ಕಡಪ: ಮಾಜಿ ಸಂಸದ ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಮುಖ್ಯಮಂತ್ರಿ ವೈಎಸ್ ಜಗನ್ ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್ ಭಾಸ್ಕರ್ ರೆಡ್ಡಿ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ.
ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ ಅವರ ಸಹೋದರ ಮತ್ತು ಜಗನ್ ರೆಡ್ಡಿ ಅವರ ಚಿಕ್ಕಪ್ಪ ವಿವೇಕಾನಂದ ಅವರು ಆಂಧ್ರ ವಿಧಾನಸಭಾ ಚುನಾವಣೆ ಮುನ್ನ 2019ರ ಮಾರ್ಚ್ 15ರ ರಾತ್ರಿ ಪುಲಿವೆಂದುಲದಲ್ಲಿರುವ ಅವರ ನಿವಾಸದಲ್ಲಿ ಶವವಾಗಿ ಪತ್ತೆಯಾಗಿದ್ದರು.
ಈ ಪ್ರಕರಣವನ್ನು ಆರಂಭದಲ್ಲಿ ರಾಜ್ಯ ಅಪರಾಧ ತನಿಖಾ ವಿಭಾಗದ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಿತ್ತು. ಜುಲೈ 2020 ರಲ್ಲಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಲಾಗಿತ್ತು.
ಕೊಲೆ ಪ್ರಕರಣದಲ್ಲಿ 2021ರ ಅಕ್ಟೋಬರ್ 26ರಂದು ಸಿಬಿಐ ಚಾರ್ಜ್‌ಶೀಟ್ ಸಲ್ಲಿಸಿತ್ತು. 2022ರ ಜನವರಿ 31 ರಂದು ಪೂರಕ ಚಾರ್ಜ್‌ಶೀಟ್ ಅನ್ನು ಸಲ್ಲಿಸಲಾಗಿತ್ತು.





