Mysore
25
overcast clouds
Light
Dark

ವಿಶ್ವಕಪ್‌: ಫೈನಲ್‌ ಪಂದ್ಯದಲ್ಲಿ ನಮಗೆ ಇದೇ ದೊಡ್ಡ ಸವಾಲು ಎಂದ ಆಸೀಸ್‌ ನಾಯಕ!

ನಾಳೆ ( ನವೆಂಬರ್‌ 19 ) ಬಹು ನಿರೀಕ್ಷಿತ ವಿಶ್ವಕಪ್‌ ಫೈನಲ್‌ ಪಂದ್ಯ ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆಯಲಿದ್ದು ಕ್ಷಣಗಣನೆ ಆರಂಭವಾಗಿದೆ. ಕ್ರಿಕೆಟ್‌ ಇತಿಹಾಸದಲ್ಲಿ ಅತಿಹೆಚ್ಚು ಬಾರಿ ಏಕದಿನ ವಿಶ್ವಕಪ್‌ ಫೈನಲ್‌ ಆಡಿರುವ ಆಸ್ಟ್ರೇಲಿಯಾ ವಿರುದ್ಧ ಈ ಬಾರಿಯ ಟೂರ್ನಿಯಲ್ಲಿ ಆಡಿರುವ ಎಲ್ಲಾ ಪಂದ್ಯಗಳಲ್ಲಿಯೂ ಜಯ ಸಾಧಿಸಿರುವ ಟೀಮ್‌ ಇಂಡಿಯಾ ಕಣಕ್ಕಿಳಿಯಲಿದೆ.

ಲೀಗ್‌ ಹಂತದಲ್ಲಿನ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದ ಭಾರತ ತಂಡ ಮುಂಬೈನ ವಾಂಖೆಡೆ ಅಂತರರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ ಪಂದ್ಯದಲ್ಲಿ ಬಲಿಷ್ಟ ನ್ಯೂಜಿಲೆಂಡ್‌ ತಂಡದ ವಿರುದ್ಧ 70 ರನ್‌ಗಳ ಜಯ ಸಾಧಿಸುವುದರ ಮೂಲಕ ಟೂರ್ನಿಯ ಕೊನೆಯ ಸೆಣಸಾಟಕ್ಕೆ ಲಗ್ಗೆ ಇಟ್ಟಿದೆ.

ಇನ್ನು ಐದು ಬಾರಿ ಟ್ರೋಫಿಯನ್ನು ಎತ್ತಿ ಹಿಡಿದಿರುವ ಆಸ್ಟ್ರೇಲಿಯಾ ಈ ಬಾರಿಯ ಟೂರ್ನಿಯ ಆರಂಭದಲ್ಲಿ ಎಡವಿತ್ತಾದರೂ ನಂತರದ ಪಂದ್ಯಗಳಲ್ಲಿ ಗೆದ್ದು ಸೆಮಿಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 3 ವಿಕೆಟ್‌ಗಳ ರೋಚಕ ಜಯ ಸಾಧಿಸುವುದರ ಮೂಲಕ ಫೈನಲ್‌ ಪ್ರವೇಶ ಪಡೆದುಕೊಂಡಿತ್ತು.

ಹೀಗೆ ವಿಶ್ವ ಕ್ರಿಕೆಟ್‌ನ ಎರಡು ಬಲಿಷ್ಟ ತಂಡಗಳ ನಡುವೆ ಈ ಬಾರಿಯ ಟೂರ್ನಿಯ ಫೈನಲ್‌ ಪಂದ್ಯ ನಡೆಯಲಿರುವುದು ಭಾರೀ ಕುತೂಹಲವನ್ನು ಹುಟ್ಟುಹಾಕಿದ್ದು ವಿಜಯಲಕ್ಷ್ಮಿ ಯಾರಿಗೆ ಒಲಿಯಲಿದ್ದಾಳೆ ಎಂಬುದು ನಾಳೆ ತಿಳಿಯಲಿದೆ. ಒಂದೆಡೆ ಎರಡೂ ತಂಡಗಳ ನಡುವಿನ ಅಭಿಮಾನಿಗಳ ಮನದಲ್ಲಿ ಪಂದ್ಯದ ಕುರಿತು ಕಾತುರತೆ ಜತೆಗೆ ಭಯ ಮೂಡಿದ್ದರೆ ಮತ್ತೊಂದೆಡೆ ಕಣಕ್ಕಿಳಿಯಲಿರುವ ಆಟಗಾರರಲ್ಲಿ ಸಹಜವಾಗಿಯೇ ಒತ್ತಡ ಹೆಚ್ಚಾಗಿದೆ.

ಅದರಲ್ಲಿಯೂ ಇತ್ತಂಡಗಳ ನಾಯಕರು ಈ ಮಹಾ ಕದನಕ್ಕೆ ವಿಶೇಷ ತಂತ್ರಗಳನ್ನು ಹೆಣೆಯುವಲ್ಲಿ ನಿರತರಾಗಿದ್ದು ಇಂದು ನಡೆದ ಸುದ್ದಿಗೋಷ್ಟಿಯಲ್ಲಿ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಫೈನಲ್‌ ಪಂದ್ಯ ಆಡುವುದು ತಮಗೆ ಯಾವ ರೀತಿಯ ಸವಾಲಾಗಿದೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

“ಟೀಮ್‌ ಇಂಡಿಯಾ ಎಲ್ಲಾ ವರ್ಗದಲ್ಲಿಯೂ ಬಲಿಷ್ಟತೆಯಿಂದ ಕೂಡಿರುವ ತಂಡವಾಗಿದೆ. ಇಂಥ ತಂಡದ ಜತೆ ಒಂದು ಲಕ್ಷ ಜನರ ಮುಂದೆ ಸೆಣಸಾಡುವುದು ನಮಗೆ ನಿಜಕ್ಕೂ ದೊಡ್ಡ ಸವಾಲಾಗಿದೆ” ಎಂದು ಪ್ಯಾಟ್‌ ಕಮಿನ್ಸ್‌ ಹೇಳಿಕೆ ನೀಡಿದ್ದಾರೆ. ಹೌದು, 132000 ಪ್ರೇಕ್ಷಕರು ಪಂದ್ಯ ವೀಕ್ಷಿಸಬಹುದಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾರತದ ಅಭಿಮಾನಿಗಳು ಕಿಕ್ಕಿರಿದು ಜಮಾಯಿಸಲಿದ್ದು, ಅವರ ಚೀರಾಟ ಹಾಗೂ ಭಾರತ ತಂಡಕ್ಕೆ ಅವರು ಕೊಡುವ ಬೆಂಬಲ ಆಸ್ಟ್ರೇಲಿಯಾ ತಂಡದ ಮೇಲೆ ಒತ್ತಡ ಹೇರುವುದು ಸುಳ್ಳಲ್ಲ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ