ಹೈದರಾಬಾದ್ : ಬಿಜೆಪಿಯವರಿಗೆ ಧೈರ್ಯ ಇದ್ದರೆ ಚೀನಾದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದು ಅಖಿಲ ಭಾರತ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸವಾಲು ಹಾಕಿದ್ದಾರೆ.
ತೆಲಂಗಾಣದ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುವುದಾಗಿ ಬಿಜೆಪಿ ರಾಜ್ಯ ಮುಖ್ಯಸ್ಥ ಬಂಡಿ ಸಂಜಯ್ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಹಳೆಯ ನಗರದಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡುವುದಾಗಿ ಅವರು ಹೇಳುತ್ತಾರೆ, ನಿಮಗೆ ಧೈರ್ಯವಿದ್ದರೆ ಚೀನಾ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿ ಎಂದು ಸವಾಲು ಎಸೆದರು.
ಹೈದರಾಬಾದ್ ನಲ್ಲಿ ಚುನಾವಣಾ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಬಂಡಿ ಸಂಜಯ್, ಹಳೆ ಹೈದರಾಬಾದ್ ಭಾಗದಲ್ಲಿ ರೋಹಿಂಗ್ಯಾ ಮುಸ್ಲಿಮರು, ಪಾಕಿಸ್ತಾನಿ ಪ್ರಜೆಗಳು ಹಾಗೂ ಅಫ್ಘಾನಿಸ್ತಾನ ನಿರಾಶ್ರಿತರು ನುಸುಳಿದ್ದು, ಅವರನ್ನು ಹೊರದಬ್ಬಲು ಸರ್ಜಿಕಲ್ ಸ್ಟ್ರೈಕ್ ಮಾಡಲಾಗುವುದು ಎಂದು ಹೇಳಿದ್ದರು.
ಇನ್ನೂ ಈ ವೇಳೆ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಸ್ಟೀರಿಂಗ್ ನಿಮ್ಮ ಕೈಯಲ್ಲಿದ್ದರೆ ನಿಮಗೆ (ಅಮಿತ್ ಶಾ) ಏಕೆ ಭಯ? ದೇವಸ್ಥಾನಗಳಿಗೆ ಕೋಟ್ಯಂತರ ರೂಪಾಯಿ ಮಂಜೂರಾಗಿದ್ದು, ಸ್ಟೀರಿಂಗ್ ನನ್ನ ಕೈಯಲ್ಲಿದೆ ಎಂದು ಅವರು (ಅಮಿತ್ ಷಾ) ಹೇಳುತ್ತಾರೆ, ಸ್ಟೀರಿಂಗ್ ನಿಮ್ಮ ಕೈಯಲ್ಲಿದ್ದರೆ, ನೀವು ಯಾಕೆ ನೋವು ಅನುಭವಿಸುತ್ತೀರಿ? ಎಂದು ಓವೈಸಿ ಪ್ರಶ್ನೆ ಮಾಡಿದ್ದಾರೆ.
ಬಿಜಪಿ ನಾಯಕ ಬಂಡಿ ಸಂಜಯ್, ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಟಿಆರ್‍ಎಸ್) ಮತ್ತು ಎಐಎಂಐಎಂ ಮುಖ್ಯಸ್ಥ ಓವೈಸಿ ಅವರು ರೋಹಿಂಗ್ಯಾ, ಪಾಕಿಸ್ತಾನಿ ಮತ್ತು ಅಫ್ಘಾನಿಸ್ತಾನಿ ಮತದಾರರ ಸಹಾಯದಿಂದ ಹೈದರಾಬಾದ್ ನಾಗರಿಕ ಚುನಾವಣೆಯಲ್ಲಿ ಗೆಲ್ಲಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು.
ಹೀಗಾಗಿ “ಜಿಎಚ್‍ಎಂಸಿ ಚುನಾವಣೆಯನ್ನು ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ರೊಹಿಂಗ್ಯಾಗಳ ಮತದಾರರಿಲ್ಲದೆ ನಡೆಸಬೇಕು. ನಾವು ಚುನಾವಣೆಯಲ್ಲಿ ಗೆದ್ದ ನಂತರ ಓಲ್ಡ್ ಸಿಟಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸುತ್ತೇವೆ” ಎಂದು ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯ ಪ್ರಚಾರದಲ್ಲೂ ಹೇಳಿದ್ದರು.