ನವದೆಹಲಿ : ಸಿಕ್ಕಿಂ ಹಠಾತ್ ಪ್ರವಾಹದಿಂದ ಸಾವಿಗೀಡಾದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ. ಮೃತರಲ್ಲಿ ಏಳು ಸೈನಿಕರು ಹಾಗೂ ಸ್ಥಳೀಯರು ಸೇರಿದ್ದಾರೆ. ಅಲ್ಲದೇ 140 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಳೆದ ಮೂರು ದಿನಗಳಲ್ಲಿ ನೆರೆಯ ರಾಜ್ಯ ಪಶ್ಚಿಮ ಬಂಗಾಳದ ತೀಸ್ತಾ ನದಿ ಪಾತ್ರದಲ್ಲಿ 27 ಮೃತದೇಹಗಳು ಪತ್ತೆಯಾಗಿವೆ. ಈ ಪೈಕಿ ಏಳು ಮೃತದೇಹಗಳನ್ನು ಗುರುತಿಸಲಾಗಿದೆ. ಪ್ರವಾಹದ ಬಳಿಕ ಸಾವಿರಾರು ಜನರನ್ನು ಸುರಕ್ಷಿತ ಸ್ಥಳಕ್ಕೆ ಕಳುಹಿಸಲಾಗಿದೆ. ಒಟ್ಟಾರೆ 1,173 ಮನೆಗಳಿಗೆ ತೀವ್ರ ಹಾನಿಯಾಗಿದೆ ಮತ್ತು 2,413 ಜನರನ್ನು ಇಲ್ಲಿಯವರೆಗೂ ರಕ್ಷಿಸಲಾಗಿದೆ. 25,000 ಜನರಿಗೆ ಪ್ರವಾಹದಿಂದ ತೊಂದರೆಯಾಗಿದೆ ಎಂದು ಸರ್ಕಾರ ಮಾಹಿತಿ ನೀಡಿದೆ.
ಪ್ರವಾಹದಿಂದ ಹಾನಿಗೊಳಗಾದ ರಸ್ತೆಗಳ ನಿರ್ಮಾಣವನ್ನು ಆದಷ್ಟು ಬೇಗ ಮಾಡಲಾಗುತ್ತದೆ. ಮೃತರ ಕುಟುಂಬಗಳಿಗೆ 4 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಅಧಿಕಾರಿಗಳು ಹಗಲೂ ರಾತ್ರಿ ಜನರ ರಕ್ಷಣೆಗಾಗಿ ಶ್ರಮಿಸುತ್ತಿದ್ದಾರೆ. ಕೇಂದ್ರ ಸರ್ಕಾರಕ್ಕೆ 44 ಕೋಟಿ ರೂ. ಬಿಡುಗಡೆ ಮಾಡುವಂತೆ ಮನವಿ ಮಾಡಲಾಗಿದೆ ಎಂದು ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ತಿಳಿಸಿದ್ದಾರೆ.
ಭಾರತ ಹವಾಮಾನ ಇಲಾಖೆ ಮುಂದಿನ ಐದು ದಿನಗಳಲ್ಲಿ ಮತ್ತೆ ಮಳೆಯಾಗುವ ಸೂಚನೆ ನೀಡಿದೆ. ಅಲ್ಲದೇ ಈಗ ಇರುವ ಹವಾಮಾನ ಪರಿಸ್ಥಿತಿಯಲ್ಲಿ ಹೆಲಿಕಾಪ್ಟರ್ ಬಳಕೆ ಹಾಗೂ ವಿಮಾನಯಾನಕ್ಕೂ ತೊಡಕಾಗುತ್ತಿದೆ. ಸೇತುವೆಗಳ ಹಾನಿಯಿಂದ ರಕ್ಷಣಾ ಕಾರ್ಯದಲ್ಲೂ ವಿಳಂಬವಾಗುತ್ತಿದೆ. ಮತ್ತೆ ಇಂದು ರಕ್ಷಣಾ ಕಾರ್ಯಾಚರಣೆ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೇಘಸ್ಫೋಟದಿಂದ ಉಂಟಾದ ಭಾರೀ ಮಳೆಯಿಂದ ಮೊದಲು ಗ್ಲೇಶಿಯಲ್ ಸರೋವರ ಉಕ್ಕಿ ಹಠಾತ್ ಪ್ರವಾಹವನ್ನು ಉಂಟುಮಾಡಿತು. ಬಳಿಕ ಚುಂಗ್ಥಾಂಗ್ ಅಣೆಕಟ್ಟಿನಿಂದ ನೀರನ್ನು ಬಿಡುಗಡೆಗೆ ಮಾಡಲಾಯಿತು. ಇದು ತೀಸ್ತಾ ನದಿಯ ನೀರಿನ ಮಟ್ಟವನ್ನು ತೀವ್ರವಾಗಿ ಹೆಚ್ಚಿಸಿತು. ಇದರಿಂದ ಪ್ರವಾಹ ತೀವ್ರ ಸ್ವರೂಪ ಪಡೆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.