Mysore
16
few clouds

Social Media

ಸೋಮವಾರ, 08 ಡಿಸೆಂಬರ್ 2025
Light
Dark

ನಮ್ಮ ನಿಜವಾದ ಚೇತನರನ್ನು ನಾವು ಮರೆತಿದ್ದೇವೆಯೇ?

ankana

ಗಿರೀಶ್ ಬಾಗ, ಅಸ್ತಿತ್ವ ಫೌಂಡೇಶನ್

ಮೈಸೂರು ಸಂಸ್ಥಾನವನ್ನು ಆಳಿದ ಅತ್ಯಂತ ದೂರದೃಷ್ಟಿ ವ್ಯಕ್ತಿತ್ವದ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಸಂದ ಗೌರವಗಳು ಮತ್ತು ಅವರ ಕೊಡುಗೆಗಳ ಬಗೆಗಿನ ಉಲ್ಲೇಖಗಳನ್ನು ಪರಾಮರ್ಶಿಸುವ ನಿರೀಕ್ಷೆಯಲ್ಲಿ ಅವರ ಜನ್ಮ ದಿನವಾದ ಜೂನ್ ೪ರಂದು ಸಾಮಾಜಿಕ ಮಾಧ್ಯಮಗಳ ವರದಿ ಏನಿರಬಹುದೆಂದು ನಾನು ಕಣ್ಣಾಯಿಸಿದೆ. ಆದರೆ ನನ್ನ ನಿರೀಕ್ಷೆಗೆ ವ್ಯತಿರಿಕ್ತವಾಗಿ ೧೮ ವರ್ಷಗಳಿಂದಲೂ ಕಾದು ಮೊದಲ ಬಾರಿಗೆ ಜೂನ್ ೩ರ ರಾತ್ರಿ ಐಪಿಎಲ್ನಲ್ಲಿ ಗೆದ್ದು ಟ್ರೋಫಿ ಯನ್ನು ಎತ್ತಿಹಿಡಿದ ಆರ್‌ಸಿಬಿ ತಂಡದ ಸಂಭ್ರಮಾಚರಣೆಯ ವರದಿ ತುಣುಕುಗಳೇ ಕಣ್ಣಿಗೆ ರಾಚಿದವು.

ಜನರು ಸಂತೋಷದಿಂದ ಒಟ್ಟಾಗಿ ಸೇರಿ ತಮ್ಮ ನೆಚ್ಚಿನ ಕ್ರಿಕೆಟ್ ಫ್ರಾಂಚೈಸಿ ತಂಡ ಯಶಸ್ಸನ್ನು ಆಚರಿಸುವುದನ್ನು ನೋಡುವುದು ಹೃದಯಸ್ಪರ್ಶಿಯಾಗಿದ್ದರೂ ನನಗೆ ಸ್ವಲ್ಪ ಕಳವಳದ ಅನುಭವವಾಯಿತು. ಕಾರಣ ಜೂನ್ ೪ ಒಂದು ಐತಿಹಾಸಿಕ ಹಾಗೂ ಸ್ಮರಣೀಯ ದಿನವಾಗಿತ್ತು. ಅದು ಇನ್ಯಾರೂ ಅಲ್ಲ ತನ್ನ ಅಸಾಧಾರಣ ದೂರದೃಷ್ಟಿಯೊಂದಿಗೆ ಮೈಸೂರನ್ನು ಮರುರೂಪಿಸಿದ ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜಯಂತಿಯ ದಿನ. ಆದರೆ ಆ ಪುಣ್ಯಾತ್ಮರು ಹಾಕಿಕೊಟ್ಟ ತಳಹದಿಯ ಮೇಲೆ ಅಭಿವೃದ್ಧಿಯನ್ನು ಕಾಣುತ್ತಿರುವ ಜನರ ಗಮನಕ್ಕೆ ಬಾರದೇ ಹೋಯಿತಲ್ಲ ಎಂಬ ಚಿಂತೆ ನನ್ನಲ್ಲಿ ಹಾಗೇ ಉಳಿಯಿತು.

ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೇವಲ ಅತ್ಯುತ್ತಮ ಆಡಳಿತಗಾರರಾಗಿರಲಿಲ್ಲ. ಅವರು ಸುಧಾರಕರು, ಕಲೆ, ವಿಜ್ಞಾನ ಮತ್ತು ಶಿಕ್ಷಣದ ಪೋಷಕ ಮತ್ತು ಸಾಮಾಜಿಕ ನ್ಯಾಯದ ಪ್ರವರ್ತಕರೂ ಆಗಿದ್ದರು.

‘ಮೀಸಲಾತಿ’ ವಿಷಯ ರಾಷ್ಟ್ರೀಯ ಚರ್ಚೆಯ ಭಾಗವಾಗುವುದಕ್ಕೆ ಬಹಳ ಹಿಂದೆಯೇ, ಅವರು ದೀನ ದಲಿತರಿಗೆ ಉದ್ಯೋಗ ಮತ್ತು ಶೈಕ್ಷಣಿಕ ಕೋಟಾಗಳನ್ನು ಪರಿಚಯಿಸಿದರು. ಅಲ್ಲದೇ ಆ ರೀತಿಯ ವ್ಯವಸ್ಥೆ ಮಾಡಿದ ರಾಜಾಡಳಿತವಿದ್ದ ಸಂಸ್ಥಾನಗಳಲ್ಲಿ ಮೈಸೂರು ಸಂಸ್ಥಾನ ಮೊದಲ ಸ್ಥಾನದಲ್ಲಿತ್ತು. ಮೈಸೂರು ಸಂಸ್ಥಾನದಲ್ಲಿ ನೀರಾವರಿ, ವಿದ್ಯುದ್ದೀಕರಣ ಮತ್ತು ಕೈಗಾರಿಕೀಕರಣಕ್ಕೆ ಅವರ ಕೊಡುಗೆಗಳು ಅಪಾರ.

ಸಮಾಜ ದಲ್ಲಿ ಪರಿವರ್ತನಾತ್ಮಕ ಕಾರ್ಯಗಳಾಗಿ ಮೈಸೂರಿನ ಪ್ರಗತಿ ಮತ್ತು ಸಮೃದ್ಧಿಗೆ ವೇದಿಕೆಯನ್ನು ಸಿದ್ಧಪಡಿಸಿದವು. ಮಹಾತ್ಮ ಗಾಂಧಿಯವರು ನಾಲ್ವಡಿ ಅವರನ್ನು ರಾಜರಲ್ಲಿ ಋಷಿ ಎಂದು ಗುರುತಿಸಿ, ಆಧ್ಯಾತ್ಮಿಕ ಮತ್ತು ಆಡಳಿತಾತ್ಮಕ ಶ್ರೇಷ್ಠತೆಯನ್ನು ಸೂಚಿಸುವ ಅಪರೂಪದ ಗೌರವವಾಗಿ ‘ರಾಜರ್ಷಿ’ ಎಂದು ಕರೆದರು.

ಇಂದಿಗೂ, ಇಂತಹ ಮಹಾನ್ ಚೇತನವನ್ನು ನಮ್ಮ ಪೀಳಿಗೆ ಹೃದಯಪೂರ್ವಕವಾಗಿ ಮತ್ತು ಸಾಮಾಜಿಕ ಸಂಭಾಷಣೆಗಳಲ್ಲಿ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಕೇವಲ ಅಽಕೃತ ಸಮಾರಂಭಗಳು ಮತ್ತು ಇತಿಹಾಸದ ಪುಸ್ತಕಗಳಲ್ಲಿ ಮಾತ್ರ ನಾಲ್ವಡಿ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ನಡೆದಿದೆ. ಹಾಗೆಂದು ಸಂಭ್ರಮೋತ್ಸವಕ್ಕೆ ನನ್ನ ತಕರಾರು ಏನೂ ಇಲ್ಲ.

ಮನುಷ್ಯನಿಗೆ ಕ್ರೀಡೆ ಅತ್ಯಗತ್ಯವಾಗಿದೆ. ಮನರಂಜನೆ ಮುಖ್ಯವಾಗಿದೆ ಹಾಗೂ ಒಂದು ತಂಡದ ಸಾಧನೆಗೆ ಹುರಿದುಂಬಿಸುವ ಕಾರ್ಯ ಜನರನ್ನು ಒಟ್ಟುಗೂಡಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ತಮ್ಮ ದೂರದೃಷ್ಟಿತ್ವದ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ನಿರಂತರವಾಗಿ ಯೋಚಿಸಿದ ಮಹಾನ್ ದಾರ್ಶನಿಕರ ಕಾಲಾತೀತ ಮೌಲ್ಯಗಳನ್ನು ಬದಿಗೊತ್ತಿ ಇಂದು ನಾವು ಮನ ರಂಜನೆಯ ಕ್ಷಣಿಕ ಸಂತೋಷಕ್ಕೆ ಹೆಚ್ಚು ಆದ್ಯತೆ ನೀಡುತ್ತಿದ್ದೇವೆಯೇ ಎಂದು ನಮ್ಮನ್ನ ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ಕೃತಜ್ಞತೆಯು ಪ್ರಬುದ್ಧ ಸಮಾಜದ ಸಂಕೇತವಾಗಿದೆ. ತನ್ನ ನಾಯಕರನ್ನು ಮರೆತುಬಿಡುವ ಯಾವುದೇ ಸಮಾಜವು ತನ್ನ ಮೌಲ್ಯಗಳು, ದಿಕ್ಕು ಮತ್ತು ಅಂತಿಮವಾಗಿ ತನ್ನ ಗುರುತನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತದೆ.

ನಮ್ಮನ್ನು ಚೇತೋಹಾರಿಗಳನ್ನಾಗಿ, ಸಶಕ್ತರನ್ನಾಗಿಸಲು ಶ್ರಮಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಂತಹ ನಾಯಕರನ್ನು ನೆನಪಿಸಿಕೊಳ್ಳಲು, ಗೌರವಿಸಲು ಮತ್ತು ಅವರ ಬಗ್ಗೆ ಮಾತನಾಡಲು ಇದು ಸರಿಯಾದ ಹಾಗೂ ಸೂಕ್ತ ಸಮಯವಾಗಿದೆ. ಇನ್ನಾದರೂ ಭವಿಷ್ಯದ ಪೀಳಿಗೆಗಳು ಕ್ರೀಡೆಯ ರೋಮಾಂಚನವನ್ನು ಮಾತ್ರವಲ್ಲದೆ ನಿಜವಾದ ಶ್ರೇಷ್ಠತೆಯನ್ನು ಗೌರವಿಸುವ ಸಂವೇದನೆಯನ್ನೂ ಹೊಂದುವಂತೆ ನೋಡಿಕೊಳ್ಳೋಣ. ಮನರಂಜನೆ ನಮಗೆ ಸಂತೋಷವನ್ನು ತರುತ್ತದೆ, ಆದರೆ ಸ್ಮರಣೆಯು ಗುಣವನ್ನು ನಿರ್ಮಿಸುತ್ತದೆ ಮತ್ತು ಅಂತಹ ಗುಣಾತ್ಮಕ ಅಂಶಗಳನ್ನು ಹೊಂದಿದ ಸಮಾಜವು ಯಾವಾಗಲೂ ಎತ್ತರದ ಸ್ಥಾನದಲ್ಲಿರುತ್ತದೆ.

Tags:
error: Content is protected !!