ಬೆಂಗಳೂರು: ‘ರಾಜ್ಯದ ಎಲ್ಲಾ ಅರೆ ನ್ಯಾಯಿಕ ಪ್ರಾಧಿಕಾರಗಳಲ್ಲಿ ವಿಡಿಯೊ ಕಾನ್ಫರೆನ್ಸ್ (ವಿ.ಸಿ) ಮೂಲಕವೂ ಕಂದಾಯ ವ್ಯಾಜ್ಯಗಳ ವಿಚಾರಣೆ ನಡೆಸುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಸಿ’ ಎಂದು ಹೈಕೋರ್ಟ್, ಗ್ರಾಮೀಣಾ ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೂಚಿಸಿದೆ.
ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬಿಂಡಿಗನವಿಲೆ ಹೋಬ ಳಿಯ ಮಂಜೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಸೂಚನೆ ನೀಡಿತು.
ಸದ್ಯ ಎಲ್ಲ ನ್ಯಾಯಾಲಯಗಳಲ್ಲಿ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಕರಣಗಳ ವಿಚಾರಣೆ ನಡೆಯುತ್ತಿವೆ. ಹೀಗಾಗಿ, ಇ–ಆಡಳಿತದ ಸಹಕಾರದಲ್ಲಿ ಅರೆ ನ್ಯಾಯಾಂಗ ಪ್ರಾಧಿಕಾರಗಳಲ್ಲಿಯೂ ವಿಡಿಯೊ ಕಾನ್ಫರೆನ್ಸಿಂಗ್ ವಿಚಾರಣೆ ಸಾಧ್ಯವಿದೆಯೇ ಎಂದು ಪರಿಶೀಲಿಸಿ ಎಂದು ನಿರ್ದೇಶಿಸಿದೆ.
ಅರೆನ್ಯಾಯಿಕ ಪ್ರಾಧಿಕಾರಗಳು ತಮ್ಮ ಮುಂದೆ ಬರುವ ಕಂದಾಯ ವ್ಯಾಜ್ಯಗಳ ವಿಚಾರಣೆ ಮುಂದೂಡಿಕೆಗಾಗಿ ವಕೀಲರು ಮತ್ತು ಕಕ್ಷಿದಾರರಿಗೆ ನೀಡುವ ಕಾರಣಗಳು ಅಸ್ಪಷ್ಟವಾಗಿರುತ್ತವೆ. ಅಂತೆಯೇ ಸೂಕ್ತ ಮತ್ತು ಅಗತ್ಯ ರೀತಿಯಲ್ಲಿ ವಿಚಾರಣೆ ನಡೆಸದೇ ಇರುವುದೂ ಈ ನ್ಯಾಯಪೀಠದ ಗಮನಕ್ಕೆ ಈ ಹಿಂದೆಯೂಬಂದಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಪೀಠ, ‘ಹಳೆಯ ಕಂದಾಯ ಪ್ರಕರಣಗಳನ್ನು ಶೀಘ್ರ ವಿಲೇವಾರಿ ಮಾಡಲು ಮತ್ತು ಅರೆ ನ್ಯಾಯಾಂಗದ ಕಾರ್ಯಗಳನ್ನು ನಿರ್ವಹಿಸುವುದಕ್ಕಾಗಿ ಪ್ರತ್ಯೇಕ ತಂಡ ನೇಮಕ ಮಾಡುವ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಶೀಲಿಸಬೇಕು ಹಾಗೂ ಈ ಕುರಿತಂತೆ ಎಂಟು ವಾರಗಳಲ್ಲಿ ಸಮಗ್ರ ವರದಿ ಸಲ್ಲಿಸಬೇಕು’ ಎಂದು ತಾಕೀತು ಮಾಡಿದೆ.
ಪ್ರಕರಣವೇನು?: ಜಮೀನಿಗೆ ಸಂಬಂಧಿಸಿ ಮಂಜೇಗೌಡರ ತಂದೆ ಬೊಮ್ಮೇನಹಳ್ಳಿ ವಾಸಿ ಕೆಂಪೇಗೌಡರ ಹೆಸರಿನಲ್ಲಿ ನೀಡಿದ್ದ ಖಾತಾ ರದ್ದುಪಡಿಸಿ ನಾಗಮಂಗಲ ತಾಲ್ಲೂಕು ಪಂಚಾಯಿತಿ ಅಧ್ಯಕ್ಷರು 2002ರ ಮಾರ್ಚ್ 7ರಂದು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಕೆಂಪೇಗೌಡ ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಸುಮಾರು 12 ವರ್ಷ ಕಾಲ ಬಾಕಿ ಉಳಿಸಿಕೊಳ್ಳಲಾಗಿತ್ತು.
ಕೆಂಪೇಗೌಡ ಮೃತಪಟ್ಟಿದ್ದರು. ಆದರೆ, ಅರ್ಜಿಯ ವಿಚಾರಣೆಗೆ ಸುಮಾರು 111ಕ್ಕೂ ಹೆಚ್ಚು ಮುದ್ದತ್ತಿನ ದಿನಾಂಕಗಳನ್ನು ನೀಡಲಾಗಿತ್ತು. ಈ 111 ದಿನಾಂಕಗಳಲ್ಲಿ ಯಾವುದೇ ರೀತಿಯ ವಿಚಾರಣೆ ನಡೆದಿರಲಿಲ್ಲ. ಅರ್ಜಿದಾರರಿಗೆ ಮಾಹಿತಿ ನೀಡದೆ ಹಾಗೂ ಅವರ ಅನುಪಸ್ಥಿತಿಯಲ್ಲಿ ಪ್ರಕರಣ ಮುಕ್ತಾಯಗೊಳಿಸಲಾಗಿತ್ತು.
ಅಧಿಕಾರ ವ್ಯಾಪ್ತಿ ಮೀರಿ ಈ ಪ್ರಕರಣ ವನ್ನು ವಿಲೇವಾರಿ ಮಾಡಲಾಗಿದೆ ಎಂದು ಪ್ರಶ್ನಿಸಿ ಮಂಜೇಗೌಡ ಹೈಕೋರ್ಟ್ ಮೆಟ್ಟಿಲೇರಿದ್ದರು.
‘ಪಂಚಾಯತ್ ರಾಜ್ ಕಾಯ್ದೆ-1993ರ ಪ್ರಕಾರ ಜಮೀನಿನ ಖಾತಾ ರದ್ದುಪಡಿಸುವ ಅಧಿಕಾರ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಿಗೆ ಇಲ್ಲ’ ಎಂದು ಆಕ್ಷೇಪಿಸಿದ್ದರು. ಅರ್ಜಿ ಪುರಸ್ಕರಿಸಿರುವ ನ್ಯಾಯಪೀಠ, ಮಂಜೇಗೌಡರ ತಂದೆ ಹೆಸರಿನ ಖಾತೆ ರದ್ದುಪಡಿಸಲಾದ ಆದೇಶವನ್ನು ಅಮಾನ್ಯಗೊಳಿಸಿದೆ. ಅರ್ಜಿದಾರರ ಪರ ವಕೀಲ ಜಿ.ಎಸ್. ವೆಂಕಟ ಸುಬ್ಬರಾವ್ ವಾದ ಮಂಡಿಸಿದ್ದರು.
ಹೈಕೋರ್ಟ್ ನಿರ್ದೇಶನಗಳು : ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳ ಮಾದರಿಯಲ್ಲಿಯೇ ವೆಬ್‌ಸೈಟ್‌ಗಳಲ್ಲಿ ದಿನನಿತ್ಯದ ಆದೇಶಗಳು, ತೀರ್ಪುಗಳೂ ಸೇರಿದಂತೆ ಪ್ರಕರಣಗಳ ಎಲ್ಲ ಮಾಹಿತಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು.
ಅರೆ ನ್ಯಾಯಾಂಗ ಪ್ರಾಧಿಕಾರಗಳಲ್ಲಿ ಪ್ರಕರಣಗಳನ್ನು ವಿಚಾರಣೆಗೆ ನಿಗದಿಪಡಿಸಿರುವ ದಿನಾಂಕ, ದೈನಂದಿನ ಆದೇಶಗಳು, ದಾಖಲಾಗಿರುವ ಸಾಕ್ಷ್ಯಾಧಾರಗಳು, ಅರ್ಜಿಗೆ ಸಂಬಂಧಿಸಿದಂತೆ ನೀಡಿರುವ ನಿರ್ದೇಶನಗಳು ಮತ್ತು ಅಂತಿಮ ತೀರ್ಪು ಸೇರಿದಂತೆ ಪ್ರಕರಣದ ಎಲ್ಲ ಪ್ರಕ್ರಿಯೆಗಳ ವಿವರಗಳ ಅಗತ್ಯವಿರುವ ಸಂಬಂಧ ವೆಬ್‌ಸೈಟ್‌ನಲ್ಲಿ ದಾಖಲಿಸಬೇಕು.
ಹೈಕೋರ್ಟ್ ಆದೇಶಗಳ ಕುರಿತು ಇ-ಮೇಲ್, ಎಸ್‌ಎಂಎಸ್‌ಗಳ ಮೂಲಕ ಅರ್ಜಿದಾರರಿಗೆ ಮತ್ತು ವಕೀಲರಿಗೆ ಕಾಲಕಾಲಕ್ಕೆ ಮಾಹಿತಿ ತಿಳಿಯುವ ವ್ಯವಸ್ಥೆ ಮಾಡಬೇಕು.
ವಿಚಾರಣೆ ಮುಂದೂಡುವ ಸಂದರ್ಭಗಳಲ್ಲಿ ಅರೆ ನ್ಯಾಯಾಂಗದ ಪೀಠಾ ಸೀನ ಅಧಿಕಾರಿಗಳು, ‘ಆಡಳಿತಾತ್ಮಕ ಕಾರ್ಯಗಳಲ್ಲಿ ನಿರತರಾಗಿದ್ದಾರೆ’ ಎನ್ನುವ ಹೇಳಿಕೆಯನ್ನು ಹೊರತುಪಡಿಸಿ ಯಾವ ಕಾರಣಕ್ಕಾಗಿ ವಿಚಾರಣೆ ಮುಂದೂಡಲಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ಕಾರಣ ಉಲ್ಲೇಖಿಸಬೇಕು.
ಈ ನಿರ್ದೇಶನಗಳ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಸಮಗ್ರ ಯೋಜನಾ ವರದಿ ಸಿದ್ಧಪಡಿಸಬೇಕು. ಅನುಪಾಲನಾ ವರದಿಯನ್ನು ಇದೇ 17ಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿ ವಿಚಾರಣೆ ಮುಂದೂಡಲಾಗಿದೆ.