ಮೈಸೂರು ಜಿಲ್ಲೆಯಲ್ಲಿ ಎರಡು ವಾರದಲ್ಲಿ ಏಳು ಚಿರತೆಗಳು ಬೋನಿಗೆ
ಮೈಸೂರು:ಜಿಲ್ಲೆಯಲ್ಲಿ ಚಿರತೆಯ ಸದ್ದು ಮುಂದುವರಿದಿದೆ. ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿದ್ದ ಚಿರತೆಯೊಂದು ಮಂಗಳವಾರ ಬೋನಿಗೆ ಬಿದ್ದಿದೆ.
ಕಳೆದ 15 ದಿನಗಳಿಂದ ಗ್ರಾಮದ ಸುತ್ತ ಮುತ್ತ ಈ ಚಿರತೆ ಓಡಾಟ ನಡೆಸುತ್ತಿತ್ತು. ಮೂರು ದಿನಗಳ ಹಿಂದೆ ಕರು ಮೇಲೆ ದಾಳಿ ಮಾಡಿ ಕೊಂದು ಹಾಕಿತ್ತು. ಇದರಿಂದಾಗಿ ಜನರು ಭೀತಿಗೊಳಗಾಗಿದ್ದರು. ಚಿರತೆ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದ ಅರಣ್ಯಾಧಿಕಾರಿಗಳು ಅದೇ ಕರುವಿನ ಮೃತದೇಹವನ್ನು ಬೋನಿನಲ್ಲಿಟ್ಟು ಚಿರತೆಯ ಬರುವಿಕೆಗೆ ಕಾಯುತ್ತಿದ್ದರು.
ಅಧಿಕಾರಿಗಳ ಎಣಿಕೆಯಂತೆ ಕೀಳನಪುರ ಗ್ರಾಮದ ಪರಶಿವಪ್ಪ ಅವರ ಜಮೀನಿಗೆ ಕರು ಮಾಂಸದ ಆಸೆಯಿಂದ ಬಂದ ಚಿರತೆ ಬೋನಿಗೆ ಬಿದ್ದಿದೆ. ಸೆರೆಯಾದ ಚಿರತೆ ಸುಮಾರು 8 ವರ್ಷದ್ದೆಂದು ಅಂದಾಜಿಸಲಾಗಿದೆ. ಚಿರತೆಯನ್ನು ಸೆರೆ ಹಿಡಿದು ಕಾಲರ್ ಅಳವಡಿಸಿ ಮಲಮಹದೇಶ್ವರ ವನ್ಯ ಜೀವಿ ವಿಭಾಗದ ಅರಣ್ಯಕ್ಕೆ ಬಿಡಲಾಗಿದೆ. ಆರ್ಎಫ್ಓ ಸುರೇಂದ್ರ, ಡಿಆರ್‌ಎಫ್‌ಓ ವಿಜಯಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಈ ತಿಂಗಳಲ್ಲಿ ಮೈಸೂರು ತಾಲ್ಲೂಕಿನಲ್ಲಿ ಸೆರೆ ಸಿಕ್ಕಿದ ಏಳನೇ ಚಿರತೆ ಇದಾಗಿದೆ. ತಿ. ನರಸೀಪುರ ತಾಲೂಕಿನ ಬನ್ನೂರು ಹೋಬಳಿಯ ಬಿ.ಸೀಹಳ್ಳಿ ಗ್ರಾಮದಲ್ಲಿ ಡಿಸೆಂಬರ್ 16 ರಂದು ಕಬ್ಬು ಕಟಾವು ಮಾಡುತ್ತಿದ್ದ ವೇಳೆ ಮೂರು ಚಿರತೆ ಮರಿಗಳು ಪತ್ತೆಯಾಗಿದ್ದವು. ಇದಾದ ಮರುದಿನವೇ ಮಾರಶೆಟ್ಟಿ ಗ್ರಾಮದಲ್ಲಿ ಜಾನುವಾರು ಬೇಟೆಯಾಡುತ್ತಿದ್ದ ಮೂರು ವರ್ಷ ಪ್ರಾಯದ ಹೆಣ್ಣು ಚಿರತೆ ಕೊನೆಗೂ ಬೋನಿಗೆ ಬಿದ್ದಿತ್ತು.
ಡಿಸೆಂಬರ್ 22ರಂದು ತಿ.ನರಸೀಪುರ ಗ್ರಾಮದ ಮತ್ತತ್ತಿ ಗ್ರಾಮದಲ್ಲಿ ಕೋಳಿ ತಿನ್ನಲು ಬಂದ ಎರಡೂವರೆ ವರ್ಷದ ಚಿರತೆ ಸೆರೆಯಾಗಿತ್ತು.
ಡಿಸೆಂಬರ್ 23ರಂದು ತಿ.ನರಸೀಪುರ ತಾಲ್ಲೂಕಿನಲ್ಲಿ ಎರಡು ಜೀವಗಳನ್ನು ಬಲಿ ಪಡೆದಿದ್ದ ಎಂಟು ವರ್ಷಗಳ ಗಂಡು ಚಿರತೆ ಎಂ.ಎಲ್.ಹುಂಡಿ ಗ್ರಾಮದ ಮಲ್ಲಪ್ಪನ ಬೆಟ್ಟದಲ್ಲಿ ಸೆರೆ ಸಿಕ್ಕಿತ್ತು