುವುದು ಸಂತನ ಮಹಿಮೆಯೆಂದು ಜನ ಅಚ್ಚರಿಸುತ್ತಿದ್ದರು.

ಮಾಣಿಕ್ಯಧಾರೆಯಲ್ಲಿ ಜಳಕ ಮುಗಿಸಿ ಬಂದ ಬಳಿಕ ಬಾಬಾಬುಡನ್ ಗುಹಾ ಪ್ರವೇಶ ಕಾರ್ಯಕ್ರಮ. ಸಂಜೆಯಾಗುತ್ತಲೇ ಲೋಬಾನದ ಹೊಗೆದಾನಿ ಹಿಡಿದು ವಾದ್ಯಘೋಷದೊಂದಿಗೆ ಮುಜಾವರ್ ಗುಹೆ ಪ್ರವೇಶಿಸುವರು. ಮಲಗಿದ್ದ ಕುಳಿತಿದ್ದ ಜನರೆಲ್ಲ ಎದ್ದು ನಿಲ್ಲುವರು. ಅದೊಂದು ಸುಣ್ಣಗಲ್ಲಿನ ನೈಸರ್ಗಿಕ ಛಾವಣಿಯ ಗುಹೆ. ಅಲ್ಲಲ್ಲಿ ತಟತಟಿಸುವ ನೀರಬಿಂದು. ಒಳಗೆ ಸಂತರ ಸಮಾಧಿಗಳು. ಇನ್ನೂ ಒಳಗೆ ಸಂತನ ಪಾದುಕೆ, ನಂದಾದೀಪ. ಚಿಲುಮೆ. ಜನ ಅಲ್ಲಿನ ನೀರನ್ನು ತಬ್ರೂಕ್ ಎಂದು ಸೇವಿಸುವರು. ಗುಹೆಯಲ್ಲಿದ್ದ ಹಳದಿ ಮಣ್ಣನ್ನು ಗಂಧವೆಂದು ಸಂಗ್ರಹಿಸುವರು. ರಾತ್ರಿ ಗುಹೆಯನ್ನು ಮುಚ್ಚಲಾಗುತ್ತಿತ್ತು. ಯಾಕೆಂದರೆ, ಅಮ್ಮನ ಪ್ರಕಾರ, ನಡುರಾತ್ರಿ ಹುಲಿ ಬಂದು ತನ್ನ ಬಾಲದಿಂದ ಗವಿಯನ್ನು ಗುಡಿಸಿಹೋಗುತ್ತದೆ.

ದರ್ಗಾದ ಮೇಲಿನ ಎತ್ತರದಲ್ಲಿ, ನಗಾರಖಾನೆ ಲಂಗರ್‍ಖಾನೆ ಭಂಡಾರಖಾನೆಗಳು ಇರುತ್ತಿದ್ದವು. ಲಂಗರಖಾನೆಯಲ್ಲಿ ದೊಡ್ಡದೊಡ್ಡ ಕುಂಟೆಗಳು ಧಗಧಗ ಉರಿಯುವ ಒಲೆ. ಒಲೆಯ ಸುತ್ತ ಬೆಂಕಿಕಾಸುವ ವೃದ್ಧರ ಪರಿಷತ್ತು. ಒಲೆಯ ಮೇಲೆ ದೊಡ್ಡದೊಡ್ಡ ಕಡಾಯಿಗಳಲ್ಲಿ ಕುದಿವ ಸಿಹಿಗಂಜಿ. ಅದಕ್ಕೆ `ದಾದಾಪೀರ್ ಕ ಭಂಡಾರ’ ಎಂದು ಹೆಸರು. ಗಂಜಿ ಸಿದ್ಧವಾದರೆ ನಗಾರಖಾನೆಯಲ್ಲಿ ಢಮಧಡ್ ಢಮಧಡ್ ನಗಾರಿ ಬಾರಿಸಲಾಗುತ್ತಿತ್ತು. ಜನ ಪಾತ್ರೆ ಬೋಗುಣಿ ಎತ್ತಿಕೊಂಡು ದೌಡುತ್ತಿದ್ದರು. ಬಾಣಸಿಗರು ಒಡ್ಡಿದ ಪಾತ್ರೆಗಳಿಗೆ ಗಂಜಿಯನ್ನು ಮೊಗೆದು ಸುರಿಯುತ್ತಿದ್ದರು. ಸುಡುತನಕ್ಕೆ ಕೇರ್ ಮಾಡದೆ ಜನ ಅದನ್ನೇ ಹಬೆಯಾಡುತ್ತಿರುವಾಗಲೇ ಕುಡಿದು ಚಳಿಯನ್ನು ಹೆದರಿಸುತ್ತಿದ್ದರು. ಭಂಡಾರಖಾನೆಯಲ್ಲಿ ದೊಡ್ಡ ಕುರ್ಚಿಯಲ್ಲಿ ದರ್ಗಾದ ಮುಖ್ಯ ಗುರು ಕೂತಿರುತ್ತಿದ್ದರು. ನಾವೆಲ್ಲ ಸಾಲಾಗಿ ಹೋಗಿ ಅವರ ಮುಂಗೈಯನ್ನು ಚುಂಬಿಸುತ್ತಿದ್ದೆವು.

ಇಷ್ಟೆಲ್ಲ ಸಾವಧಾನವಾಗಿ ಗಿರಿಯನ್ನು ಉರುಸಿನಲ್ಲಿ ನೋಡಲು ಆಗುತ್ತಿರಲಿಲ್ಲ. ಎಲ್ಲೆಂದರಲ್ಲಿ ಜನ. ಆದರೆ ಆ ಜಂಗುಳಿಯಲ್ಲಿ ಗಿರಿ ಬೇರೆಯದೇ ಚೆಲುವನ್ನು ಪಡೆಯುತ್ತಿತ್ತು. ಮೈಕೈಗೆ ಕಬ್ಬಿಣದ ಸರಪಳಿ ಸುತ್ತಿಕೊಂಡು ಚಿಮ್ಮಟಿಗೆಯಿಂದ ತಲೆಗೆ ಬಡಿದುಕೊಂಡು ಹೂಂಕರಿಸುವ ಫಕೀರರ ಮೆರವಣಿಗೆ. ಫಕೀರರು ಚರ್ಮವಾದ್ಯವನ್ನು ಲಯಬದ್ಧವಾಗಿ ಬಡಿದಾಗ ಏಳುವ ನಾದ, ರೋಮಾಂಚನ ಎಬ್ಬಿಸುತ್ತಿತ್ತು. ಅವರ ನಡುವೆ ಫಕೀರರು ತಲೆಯ ಮೇಲೆ ತೇದಗಂಧದ ಕುಂಭವನ್ನು ಹೊತ್ತ ವ್ಯಕ್ತಿ. ಗಂಧದ ಮೇಲೆ ಜನ  ಕಾಸನ್ನು ಎಸೆಯುವರು. ಅವನ್ನು ಹೆಕ್ಕಲು ಬಗ್ಗಿದವರ ಮೇಲೆ ನಡೆಯುವವರು ಬಿದ್ದು, ಜನ ಗಂಟುಬಿದ್ದ ನುಲಿಯಂತೆ ಉಂಡೆಯಾಗುವರು. ರಾತ್ರಿಯಿಡೀ ಬಣ್ಣಬಣ್ಣದ ಮಣಿಸರ ಹಾಕಿ ಉದ್ದನೆಯ ಕೂದಲುಬಿಟ್ಟ ಫಕೀರರು ಧುನಿ ಉರಿಸುತ್ತ ಹಾಡುವರು. ಎರಡು ದಿನವಿದ್ದು ಊರಿಗೆ ಮರಳಿದರೆ ಒಂದು ತಿಂಗಳ ಕಾಲು ಗಿರಿಯದೇ ನೆನಪು.

ನಮ್ಮ ಕಡೆ, ಹಜ್‍ಯಾತ್ರೆ ಮಾಡಲಾಗದವರು ರಾಜಸ್ಥಾನದ ಅಜ್ಮೀರಿನಲ್ಲಿರುವ ಮೊೈನುದ್ದೀನ್ ಚಿಸ್ತಿ ದರ್ಗಾಕ್ಕೆ ಹೋದರೆ, ಅಜ್ಮೀರಿಗೂ ಹೋಗಲಾಗದವರು  ಬಾಬಾಬುಡಗಿರಿಗೆ ಬರುವುದುಂಟು. ಹೀಗೆ ಸಾಮಾನ್ಯ ಜನರ ಶ್ರದ್ಧಾಕೇಂದ್ರವಾಗಿದ್ದ ಗಿರಿ, ತನ್ನ ಚುಂಬಕ  ಆಕರ್ಷಣೆಯನ್ನು ಕ್ರಮೇಣ ಕಳೆದುಕೊಂಡಿತು. ಮುಸ್ಲಿಮರಲ್ಲೇ ಸಂತರಿಗೆ ನಡೆದುಕೊಳ್ಳುವುದು ಇಸ್ಲಾಮಿಗೆ ಸಲ್ಲದೆನ್ನುವವರು ಹೆಚ್ಚಾದರು. ಅತ್ತ ಸಂಘಪರಿವಾರವು ದತ್ತಪೀಠ ವಿಮೋಚನೆ ಮಾಡಬೇಕೆಂದು ಹೊರಟು ಅದನ್ನು ಸಮಸ್ಯೆಯನ್ನಾಗಿಸಿತು. ಎರಡೂ ಶಕ್ತಿಗಳು ಸೇರಿ, ಜನಸಾಮಾನ್ಯರ ಲೌಕಿಕತೆ- ಪಾರಮಾರ್ಥಿಕತೆಗಳು ಒಟ್ಟಿಗೆ ಕೂಡುವ ವಿಶಿಷ್ಟ ಯಾತ್ರಾಸ್ಥಳದ ಜೀವಂತಿಕೆಯನ್ನು ತೆಗೆದುಬಿಟ್ಟವು. ಈಗ ದಾದಾಪೀರ್ ಎಂದು ಕೂಗಿದರೆ ಓಗೊಡುವವರೂ ಕಡಿಮೆ. ಈ ವರ್ಷದ ಉರುಸಿಗೆಂದು ಗಿರಿಗೆ ಮುದ್ದಾಂ ಹೋದೆ. ರಸ್ತೆ, ಶೌಚಾಲಯ, ವಸತಿ, ನೀರು ಎಲ್ಲ ವ್ಯವಸ್ಥೆ ಹಿಂದಿಗಿಂತ ಉತ್ತಮವಾಗಿದ್ದವು. ಆದರೆ ವಿವಾದದ ನೆರಳು ಕವಿದು, ಬರುವ ಜನರ ಸಂಖ್ಯೆ ಕಡಿಮೆಯಾಗಿವೆ, ಹಿಂದಿನ ಸಂಭ್ರಮದ ರಕ್ತಮಾಂಸವೆಲ್ಲ ಕಳೆದು, ಗಿರಿ ಅಸ್ಥಿಪಂಜರದಂತೆ ತೋರಿತು. ಇವ್ಯಾವ ಪರಿವೆಯೂ ಇಲ್ಲದೆ ಗಿರಿಯ ಗಿಡಮರ, ಗಾಳಿ, ಪರ್ವತ, ಚಳಿ, ಜಲಪಾತ ತಮ್ಮ ಧರ್ಮವನ್ನು ಪಾಲಿಸುತ್ತಿದ್ದವು. ನೀಲಕುರುಂಜಿ ಗಿಡ ಒಣಗಿ, ಬರುವ ಹನ್ನೆರಡನೇ ವರ್ಷಕ್ಕೆ ಹೂಬಿಡಲು ತಪಿಸುತ್ತಿದ್ದವು.

Tags: