Mysore
27
broken clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಕುಷ್ಠರೋಗಿಗಳಿಗೆ ಒಂದು ಹಳ್ಳಿಯನ್ನೇ ಸೃಷ್ಟಿಸಿದ ಸುರೇಶ್ ಸೋನಿ!

ಪಂಜು ಗಂಗೊಳ್ಳಿ

ಪ್ರಕಾಶ್ ದೇಶಮುಖ್ ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ. ಚಿಕ್ಕವರಿರುವಾಗ ಅವರ ಮೈಮೇಲೆ ಅಲ್ಲಲ್ಲಿ ಬಿಳಿ ಕಲೆಗಳು ಕಾಣಿಸಿಕೊಂಡವು. ಅವರ ಮನೆಯವರು ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಆದರೆ, ಒಮ್ಮೆ ಅವರನ್ನು ವೈದ್ಯರ ಬಳಿ ಕರೆದುಕೊಂಡು ಹೋಗಿ ತೋರಿಸಿದಾಗ ಅವರಿಗೆ ಕುಷ್ಠರೋಗ ತಗುಲಿರುವುದು ತಿಳಿಯಿತು. ಆದರೆ, ಅದಾಗಲೇ ಪ್ರಕಾಶ್‌ಗೆ ಮದುವೆಯಾಗಿ ಮಕ್ಕಳು ಹುಟ್ಟಿದ್ದವು. ಅವರ ಹೆಂಡತಿಗೆ ವಿಷಯ ತಿಳಿಯುತ್ತಲೇ ಆಕೆ ಅವರನ್ನು ಬಿಟ್ಟು ಹೋದಳು. ಕುಟುಂಬಿಕರು, ಸಂಬಂಧಿಕರು ಎಷ್ಟೇ ಪ್ರಯತ್ನ ಪಟ್ಟರೂ ಆಕೆ ವಾಪಸ್ ಬರಲಿಲ್ಲ. ಪ್ರಕಾಶ್ ದೇಶಮುಖ್‌ರ ಸಹೋದರರೂ ಅವರನ್ನು ದೂರ ಮಾಡಿದರು. ಆಗ ಪ್ರಕಾಶ್ ತನ್ನ ಸಾಮಾನು ಸರಂಜಾಮು ಕಟ್ಟಿಕೊಂಡು, ಮನೆ ಬಿಟ್ಟು, ಗುಜರಾತಿಗೆ ಹೋಗಿ, ಸಹಯೋಗ್ ಎಂಬ ಹಳ್ಳಿಯನ್ನು ಸೇರಿಕೊಂಡರು.

ಕುಷ್ಠ ರೋಗಿಗಳು, ಹುಚ್ಚರು, ಬುದ್ಧಿಮಾಂದ್ಯರು ಮೊದಲಾದವರನ್ನು ಈಗಲೂ ನಮ್ಮ ಸಮಾಜ ಎಷ್ಟು ತಿರಸ್ಕಾರದಿಂದ ನೋಡುತ್ತದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಅಂತಹದರಲ್ಲಿ, ಇವರನ್ನು ಗೌರವಯುತವಾಗಿ ನೋಡಿಕೊಳ್ಳುವ ಹಳ್ಳಿಯೊಂದು ಭಾರತದಲ್ಲಿದೆ ಎಂದರೆ ನಂಬಲಾದೀತೇ? ಗುಜರಾತಿನ ಸಬರಕಾಂತಾ ಜಿಲ್ಲೆಯ ಸಹಯೋಗ್ ಎಂಬುದು ಅಂತಹ ಒಂದು ಹಳ್ಳಿ. ಕುಷ್ಠ ರೋಗಿಗಳಿಗಾಗಿಯೇ ನಿರ್ಮಾಣಗೊಂಡ ಈ ಹಳ್ಳಿಯಲ್ಲಿ ಅವರನ್ನು ಪ್ರೀತಿ, ಗೌರವಪೂರ್ವಕವಾಗಿ ನೋಡಿಕೊಂಡು ಆರೈಕೆ ಮಾಡಲಾಗುತ್ತದೆ. ಅವರ ಊಟ, ವಸತಿ ಹಾಗೂ ವೈದ್ಯಕೀಯ ಅಗತ್ಯಗಳನ್ನು ನೋಡಿಕೊಳ್ಳುವ ಸಲುವಾಗಿಯೇ ಸಿಬ್ಬಂದಿಗಳಿದ್ದಾರೆ. ಇಲ್ಲಿ ಯಾರೂ ಇವರನ್ನು ಪೂರ್ವಗ್ರಹದಿಂದ ನೋಡುವುದಿಲ್ಲ. ೧೯೮೮ರಲ್ಲಿ ‘ಸಹಯೋಗ್ ಕುಷ್ಠ ಯಜ್ಞ ಟ್ರಸ್ಟ್’ ಎಂಬ ಸಾಮಾಜಿಕ ಸಂಘಟನೆ ಕುಷ್ಠ ರೋಗಿಗಳ ಆರೈಕೆಗಾಗಿಯೇ ಈ ಹಳ್ಳಿಯನ್ನು ನಿರ್ಮಿಸಿದೆ ಎಂಬುದು ಒಂದು ಕುತೂಹಲದ ಸಂಗತಿ.

ಸಹಯೋಗ್ ೩೦ ಎಕರೆಯಷ್ಟು ವಿಶಾಲವಾಗಿದೆ. ಒಂದು ಮಾದರಿ ಗ್ರಾಮ ಸಾಮಾನ್ಯವಾಗಿ ಹೇಗಿರುತ್ತದೆ? ಮನೆಗಳು, ಧಾರ್ಮಿಕ ಸ್ಥಳಗಳು, ಶಾಲೆ, ಆರೋಗ್ಯ ಘಟಕ, ರಸ್ತೆ, ಕಿರಾಣಿ ಅಂಗಡಿಗಳು ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಅಲ್ಲವೇ? ಇವೆಲ್ಲವೂ ಈ ಸಹಯೋಗ್ ಗ್ರಾಮದಲ್ಲಿವೆ. ಇಷ್ಟೇ ಅಲ್ಲ, ಒಂದು ಚುನಾವಣಾ ಬೂತ್ ಕೂಡ ಇದೆ. ಅವೆಲ್ಲವೂ ಕುಷ್ಠರೋಗಿಗಳಿಗಾಗಿಯೇ ನಿರ್ಮಿಸಲ್ಪಟ್ಟವು. ಏಕೆಂದರೆ, ಈ ಹಳ್ಳಿಯೇ ಕುಷ್ಠರೋಗಿಗಳಿಗಾಗಿ ನಿರ್ಮಿಸಲ್ಪಟ್ಟುದುದು! ೪೦೦ಕ್ಕೂ ಹೆಚ್ಚು ಕುಷ್ಠರೋಗಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲರೂ ಒಂದು ದೊಡ್ಡ ಕೂಡು ಕುಟುಂಬದಂತೆ ಇಲ್ಲಿ ಬದುಕುತ್ತಾರೆ. ತಮ್ಮ ಅಳಿದುಳಿದ ಬದುಕನ್ನು ಎಷ್ಟು ಸಾಧ್ಯವೋ ಅಷ್ಟು ನೆಮ್ಮದಿಯಿಂದ ಕಳೆಯಲು ಇಲ್ಲಿ ವ್ಯವಸ್ಥೆಯಿದೆ. ಇಡೀ ಹಳ್ಳಿಯನ್ನು ಅತ್ಯಂತ ಸ್ವಚ್ಛವಾಗಿ ಇರಿಸಿಕೊಳ್ಳಲಾಗಿದೆ. ಪ್ರತೀ ಮನೆಯೆದುರೂ ಒಂದು ತುಳಸಿ ಗಿಡವಿದ್ದು, ಪ್ರತೀದಿನ ಈ ರೋಗಿಗಳು ತಮ್ಮನ್ನು ನೋಡಿಕೊಳ್ಳುವವರನ್ನು ದೇವರು ಚೆನ್ನಾಗಿಟ್ಟಿರಲಿ ಎಂದು ಹರಸುತ್ತ ಪ್ರಾರ್ಥನೆ ಸಲ್ಲಿಸುತ್ತಾರೆ.

ಇಲ್ಲಿರುವ ಕುಷ್ಠ ರೋಗಿಗಳಲ್ಲಿ ಸುಮಾರು ೩೦%ರಷ್ಟು ರೋಗಿಗಳು ಹಾಸಿಗೆಯಿಂದ ಏಳಲಾಗದವರು. ಸುಮಾರು ೪೦-೪೫ ರಷ್ಟಿರುವ ಸಹಯೋಗ್‌ನ ಸಿಬ್ಬಂದಿ ಪ್ರತಿದಿನ ಇವರ ಮನೆಗಳಿಗೆ ಬಂದು ಚಹ, ತಿಂಡಿ, ಊಟ ನೀಡುತ್ತಾರೆ. ಮಹಾರಾಷ್ಟ್ರ, ಮಧ್ಯಪ್ರದೇಶ, ಒಡಿಶಾ, ಪಶ್ಚಿಮಬಂಗಾಳ, ತಮಿಳುನಾಡು ಮೊದಲಾದ ರಾಜ್ಯಗಳಿಂದ ಕುಷ್ಠ ರೋಗಿಗಳು ಇಲ್ಲಿಗೆ ಬಂದು ಆಶ್ರಯ ಪಡೆದಿದ್ದಾರೆ. ಅತೀ ಹೆಚ್ಚಿನ ಸಂಖ್ಯೆಯ ರೋಗಿಗಳು ಮಹಾರಾಷ್ಟ್ರದವರು. ಇವರಲ್ಲದೆ ದೇಶದ ಬೇರೆ ಬೇರೆ ಭಾಗಗಳಿಂದಲೂ ಕುಷ್ಠರೋಗಿಗಳು ಈ ಗ್ರಾಮಕ್ಕೆ ಬರುತ್ತಾರೆ. ಹಲವರು ಚಿಕಿತ್ಸೆ ಪಡೆದು ತಮ್ಮ ತಮ್ಮ ಊರುಗಳಿಗೆ ಹಿಂತಿರುಗಿದರೆ, ಇನ್ನುಳಿದವರು ಖಾಯಂ ಆಗಿ ಇಲ್ಲಿಯೇ ಉಳಿಯುತ್ತಾರೆ. ಹೀಗೆ ಉಳಿದವರಲ್ಲಿ ಗುಣವಾದವರಲ್ಲಿ ಕೆಲವರು ತಮ್ಮ ಮನೆಗಳಿಗೆ ವಾಪಸಾಗುತ್ತಾರೆ. ಇಲ್ಲವಾದರೆ ಕೊನೆಯ ಉಸಿರೆಳೆಯುವವರೆಗೆ ಇಲ್ಲಿಯೇ ಇರುತ್ತಾರೆ. ಕುಷ್ಠರೋಗಿಗಳ ಸುಮಾರು ಇನ್ನೂರಕ್ಕೂ ಹೆಚ್ಚು ಮಕ್ಕಳೂ ಇಲ್ಲಿದ್ದಾರೆ. ಕುಷ್ಠರೋಗಿಗಳು ಮತ್ತು ಅವರ ಮಕ್ಕಳಲ್ಲದೆ, ಸುಮಾರು ೨೦೦ ಜನ ಅಂಗವಿಕಲ ಪುರುಷರು ಹಾಗೂ ೧೫೦ ಅಂಗವಿಕಲ ಮಹಿಳೆಯರಿಗೂ ಸಹಯೋಗ್ ಗ್ರಾಮ ಆಶ್ರಯ ನೀಡಿದೆ.

ಸುರೇಶ್ ಹರಿಲಾಲ್ ಸೋನಿ ಒಬ್ಬ ವಿಜ್ಞಾನ ಪದವೀಧರ. ಬರೋಡಾದ ಎಂ.ಎಸ್. ವಿಶ್ವವಿದ್ಯಾಲಯದಲ್ಲಿ ಅವರು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ, ನಂತರ ಗಣಿತ ಲೆಕ್ಚರರ್ ಆಗಿ ತಮ್ಮ ಔದ್ಯೋಗಿಕ ಬದುಕು ಪ್ರಾರಂಭಿಸಿದರು. ಆದರೆ, ಸಮಾಜದಲ್ಲಿನ ಸಂತ್ರಸ್ತರ ಬಗ್ಗೆ ಯಾವಾಗಲೂ ಆಲೋಚಿಸುತ್ತಿದ್ದ ಅವರು, ೭೦ರ ದಶಕದಲ್ಲಿ ಬರೋಡಾದಿಂದ ೧೫ ಕಿ.ಮೀ. ದೂರದಲ್ಲಿರುವ ಸಿಂಗ್ರೋಟ್ ಎಂಬಲ್ಲಿ ಕುಷ್ಠ ರೋಗಿಗಳಿಗಾಗಿ ‘ಶ್ರಮ ಮಂದಿರ ಟ್ರಸ್ಟ್’ ಎಂಬ ಸಂಸ್ಥೆಯನ್ನು ನಡೆಸುತ್ತಿದ್ದರು. ೧೯೭೮ರ ಹೊತ್ತಲ್ಲಿ ಅಲ್ಲಿ ೪೦೦ಕ್ಕೂ ಹೆಚ್ಚು ಕುಷ್ಠರೋಗಿಗಳು ಆಶ್ರಯ ಪಡೆದಿದ್ದರು. ಹರೀಶ್ ಸೋನಿ ಮುಂದೆ ತಮ್ಮ ಬದುಕನ್ನು ಕುಷ್ಠರೋಗಿಗಳ ಸೇವೆಯಲ್ಲಿ ಕಳೆಯಲು ನಿರ್ಧರಿಸಿ, ತಮ್ಮ ಪ್ರೊಫೆಸರ್ ಉದ್ಯೋಗವನ್ನು ತ್ಯಜಿಸಿದರು. ತಮ್ಮ ಮದುವೆಯ ಸಮಯದಲ್ಲಿ ಅವರು ತಮ್ಮ ಭಾವೀ ಪತ್ನಿಗೆ ತಾವು ಬದುಕನ್ನು ಕುಷ್ಠರೋಗಿಗಳ ಸೇವೆಗೆ ಮುಡುಪಿಟ್ಟಿರುವುದಾಗಿ ತಿಳಿಸಿ, ತಮ್ಮನ್ನು ಮದುವೆಯಾಗ ಬೇಕಿದ್ದರೆ ಅವರು ೧೭ ಷರತ್ತುಗಳನ್ನು ವಿಽಸಿದ್ದರು. ಆಕೆ ಆ ಷರತ್ತುಗಳಿಗೆ ಒಪ್ಪಿದ ಮೇಲೆ ಅವರ ಮದುವೆ ನಡೆಯಿತು. ಮದುವೆಯ ನಂತರ ಇಂದಿರಾ ಕೂಡ ಗಂಡನಿಗೆ ಬೆಂಬಲವಾಗಿ ನಿಂತರು.

ಮುಂದಿನ ಒಂದು ದಶಕ ಕಾಲ ಸುರೇಶ್ ಸೋನಿ ಮತ್ತು ಇಂದಿರಾ ಸೋನಿ ‘ಶ್ರಮ ಮಂದಿರ ಟ್ರಸ್ಟ್’ ಅನ್ನು ನಡೆಸಿ, ಇತರ ಟ್ರಸ್ಟಿಗಳೊಂದಿಗೆ ಭಿನ್ನಾಭಿಪ್ರಾಯ ಹುಟ್ಟಿದ ಕಾರಣಕ್ಕೆ ಅದರಿಂದ ಹೊರ ಬಂದರು. ಹಾಗೆ ಹೊರ ಬಂದ ಅವರು ೧೯೮೮ರ ಸೆಪ್ಟೆಂಬರ್ ೧೪ರಂದು ಗಣೇಶ ಚತುರ್ಥಿಯ ದಿನ ‘ಸಹಯೋಗ್ ಕುಷ್ಠ ಯಜ್ಞ ಟ್ರಸ್ಟ್’ ಅನ್ನು ಹುಟ್ಟು ಹಾಕಿ, ಅದರ ಮೂಲಕ ಸಹಯೋಗ್ ಗ್ರಾಮವನ್ನು ನಡೆಸುತ್ತಿದ್ದಾರೆ. ಇದಕ್ಕೆ ಜಮೀನನ್ನು ದಾನ ನೀಡಿದವರು ವಿಜಾಪುರದ ಸರ್ವೋದಯ ಆಶ್ರಮದ ರಾಮು ಎಂಬವರು. ಸೋನಿ ದಂಪತಿಗಳಿಗೆ ದೀಪಕ್ ಎಂಬ ಒಬ್ಬ ಮಗ ಮತ್ತು ಪರುಲ್ ಎಂಬ ಮಗಳಿದ್ದಾರೆ. ಇಬ್ಬರಿಗೂ ಮದುವೆಯಾಗಿದ್ದು, ದೀಪಕ್ ಜೊತೆ ಆತನ ಹೆಂಡತಿ ಮತ್ತು ಪರುಲ್ ಜೊತೆ ಆಕೆ ಪತಿಯೂ ಸೋನಿ ದಂಪತಿಗಳೊಂದಿಗೆ ಕುಷ್ಠರೋಗಿಗಳ ಸೇವೆ ಮಾಡುತ್ತಿದ್ದಾರೆ. ಯಾವತ್ತೂ ಖಾದಿ ಕುರ್ತಾ ಮತ್ತು ಅರ್ಧ ಪ್ಯಾಂಟ್ ಧರಿಸುವ ಸುರೇಶ್ ಸೋನಿ ಆಶ್ರಮ ಬಿಟ್ಟು ಹೊರಗೆ ಹೋಗುವುದಿಲ್ಲ. ಆದರೂ, ಈ ವರ್ಷ ಪದ್ಮಶ್ರೀ ಪ್ರಶಸ್ತಿ ಅವರನ್ನು ಹುಡುಕಿಕೊಂಡು ಬಂದಿತು.

” ಸಹಯೋಗ್ ೩೦ ಎಕರೆಯಷ್ಟು ವಿಶಾಲವಾಗಿದೆ. ಮನೆಗಳು, ಧಾರ್ಮಿಕ ಸ್ಥಳಗಳು, ಶಾಲೆ, ಆರೋಗ್ಯ ಘಟಕ, ರಸ್ತೆ, ಕಿರಾಣಿ ಅಂಗಡಿಗಳು ಇತ್ಯಾದಿಗಳನ್ನು ಒಳಗೊಂಡಿದೆ. ಇಷ್ಟೇ ಅಲ್ಲ, ಒಂದು ಚುನಾವಣಾ ಬೂತ್ ಕೂಡಾ ಇದೆ. ಅವೆಲ್ಲವೂ ಕುಷ್ಠರೋಗಿಗಳಿಗಾಗಿಯೇ ನಿರ್ಮಿಸಲ್ಪಟ್ಟವುಗಳು. ಏಕೆಂದರೆ, ಈ ಹಳ್ಳಿಯೇ ಕುಷ್ಠರೋಗಿಗಳಿಗಾಗಿ ನಿರ್ಮಿಸಲ್ಪಟ್ಟುದುದು! ೪೦೦ಕ್ಕೂ ಹೆಚ್ಚು ಕುಷ್ಠರೋಗಿಗಳು ಇಲ್ಲಿ ಆಶ್ರಯ ಪಡೆದಿದ್ದಾರೆ. ಅವರೆಲ್ಲರೂ ಒಂದು ದೊಡ್ಡ ಕೂಡು ಕುಟುಂಬದಂತೆ ಇಲ್ಲಿ ಬದುಕುತ್ತಾರೆ. ತಮ್ಮ ಅಳಿದುಳಿದ ಬದುಕನ್ನು ಎಷ್ಟು ಸಾಧ್ಯವೋ ಅಷ್ಟು ನೆಮ್ಮದಿಯಿಂದ ಕಳೆಯಲು ಇಲ್ಲಿ ವ್ಯವಸ್ಥೆಯಿದೆ. ಇಡೀ ಹಳ್ಳಿಯನ್ನು ಅತ್ಯಂತ ಸ್ವಚ್ಛವಾಗಿ ಇರಿಸಿಕೊಳ್ಳಲಾಗಿದೆ.”

Tags:
error: Content is protected !!