ವೈಡ್ ಆಂಗಲ್
ಬಾ.ನಾ.ಸುಬ್ರಹ್ಮಣ್ಯ
ಇದು ಕಾಕತಾಳೀಯ. ಇಂದಿಗೆ ಸರಿಯಾಗಿ ೬೦ ವರ್ಷಗಳ ಹಿಂದೆ ಅಭಿಮಾನ ಸ್ಟುಡಿಯೋ ಸ್ಥಾಪನೆಗೆ ಅಸ್ತಿಭಾರ ಶಿಲೆಯನ್ನು ಇಡಲಾಗಿತ್ತು. ಅಚ್ಚಕನ್ನಡದಲ್ಲಿ ಅಭಿಮಾನ ಚಿತ್ರ ಕಲಾಮಂದಿರ ಎನ್ನುವ ಹೆಸರು. ಸರ್ಕಾರ ೨೦ ಎಕರೆ ಜಾಗವನ್ನು ದೀರ್ಘಾವಧಿ ಗುತ್ತಿಗೆ ಮೇಲೆ ೧೯೬೫ರಲ್ಲಿ ಬಾಲಣ್ಣನವರಿಗೆ ನೀಡಿತ್ತು. ೧೯೭೦ರಲ್ಲಿ ಸ್ಟುಡಿಯೊ ನಿರ್ಮಾಣಕ್ಕೆ ಮಾತ್ರ ಬಳಸುವ ನಿಬಂಧನೆಯೊಂದಿಗೆ ಎಕರೆಗೆ ೩೦೦ ರೂ.ಗಳಂತೆ ಅದನ್ನು ಬಾಲಣ್ಣನವರ ಹೆಸರಿಗೆ ವರ್ಗಾಯಿಸಿತ್ತು.
ಈ ಅಂಕಣದಲ್ಲಿ ಹಿಂದೆ ಪ್ರಸ್ತಾಪಿಸಿದಂತೆ ಬಾಲಣ್ಣನವರ ಮಕ್ಕಳು ತಮ್ಮ ಅಪ್ಪನ ಆಸ್ತಿ ಎಂದು ಅದನ್ನು ಪಾಲು ಮಾಡಿಕೊಂಡದ್ದು, ಸ್ಟುಡಿಯೊವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಹತ್ತು ಎಕರೆ ಜಾಗವನ್ನು ಮಾರುತ್ತೇವೆ ಎಂದು ಜಿಲ್ಲಾಧಿಕಾರಿಗಳಿಂದ ಷರತ್ತುಬದ್ಧ ಅನುಮತಿ ಪಡೆದು ನಂತರ ಸರ್ಕಾರವನ್ನು ವಂಚಿಸಿದ್ದು, ಅದೀಗ ತಾರ್ಕಿಕ ಅಂತ್ಯ ಕಾಣಲು, ಅಲ್ಲಿದ್ದ ವಿಷ್ಣುವರ್ಧನ್ ಸಮಾಧಿ ನೆಲಸಮ ಮಾಡಿದ್ದು ಕಾರಣವಾಗುತ್ತಿರುವುದು ಎಲ್ಲವೂ ಕಾಕತಾಳೀಯ ಎನ್ನಲೇ ಬೇಕು.
೧೯೬೫ರಲ್ಲಿ ಕಂದಾಯ ಇಲಾಖೆಗೆ ನೀಡಿದ್ದ ಆ ಭೂಮಿ ಅರಣ್ಯ ಇಲಾಖೆಗೆ ಸೇರಿದ್ದು, ಅದನ್ನು ತನ್ನ ವಶಕ್ಕೆ ಒಪ್ಪಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕೋರಲಾಗಿದೆ. ಆ ಜಾಗವನ್ನು ಬಾಲಣ್ಣನವರ ಉತ್ತರಾಧಿಕಾರಿಗಳು ಪರಭಾರೆ ಮಾಡಲು ಯತ್ನಿಸುತ್ತಿರುವುದು ಈ ಬೆಳವಣಿಗೆಗೆ ಮೂಲ ಕಾರಣ. ಹತ್ತು ಎಕರೆ ಜಾಗವನ್ನು ಮಾರಲು ಅನುಮತಿ ನೀಡುವ ವೇಳೆ ವಿಶೇಷ ಜಿಲ್ಲಾಧಿಕಾರಿಗಳು, ‘ಬಾಕಿ ಉಳಿದಿರುವ ೧೦-೦೦ ಎಕರೆ ಜಮೀನನ್ನು ಯಾವುದೇ ಕಾಲದಲ್ಲಿ ಅಥವಾ ಭೂಮಿಯನ್ನು ಮಾರಲು; ಗುತ್ತಿಗೆಗೆ ಕೊಡಲು; ಅಡಮಾನ ಮಾಡಲು ಹಾಗೂ ವರ್ಗಾಯಿಸಲು ಅಥವಾ ಬೇರೆ ಯಾವುದೇ ರೀತಿಯಲ್ಲಿ ಪರಭಾರೆ ಮಾಡಲು ಉದ್ದೇಶಿಸಿದ್ದರೆ ಪ್ರಶ್ನಿತ ಜಮೀನನ್ನು ಯಾವುದೇ ತಿಳಿವಳಿಕೆ ನೀಡದೆ ಸರ್ಕಾರದ ವಶಕ್ಕೆ ಪಡೆದುಕೊಳ್ಳಲಾಗುವುದು’ ಎಂಬ ಷರತ್ತಿನಂತೆ ಈಗ ಭೂಮಿಯನ್ನು ವಶಪಡಿಸಿಕೊಳ್ಳಲು ಇಲಾಖೆ ನಿರ್ಧರಿಸಿದೆ.
ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ‘ಅಭಿಮಾನ್ ಸ್ಟುಡಿಯೋ’ ಜಾಗದಲ್ಲಿ ಮನೆ ಕಟ್ಟಿದ್ದರೂ ಅದನ್ನು ಮರುವಶ ಮಾಡಿಕೊಳ್ಳಲಾಗುವುದು, ಜಾಗ ಕೊಡುವಾಗ ವಿಧಿಸಿದ್ದ ಷರತ್ತನ್ನು ಉಲ್ಲಂಸಿದ್ದಕ್ಕೆ ಈ ಕ್ರಮ ಎಂದಿದ್ದಾರೆ. ಒಂದು ವೇಳೆ ಸಚಿವರು ತಮ್ಮ ಮಾತಿನಂತೆ ನಡೆದದ್ದೇ ಆದರೆ ಆ ಜಾಗವನ್ನು ಕೊಂಡು ಅಲ್ಲಿ ಮನೆಗಳನ್ನು ಕಟ್ಟಿಕೊಂಡವರು ಅದನ್ನು ಕಳೆದುಕೊಳ್ಳಬೇಕಾಗಬಹುದು.
ವಿಷ್ಣುವರ್ಧನ್ ಅವರ ಅಂತ್ಯಸಂಸ್ಕಾರ ನಡೆದ ಜಾಗದಲ್ಲಿ ತಮಗೆ ಹತ್ತು ಗುಂಟೆಯಷ್ಟಾದರೂ ಜಾಗ ಕೊಡಿ ಎಂದು ಅವರ ಅಭಿಮಾನಿ ಬಳಗ ಸರ್ಕಾರವನ್ನು ಕೋರಿದೆ. ಹಿಂದೆ ಸ್ಮಾರಕಕ್ಕಾಗಿ ಅಲ್ಲಿ ಎರಡು ಎಕರೆ ಜಾಗ ನೀಡುವ ಪ್ರಸ್ತಾಪ ಆಗಿತ್ತು, ಮಾತ್ರವಲ್ಲ, ಅದರ ನೋಂದಣಿಗೆ ಸಂಬಂಧ ಪಟ್ಟಂತೆ ಕಾಗದಪತ್ರಗಳು ಸಿದ್ಧವಾಗಿದ್ದವು. ಬಾಲಣ್ಣನವರ ಕುಟುಂಬವರ್ಗ ಇದಕ್ಕೆ ತಕರಾರು ಮಾಡಿದ್ದರಿಂದ ಕೊನೆಯ ಕ್ಷಣದಲ್ಲಿ ಅದು ರದ್ದಾಯಿತು ಎನ್ನುತ್ತಿವೆ ಮೂಲಗಳು.
ಅಭಿಮಾನ್ ಸ್ಟುಡಿಯೋ ನಿರ್ಮಾಣಕ್ಕಾಗಿ ಸರ್ಕಾರ ನೀಡಿದ ಜಾಗ, ಅಂತಿಮ ಹಂತದಲ್ಲಿ ಯಾವುದೇ ಒತ್ತಡ, ರಾಜಕೀಯ ನಡೆಯದೆ ಹೋದರೆ, ಮತ್ತೆ ಅರಣ್ಯ ಇಲಾಖೆಯ ವಶ ಆಗಲಿದೆ. ಈ ಹಂತದಲ್ಲಿ ಆ ಜಾಗದಲ್ಲಿ ಸ್ಟುಡಿಯೋ ಅಗಲಿ, ಅಥವಾ ಸಿನಿಮಾ ಸಂಬಂಧಿತ ಇತರ ಸೌಲಭ್ಯಗಳಿಗಾಗಿ ಬಳಸಬಹುದು ಎಂದು ಚಿತ್ರೋದ್ಯಮದ ಯಾರೂ ಮುಂದೆ ಬಾರದೆ ಇರುವುದು ಮಾತ್ರ ದುರಂತ. ಈ ದಿನಗಳಲ್ಲಿ ಡಿಜಿಟಲ್‌ಗೆ ಹೊರಳಿರುವ ಚಲನಚಿತ್ರ ಮಾಧ್ಯಮ ಅಲ್ಲಿ ಚಲನಚಿತ್ರ ತರಬೇತಿ ಶಾಲೆಯನ್ನೋ, ಅನಿಮೇಶನ್, ಗ್ರಾಫಿಕ್ಸ್ ಪಾಕ್ಗಳನ್ನೋ ಸ್ಥಾಪಿಸಿ, ಬಾಲಣ್ಣನ ‘ಅಭಿಮಾನ’ ಮತ್ತು ವಿಷ್ಣುವರ್ಧನ್ ನೆನಪು ಎರಡನ್ನೂ ಉಳಿಸಬಹುದು. ‘ವಿಷ್ಣುವರ್ಧನ್ ಅಭಿಮಾನ ಕಲಾಶಾಲೆ’ ಆಗಿ ಉದ್ಯಮ, ಸರ್ಕಾರ ಮನಸ್ಸು ಮಾಡಿದರೆ ಅದನ್ನು ಉಳಿಸಬಹುದು, ವಿಷ್ಣುವರ್ಧನ್ ಹಾಗೂ ಸಿನಿಮಾ ಅಭಿಮಾನಿಗಳಿಗೆ ಇದು ಸಂತಸದ ವಿಷಯ ಆಗಬಹುದು.
ಮೊನ್ನೆ ಭಾರತಿ ವಿಷ್ಣುವರ್ಧನ್ ಹಾಗೂ ಅವರ ಅಳಿಯ, ನಟ ಅನಿರುದ್ಧ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದರು. ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅಂತ್ಯಕ್ರಿಯೆ ಆದ ಜಾಗದಲ್ಲಿ ಅಭಿಮಾನಿಗಳಿಗೆ ಹುಟ್ಟುಹಬ್ಬ ಮತ್ತು ಪುಣ್ಯತಿಥಿಗಳ ಸಂದರ್ಭದಲ್ಲಿ ಗೌರವ ಸಲ್ಲಿಸಲು ಅಲ್ಲಿ ಜಾಗ ನೀಡಬೇಕು ಎನ್ನುವ ಬೇಡಿಕೆಯ ಜೊತೆಗೆ ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಪುರಸ್ಕಾರವನ್ನು ನೀಡಬೇಕು ಎನ್ನುವ ಬೇಡಿಕೆ ಅವರದು. ವಿಷ್ಣುವರ್ಧನ್ ಅವರ ೭೫ ವರ್ಷ ತುಂಬುವ ಈ ವರ್ಷಾಚರಣೆಯನ್ನು ಉದ್ಯಮವನ್ನೊಳಗೊಂಡಂತೆ ಅದ್ಧೂರಿಯಾಗಿ ನಡೆಸಲು ನಿರ್ಧರಿಸಲಾಗಿತ್ತು. ಸಂಪೂರ್ಣ ಕಾರ್ಯಕ್ರಮದ ನೇತೃತ್ವವನ್ನು ನಿರ್ದೇಶಕ ಎಸ್.ನಾರಾಯಣ್ ಅವರಿಗೆ ವಹಿಸಲಾಗಿತ್ತು. ವಿಷ್ಣುವರ್ಧನ್ ಅವರಿಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ’ ಗೌರವ ನೀಡುವಂತೆ ಸರ್ಕಾರವನ್ನು ಒತ್ತಾಯಿಸಲು ಉದ್ಯಮದ ನಿಯೋಗವೊಂದು ಹೋಗುವ ನಿರ್ಧಾರವೂ ಆಗಿತ್ತು. ಮೂಲಗಳ ಪ್ರಕಾರ, ಭಾರತಿಯವರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಕುರಿತಂತೆ ಆಡಿದರೆನ್ನಲಾದ ಮಾತು ಇಡೀ ಕಾರ್ಯಕ್ರಮವನ್ನು ಮುಂದೂಡುವಂತೆ ಮಾಡಿತು.
ಅಭಿಮಾನದ ವಿಷಯ ಸ್ಟುಡಿಯೋಕ್ಕೆ ಮಾತ್ರ ಸೀಮಿತವಲ್ಲ. ನಟ ಯಶ್ ಅವರ ತಾಯಿ ಪುಷ್ಪಾ ಅರುಣಕುಮಾರ್ ಚಿತ್ರ ನಿರ್ಮಾಪಕಿ ಆಗಿದ್ದಾರೆ. ಅವರ ನಿರ್ಮಾಣದ ಮೊದಲ ಚಿತ್ರ ‘ಕೊತ್ತಲವಾಡಿ’ಯ ಬಿಡುಗಡೆ ಮತ್ತು ನಂತರದ ಬೆಳವಣಿಗೆ ಅವರನ್ನು ಇನ್ನೊಂದು ಹೆಜ್ಜೆ ಇಡುವಂತೆ ಮಾಡಿದೆ. ಅವರು ಈಗ ವಿತರಕರಾಗಿದ್ದಾರೆ. ಅವರ ಮೊದಲ ಚಿತ್ರ ಇಂದು ತೆರೆಗೆ ಬರುತ್ತಿರುವ ತೆಲುಗು ಚಿತ್ರ ‘ಘಾಟಿ’ ಈ ಚಿತ್ರವನ್ನು ಅವರು ವಿತರಿಸಲು ಕಾರಣ ಅದರ ಮುಖ್ಯ ಭೂಮಿಕೆಯಲ್ಲಿ ಕನ್ನಡತಿ ಅನುಷ್ಕಾ ಶೆಟ್ಟಿ ಇದ್ದಾರೆ ಎನ್ನುವುದಂತೆ. ಮೊದಲೆರಡು ವಾರ ಮೂಲ ಭಾಷೆಯಲ್ಲಿ ಪ್ರದರ್ಶಿಸಿ, ನಂತರ ಅದರ ಕನ್ನಡ ಅವತರಣಿಕೆ ಬಿಡುಗಡೆ ಎಂದು ನಿರ್ದೇಶಕರು ಹೇಳಿದರೆ, ಕನ್ನಡ ಅಭಿಮಾನದ ಪಟ್ಟೂ ಅಲ್ಲಿತ್ತು!
‘ಕಾಂತಾರ’, ‘ಸು ಫ್ರಂ ಸೋ’ ಚಿತ್ರಗಳು ಮೊದಲು ಎಲ್ಲೆಡೆ ಕನ್ನಡದಲ್ಲಿ ಪ್ರದರ್ಶನ ಕಂಡು ನಂತರ ಅದು ಡಬ್ ಆಗಿ ಪ್ರದರ್ಶನ ಕಂಡವು. ಡಬ್ ಆಗಿ ಪ್ಯಾನ್ ಇಂಡಿಯಾ ಹೆಸರಲ್ಲಿ ಪ್ರದರ್ಶನ ಕಾಣುವುದು ಗಲ್ಲಾ ಪೆಟ್ಟಿಗೆಯ ಗಮನವಾದರೆ, ಮೂಲ ಭಾಷೆಯಲ್ಲಿ ವಿಶ್ವಾದ್ಯಂತ ತೆರೆಗೆ ಬರುವುದರ ಮೂಲಕ ಮೂಲ ಭಾಷೆಯ ಪರಿಚಯ, ಪ್ರಚಾರ ಆಗುತ್ತಿರುತ್ತದೆ. ‘ಹಿಂದೆ ಅಲ್ಲಿ, ಇಲ್ಲಿ ಉಪಶೀರ್ಷಿಕೆಗಳು ಕೆಲವು ಚಿತ್ರಗಳಲ್ಲಿ ಇರುತ್ತಿದ್ದವು ಹೊರತು ಡಬ್ಬಿಂಗ್ ಕಡಿಮೆ ಇತ್ತು’ ಎನ್ನುವುದು, ಚಿತ್ರದ ಮತ್ತೊಬ್ಬ ಮುಖ್ಯಪಾತ್ರಧಾರಿ ಶಿವಾಜಿ ಗಣೇಶನ್ ಅವರ ಮೊಮ್ಮಗ ವಿಕ್ರಂ ಪ್ರಭು ಅವರ ಅಭಿಪ್ರಾಯ ಕೂಡ. ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯ ವಿರುದ್ಧ ನಿರ್ದೇಶಕ, ಈಗ ನಿರ್ಮಾಪಕರೂ ಆಗಿರುವ ರವಿ ಶ್ರೀವತ್ಸ ತಿರುಗಿಬಿದ್ದಿದ್ದಾರೆ. ಅದಕ್ಕೆ ಕಾರಣ ಅವರ ಡೆಡ್ಲೀ ಆರ್ಟ್ಸ್‌ನ ಮೊದಲ ಚಿತ್ರ ‘ಗ್ಯಾಂಗ್ಸ್ ಆಫ್ ಯುಕೆ’ಯನ್ನು ಮೊದಲು ವೀಕ್ಷಿಸಿದ ತಂಡ, ಪ್ರಮಾಣಪತ್ರ ನಿರಾಕರಿಸಿದ್ದು. ನಂತರ ಪುನರ್ ಪರಿಶೀಲನೆಯ ತಂಡ, ಒಂದಷ್ಟು ಬದಲಾವಣೆಗಳೊಂದಿಗೆ ಪ್ರಮಾಣಪತ್ರ ನೀಡಿದೆ.
ಈ ಕುರಿತಂತೆ ದೂರಲು ಅವರು ಮಾಧ್ಯಮದ ಮುಂದೆ ಬಂದಿದ್ದರು. ಪ್ರಮಾಣೀಕರಣ ಮಂಡಳಿಯಲ್ಲಿ ಸಿನಿಮಾ ವೀಕ್ಷಿಸುವ ಸಲಹಾ ಸಮಿತಿಯ ಸದಸ್ಯರಿಗೆ ಸಿನಿಮಾ ಕುರಿತ ತಾಂತ್ರಿಕ ಪರಿಣತಿ ಇಲ್ಲ, ಅಲ್ಲಿ ಸಿನಿಮಾ ಬಲ್ಲವರು ಇರಬೇಕು ಎನ್ನುವುದು ಅವರ ವಾದ. ಆದರೆ ಪ್ರಮಾಣೀಕರಣ ಮಂಡಳಿಯ ಸಲಹಾ ಸಮಿತಿಯಲ್ಲಿ ಇರುವ ಸದಸ್ಯರು, ಚಿತ್ರ ವೀಕ್ಷಿಸಿ, ಇದು ಬಿಡುಗಡೆಗೆ ಅರ್ಹವೇ, ಇದು ಸಮಾಜದ ಮೇಲೆ ಯಾವ ಪರಿಣಾಮ ಬೀರಬಹುದು, ಯಾವ ವಯೋಮಾನದವರು ಇದನ್ನು ನೋಡಬಹುದು, ನೋಡಬಾರದು ಇವೇ ಮೊದಲಾದ ವಿಷಯಗಳ ಪರಾಮರ್ಶೆ ಮಾಡಿ ತಮ್ಮ ಅಭಿಪ್ರಾಯ ಹೇಳುತ್ತಾರೆ ವಿನಃ ಅದರ ತಾಂತ್ರಿಕ ಶ್ರೇಷ್ಠತೆ, ಅದ್ಭುತ ನಟನೆ, ಕುಶಲ ನಿರ್ದೇಶನಗಳ ಕುರಿತು ಅಲ್ಲಿ ಚರ್ಚಿಸುವುದಿಲ್ಲ.
ಪ್ರಮಾಣೀಕರಣ ಮಂಡಳಿಯ ಹಲವು ನಿಯಮಗಳ ಕುರಿತಂತೆ ಉದ್ಯಮದ ಬಹಳಷ್ಟು ಮಂದಿಗೆ ತಿಳಿದಂತಿಲ್ಲ. ಯಾವುದೇ ಹೊಸ ಚಿತ್ರದ ಟೀಸರ್, ಹಾಡು, ಟ್ರೇಲರ್‌ಗಳನ್ನು ಪ್ರದರ್ಶಿಸುವ, ಪ್ರಸಾರ ಮಾಡುವ ಮೊದಲು ಅದಕ್ಕೆ ಪ್ರಮಾಣಪತ್ರ ಪಡೆದಿರಬೇಕು, ಚಲನಚಿತ್ರ ಬಿಡುಗಡೆಗೆ ಸಿದ್ಧವಾಗಿ ಪ್ರಮಾಣಪತ್ರ ಪಡೆದ ನಂತರ, ಅದರ ಪ್ರಚಾರದ ಎಲ್ಲ ಜಾಹೀರಾತುಗಳಲ್ಲಿ, ಭಿತ್ತಿಪತ್ರಗಳಲ್ಲಿ ಅದು ಯಾವ ವಯೋಮಾನದ ಪ್ರೇಕ್ಷಕರಿಗೆ, ‘ಯು’, ‘ಯುಎ’, ‘ಎ’, ಹೀಗೆ ಯಾರಿಗೆ ಎನ್ನುವುದನ್ನು ಹೇಳಬೇಕು. ಹೇಳದೆ ಇದ್ದರೆ ಅದು ಶಿಕ್ಷಾರ್ಹ ಅಪರಾಧವಾಗುತ್ತದೆ. ಬಹುಶಃ ಉದ್ಯಮದಲ್ಲಿ ಸಾಕಷ್ಟು ಮಂದಿಗೆ ಈ ವಿವರಗಳು ತಿಳಿದಿಲ್ಲ. ರವಿ ಶ್ರೀವತ್ಸ ಅವರ ಹೊಸ ಚಿತ್ರದ ಟ್ರೇಲರ್ ಮೊನ್ನೆ ಬಿಡುಗಡೆಯಾಗಿದೆ.
” ಯುಟ್ಯೂಬ್‌ನಲ್ಲಿರುವ ಅದನ್ನು ನೋಡಿದ ಮಂದಿಯ ಪ್ರತಿಕ್ರಿಯೆ, ಆ ಚಿತ್ರದಲ್ಲಿರಬಹುದಾದ ಕ್ರೌರ್ಯದ ವಿಜೃಂಭಣೆಗೆ ಕನ್ನಡಿ ಹಿಡಿದಂತಿದೆ. ಅವರಲ್ಲಿ ಕೆಲವರಿಗೆ ಈ ಚಿತ್ರ ಪ್ರಮಾಣಪತ್ರ ಪಡೆದಿರುವುದು ಗೊತ್ತಿರುವಂತಿಲ್ಲ. ‘ಇದು ಸೆನ್ಸಾರ್ ಆಗುವುದಿಲ್ಲ’ ಎಂದೊಬ್ಬರು ಪ್ರತಿಕ್ರಿಯಿಸಿದ್ದಾರೆ! ಈ ಟ್ರೇಲರ್ ಪ್ರಮಾಣಪತ್ರ ಪಡೆದಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಸಿನಿಮಾ ಅಭಿಮಾನ, ಪ್ರೀತಿಯಲ್ಲಿ ಹಿಂಸೆಗೆ ಮಿತಿ ಇಲ್ಲದೆ ಹೋದರೆ ಹೇಗೆ?”
ಅಭಿಮಾನ್ ಸ್ಟುಡಿಯೋ ಜಾಗದಲ್ಲಿ ಚಲನಚಿತ್ರ ತರಬೇತಿ
ಶಾಲೆಯನ್ನೋ, ಅನಿಮೇಶನ್, ಗ್ರಾಫಿಕ್ಸ್ ಪಾರ್ಕ್‌ಗಳನ್ನೋ
ಸ್ಥಾಪಿಸಿ, ಬಾಲಣ್ಣನ ‘ಅಭಿಮಾನ’ ಮತ್ತು ವಿಷ್ಣುವರ್ಧನ್
ನೆನಪು ಎರಡನ್ನೂ ಉಳಿಸಬಹುದು. ‘ವಿಷ್ಣುವರ್ಧನ್
ಅಭಿಮಾನ ಕಲಾಶಾಲೆ’ ಆಗಿ ಉದ್ಯಮ, ಸರ್ಕಾರ
ಮನಸ್ಸು ಮಾಡಿದರೆ ಅದನ್ನು ಉಳಿಸಬಹುದು





