ಹುಬ್ಬಳ್ಳಿ : ಇನ್ನೂ ಮೂರ್ನಾಲ್ಕು ದಿನಗಳಲ್ಲಿ ಲೋಕಸಭಾ ಚುನಾವಣೆಯ ಅಭ್ಯರ್ಥಿಗಳ ಸಂಭಾವ್ಯ ಪಟ್ಟಿ ಸಿದ್ಧವಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ವೀಕ್ಷಕರನ್ನು ನೇಮಕ ಮಾಡಲಾಗಿತ್ತು. 75% ಕ್ಷೇತ್ರಕ್ಕೆ ಹೋಗಿ ಕಾರ್ಯಕರ್ತರನ್ನು ಭೇಟಿ ಆಗಿ ಬಂದಿದ್ದಾರೆ. ಅವರೆಲ್ಲರೂ ಈಗಾಗಲೇ ಅಭ್ಯರ್ಥಿಗಳ ವರದಿ ತಯಾರಿ ಮಾಡಿಕೊಂಡಿದ್ದಾರೆ. ವೀಕ್ಷಕರು ಇನ್ನೂ ಅಭ್ಯರ್ಥಿಗಳ ವರದಿ ಕೊಟ್ಟಿಲ್ಲ, ಈ ಬಗ್ಗೆ ನಮ್ಮ ವರಿಷ್ಠರು ಸಹ ಕೆಲವು ಸಲಹೆ ನೀಡಿದ್ದಾರೆ ಎಂದಿದ್ದಾರೆ.
ಕರ್ನಾಟಕಕ್ಕೆ 50ನೇ ವರ್ಷ, ಇಡೀ ವರ್ಷ ಹಬ್ಬದ ಆಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ವಿಜಯನಗರ ನಾಡು ಹಂಪಿಯಿಂದ ಜ್ಯೋತಿ ಶುರುವಾಗಿದೆ. ಇದಕ್ಕೆ ಮುಖ್ಯಮಂತ್ರಿಗಳು ಚಾಲನೆ ನೀಡಿದ್ದಾರೆ. ಮುಂದಿನ ಭಾಗವಾಗಿ ಇಂದು ಗದಗದಲ್ಲಿ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಇಂದು 10 ಜನ ಮಂತ್ರಿಗಳು ಗದಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದೇವೆ. ಈಗಾಗಲೇ ಮುಖ್ಯಮಂತ್ರಿಗಳು ಭುವನೇಶ್ವರಿ ಭವನವನ್ನು ಕಟ್ಟಿಸಲು ತೀರ್ಮಾನ ಮಾಡಿದ್ದಾರೆ ಎಂದಿದ್ದಾರೆ.