Mysore
22
broken clouds

Social Media

ಸೋಮವಾರ, 13 ಜನವರಿ 2025
Light
Dark

ಡಿಸೆಂಬರ್ 11 ಕ್ಕೆ ಆರ್ಟಿಕಲ್ 370 ರದ್ದತಿ ಕುರಿತು ಸುಪ್ರೀಂ ಕೋರ್ಟ್ ಆದೇಶ

ನವದೆಹಲಿ : ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದತಿ ಕುರಿತು ಸಲ್ಲಿಸಲಾಗಿದ್ದ ಅರ್ಜಿಗಳ ವಿಚಾರಣೆಯ ತೀರ್ಪು ಸುಪ್ರೀಂ ಕೋರ್ಟ್‌ನಲ್ಲಿ ಡಿಸೆಂಬರ್ 11 ಕ್ಕೆ ಪ್ರಕಟವಾಗಲಿದೆ.

16 ದಿನಗಳ ವಿಚಾರಣೆಯ ನಂತರ ಸೆಪ್ಟೆಂಬರ್‌.05 ರಂದು ಸುಪ್ರೀಂ ಕೋರ್ಟ್ ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿತ್ತು. ಜಮ್ಮು-ಕಾಶ್ಮೀರದ ಆರ್ಟಿಕಲ್ 370 ರದ್ದತಿಯನ್ನು ವಿರೋಧಿಸಿ ಅರ್ಜಿ ಸಲ್ಲಿಸಿದ್ದವರ ಪರವಾಗಿ ಕಪಿಲ್ ಸಿಬಲ್, ಗೋಪಾಲ್ ಸುಬ್ರಹ್ಮಣೀಯಮ್, ರಾಜೀವ್ ಧವನ್, ಜಫರ್ ಶಾ, ದುಷ್ಯಂತ್ ದಾವೆ ವಾದಿಸಿದ್ದರು.

ಸಿಜೆಐ ಡಿವೈ ಚಂದ್ರಚೂಡ್ ನೇತೃತ್ವದ ಪಂಚ ಸದಸ್ಯ ಪೀಠ ತೀರ್ಪು ಪ್ರಕಟಿಸಲಿದೆ ಎಂದು ಕೋರ್ಟ್ ವೆಬ್ ಸೈಟ್‌ನಲ್ಲಿ ತಿಳಿಸಲಾಗಿದೆ. ಪಂಚ ಸದಸ್ಯ ಪೀಠದಲ್ಲಿ ನ್ಯಾ. ಸಂಜಯ್ ಕಿಶನ್ ಕೌಲ್, ನ್ಯಾ. ಸಂಜೀವ್ ಖನ್ನಾ, ನ್ಯಾ. ಬಿಆರ್ ಗವಾಯಿ ಹಾಗೂ ನ್ಯಾ.ಸೂರ್ಯ ಕಾಂತ್ ಸಹ ಇದ್ದಾರೆ.

ಇತ್ತ ಕೇಂದ್ರ ಸರ್ಕಾರ ದಾಖಲೆ ಮೂಲಕ ತನ್ನ ನಿರ್ಧಾರವನ್ನು ಸಮರ್ಥಿಸಿಕೊಂಡಿತ್ತು. ಆರ್ಟಿಕಲ್ 370 ರದ್ದಿನಿಂದ ಜಮ್ಮು ಮತ್ತು ಕಾಶ್ಮೀರದಲ್ಲಾದ ಬದಲಾವಣೆ ಮಾಹಿತಿಯನ್ನೂ ಕೋರ್ಟ್ ಮುಂದೆ ಇಟ್ಟಿತ್ತು. ವಿಶೇಷ ಸ್ಥಾನಮಾನ ರದ್ದತಿಯಿಂದ ಕಾಶ್ಮೀರದಲ್ಲಿ 890 ಕೇಂದ್ರೀಯ ಕಾನೂನು ಅಳವಡಿಸಲಾಗಿದೆ. ಇದರಿಂದ ಮೊದಲು ಹಕ್ಕುಗಳಿಂದ ವಂಚಿತರಾದವರು ಈಗ ಸರ್ಕಾರಿ ಉದ್ಯೋಗಗಳನ್ನು ಪಡೆಯಬಹುದಾಗಿದೆ. ಆಸ್ತಿ ಖರೀದಿಸಬಹುದಾಗಿದೆ. ಇದಲ್ಲದೇ ಅನ್ಯಾಯ, ತಾರತಮ್ಯ ಮಾಡುವ 250 ರಾಜ್ಯ ಕಾನೂನುಗಳನ್ನು ರದ್ದುಗೊಳಿಸಲಾಗಿದೆ. ಇದರಿಂದ ಕಾಶ್ಮೀರದಲ್ಲಿ ಕೈಗಾರಿಕಾ ಸ್ಥಾಪನೆಯ ಹಾದಿ ಸುಲಭವಾಗಿದ್ದು, ಹೂಡಿಕೆ ಪರಿಸರ ನಿರ್ಮಾಣವಾಗಿದೆ ಎಂದಿತ್ತು.

2021ರಲ್ಲಿ ಕಾಶ್ಮೀರದಲ್ಲಿ ಒಳನುಸುಳುವಿಕೆ ಪ್ರಮಾಣ ಶೇ. 33ಕ್ಕೆ ಇಳಿಕೆಯಾಗಿದೆ. ಕದನ ವಿರಾಮ ಉಲ್ಲಂಘನೆಯಲ್ಲಿ ಶೇ. 90ರಷ್ಟು ಇಳಿಕೆ, ಶೇ.61ರಷ್ಟು ಭಯೋತ್ಪಾದಕ ಕೃತ್ಯಗಳಲ್ಲಿ ಇಳಿಕೆ ಹಾಗೂ ಉಗ್ರರಿಂದ ಅಪಹರಣಕ್ಕೊಳಗಾಗುವ ಪ್ರಮಾಣ ಶೇ.80 ರಷ್ಟು ಇಳಿಕೆಯಾಗಿದೆ ಎಂದು ಮಾಹಿತಿ ನೀಡಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ