ಬೆಂಗಳೂರು : ಕಿರುತೆರೆಯ ಜನಪ್ರಿಯ ವೀಕೆಂಡ್ ವಿತ್ ರಮೇಶ್ ಶೋನಲ್ಲಿ ಸಾಧಕರ ಸಾಧನೆಯ ಬಗ್ಗೆ ಅದ್ಭುತವಾಗಿ ತೋರಿಸಲಾಗುತ್ತಿದೆ. ಇದೀಗ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ಸಾಧಕರ ಕುರ್ಚಿ ಏರುತ್ತಿದ್ದಾರೆ.
ಈ ಮೂಲಕ ರಾಜಕೀಯ ಸಾಧನೆಯ ಬಗ್ಗೆ ಅವರು ವೀಕೆಂಡ್ ಶೋನಲ್ಲಿ ಮಾತನಾಡಲಿದ್ದಾರೆ. ನಟ ರಮೇಶ್ ಅರವಿಂದ್ ಜೊತೆ ಈಗಾಗಲೇ ವೀಕೆಂಡ್ ಟೆಂಟ್ ನಲ್ಲಿ ರಮ್ಯಾ, ಡಾಲಿ, ಪ್ರೇಮ್, ಜೈ ಜಗದೀಶ್, ಪ್ರಭುದೇವ ಸೇರಿದಂತೆ ಹಲವು ಗಣ್ಯರು ತಮ್ಮ ಜೀವನವನ್ನು ರಿವೈಂಡ್ ಮಾಡಿಕೊಂಡು ನೋಡಿದ್ದಾರೆ. ಇದೀಗ ಟ್ರಬಲ್ ಶೂಟರ್ ಡಿಕೆಶಿ ಅವರು ಸಾಧಕರ ಸೀಟ್ ಅಲಂಕರಿಸುತ್ತಿದ್ದಾರೆ.
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ರಾಜಕೀಯ ವ್ಯಕ್ತಿಗಳು ಬರುತ್ತಿರುವುದು ಇದೇ ಮೊದಲೇನೂ ಅಲ್ಲ. ಹಲವು ಸೀಸನ್ ಗಳಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಅವರ ಸಾಲಿಗೆ ಡಿ.ಕೆ ಶಿವಕುಮಾರ್ ಸೇರಲಿದ್ದಾರೆ. ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಡಿಕೆ. ಶಿವಕುಮಾರ್ ಅವರ ಬಾಲ್ಯ, ಶಿಕ್ಷಣ, ರಾಜಕೀಯ ಎಂಟ್ರಿ, ಗೆಲುವು, ಜೊತೆಗೆ ಸಿಬಿಐ, ಇಡಿ, ಐಟಿ ಪ್ರಕರಣಗಳ ಬಗ್ಗೆಯೂ ಅನಾವರಣವಾಗಲಿದೆ.
ಈ ವಾರಾಂತ್ಯದಲ್ಲಿ ಡಿಕೆಶಿ ಅವರ ಎಪಿಸೋಡ್ ಚಿತ್ರೀಕರಣ ಮಾಡಲಾಗುತ್ತಿದ್ದು, ಬರುವ ಭಾನುವಾರ ಮುಹೂರ್ತ ಫಿಕ್ಸ್ ಆಗಿದೆ. ಹಾಗಾಗಿ ಮುಂದಿನ ವಾರಗಳಲ್ಲಿ ಅವರ ಕಂತು ಪ್ರಸಾರವಾಗಲಿದೆ.