Mysore
23
overcast clouds
Light
Dark

ವಿಶ್ವಕಪ್‌ ಸೆಮಿಫೈನಲ್:‌ ಟೀಮ್‌ ಇಂಡಿಯಾ ಭರ್ಜರಿ ಬ್ಯಾಟಿಂಗ್;‌ ಕಿವೀಸ್‌ಗೆ ಕಠಿಣ ಗುರಿ

ಪ್ರಸ್ತುತ ನಡೆಯುತ್ತಿರುವ ಪ್ರತಿಷ್ಟಿತ ಐಸಿಸಿ ಏಕದಿನ ವಿಶ್ವಕಪ್‌ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದು ತಲುಪಿದ್ದು ಇಂದು ( ನವೆಂಬರ್‌ 15 ) ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್‌ ನಡುವೆ ಸೆಮಿಫೈನಲ್‌ ಪಂದ್ಯ ಜರುಗುತ್ತಿದೆ.

ಟೂರ್ನಿಯ ಮೊದಲ ಸೆಮಿಫೈನಲ್‌ ಪಂದ್ಯ ಇದಾಗಿದ್ದು ಟಾಸ್‌ ಗೆದ್ದ ಟೀಮ್‌ ಇಂಡಿಯಾ ಮೊದಲು ಬ್ಯಾಟಿಂಗ್‌ ಆರಿಸಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ 50 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 397 ರನ್‌ ಕಲೆಹಾಕಿ ಎದುರಾಳಿ ನ್ಯೂಜಿಲೆಂಡ್‌ ತಂಡಕ್ಕೆ ಗೆಲ್ಲಲು 398 ರನ್‌ಗಳ ಕಠಿಣ ಗುರಿಯನ್ನು ನೀಡಿದೆ. 

ಭಾರತದ ಪರ ಆರಂಭಿಕರಾಗಿ ರೋಹಿತ್ ಶರ್ಮಾ ಹಾಗೂ ಶುಬ್‌ಮನ್‌ ಗಿಲ್‌ ಕಣಕ್ಕಿಳಿದರು. ಪವರ್‌ಪ್ಲೇನಲ್ಲಿ ಬೌಂಡರಿಗಳ ಮೇಲೆ ಬೌಂಡರಿ ಬಾರಿಸಿ ಅಬ್ಬರಿಸಿದ ರೋಹಿತ್‌ ಶರ್ಮಾ 29 ಎಸೆತಗಳಲ್ಲಿ 47 ರನ್‌ ಬಾರಿಸಿದರೆ, ಶುಬ್‌ಮನ್‌ ಗಿಲ್‌ ರಿಟೈರ್ಡ್‌ ಹರ್ಟ್‌ ಆದರೂ 66 ಎಸೆತಗಳಲ್ಲಿ ಅಜೇಯ 80 ರನ್ ಬಾರಿಸಿದರು. ಇನ್ನುಳಿದಂತೆ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದು ಜವಾಬ್ದಾರಿಯುತ ಬ್ಯಾಟಿಂಗ್‌ ನಡೆಸಿದ ವಿರಾಟ್ ಕೊಹ್ಲಿ 113 ಎಸೆತಗಳಲ್ಲಿ 117 ರನ್‌ ಬಾರಿಸಿದರು. ಶ್ರೇಯಸ್‌ ಅಯ್ಯರ್‌ 70 ಎಸೆತಗಳಲ್ಲಿ 105 ರನ್‌ ಬಾರಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ಕೆಎಲ್‌ ರಾಹುಲ್‌ 20 ಎಸೆತಗಳಲ್ಲಿ ಅಜೇಯ 39 ರನ್‌ ಬಾರಿಸಿದರೆ, ಸೂರ್ಯಕುಮಾರ್‌ ಯಾದವ್‌ 1 ರನ್‌ ಕಲೆಹಾಕಿದರು.

ಭಾರತದ ದಾಂಡಿಗರನ್ನು ಕಟ್ಟಿಹಾಕುವಲ್ಲಿ ವಿಫಲರಾದ ನ್ಯೂಜಿಲೆಂಡ್‌ ತಂಡದ ಪರ ಟಿಮ್‌ ಸೌಥಿ 3 ವಿಕೆಟ್‌ ಪಡೆದರೆ, ಟ್ರೆಂಟ್‌ ಬೌಲ್ಟ್‌ ಒಂದು ವಿಕೆಟ್‌ ಪಡೆದರು. ಇನ್ನುಳಿದ ಯಾವುದೇ ಬೌಲರ್‌ ಸಹ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಲಿಲ್ಲ.

ವಿರಾಟ್‌ ಕೊಹ್ಲಿ ವಿಶ್ವ ದಾಖಲೆ:

ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿರಾಟ್‌ ಕೊಹ್ಲಿ ಶತಕ ಬಾರಿಸುವ ಮೂಲಕ ನೂತನ ದಾಖಲೆ ನಿರ್ಮಿಸಿದ್ದಾರೆ. ಏಕದಿನ ಕ್ರಿಕೆಟ್‌ ಆವೃತ್ತಿಯಲ್ಲಿ ಅತಿಹೆಚ್ಚು ಶತಕ ಬಾರಿಸಿದ ಬ್ಯಾಟ್ಸ್‌ಮನ್‌ ಎಂಬ ವಿಶ್ವದಾಖಲೆ ಬರೆದಿದ್ದಾರೆ. ಈ ಮೂಲಕ ಹಿಂದಿನ ಸಚಿನ್‌ ದಾಖಲೆಯನ್ನು ಮುರಿದುಹಾಕಿದ್ದಾರೆ.

ಸಚಿನ್‌ ತೆಂಡೂಲ್ಕರ್‌ ತಮ್ಮ ಏಕದಿನ ಕ್ರಿಕೆಟ್‌ ಮಾದರಿಯಲ್ಲಿ 49 ಶತಕಗಳನ್ನು ಬಾರಿಸುವ ಮೂಲಕ ಅತಿಹೆಚ್ಚು ಶತಕ ಬಾರಿಸಿದ್ದ ದಾಖಲೆ ಹೊಂದಿದ್ದರು. ವಿರಾಟ್‌ ಕೊಹ್ಲಿ ಇಂದಿನ ಪಂದ್ಯದಲ್ಲಿ 50ನೇ ಏಕದಿನ ಶತಕ ಬಾರಿಸುವ ಮೂಲಕ ಈ ಬೃಹತ್‌ ದಾಖಲೆಯನ್ನು ಅಳಿಸಿಹಾಕಿದ್ದಾರೆ.  

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ