Mysore
15
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ದಣಿವರಿಯದ ಜನಪದ ಕೋಗಿಲೆ ಡಾ.ಬಾನಂದೂರು ಕೆಂಪಯ್ಯ

banandooru kempayya

ಸಿ.ಎಂ. ನರಸಿಂಹ ಮೂರ್ತಿ, ಜನಪದ ಗಾಯಕ, ಚಾಮರಾಜನಗರ

ಎಲ್ಲೋ ಜೋಗಪ್ಪ ನಿನ್ನ ಅರಮನೆ…. ಎಂಬ ಜಾನಪದ ಗೀತೆಯನ್ನು ಕರ್ನಾಟಕದ ಉದ್ದಗಲಕ್ಕೂ ಹಾಡಿ ಕೋಟ್ಯಂತರ ಅಭಿಮಾನಿಗಳ ಮನತಣಿಸಿರುವ ರಾಮನಗರ ಜಿಲ್ಲೆಯ ಬಾನಂದೂರಿನ ದಲಿತ ಕೇರಿಯಲ್ಲಿ ಹುಟ್ಟಿದ ಕಂಚಿನ ಕಂಠ ಸಿರಿಯ ಜಾನಪದ ಕೋಗಿಲೆ ಡಾ.ಬಾನಂದೂರು ಕೆಂಪಯ್ಯ ಅವರು ಸೌಮ್ಯ ಸ್ವಭಾವದ ಸ್ನೇಹ ಜೀವಿ, ಹಾಸ್ಯ ಪ್ರಜ್ಞೆಯುಳ್ಳ ಹಸನ್ಮುಖಿ. ಅವರಿಗೆ ಈಗ ೭೫ ನೇ ವಸಂತದ ಸಂಭ್ರಮ. ಒಳ್ಳೆಯ ಶಾರೀರ, ಗಾಯನದಲ್ಲಿ ಮಾಧುರ್ಯ, ಭಾಷಾ ಬಳಕೆಯಲ್ಲಿ ಸ್ಪಷ್ಟತೆ, ಯಾವಾಗ ಸಿಕ್ಕಿದರೂ ಮುಗುಳ್ನಗುತ್ತಾ ಮಾತನಾಡಿಸಿ, ಧನಾತ್ಮಕ ವಿಷಯಗಳನ್ನು ಚರ್ಚಿಸುತ್ತಾ ಸುತ್ತಲಿನ ಪರಿಸರವನ್ನು ಉಲ್ಲಾಸದಾಯಕವಾಗಿಸುತ್ತಾರೆ. ಲೇಟ್ ವೆಂಕಟಯ್ಯ, ತಾಯಿ ಹುಚ್ಚಮ್ಮ ಅವರ ಮಗನಾಗಿ ೧೯೫೧ ಜೂನ್೧೪ರಂದು ಜಾನಪದ ಗಾಯಕರ ಮನೆತನದ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿದವರು ಕೆಂಪಯ್ಯ. ಹಸಿವು, ಅಸ್ಪೃಶ್ಯತೆ ಎಲ್ಲವನ್ನೂ ಉಂಡವರು. ಜೀವನೋಪಾಯಕ್ಕಾಗಿ ಆಕಾಶವಾಣಿಯಲ್ಲಿ ಕೆಲಸ ಹಿಡಿದು ನಿರ್ಲಕ್ಷ್ಯಕ್ಕೆ ಒಳಗಾಗಿ ಮೂಲೆ ಗುಂಪಾಗಿದ್ದ ಜಾನಪದ ಕಲೆ ಮತ್ತು ಗ್ರಾಮೀಣ ಜಾನಪದ ಪ್ರತಿಭೆಗಳನ್ನು ಆಕಾಶವಾಣಿಯ ಮೂಲಕ ಪರಿಚಯಿಸುವ ಅತ್ಯುತ್ತಮ ಸೇವೆ ಮಾಡಿದ ಬಾನಂದೂರು ಕೆಂಪಯ್ಯ ಅವರು ಜನರ ಕಿವಿಗೆ ಇಂಪನ್ನು, ತನುವಿಗೆ ತಂಪನ್ನು ಎರೆದವರು.

ಜನಪದ ವಾದ್ಯ ಸಂಗೀತವನ್ನು, ವಿಶೇಷವಾಗಿ ಚರ್ಮವಾದ್ಯ, ತಂತಿ ವಾದ್ಯ, ಹಲಗಿ, ಕರಡಿ ಮಜಲು ಮುಂತಾದ ಜಾನಪದ ವಾದ್ಯಗಳನ್ನು ನುಡಿಸುವ ಜನಪದರನ್ನು ಹುಡುಕಿ ಆಕಾಶವಾಣಿಗೆ ಕರೆತಂದರು. ಮರೆತೇ ಹೋಗಿದ್ದ ಪುರಾತನ ಜಾನಪದ ಚರ್ಮ ವಾದ್ಯವಾದ ಜಗ್ಗಲಿಗೆಯನ್ನು ಸಂಶೋಧನೆ ಮಾಡಿ ಹೊರ ತಂದರು. ಈ ಕೆಲವು ಪ್ರಕಾರಗಳು ಅಲ್ಲಿಯವರೆಗೆ ಹೊಸ ಪ್ರಪಂಚಕ್ಕೆ ತಿಳಿದೇ ಇರಲಿಲ್ಲ ಎನ್ನಬಹುದು.

ಅವುಗಳನ್ನು ಪರಿಚಯಿಸಿದ ಕೀರ್ತಿ ಬಾನಂದೂರರಿಗೆ ಸಲ್ಲುತ್ತದೆ. ಬಿದಿರು ನಾನಾರಿಗಲ್ಲವಾದವಳು, ಚೆಲ್ಲಿದರು ಮಲ್ಲಿಗೆಯ, ತಿಂಗಾಳು ಮುಳುಗಿದವೋ, ಮೊಗ್ಗಾಗಿ ಬಾರೋ ತುರುಬಿಗೆ, ತನುವಿನೊಳಗನುದಿನವಿದ್ದು, ಕಿನ್ನೂರಿ ನುಡಿಸೋಣ ದನಿ ಚಂದವೋ, ಅಳಬ್ಯಾಡ ನನ ಕಂದ, ಇಂತಹ ಅನೇಕ ಹಾಡುಗಳನ್ನು ಬಾನಂದೂರರ ಕಂಠಸಿರಿಯಲ್ಲಿ ಕೇಳುವುದೇ ಒಂದು ಸೊಗಸು. ಅವರಿಗೆ ಅವರೇ ಸಾಟಿ.ತತ್ವ ಪದ ಹಾಗೂ ಜನಪದ ಗಾಯಕರಾಗಿ ಇದುವರೆಗೂ ಸಾವಿರಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಕರ್ನಾಟಕ ಸರ್ಕಾರದ ವತಿಯಿಂದ ಇಂಗ್ಲೆಂಡ್ ಮತ್ತು ಅಮೆರಿಕದಲ್ಲಿ ಜರುಗಿದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಜನಪದ ಗೀತೆಗಳನ್ನು ಹಾಡಿ ವಿದೇಶಿ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಚೆಂದುಳ್ಳಿ ಪದವ ಕಲಿಸವ್ವ, ಬಯಲು ಸೀಮೆಯ ಜನಪದ ಕತೆಗಳ ಸಂಕಲನ, ಮೊಗ್ಗಾಗಿ ಬಾರೋ ತುರುಬೀಗೆ.. ಜನಪ್ರಿಯ ಜನಪದ ಗೀತೆಗಳ ಸಂಗ್ರಹ, ಸುಡುಗಾಡು ಸಿದ್ಧರ ಜನಾಂಗೀಯ ಅಧ್ಯಯನ, ‘ನನ್ನ ಈ ನೆಲದಲ್ಲಿ’ ಎಂಬ ಕವನ ಸಂಕಲನವನ್ನು ಪ್ರಕಟಿಸಿದ್ದಾರೆ.ಬಾನಂದೂರು ಅವರಿಗೆ ನಾಡಚೇತನ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಜೀವ ಕಲಾಗಂಗಾ, ಬುದ್ಧ ಶಾಂತಿ, ಚುಂಚಶ್ರೀ, ಬೃಹದ್ದೇಶಿ, ಆರ್ಯಭಟ, ಜಾನಪದ ಕಳಶ, ಅಂಬೇಡ್ಕರ್ ಪ್ರಶಸ್ತಿ, ೧೯೮೫ರಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ ಅಲ್ಲದೆ ಕೋಲಾರ ಜಿಲ್ಲೆಯಲ್ಲಿ ಜನಪದ ಕೋಗಿಲೆ ಎಂಬ ಬಿರುದುಗಳು ಸಂದಿವೆ. ಜನಪದ ಪರಂಪರೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಜನಪದ ಸೊಗಡಿನ ಹಾಡುಗಳಿಂದ ಹೆಸರುಗಳಿಸಿರುವ ಡಾ. ಬಾನಂದೂರು ಕೆಂಪಯ್ಯ ಅವರಿಗೆ ಕೇಳುಗರ ಮನಸನ್ನು ಮೋಡಿಗೊಳಿಸುವ ಕಲಾವಂತಿಕೆ ಕರಗತವಾಗಿದೆ.

“ಕರ್ನಾಟಕ ರಾಜ್ಯ ಸಂವಿಧಾನ ಬಳಗವು ಜೂನ್ ೧೪ ರಂದು ಬೆಳಿಗ್ಗೆ ೧೦.೩೦ಕ್ಕೆ ಬೆಂಗಳೂರಿನ ವಸಂತನಗರದಲ್ಲಿರುವ ಡಾ. ಬಿ. ಆರ್. ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿರುವ ‘ದಣಿವರಿಯದ ಗಾನ ಕೋಗಿಲೆಗೆ ೭೫ರ ಸಂಭ್ರಮ’ ಎಂಬ ಕಾರ್ಯಕ್ರಮ ನಿಜಕ್ಕೂ ಅಭಿನಂದನೀಯ. ಕಳೆದೆರಡು ವರ್ಷಗಳಿಂದ ಅನಾರೋಗ್ಯಕ್ಕೆ ಈಡಾಗಿದ್ದ ಬಾನಂದೂರರು, ಈಗ ಚೇತರಿಸಿಕೊಂಡು ಲವಲವಿಕೆಯಿಂದ ಇದ್ದಾರೆ.ಈ ಅಪರೂಪದ ಜನಪದ ಗಾಯಕರತ್ನ ನೂರ್ಕಾಲ ಆರೋಗ್ಯವಂತರಾಗಿ ಹಾಡಿ ಆನಂದಿಸಲೆಂದು ಹಾರೈಸೋಣ”

Tags:
error: Content is protected !!