Mysore
18
few clouds

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಯೋಧನನ್ನು ಪಿಎಫ್‌ಐ ಕಾರ್ಯಕರ್ತರು ಅಪಹರಿಸಿ ಥಳಿಸಿದ ಪ್ರಕರಣ : ಇದು ಯೋಧನೇ ಕಟ್ಟಿದ ಕಥೆ

ತಿರುವನಂತಪುರಂ : ಕೇರಳದ ಕಡಕ್ಕಲ್‌ನಲ್ಲಿ ಭಾರತೀಯ ಯೋಧನ ಮೇಲೆ ಹಲ್ಲೆ ನಡೆಸಿ ಬೆನ್ನ ಮೇಲೆ ಪಿಎಫ್‌ಐ ಎಂದು ಬರೆಯಲಾದ ಘಟನೆ ಅನಿರೀಕ್ಷಿತ ತಿರುವು ಪಡೆದುಕೊಂಡಿದ್ದು, ಸ್ವತಃ ಯೋಧನೇ ಕಟ್ಟಿರುವ ಕಥೆ ಇದು ಎಂದು ತನಿಖೆ ವೇಳೆ ಸಾಬೀತಾಗಿದೆ.

ರಾಜಸ್ಥಾನದಲ್ಲಿ ನಿಯೋಜನೆಗೊಂಡಿದ್ದ ಭಾರತೀಯ ಸೇನೆಯ ಯೋಧ ಶೈನ್ ಕುಮಾರ್ ತನ್ನನ್ನು ಆರು ಮಂದಿ ಅಪಹರಿಸಿ ಥಳಿಸಿದ್ದಾರೆಂದು ದೂರು ನೀಡಿದ್ದರು. ಯೋಧನ ಸ್ನೇಹಿತ ಜೋಶಿ ಎಂಬಾತನನ್ನು ಕಸ್ಟಡಿಗೆ ಪಡೆದು ವಿಚಾರಿಸಿದಾಗ ಇದೆಲ್ಲಾ ಕಟ್ಟು ಕತೆ ಎನ್ನುವುದು ಬಹಿರಂಗಗೊಂಡಿದೆ ಎಂದು madhyamam.com ವರದಿ ಮಾಡಿದೆ.

ತಾನು ಭಾನುವಾರ ರಾತ್ರಿ ಸ್ನೇಹಿತನ ಮನೆಗೆ ಹೋಗುವಾಗ ಹತ್ತಿರದ ಅರಣ್ಯ ಪ್ರದೇಶಕ್ಕೆ ಕರೆದೊಯ್ದು ವ್ಯಕ್ತಿಗಳ ಗುಂಪು ತನ್ನನ್ನು ಕಟ್ಟಿ ಹಾಕಿ ಥಳಿಸಿದ್ದಾರೆ ಎಂದು ಆರೋಪಿಸಿದ್ದರು. ತನ್ನ ಮೇಲೆ ದೈಹಿಕವಾಗಿ ಹಲ್ಲೆ ಮಾಡಿದ್ದು ಮಾತ್ರವಲ್ಲದೆ ತನ್ನ ಅಂಗಿಯನ್ನು ಹರಿದು ಹಾಕಿ, ಹಸಿರು ಬಣ್ಣದಲ್ಲಿ ಪಿಎಫ್ಐ ಎಂದು ಬರೆದಿದ್ದಾರೆ ಎಂದು ಅವರು ಆರೋಪಿಸಿದ್ದರು.

ಆದರೆ, ತನಿಖೆ ಮುಂದುವರೆದಂತೆ ಇಡೀ ಘಟನೆಗೆ ತಿರುವು ಪಡೆದುಕೊಂಡಿದ್ದು, ಸುಲಭದ ದಾರಿಯಲ್ಲಿ ಜನಪ್ರಿಯಗೊಳ್ಳಲು ಸ್ವತಃ ಯೋಧನೇ ಮಾಡಿರುವ ಕಟ್ಟು ಕತೆ ಎಂದು ಪೊಲೀಸರು ಕಂಡು ಕೊಂಡಿದ್ದಾರೆ. ಯೋಧನ ಬೆನ್ನಿನ ಮೇಲೆ ಪಿಎಫ್ಐ ಎಂದು ಶೈನ್‌ ಕುಮಾರ್‌ನ ಗೆಳೆಯ ಜೋಶಿ ಬರೆದಿರುವುದಾಗಿ ಒಪ್ಪಿಕೊಂಡಿದ್ದಾನೆ. ಶೈನ್ ಅವರ ಬೆನ್ನಿನ ಮೇಲೆ ಪಿಎಫ್ಐ ಎಂದು ಬರೆಯಲು ಬಳಸಲಾದ ಬಣ್ಣ ಮತ್ತು ಬ್ರಷ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೈನ್ ಗೆ ಖ್ಯಾತಿ ಮತ್ತು ಮನ್ನಣೆ ಪಡೆಯುವ ಆಸೆ ಇತ್ತು, ಇದಕ್ಕಾಗಿ ತನ್ನ ಮೇಲೆ ದಾಳಿ ನಡೆದಿರುವ ಬಗ್ಗೆ ಕಥೆ ಕಟ್ಟಲಾಗಿತ್ತು ಎಂದು ಜೋಶಿ ತಿಳಿಸಿದ್ದಾನೆ. ಇಬ್ಬರನ್ನೂ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!