Mysore
22
overcast clouds

Social Media

ಭಾನುವಾರ, 13 ಜುಲೈ 2025
Light
Dark

ಪ.ಬಂಗಾಳದಲ್ಲಿ ಪಂಚಾಯತ್‌ ಚುನಾವಣೆ: ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ರಾಜ್ಯಪಾಲರ ಭೇಟಿ

ಕೋಲ್ಕತ್ತಾ: ಪಂಚಾಯತ್ ಚುನಾವಣೆ ನಡೆಯುತ್ತಿರುವ ಪಶ್ಚಿಮ ಬಂಗಾಳದ ಹಿಂಸಾಚಾರ ಭುಗಿಲೆದ್ದಿದ್ದು, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಸ್ವತಃ ರಾಜ್ಯಪಾಲ ಡಾ.ಸಿ.ವಿ.ಆನಂದ ಬೋಸ್ ಅವರು ಶನಿವಾರ ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದಾರೆ.

ರಾಜ್ಯಪಾಲರು ಇಂದು ಉತ್ತರ 24 ಪರಗಣದ ಬರಾಸತ್-1 ಉಪವಿಭಾಗದಲ್ಲಿ ಬಾಂಬ್ ದಾಳಿಯಲ್ಲಿ ಗಾಯಗೊಂಡ ವ್ಯಕ್ತಿಯ ನಿವಾಸಕ್ಕೆ ಭೇಟಿ ನೀಡಿ, ಅವರ ಕುಟುಂಬ ಸದಸ್ಯರೊಂದಿಗೆ ಮಾತನಾಡಿದರು.  ನಂತರ ಗಾಯಗೊಂಡ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿರುವ ಬರಾಸತ್‌ನ ಆಸ್ಪತ್ರೆಗೆ ತೆರಳಿ ವೈದ್ಯರೊಂದಿಗೆ ಮಾತನಾಡಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

“ನಂತರ ರಾಜ್ಯಪಾಲರು ಆ ವ್ಯಕ್ತಿಯನ್ನು ನಗರ ಮೂಲದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಸ್ಥಳಾಂತರಿಸಲು ವ್ಯವಸ್ಥೆ ಮಾಡಿದರು. ಅವರು ಪರಿಸ್ಥಿತಿಯನ್ನು ಅವಲೋಕಿಸಿದರು ಮತ್ತು ಮತದಾನದ ಬಗ್ಗೆ ವಿಚಾರಿಸಿದರು” ಎಂದು ಅವರು ಪಿಟಿಐಗೆ ತಿಳಿಸಿದ್ದಾರೆ.

ನಾಡಿಯಾ ಜಿಲ್ಲೆಗೆ ಪ್ರಯಾಣಿಸಬೇಕಿದ್ದ ಬೋಸ್ ಅವರನ್ನು ಕಲ್ಯಾಣಿ ಎಕ್ಸ್‌ಪ್ರೆಸ್‌ವೇಯ ಬಾಸುದೇಬ್‌ಪುರ ಬಳಿ ತಡೆದ ಬಿಜೆಪಿ ಮತ್ತು ಸಿಪಿಐ(ಎಂ) ಬೆಂಬಲಿಗರು, “ಮತ ಲೂಟಿ” ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.

ರಾಜಭವನಕ್ಕೆ ಹಿಂದಿರುಗಿದ ನಂತರ ಮಾತನಾಡಿದ ಬೋಸ್, ತಾವು ಮತ್ತೆ ಹೊರಗೆ ಹೋಗಿ ವಿವಿಧ ಪಂಚಾಯತ್ ಪ್ರದೇಶಗಳಿಗೆ ದಿಢೀರ್ ಭೇಟಿ ನೀಡುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೂರು ಹಂತದ ಪಂಚಾಯತಿ ಚುನಾವಣೆ ನಡೆಯುತ್ತಿದ್ದು, ಇಂದು ಮೊದಲ ಹಂತದ ಮತದಾನದ ವೇಳೆ ಹಿಂಸಾಚಾರ ಭುಗಿಲೆದ್ದಿದ್ದು, ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತ ಸೇರಿ ಕನಿಷ್ಟ 11 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!