ಮಂಗಳೂರು ಮೂಲದ ಅಜೀಮ್ ಬೋಳಾರ್ ಕುಟುಂಬ ಹೊಟ್ಟೆಪಾಡಿಗಾಗಿ ಪೂರ್ವ ಆಫ್ರಿಕಾದಲ್ಲಿ ನೆಲೆಯಾಗಿತ್ತು. ಈಗ 57 ವರ್ಷ ಪ್ರಾಯವಾಗಿರುವ ಅಜೀಮ್ ಬೋಳಾರ್ಗೆ ಹುಟ್ಟುವಾಗಲೇ ಬ್ರಾಂಕೈಟಿಸ್ (ಶ್ವಾಸನಾಳದ ಒಳಪೊರೆಯ ಉರಿಯೂತ) ಹಾಗೂ ಹೃದಯದ ಸಮಸ್ಯೆಗಳಿದ್ದವು. ಅದರ ನಂತರ, ಅವರು ಹರೆಯಕ್ಕೆ ಕಾಲಿಡುವ ಮೊದಲೇ, ಜುವನೈಲ್ ಆರ್ಥೈಟಿಸ್ ತಗಲಿತು. ಅಷ್ಟೆಲ್ಲ ದೈಹಿಕ ಸಮಸ್ಯೆಗಳ ನಡುವೆಯೂ ಅಜೀಮ್ ಬೋಳಾರ್ ತನ್ನ ಗುರಿಯಿಂದ ವಿಚಲಿತಲಾಗಲಿಲ್ಲ. ಅವರ ಗುರಿ, ಒಳ್ಳೆಯ ಉದ್ಯೋಗ ಪಡೆದು ಅಥವಾ ತಾನೇ ಏನಾದರೂ ಸ್ವಂತದ ಉದ್ಯಮ ನಡೆಸಿ ಹೇರಳ ಹಣ ಮಾಡುವುದು. 17 ವರ್ಷದವರಾಗಿದ್ದಾಗ ಅಜೀಮ್ ಬೋಳಾರ್ ಹೋಟೆಲ್ ಉದ್ಯಮದಲ್ಲಿ ತರಬೇತಿ ಪಡೆಯುವ ಸಲುವಾಗಿ ಆಫ್ರಿಕಾದಿಂದ ಫ್ರಾನ್ಸಿನ ಸ್ಟ್ರಾಸ್ಬರ್ಗ್‌ಗೆ ಹೋದರು. ಅಲ್ಲಿಂದ ಲಂಡನ್‌ಗೆ ಹೋಗಿ, ಹೋಟೆಲ್ ಮ್ಯಾನೇಜ್‌ಮೆಂಟ್ ನಲ್ಲಿ ಪೋಸ್ಟ್-ಗ್ರ್ಯಾಜುಯೆಟ್ ಪದವಿ ಪಡೆದರು.
ಅಜೀಮ್ ಬೋಳಾರ್ ತಾನೊಬ್ಬ ಮಾಸ್ಟರ್ ಶೆ- ಆಗುವ ಗುರಿಯನ್ನು ಹಾಕಿಕೊಂಡಿದ್ದರು. ಆ ಗುರಿ ಸಾಧನೆಯ ಮೊದಲ ಹೆಜ್ಜೆಯಾಗಿ ಅವರು 1991ರಲ್ಲಿ ಭಾರತಕ್ಕೆ ಹಿಂತಿರುಗಿ, ಬೆಂಗಳೂರಿನ ಒಂದು ರೆಸ್ಟೋರೆಂಟ್‌ನಲ್ಲಿ ಮೇನೇಜರ್ ಆಗಿ ಕೆಲಸ ಮಾಡತೊಡಗಿದರು. ಅದರ ನಂತರ, ಬೆಂಗಳೂರಿನ ಒಬೇರಾಯ್ ಹೋಟೆಲಲ್ಲಿ ರಾತ್ರಿ ಮೇನೇಜರ್ ಆಗಿ ಉದ್ಯೋಗಕ್ಕೆ ಸೇರಿದರು. ಅಲ್ಲಿಂದ ಅವರ ಬದುಕು ದುರಂತದ ಹಾದಿಯನ್ನು ಹಿಡಿಯಿತು. ಒಬೇರಾಯ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ ಸ್ವಲ್ಪ ಸಮಯದಲ್ಲಿ ಅವರ ಕಣ್ಣ ದೃಷ್ಟಿ ಮಂದವಾಗ ತೊಡಗಿತು. ಆಗ ಅವರು ತಮ್ಮ ಕೆಲಸಕ್ಕೆ ವಿದಾಯ ಹೇಳಬೇಕಾಯಿತು. ಅದರ ನಂತರ ಅಜೀಮ್ ‘ಟೇಕ್ ಅವೇ ಫಾಸ್ಟ್ ಫುಡ್’ ಜಾಯಿಂಟೊಂದನ್ನು ಶುರು ಮಾಡಿದರು. ಆದರೆ, ಅವರ ಕಣ್ಣ ದೃಷ್ಟಿ ಇನ್ನೂ ತೀರಾ ಮಂದವಾದ ಕಾರಣ ಅದನ್ನು ಮುಚ್ಚಿ, ಉಗಾಂಡಕ್ಕೆ ವಾಪಸ್ಸಾಗಿ, ತಮ್ಮ ಹೆತ್ತವರೊಂದಿಗೆ ಇರತೊಡಗಿದರು.
ಉಗಾಂಡಕ್ಕೆ ಮರಳಿದ ಅಜೀಮ್ ಬೋಳಾರ್ ಅಲ್ಲಿ ಐದು ಎಕರೆ ಜಮೀನು ಖರೀದಿಸಿ, ಅದರಲ್ಲಿ ಒಂದು ರೆಸ್ಟೋರೆಂಟನ್ನು ಶುರು ಮಾಡಿದರು. ಆಗ ಅವರಿಗೆ ಮೆನಿಂಜೈಟಿಸ್ (ಮೆದುಳುಪೊರೆಯೂತ) ಶುರುವಾಗಿ, ಮೆದುಳಲ್ಲಿ ನೀರು ತುಂಬಿಕೊಂಡಿತು. ನಂತರ, ಸೆರೆಬ್ರಲ್ ಮಲೇರಿಯಾ ತಗಲಿತು. ಮತ್ತು ಇದೆಲ್ಲ ಸಾಲದೆಂಬಂತೆ, ಅಜೀಮ್ ಬೋಳಾರ್ ಪ್ರಪ್ರಥಮ ಬಾರಿಗೆ ಪಾರ್ಶ್ವವಾಯು ದಾಳಿಗೆ ಒಳಗಾದರು. ಆ ಹೊತ್ತಿಗೆ ಅವರ ಕಣ್ಣುಗಳು ಸಂಪೂರ್ಣವಾಗಿ ಕುರುಡಾದವು ಮತ್ತು ಅವರ ಎಡ ಬದಿಯ ಶರೀರ ನಿಶ್ಚೇತವಾಯಿತು. ಡಾಕ್ಟರು ಅಜೀಮ್ ಬೋಳಾರ್‌ಗೆ ಮೆದುಳು ಸಾವಾಗಿದೆ ಎಂದು ಘೋಷಿಸಿ, ಮುಂದೆ ಅವರು ಯಾವತ್ತೂ ನಡೆಯಲಾಗಲೀ, ಮಾತಾಡಲಾಗಲೀ ಸಾಧ್ಯವಾಗದೆ ತರಕಾರಿಯಂತಾಗಿ, ಜೀವನವಿಡೀ ಗಾಲಿ ಕುರ್ಚಿಯಲ್ಲಿ ಕಳೆಯಬೇಕಾಗುತ್ತದೆ ಅಂದರು. ಬಹುಶಃ ಮತ್ತೆ ಯಾರಾದರೂ ಆಗಿದ್ದರೆ ಅಷ್ಟೆಲ್ಲ ಕೋಟಳೆಗಳ ನಡುವೆ ಬದುಕುವ ಇಚ್ಛೆಯನ್ನೇ ಕಳೆದುಕೊಳ್ಳುತ್ತಿದ್ದರೋ ಏನೋ. ಆದರೆ, ಅಜೀಮ್ ಬೋಳಾರ್ ಅಷ್ಟು ಸುಲಭದಲ್ಲಿ ಸೋಲೊಪ್ಪಿಕೊಳ್ಳುವ ಪಿಂಡವಾಗಿರಲಿಲ್ಲ.
ಅವರ ಮನೋಚೈತನ್ಯ ವೈದ್ಯರ ಲೆಕ್ಕಾಚಾರವನ್ನು ಸುಳ್ಳಾಗಿಸಲು ಮುಂದಾಯಿತು. ಏನೇ ಆಗಲಿ, ತಾನು ತನ್ನ ಕಾಲ ಮೇಲೆ ನಿಂತುಕೊಳ್ಳಬೇಕು ಎಂದು ಅವರು ದೃಢವಾಗಿ ನಿಶ್ಚಯಿಸಿದರು. ತಾನು ಕಳೆದುಕೊಂಡುದರ ಬಗ್ಗೆ ಹೆಚ್ಚು ಚಿಂತಿಸದೆ ವಾಸ್ತವವನ್ನು ಒಪ್ಪಿಕೊಂಡು ತನ್ನಲ್ಲಿ ಇನ್ನೂ ಉಳಿದಿರುವುದನ್ನು ಅರ್ಥಪೂರ್ಣ ಕೆಲಸಗಳಿಗೆ ಬಳಸುವುದು ಹೇಗೆ ಎಂಬುದರ ಬಗ್ಗೆ ಆಲೋಚಿಸಿದರು. ಮೊದಲಿಗೆ ಅವರು ತಮ್ಮ ಬದುಕಿನ ಗುರಿಯನ್ನು ಬದಲಾಯಿಸಿಕೊಂಡರು. ಮೊದಲು ಹೇರಳ ಹಣ ಸಂಪಾದಿಸಿ, ತನಗಾಗಿ ಬದುಕುವ ಗುರಿಯ ಹಿಂದೆ ಬಿದ್ದಿದ್ದ ಅವರು ಈಗ ಬೇರೆಯವರಿಗಾಗಿ ಬದುಕಲು ನಿಶ್ಚಯಿಸಿದರು. ಅವರು ಬೆಂಗಳೂರಿನ ಬಂಜಾರಾ ಅಕಾಡೆಮಿಯಿಂದ ಕೌನ್ಸಿಲಿಂಗ್‌ನಲ್ಲಿ ಹಲವು ಕೋರ್ಸ್‌ಗಳನ್ನು ಮಾಡಿದರು. ಅದರ ಜೊತೆಯಲ್ಲಿ, ನ್ಯೂರೋ ಲಿಂಗ್ವಿಸ್ಟಿಕ್ ಪ್ರೋಗ್ರಾಮ್, ಹಿಪ್ನೋಥೆರಪಿ, ಜೆಸ್ಟಾಲ್ಟ್ ಥೆರಪಿ, ರೇಖೀ, ಮತ್ತು ಕುವೆಂಪು ವಿಶ್ವವಿದ್ಯಾಲಯದಲ್ಲಿ ಕೌನ್ಸಿಲಿಂಗ್ ಮತ್ತು ಸೈಕೋಥೆರಪಿಯಲ್ಲಿ ಎಂಎಸ್ ಮಾಡಿದರು.
ಇಷ್ಟು ಕೋರ್ಸುಗಳನ್ನು ಮಾಡಿದ ಅಜೀಮ್ ಬೋಳಾರ್ ಕಳೆದ ಹಲವುವರ್ಷಗಳಿಂದ ನೂರಾರು ಜನರಿಗೆ ಕೌನ್ಸಿಲಿಂಗ್ ಮಾಡಿ ಅವರ ಬದುಕಲ್ಲಿ ಬೆಳಕು ತರುವುದರ ಜೊತೆಯಲ್ಲಿ ತಮ್ಮ ಬದುಕನ್ನೂ ಪುನಃ ಕಟ್ಟಿಕೊಳ್ಳುತ್ತಿದ್ದಾರೆ. ವಾರಕ್ಕೆ ಎರಡು ದಿನ ಅವರು ಅದಿತಿ ಟೆಕ್ನಾಲಾಜಿಸ್‌ನಲ್ಲಿ ಕನ್ಸಲ್ಟಂಟ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ವಾರಕ್ಕೊಮ್ಮೆ, ಬಂಜಾರಾ ಅಕಾಡೆಮಿ ನಡೆಸುವ ಉಚಿತ ಕೌನ್ಸಿಲಿಂಗ್ ಕೇಂದ್ರದಲ್ಲಿ ಸ್ವಯಂ ಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತುಳಿದ ದಿನಗಳಲ್ಲಿ ಅವರು ತಮ್ಮ ಮನೆಯಿಂದ ಕೆಲಸ ಮಾಡುತ್ತಾರೆ. ಅಜೀಮ್ ಬೋಳಾರ್ ತನ್ನ ಬದುಕನ್ನೇ ಉದಾಹರಣೆಗೆ ಕೊಟ್ಟು, ಖಿನ್ನತೆ, ಒತ್ತಡ, ಕೌಟುಂಬಿಕ ಸಮಸ್ಯೆ, ಒಂಟಿತನ ಮೊದಲಾದ ಋಣಾತ್ಮಕ ಅನುಭವಗಳಿಂದಾಗಿ ಬದುಕಲ್ಲಿ ನಿರಾಸೆಹೊಂದಿದವರಿಗೆ ಮರು ಚೇತನ ಪಡೆಯಲು ಸಹಕರಿಸುತ್ತಾರೆ. ಎಲ್ಲವೂ ಸರಿಯಿದ್ದಾಗ ತನ್ನ ಬಗ್ಗೆ ಮಾತ್ರವೇ ಆಲೋಚಿಸುತ್ತಿದ್ದ ಅಜೀಮ್ ಬೋಳಾರ್ ಈಗ ಇನ್ನೊಬ್ಬರ ಬದುಕಿನ ಬಗ್ಗೆ ಆಲೋಚಿಸುವುದನ್ನೇ ತನ್ನ ಬದುಕಿನ ದಾರಿಯನ್ನಾಗಿಸಿಕೊಂಡಿದ್ದಾರೆ.
“ಅಜೀಮ್ ಬೋಳಾರ್ ಕಳೆದ ಹಲವು ವರ್ಷಗಳಿಂದ ನೂರಾರು ಜನರಿಗೆ ಕೌನ್ಸಿಲಿಂಗ್ ಮಾಡಿ ಅವರ ಬದುಕಲ್ಲಿ ಬೆಳಕು ತರುವುದರ ಜೊತೆಯಲ್ಲಿ ತಮ್ಮ ಬದುಕನ್ನೂ ಪುನಃ ಕಟ್ಟಿಕೊಳ್ಳುತ್ತಿದ್ದಾರೆ. ವಾರಕ್ಕೆ ಎರಡು ದಿನ ಅವರು ಅದಿತಿ ಟೆಕ್ನಾಲಾಜಿಸ್‌ನಲ್ಲಿ ಕನ್ಸಲ್ಟಂಟ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.”
– ಪಂಜು ಗಂಗೊಳ್ಳಿ





