ಬಾಗೇಪಲ್ಲಿ: ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದ ಮುಂಭಾಗದ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರೋರಾತ್ರಿ ಮಾಜಿ ಶಾಸಕ ದಿವಂಗತ ಜಿ.ವಿ.ಶ್ರೀರಾಮರೆಡ್ಡಿ ಅವರ ಪ್ರತಿಮೆ ಅನಾವರಣಗೊಳಿಸಲಾಗಿದೆ.
ಬಾಗೇಪಲ್ಲಿ ವಿಧಾನಸಭಾಕ್ಷೇತ್ರದ ಚುನಾವಣೆಯ ಬಿಜೆಪಿ ಆಕಾಂಕ್ಷಿ ಆಗಿರುವ ರಾಜ್ಯ ಒಕ್ಕರಲಿಗರ ಸಂಘದ ಪ್ರಧಾನಕಾರ್ಯದರ್ಶಿ ಕೋನಪ್ಪರೆಡ್ಡಿ ನೇತೃತ್ವದಲ್ಲಿ ವಿವಿಧ ಪಕ್ಷಗಳ, ಸಂಘಟನೆಯ ಮುಖಂಡರ ಹಾಗೂ ಜಿವಿಎಸ್ ಅಭಿಮಾನಿಗಳ ಸಮ್ಮುಖದಲ್ಲಿ ಪ್ರತಿಮೆ ಅನಾವರಗೊಳಿಸಲಾಯಿತು.
ಎರಡು ದಿನದ ಹಿಂದೆಯೇ ಪ್ರತಿಮೆ ಅನಾವರಣಕ್ಕೆ ಸಿದ್ಧತೆ ನಡೆಸಲಾಗಿತ್ತು. ಆದರೆ ಜಿಲ್ಲಾಡಳಿತದಿಂದ ಅನುಮತಿ ನೀಡಿಲ್ಲ ಎಂದು ಘಟನಾ ಸ್ಥಳಕ್ಕೆ ತಹಶೀಲ್ದಾರ್ ಹಾಗೂ ಪೊಲೀಸರು ಭೇಟಿ ನೀಡಿ ಕಾಮಗಾರಿಗೆ ತಡೆ ನೀಡಿದ್ದರು.
ಪ್ರತಿಮೆ ಅನಾವರಣಕ್ಕೆ ಜಿಲ್ಲಾಡಳಿತ ಅನುಮತಿ ನೀಡಬೇಕು ಎಂದು ಜಿವಿಎಸ್ ಅಭಿಮಾನಿಗಳು ಹಾಗೂ ಮುಖಂಡರು ಪ್ರತಿಭಟನೆ ಮಾಡಿದ್ದರು.
ನಿವೃತ್ತ ಡಿವೈಎಸ್‌ಪಿ ಕೋನಪ್ಪರೆಡ್ಡಿ ಅವರು ಶ್ರೀರಾಮರೆಡ್ಡಿ ಅವರ ಪ್ರತಿಮೆ ಅನಾವರಣ ಕಾರ್ಯ ನೇತೃತ್ವವಹಿಸಿದ್ದರು. ರಾತ್ರಿ 10 ಗಂಟೆಯಲ್ಲಿ ಜನರಿಲ್ಲ ಸಮಯದಲ್ಲಿ ಕ್ರೇನ್ ಮೂಲಕ ಪ್ರತಿಮೆ ಅನಾವರಣಗೊಳಿಸಲಾಯಿತು.
ಪ್ರತಿಮೆ ಅನಾವರಣಕ್ಕೆ ತಾಲ್ಲೂಕು ಆಡಳಿತ, ಪುರಸಭೆ ಮತ್ತು ಲೋಕೊಪಯೋಗಿ ಇಲಾಖೆಯಿಂದ ಅನುಮತಿ ಪಡೆದಿಲ್ಲ ಎಂದು ಅಧಿಕಾರಿಗಳು, ಪೊಲೀಸರು ಎರಡು ದಿನಗಳ ಹಿಂದೆ ಅಡ್ಡಿಪಡಿಸಿದ್ದ ಅಧಿಕಾರಿಗಳು, ಈಗ ಪ್ರತಿಮೆ ಅನಾವರಣಗೊಂಡಿದ್ದರೂ ಅಧಿಕಾರಿಗಳು ಮತ್ತು ಪೊಲೀಸರು ಮೌನ ವಹಿಸಿರುವುದಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.