Mysore
27
scattered clouds

Social Media

ಮಂಗಳವಾರ, 08 ಅಕ್ಟೋಬರ್ 2024
Light
Dark

ಸದನದಲ್ಲಿ ರಾಹುಲ್ ಗಾಂಧಿ ಅನುಚಿತ ವರ್ತನೆ ಆರೋಪ : ಸ್ಪೀಕರ್ ಗೆ ಬಿಜೆಪಿ ಮಹಿಳಾ ಸಂಸದೆಯರ ದೂರು

ನವದೆಹಲಿ : ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ಪಕ್ಷದ ಇತರ ಮಹಿಳಾ ಸದಸ್ಯರು ರಾಹುಲ್ ಗಾಂಧಿ ಅವರು ಅಸಭ್ಯ ವರ್ತನೆ ಮಾಡಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರತ್ತ ಅನುಚಿತ ಸನ್ನೆ ಮಾಡಿದ್ದಾರೆಂದು ಆರೋಪಿಸಿ ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರಿಗೆ ದೂರು ಸಲ್ಲಿಸಿದ್ದಾರೆ.

ಶೋಭಾ ಕರಂದ್ಲಾಜೆ ಅವರು 21 ಮಹಿಳಾ ಬಿಜೆಪಿ ಸದಸ್ಯರ ಸಹಿ ಇರುವ ಪತ್ರವನ್ನು ಸ್ಪೀಕರ್ ಚೇಂಬರ್ ನಲ್ಲಿ ಸಲ್ಲಿಸಿದ್ದು, ರಾಹುಲ್ ಗಾಂಧಿ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.
ಸದನದಲ್ಲಿ ಮಹಿಳಾ ಸದಸ್ಯರ ಘನತೆಗೆ ಧಕ್ಕೆ ತಂದಿರುವುದಲ್ಲದೇ, ಈ ಸದನದ ಘನತೆಗೆ ಕುಂದು ತಂದಿರುವ ಇಂತಹ ವರ್ತನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಸಂಸದರಾಗಿ ಮರುಸೇರ್ಪಡೆಗೊಂಡ ಬಳಿಕ ಸಂಸತ್ತಿನಲ್ಲಿ ಮೊದಲ ಭಾಷಣ ಮಾಡಿದ ರಾಹುಲ್ ಗಾಂಧಿ, ಬಿಜೆಪಿ ಸಂಸದರಿಗೆ ಫ್ಲೈಯಿಂಗ್ ಕಿಸ್ ನೀಡಿದರು. ಕಾಂಗ್ರೆಸ್ ನಾಯಕ ಲೋಕಸಭೆ ಆವರಣದಿಂದ ಹೊರನಡೆಯುತ್ತಿದ್ದಾಗ ಹಾಗೂ ಸ್ಮೃತಿ ಇರಾನಿ ಭಾಷಣ ಮಾಡುತ್ತಿದ್ದಾಗ ಈ ಘಟನೆ ನಡೆದಿದ್ದು, ಈ ದೃಶ್ಯವು ಕ್ಯಾಮರಾದಲ್ಲಿ ಸೆರೆಯಾಗಿಲ್ಲ.

ಅವಿಶ್ವಾಸ ಗೊತ್ತುವಳಿ ಭಾಷಣ ಮುಗಿಸಿ ಲೋಕಸಭೆಯ ಆವರಣದಿಂದ ಹೊರಬರುತ್ತಿದ್ದ ರಾಹುಲ್ ಗಾಂಧಿ ಅವರ ಕೆಲವು ಕಡತಗಳು ಕೆಳಗೆ ಬಿದ್ದವು. ಆಗ ಅವುಗಳನ್ನು ತೆಗೆದುಕೊಳ್ಳಲು ರಾಹುಲ್ ಬಾಗಿದ ನಂತರ ಕೆಲವು ಬಿಜೆಪಿ ಸಂಸದರು ಅವರನ್ನು ನೋಡಿ ನಗಲು ಆರಂಭಿಸಿದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಆಗ ರಾಹುಲ್ ಗಾಂಧಿ ಬಿಜೆಪಿ ಸದಸ್ಯರತ್ತ ಫ್ಲೈಯಿಂಗ್ ಕಿಸ್ ನೀಡಿ ಸದನದಿಂದ ಹೊರನಡೆದರು.

ಫ್ಲೈಯಿಂಗ್ ಕಿಸ್ ಕುರಿತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ, ರಾಹುಲ್ ಅವರನ್ನು ಸ್ತ್ರೀದ್ವೇಷ ಪುರುಷ ಎಂದು ಕರೆದಿದ್ದು, ಇದೊಂದು ಅಶ್ಲೀಲ ಕೃತ್ಯ ಎಂದು ಹೇಳಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ