ಪಟ್ನಾ: ಎಲ್ಲಾ ಪಕ್ಷಗಳು ಒಟ್ಟಾಗಿ ಚುನಾವಣೆ ಎದುರಿಸಲು ಒಪ್ಪಿಕೊಂಡಿವೆ, ಆದರೆ ವಿವರಗಳನ್ನು ಅಂತಿಮಗೊಳಿಸಲು ಹಿಮಾಚಲ ಪ್ರದೇಶದ ಶಿಮ್ಲಾದಲ್ಲಿ ಮುಂದಿನ ತಿಂಗಳು ಮತ್ತೊಂದು ಸಭೆ ನಡೆಯಲಿದೆ ಎಂದು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಪಾಟ್ನಾದಲ್ಲಿ ಶುಕ್ರವಾರ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದ ವಿರೋಧ ಪಕ್ಷದ ಸಭೆ ನಂತರ ಮಾತನಾಡುತ್ತಿದ್ದರವರು. ಸೀಟು ಹಂಚಿಕೆ ಮತ್ತು ಪಕ್ಷವಾರು ವಿಭಜನೆಯ ವಿವರಗಳು ಸೇರಿದಂತೆ ವಿವರಗಳನ್ನು ಶಿಮ್ಲಾ ಸಭೆಯಲ್ಲಿ ಅಂತಿಮಗೊಳಿಸಲಾಗುವುದು ಎಂದು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿತೀಶ್ ಕುಮಾರ್ ಹೇಳಿದ್ದಾರೆ. ವಿಪಕ್ಷಗಳ ಸಭೆಯಲ್ಲಿ 17 ಪಕ್ಷಗಳು ಭಾಗಿಯಾಗಿದ್ದವು.
LIVE: Joint Press Briefing by various political parties.
📍Patna, Bihar https://t.co/sJsmB4opHB
— Mallikarjun Kharge (@kharge) June 23, 2023
ಮುಂದಿನ ಸಭೆಯನ್ನು ಜುಲೈ 10 ಅಥವಾ 12 ರಂದು ನಡೆಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಸಭೆಯಲ್ಲಿ ಎಲ್ಲಾ ರಾಜ್ಯಗಳ ಕಾರ್ಯತಂತ್ರವನ್ನು ಚರ್ಚಿಸಲಾಗುವುದು. 2024ರಲ್ಲಿ ನಾವು ಒಟ್ಟಾಗಿ ಚುನಾವಣೆ ಎದುರಿಸಬೇಕು. ಬಿಜೆಪಿಯನ್ನು ಕಿತ್ತೊಗೆಯಲು ನಾವು ನಿರ್ಧರಿಸಿದ್ದು, ಮುಂದಿನ ಸರ್ಕಾರ ರಚಿಸುವ ವಿಶ್ವಾಸವಿದೆ ಎಂದಿದ್ದಾರೆ ಖರ್ಗೆ.
ಸುದ್ದಿಗೋಷ್ಠಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಬಿಹಾರ ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್, ಪಶ್ಚಿಮ ಬಂಗಾಳ ಸಿಎಂ, ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್, ಮೆಹಬೂಬಾ ಮುಫ್ತಿ, ಬಿಹಾರದ ಮಾಜಿ ಸಿಎಂ, ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್, ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ, ಜಾರ್ಖಂಡ್ ಸಿಎಂ, ಜೆಎಂಎಂ ಮುಖ್ಯಸ್ಥ ಶಿಬು ಸೊರೇನ್ ಭಾಗಿಯಾಗಿದ್ದಾರೆ.
ಯಾರು ಏನು ಹೇಳಿದರು?: ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲೆ ನಡೆದ ದಾಳಿಯ ಬಗ್ಗೆ ರಾಹುಲ್ ಗಾಂಧಿ ಪ್ರಸ್ತಾಪಿಸಿದರು. ಇದು ಸಿದ್ಧಾಂತಗಳ ಹೋರಾಟವಾಗಿದೆ. ನಾವು ಕೆಲವು ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಆದರೆ ನಮ್ಮ ಸಿದ್ಧಾಂತವನ್ನು ರಕ್ಷಿಸಲು ಫ್ಲೆಕ್ಸಿಬ್ಲಿಟಿಯೊಂದಿಗೆ ಒಟ್ಟಾಗಿ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಇದು ಒಂದು ಪ್ರಕ್ರಿಯೆಯಾಗಿದ್ದು ನಾವು ಅದನ್ನು ಮುಂದುವರಿಸುತ್ತೇವೆ ಎಂದು ರಾಹುಲ್ ಹೇಳಿದ್ದಾರೆ,
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ, ಪಾಟ್ನಾದಿಂದ ಪ್ರಾರಂಭವಾಗಿರುವ ಇದು ಜನ ಆಂದೋಲನ (ಸಾರ್ವಜನಿಕ ಚಳುವಳಿ) ಆಗುತ್ತದೆ ಎಂದಿದ್ದಾರೆ. ತುರ್ತು ಪರಿಸ್ಥಿತಿಯ ಸಮಯದಲ್ಲಿ ನಡೆದ ಜೆಪಿ ಚಳುವಳಿಯನ್ನು ಪ್ರಸ್ತಾಪಿಸಿದ ಅವರು ದೆಹಲಿಯಲ್ಲಿ ನಡೆದ ಸಭೆಗಳು ಫಲಿತಾಂಶವನ್ನು ನೀಡಲಿಲ್ಲ ಎಂದಿದ್ದಾರೆ.
ಮೂರು ವಿಷಯಗಳು ಬಗೆಹರಿದಿವೆ. ನಾವು ಒಗ್ಗಟ್ಟಿನಿಂದ ಹೋರಾಡುತ್ತೇವೆ. ನಮ್ಮ ಹೋರಾಟವನ್ನು ಪ್ರತಿಪಕ್ಷಗಳ ಹೋರಾಟ ಎಂದು ಬ್ರಾಂಡ್ ಮಾಡಬಾರದು. ಇದು ಬಿಜೆಪಿಯ ಸರ್ವಾಧಿಕಾರ ಮತ್ತು ಅವರ ಕಪ್ಪು ಕಾನೂನುಗಳ ವಿರುದ್ಧದ ಹೋರಾಟ, ಅವರ ರಾಜಕೀಯ ಸೇಡಿನ ವಿರುದ್ಧದ ಹೋರಾಟ. ರಾಜಭವನ ಪರ್ಯಾಯ ಸರ್ಕಾರದಂತೆ ಕಾರ್ಯವೆಸಗುತ್ತದೆ. ಅವರು ನಮ್ಮ ಜತೆ ಸಮಾಲೋಚನೆ ನಡೆಸದೆಯೇ ನಮ್ಮ ರಾಜ್ಯಕ್ಕೆ ಸಂಸ್ಥಾಪನಾ ದಿನ ಮಾಡಿದರು.
ನಾವು ವಿರೋಧಿಸಿದ್ದಕ್ಕೆ ನಮ್ಮ ವಿರುದ್ಧ ED ಮತ್ತು CBI ಅನ್ನು ಬಳಸುತ್ತಾರೆ, ಅವರು ನ್ಯಾಯಾಲಯಕ್ಕೆ ವಕೀಲರನ್ನು ಕಳುಹಿಸುತ್ತಾರೆ. ಯಾವುದಾದರೂ ಪ್ರಕರಣದಲ್ಲಿ ನಮ್ಮನ್ನು ಸಿಲುಕಿಸುತ್ತಾರೆ, ಆದರೆ ಅವರು ನಿರುದ್ಯೋಗದ ಬಗ್ಗೆ ಮಾತನಾಡುವುದಿಲ್ಲ. ಸಾಮಾನ್ಯ ಜನರು, ಅಥವಾ ಆರ್ಥಿಕತೆ ಕುಸಿದು ಬಿದ್ದಿರುವ ಬಗ್ಗೆ, ದಲಿತರ ಮೇಲಿನ ದೌರ್ಜನ್ಯ, ಅಥವಾ ಮಹಿಳೆಯರ ಮೇಲಿನ ದೌರ್ಜನ್ಯ ಬಗ್ಗೆ ಮಾತೆತ್ತುವುದಿಲ್ಲ, ಅವರು ಆವಾಸ್ (ವಸತಿ) ಅಥವಾ ರಸ್ತೆಗಳಿಗೆ ಹಣವನ್ನು ನೀಡುವುದಿಲ್ಲ. ಅವರ ಇಚ್ಛೆ ಮತ್ತು ಕಲ್ಪನೆಗಳಿಗೆ ಅನುಗುಣವಾಗಿ ವಿಶ್ವವಿದ್ಯಾನಿಲಯಗಳಲ್ಲಿ ಜನರನ್ನು ನೇಮಿಸಿಕೊಳ್ಳುತ್ತಾರೆ.
ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ ದೇಶವು ಮತ್ತೊಂದು ಚುನಾವಣೆಯನ್ನು ನೋಡುವುದಿಲ್ಲ. ಅಗತ್ಯವಿದ್ದರೆ ನಮ್ಮ ರಕ್ತ ಹರಿಯಲಿ. ಆದರೆ ನಾವು ನಮ್ಮ ಜನರನ್ನು ರಕ್ಷಿಸುತ್ತೇವೆ. ಬಿಜೆಪಿ ಇತಿಹಾಸವನ್ನು ಬದಲಾಯಿಸಬೇಕೆಂದು ಬಯಸುತ್ತದೆ, ಆದರೆ ಬಿಹಾರದಿಂದ ಇತಿಹಾಸವನ್ನು ಉಳಿಸುವ ಕಾರ್ಯ ನಡೆಯುತ್ತದೆ ಎಂದಿದ್ದಾರೆ ಮಮತಾ.