ಪೂರ್ವ ಉಕ್ರೇನ್‌ ನಗರದ ಪಿಜ್ಜಾ ರೆಸ್ಟೋರೆಂಟ್‌ಗೆ ಅಪ್ಪಳಿಸಿದ ರಷ್ಯಾದ ಕ್ಷಿಪಣಿ: 9 ಮಂದಿ ಸಾವು

ಕೀವ್: ಪೂರ್ವ ಉಕ್ರೇನ್‌ನ ಕ್ರಾಮಾಟೋರ್ಸ್ಕ್ ನಗರದ ಜನನಿಬಿಡ ಪಿಜ್ಜಾ ರೆಸ್ಟೋರೆಂಟ್‌ಗೆ ರಷ್ಯಾದ ಕ್ಷಿಪಣಿ ಅಪ್ಪಳಿಸಿದ ಪರಿಣಾಮ ಮೂವರು ಮಕ್ಕಳು ಸೇರಿದಂತೆ ಕನಿಷ್ಠ ಒಂಬತ್ತು ಜನರು ಸಾವಿಗೀಡಾಗಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ರಕ್ಷಣಾ ಕಾರ್ಯಕರ್ತರು ನಾಶವಾದ ಕಟ್ಟಡದ ಅವಶೇಷಗಳಲ್ಲಿ ಹುಡುಕಾಟ ಮುಂದುವರೆಸಿದ್ದಾರೆ.

ಮಂಗಳವಾರ ಸಂಜೆ ಕ್ರಮಾಟೋರ್ಸ್ಕ್ ನಗರದ ರಿಯಾ ಪಿಜ್ಜಾ ರೆಸ್ಟೋರೆಂಟ್ ಮೇಲೆ ನಡೆಸಿದ ದಾಳಿಯಲ್ಲಿ 56 ಜನರು ಗಾಯಗೊಂಡಿದ್ದಾರೆ. 16 ತಿಂಗಳ ಹಳೆಯ ಯುದ್ಧದಲ್ಲಿ ರಷ್ಯಾ ಒಂದೇ ಒಂದು ತಂತ್ರವನ್ನು ಹೆಚ್ಚಾಗಿ ಬಳಸಿದೆ ಎಂದು ಉಕ್ರೇನ್ ಆಂತರಿಕ ವ್ಯವಹಾರಗಳ ಸಚಿವಾಲಯ ಇತ್ತೀಚಿನ ಬಾಂಬ್ ದಾಳಿಯನ್ನು ಉಲ್ಲೇಖಿಸಿ ತಿಳಿಸಿದೆ.

ದಾಳಿಯ ಪರಿಣಾಮವಾಗಿ 14 ವರ್ಷ ವಯಸ್ಸಿನ ಇಬ್ಬರು ಸಹೋದರಿಯರು ಸಾವಿಗೀಡಾಗಿದ್ದಾರೆ ಎಂದು ಕ್ರಾಮಾಟೋರ್ಸ್ಕ್ ಸಿಟಿ ಕೌನ್ಸಿಲ್‌ನ ಶೈಕ್ಷಣಿಕ ಇಲಾಖೆ ತಿಳಿಸಿದೆ. ರಷ್ಯಾದ ಕ್ಷಿಪಣಿಗಳು ಇಬ್ಬರು ಯುವತಿಯರ ಹೃದಯ ಬಡಿತವನ್ನು ನಿಲ್ಲಿಸಿದವು ಎಂದು ಟೆಲಿಗ್ರಾಮ್ ಪೋಸ್ಟ್‌ನಲ್ಲಿ ಅದು ಹೇಳಿದೆ.

ಮತ್ತೊಂದು ಮೃತ ಮಗುವಿನ ವಯಸ್ಸು 17 ವರ್ಷವಾಗಿದೆ ಎಂದು ಪ್ರಾಸಿಕ್ಯೂಟರ್ ಜನರಲ್ ಆಂಡ್ರಿ ಕೊಸ್ಟಿನ್ ತಿಳಿಸಿದ್ದಾರೆ|

ರಷ್ಯಾ ನಡೆಸಿರುವ ದಾಳಿಯಲ್ಲಿ S-300 ಕ್ಷಿಪಣಿಗಳನ್ನು ಬಳಸಲಾಗಿದೆ. ದಾಳಿಯಲ್ಲಿ 18 ಬಹುಮಹಡಿ ಕಟ್ಟಡಗಳು, 65 ಮನೆಗಳು, ಐದು ಶಾಲೆಗಳು, ಎರಡು ಶಿಶುವಿಹಾರಗಳು, ಶಾಪಿಂಗ್ ಸೆಂಟರ್, ಆಡಳಿತ ಕಟ್ಟಡ ಮತ್ತು ಮನರಂಜನಾ ಕಟ್ಟಡವನ್ನು ಹಾನಿಗೊಳಿಸಲಾಗಿದೆ ಎಂದು ಪ್ರಾದೇಶಿಕ ಗವರ್ನರ್ ಪಾವ್ಲೊ ಕಿರಿಲೆಂಕೊ ಹೇಳಿದ್ದಾರೆ.

ಕ್ರಾಮಾಟೋರ್ಸ್ಕ್ ಒಂದು ಮುಂಚೂಣಿ ನಗರವಾಗಿದ್ದು, ಅದು ಉಕ್ರೇನ್ ಸೇನೆಯ ಪ್ರಾದೇಶಿಕ ಪ್ರಧಾನ ಕಛೇರಿಯನ್ನು ಹೊಂದಿದೆ.
ಪಿಜ್ಜಾ ರೆಸ್ಟೊರೆಂಟ್‌ಗೆ ಪತ್ರಕರ್ತರು, ಸಹಾಯ ಕಾರ್ಯಕರ್ತರು ಮತ್ತು ಸೈನಿಕರು ಮತ್ತು ಸ್ಥಳೀಯರು ಹೆಚ್ಚಾಗಿ ಬರುತ್ತಿದ್ದರು. ಇದು ಡೊನೆಟ್ಸ್ಕ್‌ನಲ್ಲಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ರಷ್ಯಾ ಸ್ವಾಧೀನಪಡಿಸಿಕೊಳ್ಳುವುದಾಗಿ ಹೇಳಿಕೊಂಡ ನಾಲ್ಕು ಉಕ್ರೇನ್ ಪ್ರಾಂತ್ಯಗಳಲ್ಲಿ ಒಂದಾಗಿದೆ. ಆದರೆ, ಸಂಪೂರ್ಣವಾಗಿ ರಷ್ಯಾದ ವಶದಲ್ಲಿಲ್ಲ.

ರಷ್ಯಾ 2015 ರಿಂದ ಕ್ರಿಮಿಯಾವನ್ನು ಆಕ್ರಮಿಸಿಕೊಂಡಿದೆ. ರಷ್ಯಾ ಭಾಗಶಃ ಆಕ್ರಮಿಸಿಕೊಂಡಿರುವ ಪ್ರಾಂತ್ಯಗಳಲ್ಲಿ ಉಕ್ರೇನ್‌ನ ಹಿಡಿತದಲ್ಲಿರುವ ಭಾಗಗಳು ವಿಶೇಷವಾಗಿ ರಷ್ಯಾದ ಬಾಂಬ್ ದಾಳಿಯಿಂದ ತೀವ್ರವಾಗಿ ಹಾನಿಗೊಳಗಾಗಿವೆ ಮತ್ತು ಯುದ್ಧವನ್ನು ಪರಿಹರಿಸುವಲ್ಲಿ ಪ್ರಮುಖ ತಡೆಗೋಡೆಯಾಗಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ