Mysore
14
overcast clouds

Social Media

ಸೋಮವಾರ, 15 ಡಿಸೆಂಬರ್ 2025
Light
Dark

ಮಾಹಿತಿ ಹಕ್ಕು ಕಾಯ್ದೆ 20 ವರ್ಷಗಳ ಪಯಣ

೨೦೦೪ರಿಂದ ೨೦೧೪ರವರೆಗಿನ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟದ ಕೇಂದ್ರ ಸರ್ಕಾರ ಹಲವು ಮಹತ್ವದ ಕಾಯ್ದೆಗಳನ್ನು ಜಾರಿಗೊಳಿಸಿದ್ದನ್ನು ಸ್ಮರಿಸಬೇಕಿದೆ. ಅರಣ್ಯ ಹಕ್ಕು, ಆಹಾರ ಹಕ್ಕು, ಶಿಕ್ಷಣದ ಹಕ್ಕು ಮತ್ತು ಮಾಹಿತಿ ಹಕ್ಕುಗಳನ್ನು ರಕ್ಷಿಸುವ ಕಾಯ್ದೆಗಳು, ಉದ್ಯೋಗ ಖಾತರಿ ಯೋಜನೆಗಳು ಚಾರಿತ್ರಿಕವಾಗಿದ್ದು, ಮಹತ್ವ ಪಡೆಯುತ್ತವೆ.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಯನ್ನೂ ತಲುಪುವ ನೀತಿಗಳು ಮಹತ್ತರ ಪಾತ್ರ ವಹಿಸುತ್ತವೆ. ಯುಪಿಎ ಆಳ್ವಿಕೆಯ ಈ ಕಾಯ್ದೆಗಳು ಕಾಂಗ್ರೆಸ್ ಅಥವಾ ಇತರ ಬಂಡವಾಳಶಾಹಿ ಬೆಂಬಲಿತ ಪಕ್ಷಗಳ ಔದಾರ್ಯ ಅಥವಾ ಔದಾತ್ಯದ ಫಲ ಅಲ್ಲ ಎನ್ನುವುದನ್ನೂ ಗಮನದಲ್ಲಿಡಬೇಕು.

ಮಾಹಿತಿ ಹಕ್ಕಿಗಾಗಿ ಜನದನಿ:  ೧೯೮೦ರ ನಂತರದಲ್ಲಿ ದೇಶದ ವಿವಿಧ ಭಾಗಗಳಲ್ಲಿ ರೂಪುಗೊಂಡ ಜನಾಂ ದೋಲನಗಳ ಒತ್ತಾಸೆ, ಆಗ್ರಹ ಮತ್ತು ಹಕ್ಕೊತ್ತಾಯದ ಚಳವಳಿಗಳ ಫಲವಾಗಿ ಈ ಕಾಯ್ದೆಗಳು ಜಾರಿಯಾಗಿದ್ದನ್ನು ಅಲ್ಲಗಳೆಯಲಾಗದು. ೨೦೧೪ರಲ್ಲಿ ರಾಜ ಕೀಯ ಅಪಹಾಸ್ಯಕ್ಕೀಡಾಗಿದ್ದ ನರೇಗಾ ಯೋಜನೆ ಕೋವಿಡ್ ಸಂದರ್ಭದಲ್ಲಿ  ಬಡಜನತೆಯ ಜೀವರಕ್ಷಕ ಸಂಜೀವಿನಿಯಾಗಿದ್ದನ್ನು ಸ್ಮರಿಸಬೇಕಿದೆ. ಕಳೆದ ಎರಡು ದಶಕಗಳಲ್ಲಿ ಲಕ್ಷಾಂತರ ಜನರು ಈ ಕಾಯ್ದೆಯ ಉಪಯೋಗ ಪಡೆದುಕೊಂಡಿದ್ದಾರೆ. ಯಾವುದೇ ಜನಪರ ಕಾಯ್ದೆಯ ಜಾರಿ ಮತ್ತು ಅನುಷ್ಠಾನದ ನಡುವೆ ಅಪಾರ ಅಂತರ ಇರುವುದು ಸ್ವತಂತ್ರ ಭಾರತದ ಲಕ್ಷಣವಾಗಿದ್ದು, ಮಾಹಿತಿ ಹಕ್ಕು ಕಾಯ್ದೆಗೂ ಇದನ್ನು ಅನ್ವಯಿಸಬಹುದು. ಇಂದಿಗೂ ಪ್ರತಿ ವರ್ಷ ೬೦ ಲಕ್ಷಕ್ಕೂ ಹೆಚ್ಚು ಮಾಹಿತಿ ಹಕ್ಕು ಅರ್ಜಿಗಳನ್ನು ಸಲ್ಲಿಸಲಾಗುತ್ತಿದೆ.

ಒಂದು ಅಧ್ಯಯನದ ಪ್ರಕಾರ ಶೇ. ೫೦ರಷ್ಟು ಅರ್ಜಿದಾರರು ತಮಗೆ ಅಗತ್ಯವಾದ ಮಾಹಿತಿಯನ್ನು ಪಡೆಯಲು ಸಾಧ್ಯವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ, ಅದಕ್ಕೂ ಮುನ್ನ ಈ ಕಾಯ್ದೆಯ ಬಿಗಿ ಹಿಡಿತವನ್ನು ಸಡಿಲಗೊಳಿಸುವ ಪ್ರಯತ್ನಗಳು ನಡೆದಿದ್ದರೂ, ಶ್ರೀ ಸಾಮಾನ್ಯರಿಗೆ ಈ ಕಾಯ್ದೆ ಭರವಸೆ ನೀಡಿರುವುದು ವಾಸ್ತವ. ಪಡಿತರ, ನೈರ್ಮಲ್ಯ ಸಮಸ್ಯೆಗಳು, ಪಿಂಚಣಿ, ನೀರಿನ ಸಂಪರ್ಕ ಹೀಗೆ ಸಾರ್ವಜನಿಕ ಜೀವನದಲ್ಲಿ ಎದುರಾಗುವ ಹಲವು ಜಟಿಲ ಸಿಕ್ಕುಗಳನ್ನು ಬಿಡಿಸುವುದರಲ್ಲಿ ಮಾಹಿತಿ ಹಕ್ಕು ಕಾಯ್ದೆ ನೆರವಾಗಿದೆ.

ಇದನ್ನು ಓದಿ: ಆನ್‌ಲೈನ್‌ ಸೇವೆಗೆ ಸಿದ್ಧವಾದ ಮೈವಿವಿ ಪ್ರಸಾರಾಂಗ

ಒಂದು ಮಾಹಿತಿಯ ಪ್ರಕಾರ ಈ ವರ್ಷ ಜೂನ್ ೩೦ರ ಹೊತ್ತಿಗೆ, ದೇಶದ ೨೯ ರಾಜ್ಯವಾರು ಮಾಹಿತಿ ಆಯೋಗಗಳಿಗೆ ಸಲ್ಲಿಸಲಾಗಿರುವ ಅರ್ಜಿಗಳ ಪೈಕಿ ೪ ಲಕ್ಷಕ್ಕೂ ಹೆಚ್ಚು ಮನವಿಗಳು ಇತ್ಯರ್ಥವಾಗದೆ ಬಾಕಿ ಉಳಿದಿವೆ. ಆರು ಆಯೋಗಗಳು ನಿಷ್ಕ್ರಿಯವಾಗಿದ್ದು , ಎರಡು ಆಯೋಗಗಳು ಪೂರ್ತಿಯಾಗಿ ಬಂದ್ ಆಗಿವೆ. ಕೇಂದ್ರ ಮಾಹಿತಿ ಆಯೋಗ (CIC) ಸೇರಿದಂತೆ ಮೂರು ಆಯೋಗಗಳು ಆಯುಕ್ತರಿಲ್ಲದೆ ಕಾರ್ಯ ನಿರ್ವಹಿಸುತ್ತಿವೆ, ಅಕ್ಟೋಬರ್ ೨೦೨೫ರ ವೇಳೆಗೆ ಎರಡು ಆಯೋಗಗಳ ಎಲ್ಲ ಹುದ್ದೆಗಳೂ ಖಾಲಿ ಉಳಿದಿವೆ. ಇದು ಸರ್ಕಾರಗಳ ಆದ್ಯತೆ-ಆಯ್ಕೆಗಳ ಔಚಿತ್ಯವನ್ನು ಪ್ರಶ್ನಿಸುವಂತೆ ಮಾಡುತ್ತದೆ.

ತಳಮಟ್ಟದ ಕಾರ್ಯಕ್ಷೇತ್ರಗಳಲ್ಲಿ: 

ನಿವೃತ್ತ ಮಾಹಿತಿ ಆಯುಕ್ತ ಸತ್ಯಾನಂದ ಮಿಶ್ರ ಅವರ ಅಭಿಪ್ರಾಯದಲ್ಲಿ ಈ ಕಾಯ್ದೆಯಡಿ ಪ್ರಧಾನ ಪಾತ್ರ ವಹಿಸುವುದು ತಳಮಟ್ಟದಲ್ಲಿ ಕಾರ್ಯನಿರ್ವಹಿಸುವ ಸಾರ್ವಜನಿಕ ಮಾಹಿತಿ ಅಧಿಕಾರಿಗಳು (Public Information Offcers-PIO) ಈ ಅಧಿಕಾರಿಗಳೇ ಅಂತಿಮವಾಗಿ ದೂರುದಾರರಿಗೆ ಮಾಹಿತಿಯನ್ನೂ ಒದಗಿಸಬೇಕಾಗುತ್ತದೆ. PIOಗಳು ಅರ್ಜಿದಾರರಿಗೆ ಮಾಹಿತಿ ಒದಗಿಸಲು ಹಿಂಜರಿಯುವುದಕ್ಕೂ ಕಾರಣಗಳಿವೆ. ಮೊದಲನೆಯದಾಗಿ, ಈ ಮಾಹಿತಿ ಒದಗಿಸುವ ಕೆಲಸ ಅವರ ಅಧಿಕೃತ ಕಾರ್ಯವ್ಯಾಪ್ತಿಯನ್ನು ಮೀರಿದ್ದು.

ಮೇಲಾಗಿ ಮಾಹಿತಿ ಹಕ್ಕು ಅರ್ಜಿಗಳನ್ನು ನಿರ್ವಹಿಸುವುದಕ್ಕಾಗಿ ಈ ಅಧಿಕಾರಿಗಳಿಗೆ ಯಾವುದೇ ರೀತಿಯ ಉತ್ತೇಜಕ ಭತ್ಯೆ (Incentives) ಕೊಡಲಾಗುವುದಿಲ್ಲ. ಆದರೆ ತಪ್ಪು ಮಾಹಿತಿ ನೀಡಿದರೆ, ದಾರಿತಪ್ಪಿಸುವ ಮಾಹಿತಿಯನ್ನು ಒದಗಿಸಿದರೆ ಅಥವಾ ನಿಗದಿತ ಅವಧಿಯ ಒಳಗಾಗಿ ಮಾಹಿತಿ ನೀಡದಿದ್ದರೆ, ೨೫ ಸಾವಿರ ರೂ.ಗಳ ದಂಡ ವಿಧಿಸಲಾಗುತ್ತದೆ. ಇದು ಬಹುಪಾಲು ಅಧಿಕಾರಿಗಳನ್ನು ಸ್ವ-ರಕ್ಷಣೆಯ ತಂತ್ರಗಳಿಗೆ ಮೊರೆಹೋಗುವಂತೆ ಮಾಡುತ್ತದೆ. ೨೦೨೩ರಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ವೈಯಕ್ತಿಕ ಡಿಜಿಟಲ್ ದತ್ತಾಂಶ ರಕ್ಷಣೆ ಕಾಯ್ದೆ (DPDP) PIO ಗಳಿಗೆ ವೈಯಕ್ತಿಕ ಮಾಹಿತಿಯನ್ನು ತಡೆಹಿಡಿಯುವ ಅಽಕಾರವನ್ನೂ ನೀಡುತ್ತದೆ. ಈ ಕಾಯ್ದೆ ತಿದ್ದುಪಡಿ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ.

೨೦೧೯ರಲ್ಲಿ ಮೋದಿ ಸರ್ಕಾರ ಮಾಹಿತಿ ಹಕ್ಕು ಕಾಯ್ದೆಯನ್ನು ತಿದ್ದುಪಡಿಮಾಡಿ ಜಾರಿಗೊಳಿಸಿದ ಮತ್ತೊಂದು ನಿಯಮ ಎಂದರೆ, ಮಾಹಿತಿ ಅರ್ಜಿಗಳನ್ನು ನಿರ್ವಹಿಸುವ ಕೇಂದ್ರ ಹಾಗೂ ರಾಜ್ಯ ಮಟ್ಟದ ಮಾಹಿತಿ ಆಯುಕ್ತರ ವೇತನ ನಿಗದಿ ಮತ್ತು ಪರಿಷ್ಕರಣೆ ಹಾಗೂ ಸೇವಾ ನಿಯಮಗಳನ್ನು ನಿರ್ಧರಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ವಹಿಸಿದ್ದು. ಮಾಹಿತಿ ಮಾಹಿತಿ ಹಕ್ಕು ಅರ್ಜಿಗಳು ಬಾಕಿ ಉಳಿಯಲು ಇದೂ ಒಂದು ಕಾರಣವಾಗುತ್ತದೆ.

ಇದನ್ನು ಓದಿ: ಸ್ವಚ್ಛ ಕೊಡಗು, ಸುಂದರ ಕೊಡಗು ಅಭಿಯಾನ 

ರಾಜ್ಯವಾರು ದತ್ತಾಂಶಗಳನ್ನು ಗಮನಿಸಿದಾಗ, ೨೦೨೫ರ ಜೂನ್ ೩೦ರ ವೇಳೆಗೆ ಅತ್ಯಂತ ಹೆಚ್ಚು ಅರ್ಜಿಗಳು, ದೂರುಗಳು ಬಾಕಿ ಉಳಿದಿರುವುದು ಮಹಾರಾಷ್ಟ್ರದಲ್ಲಿ ೯೫,೩೪೦ , ಕರ್ನಾಟಕದಲ್ಲಿ ೪೭,೮೨೫ , ತಮಿಳುನಾಡು ೪೩,೦೫೯, ಛತ್ತಿಸ್ ಘಡ ೩೪,೧೪೭ ಹಾಗೂ ಬಿಹಾರದಲ್ಲಿ ೨೯,೩೧೯. (ಸತರ್ಕ ನಾಗರಿಕ ಸಂಘಟನೆಯ ಮಾಹಿತಿ). ಈ ಕಾಯ್ದೆ ಜಾರಿಗೊಳಿಸಿದ ಮೇಲೆ ಕಂಡುಬರುವ ಮತ್ತೊಂದು ನೇತ್ಯಾತ್ಮಕ ಬೆಳವಣಿಗೆ ಎಂದರೆ, ಅರ್ಜಿದಾರರ ಮತ್ತು ಮಾಹಿತಿದಾರರ ಮೇಲೆ ನಡೆದಿರುವ ದಾಳಿ. ಮಾಹಿತಿ ಹಕ್ಕುಗಳಿಗಾಗಿ ಶ್ರಮಿಸುತ್ತಿರುವ ೩೦೦ಕ್ಕೂ ಹೆಚ್ಚು ಮಂದಿ ವಿವಿಧ ರೀತಿಯ ಚಿತ್ರಹಿಂಸೆ, ಕಿರುಕುಳಕ್ಕೆ ಒಳಗಾಗಿದ್ದಾರೆ, CHRI (Commonwealth Human Rights Initiative) ಸಂಸ್ಥೆಯ ಅನುಸಾರ ಈವರೆಗೆ ೧೦೮ ಮಾಹಿತಿ ಹಕ್ಕು ಹೋರಾಟಗಾರರು, ಕಾರ್ಯಕರ್ತರು ಹತ್ಯೆಗೀಡಾಗಿದ್ದಾರೆ.

ಸಂವಿಧಾನ ಮತ್ತು ಪ್ರಜಾತಂತ್ರದ ಉಸಿರು ಈ ಎಲ್ಲ ವ್ಯತ್ಯಯಗಳ ಹೊರತಾಗಿಯೂ ಸಾಮಾನ್ಯ ಜನತೆಯಲ್ಲಿ ಈ ಕಾಯ್ದೆಯ ಮೇಲಿನ ವಿಶ್ವಾಸಕ್ಕೆ ಧಕ್ಕೆ ಉಂಟಾಗಿಲ್ಲ ಎನ್ನುತ್ತಾರೆ ಸುಭಾಷ್ ಚಂದ್ರ ಅಗರ್ವಾಲ್. ಮಾಹಿತಿ ಹಕ್ಕು ಕಾಯ್ದೆಯು ಜನಸಾಮಾನ್ಯರ ಪಾಲಿಗೆ ಸಹಾಯಕವಾಗಿದ್ದು, ಅಪಾರದರ್ಶಕ ಆಡಳಿತ ವ್ಯವಸ್ಥೆಯಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಗತವಾಗಿದೆ. ಈ ಪ್ರಜಾಸತ್ತಾತ್ಮಕ ಹೋರಾಟ ಮತ್ತು ಅವುಗಳ ಮೂಲಕವೇ ದಾಖಲಾಗುವ ತಳಸಮಾಜದ ಗಟ್ಟಿ ದನಿಗಳೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದರಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಅಕ್ಟೋಬರ್ ೧೨ಕ್ಕೆ ೨೦ ವರ್ಷಗಳನ್ನು ಪೂರೈಸಿದ ಮಾಹಿತಿ ಹಕ್ಕು ಕಾಯ್ದೆ, ಎಷ್ಟೇ ಅಡೆತಡೆಗಳನ್ನು ಎದುರಿಸಿದ್ದರೂ, ಎಲ್ಲವನ್ನೂ ದಾಟಿ ಜನರ ನಡುವೆ ಉಪಯುಕ್ತ ಸಾಂವಿಧಾನಿಕ ಶಕ್ತಿಯಾಗಿ ನೆಲೆಗೊಂಡಿರುವುದು ಸ್ವಾಗತಾರ್ಹ. ಈ ಸಾಧನೆಗಾಗಿ ಶ್ರಮಿಸುತ್ತಿರುವ ದೇಶದ ಸಾವಿರಾರು ಮಾಹಿತಿ ಹಕ್ಕು ಕಾರ್ಯಕರ್ತರಿಗೆ ಕೃತಜ್ಞತೆಗಳನ್ನು ಸಲ್ಲಿಸುವುದು ಸಮಾಜದ ನೈತಿಕ ಕರ್ತವ್ಯ.

(ಈ ಲೇಖನಕ್ಕೆ , ಅಂಕಿ ಅಂಶ-ದತ್ತಾಂಶಗಳಿಗೆ ಆಧಾರ : ೨೦ Years of the RTI Act ಅನುಜಾ- ದ ಹಿಂದೂ ೧೨ ಅಕ್ಟೋಬರ್ ೨೦೨೫)

” ಮಾಹಿತಿ ಹಕ್ಕು ಕಾಯ್ದೆಯು ಜನಸಾಮಾನ್ಯರ ಪಾಲಿಗೆ ಸಹಾಯಕವಾಗಿದ್ದು, ಅಪಾರದರ್ಶಕ ಆಡಳಿತ ವ್ಯವಸ್ಥೆಯಿಂದ ತಮಗೆ ಬೇಕಾದ ಮಾಹಿತಿಯನ್ನು ಪಡೆಯುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯಗತವಾಗಿದೆ.”

ನಾ ದಿವಾಕರ

 

Tags:
error: Content is protected !!