ಬೆಂಗಳೂರು ಡೈರಿ
ಆರ್.ಟಿ.ವಿಠ್ಠಲಮೂರ್ತಿ
ಪ್ರೊ.ಎಂ.ಡಿ.ನಂಜುಂಡಸ್ವಾಮಿ ಒಮ್ಮೆ ಬೆಂಗಳೂರಿನ ಪ್ರೆಸ್ ಕ್ಲಬ್ಗೆ ಬಂದರು. ಹೀಗೆ ಬಂದವರು ತಾವು ಕರೆದಿದ್ದ ಪತ್ರಿಕಾಗೋಷ್ಠಿಯನ್ನು ನಿಗದಿತ ಅವಧಿಯಲ್ಲಿ ಮುಗಿಸಿದರು. ಅವತ್ತು ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದು ಗ್ಯಾಟ್ ಒಪ್ಪಂದದ ಬಗ್ಗೆ.ಅಷ್ಟೊತ್ತಿಗಾಗಲೇ ದೇಶದ ಪ್ರಧಾನಿಯಾಗಿದ್ದ ಪಿ.ವಿ.ನರಸಿಂಹರಾಯರು ಸಹಿ ಹಾಕಿದ ಗ್ಯಾಟ್ ಒಪ್ಪಂದ ಮುಂದೆ ಹೇಗೆ ಅಪಾಯಕಾರಿಯಾಗಲಿದೆ ಎಂಬುದನ್ನು ಅವರು ಅಂದಿನ ಪತ್ರಿಕಾಗೋಷ್ಠಿಯಲ್ಲಿ ಸೂಚ್ಯವಾಗಿ ಹೇಳಿದ್ದರು.
ಇದಾದ ನಂತರ ಕುತೂಹಲ ತಣಿಯದ ಕೆಲ ಪತ್ರಕರ್ತರು ಗ್ಯಾಟ್ ಒಪ್ಪಂದದ ಬಗ್ಗೆ, ಅದರ ಪರಿಣಾಮಗಳ ಬಗ್ಗೆ ಪ್ರಶ್ನಿಸಿದಾಗ ಫ್ರೊಫೆಸರ್ ವಿವರವಾಗಿ ಹೇಳುತ್ತಾ ಹೋದರು
‘ಈ ಗ್ಯಾಟ್ ಒಪ್ಪಂದದ ಪರಿಣಾಮಗಳು ಹೇಗಿರುತ್ತವೆ ಗೊತ್ತೇನ್ರೀ?ಇದು ಇಡೀ ಜಗತ್ತೇ ಒಂದು ಮನೆಯಂತಾಗಿ ವ್ಯಾಪಾರಕ್ಕೆ ಅನುಕೂಲವಾಗುವ ಒಪ್ಪಂದ. ಇದಕ್ಕೆ ಜಾಗತಿಕ ವ್ಯಾಪಾರ ಒಪ್ಪಂದ ಎನ್ನುತ್ತಾರೆ. ಕೇಳುವವರಿಗೆ ಇನ್ನು ತಮಗೆ ಯಾವುದಕ್ಕೂ ಕೊರತೆಯಿಲ್ಲ ಅನ್ನಿಸಬಹುದು. ಆದರೆ ಅದರಿಂದ ದೇಶ ಮುಂದೆ ದುಸ್ಥಿತಿಗೆ ತಲುಪ ಲಿದೆ. ಅದೂ ಎಂತಹ ದುಸ್ಥಿತಿ ಅನ್ನುತ್ತೀರಿ? ಒಂದು ಸಲ ಆಳಕ್ಕೆ ಬಿದ್ದರೆ ಮತ್ತೆ ಮೇಲೇಳಲಾಗದಷ್ಟು ದಯನೀಯ ಸ್ಥಿತಿಗೆ ದೇಶ ತಲುಪಿರುತ್ತದೆ.
ಅಂದ ಹಾಗೆ ಇಂತಹ ಒಪ್ಪಂದ ಅಮೆರಿಕ, ಚೀನಾದಂತಹ ಬಲಿಷ್ಠ ರಾಷ್ಟ್ರಗಳಿಗೆ, ಸಮೃದ್ಧ ಸಂಪನ್ಮೂಲವನ್ನಿಟ್ಟುಕೊಂಡು ಆಟ ಆಡುತ್ತಿರುವ ದೇಶಗಳಿಗೆ ಅನುಕೂಲವಾಗುವುದು ಹೇಗೆ ನಿಜವೋ, ಭಾರತದಂತಹ ಅಭಿವೃದ್ಧಿಶೀಲ ದೇಶಗಳಿಗೆ ಹಾನಿಯಾಗುವುದೂ ಅಷ್ಟೇ ನಿಜ. ಯಾಕೆಂದರೆ ಮನುಷ್ಯರ ನಡುವೆ ಅಪಾರ ಅಸಮಾನತೆ ಇರುವ ನೆಲ ಇದು.
ಇದು ಕೃಷಿ ಕ್ಷೇತ್ರದ ಮೇಲಷ್ಟೇ ಅಲ್ಲ, ಯಾವ್ಯಾವ ಕ್ಷೇತ್ರಗಳ ಮೇಲೆ ಪರಿಣಾಮ ಬೀರಲಿದೆ ಅಂತ ಮುಂದೆ ನಿಮಗೇ ಅರ್ಥವಾಗುವ ಕಾಲ ಬರುತ್ತದೆ ಬಿಡಿ. ಆದರೆ ಇಂತಹ ಜಾಗತಿಕ ವ್ಯಾಪಾರ ಒಪ್ಪಂದದ ಹಿಂದೆ ವಿಶ್ವ ಬ್ಯಾಂಕಿನ ಸೀಕ್ರೆಟ್ ಅಜೆಂಡಾ ಇದೆ. ಅದಕ್ಕೆ ನಮ್ಮಂತಹ ದೇಶಗಳನ್ನು ನುಂಗಿ ಹಾಕುವ ಗುರಿಯಿದೆ. ನಮಗೆ ಅರ್ಥವಾಗಬೇಕಾದ ಅಪಾಯ ಇದು.
ನಿಮಗೆ ಸರಳವಾಗಿ ಹೇಳುತ್ತೇನೆ. ಇವತ್ತು ಕರ್ನಾಟಕದಲ್ಲಿ ಬಹುತೇಕ ಸರ್ಕಾರಿ ಶಾಲೆಗಳ ಪ್ರಾಬಲ್ಯವಿದೆ. ಹೀಗಾಗಿ ನೀವು ನಿಮ್ಮ ಮಗುವಿಗೆ ಸೀಟು ಪಡೆಯಲು ಕಷ್ಟಪಡಬೇಕಾಗಿಲ್ಲ. ತೀರಾ ಅನಿವಾರ್ಯ ಸನ್ನಿವೇಶಗಳಲ್ಲಿ ನಿಮ್ಮ ಕ್ಷೇತ್ರದ ಪ್ರಭಾವಿಗಳಿಗೋ ಎಮ್ಮೆಲ್ಲೆಗೋ ಹೇಳಿ ಜಾಗ ಗಿಟ್ಟಿಸಬಹುದು. ಆದರೆ ಜಾಗತಿಕ ವ್ಯಾಪಾರ ಒಪ್ಪಂದ ದೂರ ಗಾಮಿ ನೆಲೆಯಲ್ಲಿ ಇದನ್ನು ಅಸಾಧ್ಯವಾಗಿಸುತ್ತದೆ.
ಹೇಗೆಂದರೆ, ಮೊದಲನೆಯದಾಗಿ ಸರ್ಕಾರಿ ಶಾಲೆಗಳಲ್ಲಿ ಓದುವುದು ದಂಡ ಅನ್ನುವ ಭಾವನೆಯನ್ನು ಅದು ನಿಮ್ಮಲ್ಲಿ ಬಿತ್ತುತ್ತದೆ. ಅದೇ ಕಾಲಕ್ಕೆ ಶಿಕ್ಷಣದ ಖಾಸಗೀಕರಣ ನಡೆಯುತ್ತದೆ. ಇದು ಯಾವ ಮಟ್ಟಿಗಿರುತ್ತದೆ ಎಂದರೆ ನೀವು ನಿಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುವುದೇ ಹಿರಿಮೆ ಎಂದು ಭಾವಿಸುತ್ತೀರಿ.
ಆರ್ಥಿಕವಾಗಿ ಕಷ್ಟದಲ್ಲಿರುವವರು ಸರ್ಕಾರಿ ಶಾಲೆಗಳನ್ನು ಅವಲಂಬಿಸಬಹುದು. ಆದರೆ ಹೀಗೆ ಕಷ್ಟದಲ್ಲಿರುವ ಬಹುತೇಕರೂ ಖಾಸಗಿ ಶಾಲೆಗಳ ಮೇಲೆ ಕಣ್ಣಿಟ್ಟು ಕೂರುತ್ತಾರೆ. ಇದೇ ರೀತಿ ಆರೋಗ್ಯ ವ್ಯವಸ್ಥೆಯಲ್ಲೂ ಖಾಸಗಿಯವರ ಕೈ ಮೇಲಾಗಲಿದೆ. ಅರ್ಥಾತ್, ನೀವು ನಿಮ್ಮ ಮಕ್ಕಳನ್ನು ಓದಿಸಲು, ಕುಟುಂಬದವರ ಆರೋಗ್ಯ ಕಾಪಾಡಲು ಖಾಸಗಿಯವರನ್ನು ಅವಲಂಬಿಸುತ್ತೀರಿ ಮತ್ತು ಇದಕ್ಕಾಗಿ ಗಾಣದೆತ್ತಿಗಿಂತ ಕಡೆಯಾಗಿ ದುಡಿಯುವ ಒತ್ತಡಕ್ಕೆ ಸಿಲುಕುತ್ತೀರಿ. ಆಗ ನಿಮ್ಮದು ಅಕ್ಷರಶಃ ಪ್ರಾಣಿಗಳ ಬದುಕು.
ಹೀಗೆ ಒತ್ತಡಕ್ಕೆ ಸಿಲುಕಿದ ಸಂದರ್ಭದಲ್ಲಿ ನಿಮಗೆ ಖಾಸಗಿಯವರೂ ನಮ್ಮವರೇ ಅನ್ನಿಸಬಹುದು. ಆದರೆ ಇನ್ನಷ್ಟು ಕಾಲ ಹೋದ ಮೇಲೆ ಜಾಗತಿಕ ಶಕ್ತಿಗಳು ಹೇಗೆ ನಮ್ಮವರ ರೂಪದಲ್ಲೇ ನಮ್ಮನ್ನು ಆಳುತ್ತಿವೆ ಎಂಬುದು ಗೊತ್ತಾಗುತ್ತದೆ ಮತ್ತು ನಮ್ಮವರೇ ಅವರ ಕೈ ಕೆಳಗಿರಲು ಎಷ್ಟು ಹಪಾಹಪಿಸುತ್ತಾರೆ ಅನ್ನುವುದು ಅರ್ಥವಾಗುತ್ತದೆ.
ಎಲ್ಲಕ್ಕಿಂತ ಮುಖ್ಯವಾಗಿ ವ್ಯವಸ್ಥೆ ಇಂತಹ ನೆಲೆಯನ್ನು ತಲುಪಲು ಪೂರಕವಾಗಿ ನಮ್ಮ ಜನರೇ ತುಂಬು ಸಹಕಾರ ನೀಡುತ್ತಾರೆ. ಯಾಕೆಂದರೆ ಅವರನ್ನು ಜಾತಿ, ಧರ್ಮ, ರಂಜನೆಯ ಹೆಸರಿನಲ್ಲಿ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕೆಲಸವಾಗುತ್ತದೆ.
ಹೀಗೆ ಮುಂದಿನ ಕೆಲವೇ ದಶಕಗಳಲ್ಲಿ ಈ ದೇಶ ತಲುಪುವ ಸ್ಥಿತಿ ಇದು. ನಮ್ಮ ನೈತಿಕ ಕೇಂದ್ರಗಳು, ಆಡಳಿತಗಾರರು, ಹೋರಾಟಗಾರರು ಈ ಅಪಾಯದ ಬಗ್ಗೆ ಎಚ್ಚರಗೊಳ್ಳಬೇಕು. ಆದರೆ ನೋವಿನ ಸಂಗತಿ ಎಂದರೆ, ಇವರ ಪೈಕಿ ಬಹುತೇಕರಿಗೆ ಜಾಗತಿಕ ವ್ಯಾಪಾರ ಒಪ್ಪಂದದ ಜಾಲ ಏನುಅಂತ ಅರ್ಥವೇ ಆಗುತ್ತಿಲ್ಲ. ಅವರಿಗೆ ಅರ್ಥವಾಗುವ ಕಾಲಕ್ಕೆ ಎಲ್ಲವೂ ಕೈ ಮೀರಿ ಅಪಾಯದ ಕಂದಕದಲ್ಲಿ ಬದುಕುವುದೇ ಜನರಿಗೆ ಅನಿವಾರ್ಯವಾಗಿ ಹೋಗಿರುತ್ತದೆ.
ನೀವೇ ಗಮನಿಸಿಕೊಳ್ಳಿ ನೀವು ಚಿಕ್ಕವರಾಗಿದ್ದಾಗ ನಿಮ್ಮನ್ನು ಎಚ್ಚರಿ ಸುವ ನೈತಿಕ ಕೇಂದ್ರಗಳು ನಿಮ್ಮ ಸುತ್ತಲೇ ಇದ್ದವು.
ಅವು ನಿಮ್ಮನ್ನು ಕಾಲ ಕಾಲಕ್ಕೆ ಎಚ್ಚರಿಸುತ್ತಿದ್ದವು. ನೀವು ಎಲ್ಲಿ ಎಡವು ತ್ತಿದ್ದೀರಿ? ಎಲ್ಲಿ ಸರಿಪಡಿಸಿಕೊಳ್ಳಬೇಕು? ಎಂದು ಹೇಳುತ್ತಿದ್ದವು. ಆದರೆ ಜಾಗತಿಕ ವ್ಯಾಪಾರ ಒಪ್ಪಂದದ ದೊಡ್ಡ ಅಪಾಯವೆಂದರೆ, ಅದು ಮನುಷ್ಯನಿಗೆ ದುಡ್ಡಿಲ್ಲದೆ ಬದುಕೇ ಇಲ್ಲ ಎಂಬ ಭಾವನೆಯನ್ನು ಮೂಡಿಸುವುದು.
ಅಂದರೆ ನೀವು ಮಾತ್ರವಲ್ಲ, ನಿಮ್ಮ ಸುತ್ತ ಇರುವ ನೈತಿಕ ಕೇಂದ್ರಗಳೂ ದುಡ್ಡಿನ ಮೇಲೆ ಕಣ್ಣಿಟ್ಟು ಕೂರುವ, ಅದಕ್ಕಾಗಿ ಸಂಘರ್ಷ ನಡೆಸುವ ಸ್ಥಿತಿಗೆ ತಲುಪುತ್ತವೆ. ಹೀಗಾಗಿ ನೀವು ಹೇಗೆ ಬದುಕಬೇಕು ಅಂತ ಹೇಳಿ ಕೊಡುವ ಆಸಕ್ತಿ ಅವುಗಳಲ್ಲೂ ಇರುವುದಿಲ್ಲ. ಹಾಗೆಯೇ ಅವರು ದುಡ್ಡಿಗಾಗಿ ಬಾಯ್ಬಿಡುವುದನ್ನು ನೋಡಿ ನೀವೇ ಅವು ನೈತಿಕವಲ್ಲ, ಅನೈತಿಕ ಕೇಂದ್ರಗಳು ಎನ್ನುವ ಸ್ಥಿತಿಗೆ ತಲುಪುತ್ತೀರಿ.
ಈಗ ಹೇಳಿ ಈ ಜಾಗತಿಕ ವ್ಯಾಪಾರ ಒಪ್ಪಂದದ ಲಾಂಗ್ ಟರ್ಮ್ ಎಫೆಕ್ಟ್ ಏನು ಅಂತ ಇವತ್ತು ನಾನು ನಿಮಗೆ ಹೇಳಿದೆ. ‘ಇದರಿಂದ ಹೇಗೆ ಬಚಾವಾಗಬಹುದು ಅಂತ ನೀವು ಯೋಚಿಸುತ್ತೀರಿ?’
ಅವತ್ತು ಫ್ರೊಫೆಸರ್ ಆಡಿದ ಮಾತುಗಳಿಗೆ ಸುತ್ತಲಿದ್ದ ಪತ್ರಕರ್ತರ‍್ಯಾರೂ ಮಾತನಾಡಲಿಲ್ಲ. ಯಾಕೆಂದರೆ ಅವರಿಗೆ ಪ್ರೊಫೆಸರ್ ಅವರಾಡಿದ ಮಾತುಗಳನ್ನು ಅರಗಿಸಿಕೊಳ್ಳಲೇ ಆಗಿರಲಿಲ್ಲ. ಅಂದ ಹಾಗೆ ಇವತ್ತಿನ ಸನ್ನಿವೇಶವನ್ನು ಆಳವಾಗಿ ಗಮನಿಸುತ್ತಾ ಹೋದರೆ, ಮೂರು ದಶಕಗಳಿಗೂ ಹಿಂದೆ ಫ್ರೊಫೆಸರ್ ಎಂ.ಡಿ. ನಂಜುಂಡಸ್ವಾಮಿ ಅವರಾಡಿದ ಮಾತುಗಳನ್ನು ನೆನಪಿಸಿಕೊಂಡರೆ ಅವರೆಂತಹ ದಾರ್ಶನಿಕ ಅನ್ನಿಸಿ ವಿಸ್ಮಯವಾಗುತ್ತದೆ.
‘ಈ ಗ್ಯಾಟ್ ಒಪ್ಪಂದ ಇಡೀ ಜಗತ್ತೇ ಒಂದು ಮನೆಯಂತಾಗಿ ವ್ಯಾಪಾರಕ್ಕೆ ಅನುಕೂಲವಾಗುವ ಒಪ್ಪಂದ. ಇದಕ್ಕೆ ಜಾಗತಿಕ ವ್ಯಾಪಾರ ಒಪ್ಪಂದ ಎನ್ನುತ್ತಾರೆ. ಕೇಳುವವರಿಗೆ ಇನ್ನು ತಮಗೆ ಯಾವುದಕ್ಕೂ ಕೊರತೆಯಿಲ್ಲ ಅನ್ನಿಸಬಹುದು. ಆದರೆ ಅದರಿಂದ ದೇಶ ಮುಂದೆ ದುಸ್ಥಿತಿಗೆ ತಲುಪಲಿದೆ. ಅದೂ ಎಂತಹ ದುಸ್ಥಿತಿ ಅನ್ನುತ್ತೀರಿ? ಒಂದು ಸಲ ಆಳಕ್ಕೆ ಬಿದ್ದರೆ ಮತ್ತೆ ಮೇಲೇಳಲಾಗದಷ್ಟು ದಯನೀಯ ಸ್ಥಿತಿಗೆ ದೇಶ ತಲುಪಿರುತ್ತದೆ.”





