Mysore
28
overcast clouds

Social Media

ಬುಧವಾರ, 25 ಜೂನ್ 2025
Light
Dark

ಡಿ.ಕೆ.ಸಹೋದರು ಕೊಳ್ಳೆ ಹೊಡೆದಿರುವ ನೈಸ್ ಭೂಮಿಯ ದಾಖಲೆ ಶೀಘ್ರವೇ ಬಹಿರಂಗ: ಎಚ್‌ಡಿಕೆ

ಬೆಂಗಳೂರು : ‘ನೈಸ್ ಅಕ್ರಮಗಳು, ಬೆಂಗಳೂರು ಸುತ್ತಮುತ್ತ ರೈತರ ಭೂಮಿ ಕೊಳ್ಳೆ ಹೊಡೆದಿದ್ದು, 2004ರಲ್ಲಿ ಡಿ.ಕೆ.ಶಿವಕುಮಾರ್ ನಗರಾಭಿವೃದ್ಧಿ ಮಂತ್ರಿ ಆಗಿದ್ದಿದ್ದು ರಾಮನಗರ ಜಿಲ್ಲೆ ಉದ್ಧಾರಕ್ಕೋ ಅಥವಾ ನೈಸ್ ಕಂಪೆನಿ ಉದ್ಧಾರ ಮಾಡಿ ಭೂಮಿ ಲೂಟಿ ಹೊಡೆಯಲಿಕ್ಕೋ? ಎಂಪಿ ಆಗುವುದಕ್ಕೆ ಮುಂಚೆ ಡಿ.ಕೆ.ಸುರೇಶ್ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ?’ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

ರವಿವಾರ ರಾಮನಗರದಲ್ಲಿ ಮಾತನಾಡಿದ ಅವರು, ‘ನಾಳೆ ಅಥವಾ ನಾಡಿದ್ದು ನೈಸ್ ಅಕ್ರಮಗಳು, ಡಿ.ಕೆ.ಸಹೋದರು ಕೊಳ್ಳೆ ಹೊಡೆದಿರುವ ನೈಸ್ ಭೂಮಿಯ ದಾಖಲೆಗಳನ್ನು ಬಹಿರಂಗ ಮಾಡುತ್ತೇನೆ. ನೈಸ್ ಭೂಮಿ ಸೇರಿ ಬೆಂಗಳೂರಿನ ಸುತ್ತಾ ರೈತರ ಭೂಮಿ ಲೂಟಿ ಮಾಡಿಕೊಂಡು ಬದುಕುತ್ತಿದ್ದಾನೆ. 2013ರಲ್ಲಿ ಎಂ.ಪಿ. ಆಗುವುದಕ್ಕೆ ಮುಂಚೆ ಇವನ ಆಸ್ತಿ ಎಷ್ಟಿತ್ತು? ಈಗ ಎಷ್ಟಿದೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಹಿ ಹಾಕಿದ್ದು ಗೌಡರೇ: ‘ನೈಸ್ ಯೋಜನೆಗೆ ದೇವೇಗೌಡರೇ ಒಪ್ಪಂದ ಮಾಡಿಕೊಂಡಿದ್ದು. ಇಲ್ಲ ಎಂದು ನಾನೆಲ್ಲಿ ಹೇಳಿದೆ, ಅವರು ರಸ್ತೆ ಆಗಲಿ ಎಂದು ಒಪ್ಪಂದ ಮಾಡಿಕೊಂಡರು. ಬೆಂಗಳೂರು-ಮೈಸೂರು ಜನಕ್ಕೆ ಅನುಕೂಲವಾಗಲಿ ಎಂದು ಈ ಯೋಜನೆಗೆ ಅವರು ಒಪ್ಪಿಗೆ ನೀಡಿದರು. ಬೆಂಗಳೂರು-ಮೈಸೂರು ನಡುವೆ ನಾಲ್ಕುಪಥದ ಹೆದ್ದಾರಿ ಮಾಡಬೇಕೆಂದು ದೇವಗೌಡರು ತೀರ್ಮಾನ ಮಾಡಿದರು. ಹಣ ಇಲ್ಲ ಎನ್ನುವ ಕಾರಣಕ್ಕೆ ಹೆಗಡೆ ಕಾಲದಲ್ಲಿ ಆ ಯೋಜನೆ ಆಗಲಿಲ್ಲ. ಕೊನೆಗೆ ದೇವೇಗೌಡರು ಸಿಎಂ ಆದ ಮೇಲೆ ಈ ಯೋಜನೆಗೆ ಚಾಲನೆ ನೀಡಿದರು ಎಂದು ತಿಳಿಸಿದರು.

ಲೂಟಿಯಲ್ಲಿ ಸಹೋದರರ ಪಾಲು ಎಷ್ಟಿದೆ?: ದೇವೇಗೌಡರು ಮಾಡಿಕೊಂಡ ಒಪ್ಪಂದದಂತೆ ರಸ್ತೆ ಆಗಿದ್ದಿದ್ದರೆ ಏಷ್ಯಾ ಖಂಡದಲ್ಲಿಯೇ ಬೆಂಗಳೂರು-ಮೈಸೂರು ನಗರಗಳು ದೊಡ್ಡ ಪ್ರಮಾಣದಲ್ಲಿ ಅಭಿವೃದ್ಧಿ ಆಗುತ್ತಿದ್ದವು. ವಾಣಿಜ್ಯ ಚಟುವಟಿಕೆಗಳು ಹೆಚ್ಚಿ ಜನರಿಗೆ ಜೀವನೋಪಾಯ ಸಿಗುತ್ತಿತ್ತು. ಆದರೆ, ಈ ಲೂಟಿಕೋರರು ಮಾಡಿದ್ದೇನು? ಬೆಂಗಳೂರು ಸುತ್ತಾಮುತ್ತ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು’ ಎಂದು ಅವರು ಟೀಕಿಸಿದರು.

‘ನೈಸ್ ಕಂಪೆನಿ ಮಾಡಿರುವ ಲೂಟಿಯಲ್ಲಿ ಡಿ.ಕೆ.ಸಹೋದರರ ಪಾಲು ಎಷ್ಟಿದೆ? ಈ ಬಗ್ಗೆ ದಾಖಲೆಗಳನ್ನೇ ಹೊರಗಿಡುತ್ತೇನೆ. 2004ರಲ್ಲಿ ಇವರ ಅಣ್ಣ (ಡಿ.ಕೆ.ಸುರೇಶ್ ಅಣ್ಣ ಡಿ.ಕೆ.ಶಿವಕುಮಾರ್) ರಾಮನಗರ ಜಿಲ್ಲೆ ಉದ್ಧಾರ ಮಾಡುವುದಕ್ಕೆ ಮಂತ್ರಿ ಆಗಿದ್ದರೋ ಅಥವಾ ನೈಸ್ ಕಂಪೆನಿ ಉದ್ಧಾರ ಮಾಡಿ ದುಡ್ಡು ಹೊಡೆಯೋದಕ್ಕೆ ಮಂತ್ರಿ ಆಗಿದ್ದರೋ? ಎಲ್ಲ ದಾಖಲೆಗಳನ್ನು ನಾಳೆ-ನಾಡಿದ್ದರಲ್ಲಿಯೇ ಬಿಡುಗಡೆ ಮಾಡುತ್ತೇನೆ ಎಂದು ಪ್ರಕಟಿಸಿದರು.

ಮೆಡಿಕಲ್ ಕಾಲೇಜ್ ಕನಕಪುರಕ್ಕೆ ಯಾಕೆ?: ‘ರಾಮನಗರ ಜಿಲ್ಲೆ ಜನರಿಗೆ ನನ್ನಿಂದ ಕಿಂಚಿತ್ತೂ ಅನ್ಯಾಯ ಆಗಿಲ್ಲ. ಜಿಲ್ಲೆಯ ಜನರನ್ನು ನಾನು ತಂದೆ-ತಾಯಿ ಸ್ಥಾನದಲ್ಲಿಟ್ಟು ನೋಡುವವನು. ಸ್ವಷ್ಟವಾಗಿ ಹೇಳಬಯಸುತ್ತೇನೆ. ಕಳೆದ ಚುನಾವಣೆ ಫಲಿತಾಂಶದ ಬಗ್ಗೆ ನಾನು ಜನರಿಗೆ ದೋಷ ಕೊಡಲ್ಲ. ನಾನು ಈ ಜಿಲ್ಲೆಗೆ ಕೊಟ್ಟಿರುವ ಕೊಡುಗೆ ಏನು ಎಂಬುದು ಆ ತಾಯಿ ಚಾಮುಂಡೇಶ್ವರಿ ನೋಡಿಕೊಳ್ಳುತ್ತಾಳೆ ಎಂದು ಕುಮಾರಸ್ವಾಮಿ ಉತ್ತರಿಸಿದರು.

ರಾಮನಗರಕ್ಕೆ ರಾಜೀವ್‍ಗಾಂಧಿ ವೈದ್ಯಕೀಯ ವಿವಿ ಕೊಟ್ಟವನು ನಾನು. ಆಮೇಲೆ ಪ್ರತ್ಯೇಕವಾಗಿ ಇವರ ಹಿಂಸೆ ತಾಳಲಾರದೆ 100 ಕೋಟಿ ರೂ.ಮೀಸಲಿಟ್ಟು ಕನಕಪುರಕ್ಕೆ ಮೆಡಿಕಲ್ ಕಾಲೇಜ್ ಮಂಜೂರು ಮಾಡಿದೆ. ಆಮೇಲೆ ಬಂದ ಬಿಜೆಪಿ ಸರಕಾರದವರು ಅದನ್ನು ಚಿಕ್ಕಬಳ್ಳಾಪುರಕ್ಕೆ ತೆಗೆದುಕೊಂಡು ಹೋದರು. ಈಗ ರಾಮನಗರದಲ್ಲಿ ಮಾಡಬೇಕಾದ ಮೆಡಿಕಲ್ ಕಾಲೇಜನ್ನು ಕನಕಪುರಕ್ಕೆ ತೆಗೆದುಕೊಂಡು ಹೋಗ್ತಾ ಇದ್ದಾರೆ, ಎಲ್ಲೋ ಮೂಲೆಗೆ. ಇದು ಇವರು ರಾಮನಗರಕ್ಕೆ ಕೊಡುತ್ತಿರುವ ಬಳುವಳಿ’ ಎಂದು ಟೀಕಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!