ಮಂಡ್ಯ : ಟಿಪ್ಪು ಜಯಂತಿ ಆಚರಣೆಗೆ ಚಿಂತನೆ ನಡೆಸಿರುವ ಹಿನ್ನೆಲೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಇಂದು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಟಿಪ್ಪು ವಕ್ಫ್ ಎಸ್ಟೇಟ್‌ನಿಂದ ಟಿಪ್ಪು ಜಯಂತಿ ನಡೆಸಲು ಚಿಂತನೆ ನಡೆಸಲಾಗಿದೆ. ಮೈಸೂರು ಸೇರಿದಂತೆ ಹಲವೆಡೆಯಿಂದ ಜನ ಸೇರುವ ಸಾಧ್ಯತೆಯಿದ್ದು, ಸೂಕ್ಷ್ಮ ಪ್ರದೇಶವಾಗಿರುವ ಶ್ರೀರಂಪಟ್ಟಣದಲ್ಲಿ ಕಾರ್ಯಕ್ರಮಕ್ಕೆ ನಿರ್ಬಂಧ ಹೇರಲಾಗಿದೆ. ಹೀಗಾಗಿ ಮುಂಜಾಗೃತಾ ಕ್ರಮವಾಗಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿ ತಹಶೀಲ್ದಾರ್ ಪರಶುರಾಮ ಸತ್ತಿಗೇರಿ ಆದೇಶಿಸಿದ್ದಾರೆ.
ಬೆಳಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿಷೇಧಾಜ್ಞೆ ಇರಲಿದೆ. ಮೆರವಣಿಗೆ, ಪ್ರತಿಭಟನೆ, ರ‍್ಯಾಲಿಗಳಿಗೆ ನಿರ್ಬಂಧಿಸಲಾಗಿದೆ. ಬ್ಯಾನರ್, ಬಂಟಿಂಗ್ಸ್, ಧ್ವನಿವರ್ಧಕ, ಪಟಾಕಿ, ಡಿಜೆ ಬಳಕೆಗೂ ನಿಷೇಧ ಹೇರಲಾಗಿದೆ. ಘೋಷಣೆ ಕೂಗದಂತೆ, ಪ್ರಚೋದನಕಾರಿ ಚಿತ್ರವಿರುವ ಟೀ ಶರ್ಟ್ ಧರಿಸದಂತೆಯೂ ಆದೇಶ ಹೊರಡಿಸಲಾಗಿದೆ.
ಸಾರ್ವಜನಿಕರ ಆಸ್ತಿ-ಪಾಸ್ತಿ, ಸಾರ್ವಜನಿಕರ ಪ್ರಾಣ ರಕ್ಷಣೆಗಾಗಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಹೊರ ಜಿಲ್ಲೆಗಳಿಂದ ಬರುವ ಸಾರ್ವಜನಿಕರು ಹಾಗೂ ಪ್ರವಾಸಿಗರ ಮೇಲೆ ನಿಗಾವಹಿಸಲಾಗುತ್ತಿದೆ.