Mysore
29
scattered clouds
Light
Dark

ಮೆಡಿಕಲ್‌ ಟೆಸ್ಟ್‌ ಮುಗಿಸಿ ಕೊರ್ಟ್‌ಗೆ ಹಾಜರಾದ ಪ್ರಜ್ವಲ್‌ ರೇವಣ್ಣ

ಬೆಂಗಳೂರು: ಲೈಂಗಿಕ ದೌರ್ಜನ್ಯ ಆರೋಪದಡಿ ಬಂಧಿತನಾಗಿರುವ ಹಾಸನ ಸಂಸದ ಪ್ರಜ್ವಲ್‌ ರೇವಣ್ಣಗೆ ಇಂದು (ಮೇ.31) ವೈದ್ಯಕೀಯ ತಪಾಸಣೆ ಮಾಡಲಾಯಿತು. ಬಳಿಕ ಅಲ್ಲಿಂದ ನೇರವಾಗಿ ಪ್ರಜ್ವಲ್‌ರನ್ನು ಕೋರ್ಟ್‌ಗೆ ಹಾಜರುಪಡಿಸಲಾಗಿದೆ.

ನಗರದ ಶಿವಾಜಿ ನಗರ ಬೌರಿಂಗ್‌ ಅಂಡ್‌ ಲೇಡಿ ಕರ್ಜನ್‌ ಆಸ್ಪತ್ರೆಯಲ್ಲಿಂದು ಮದ್ಯಾಹ್ನ 1 ಗಂಟೆಯಲ್ಲಿ ತಪಾಸಣೆಗೆ ಕರೆದುಕೊಂಡು ಬಂದಿದ್ದಾರೆ. ಎಲ್ಲಾ ರೀತಿಯ ವೈದ್ಯಕೀಯ ತಪಾಸಣೆಗಳು ಮುಗಿದ ಬೆನ್ನಲ್ಲೇ ಪ್ರಜ್ವಲ್‌ ರನ್ನು ಕೋರ್ಟ್‌ಗೆ ರವಾನಿಸಿದ್ದಾರೆ ಎಸ್‌ಐಟಿ ಅಧಿಕಾರಿಗಳು.

ಇನ್ನು ಕೋರ್ಟ್‌ ಆವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ವಕೀಲರೇ ತುಂಬಿಕೊಂಡಿದ್ದು, ಅದರಲ್ಲೂ ಮಹಿಳಾ ವಕೀಲೆಯರು ಹೆಚ್ಚಾಗಿ ಕಂಡುಬಂದಿದ್ದಾರೆ. ನಗರದ 42ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಪ್ರಜ್ವಲ್‌ ರೇವಣ್ಣರನ್ನು ಎಸ್‌ಐಟಿ ಅಧಿಕಾರಿಗಳು ಹಾಜರು ಪಡಿಸಿದ್ದಾರೆ. ಇವರ ಜತೆಯಲ್ಲಿ ತನಿಖಾಧಿಕಾರಿ ಸುಮನಾ ಡಿ. ಪೆನ್ನೇಕರ್‌ ಅವರು ಆಗಮಿಸಿದ್ದಾರೆ.

ಪ್ರಜ್ವಲ್‌ ವಿರುದ್ಧ 107/24 ಅಡಿಯಲ್ಲಿ ಹೊಳೆ ನರಸೀಪುರ ಪಟ್ಟಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಸೆಕ್ಷನ್‌ 502 ಅಡಿಯಲ್ಲಿ ಪ್ರಜ್ವಲ್‌ನನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ನ್ಯಾಯಾಧೀಶರಾದ ಕೆ.ಎನ್‌ ಶಿವಕುಮಾರ್‌ ಅವರು ವಿಚಾರಣೆ ನಡೆಸಲಿದ್ದಾರೆ. ಈ ಅರ್ಜಿ ವಿಚಾರಣೆ ಇಂದು ಮದ್ಯಾಹ್ನ 3 ಗಂಟೆಗೆ ನಡೆಯಲಿದೆ.

ಎಸ್‌ಐಟಿ ಅಧಿಕಾರಿಗಳು ಬಂಧಿಸಿದ ಬೆನ್ನಲ್ಲೇ ಪಜ್ವಲ್‌ ಪರ ವಕೀಲರಾದ ಅರುಣ್‌ ಅವರು ಎಸ್‌ಐಟಿ ಕಚೇರಿಗೆ ಭೇಟಿ ನೀಡಿದ್ದು, ಪ್ರಜ್ವಲ್‌ ಜತೆ ಮಾತನಾಡಿದ್ದಾರೆ. ಇವರು ಕೂಡಾ ಈಗ ಕೋರ್ಟ್‌ ಮುಂದೆ ಹಾಜರಾಗಿದ್ದಾರೆ.