Mysore
23
overcast clouds
Light
Dark

ಅಶ್ಲೀಲ ವಿಡಿಯೋ ಪ್ರಕರಣ: ತಿಂಗಳ ಬಳಿಕ ಪ್ರಜ್ವಲ್‌ ಪ್ರತ್ಯಕ್ಷ

ಬೆಂಗಳೂರು: ಅಶ್ಲೀಲ ವಿಡಿಯೋ ಹಾಗೂ ಲೈಂಗಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಸಂಸದ ಪ್ರಜ್ವಲ್‌ ರೇವಣ್ಣ ಕೊನೆಗೂ ಪ್ರತ್ಯಕ್ಷವಾಗಿದ್ದಾರೆ.

ವಿದೇಶದಿಂದ ಇಂದು(ಮೇ.೨೭) ವಿಡಿಯೋ ಹೇಳಿಕೆ ಬಿಡುಗಡೆ ಮಾಡಿದ್ದು, ಇದೇ ಮೇ.31 ರಂದು ಎಸ್‌ಐಟಿ ಮುಂದೆ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ.
ಇಷ್ಟು ದಿನ ಯಾರ ಸಂಪರ್ಕಕ್ಕೂ ಸಿಗದ ಕಾರಣ ಈ ಪ್ರಕರಣದಿಂದ ನನ್ನ ಕುಟುಂಬ ಮುಜುಗರಕ್ಕೊಳಗಾಗಿದ್ದು, ತಾತ, ತಂದೆ, ತಾಯಿ, ಕುಮಾರಣ್ಣ, ಜೆಡಿಎಸ್‌ ಕಾರ್ಯಕರ್ತರು ಹಾಗೂ ನಾಡಿನ ಜನರ ಬಳಿ ಕ್ಷಮೆ ಕೇಳುತ್ತೇನೆ ಎಂದು ಹೇಳಿದ್ದಾರೆ.

ಇನ್ನೂ ವಿದೇಶಕ್ಕೆ ತೆರಳಿರುವ ಬಗ್ಗೆ ತಿಳಿಸಿದ ಅವರು, ನನ್ನ ವಿದೇಶ ಪ್ರವಾಸ ಮೊದಲೇ ನಿಗದಿಯಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಜ್ವಲ್‌ ವಿಡಿಯೋದಲ್ಲಿ ಹೇಳಿರುವುದೇನು..?
ಮೊದಲನೆಯದಾಗಿ ತಾತಾ, ತಂದೆ, ತಾಯಿ ಕುಮಾರಣ್ಣ ಹಾಗೂ ಜೆಡಿಎಸ್‌ ಕಾರ್ಯಕರ್ತರಲ್ಲಿ ಕ್ಷಮೆ ಕೇಳುತ್ತಿದ್ದೇನೆ. ಏಪ್ರಿಲ್‌ ೨೬ ರಂದು ಚುನಾವಣೆ ಮುಗಿದ ಮೇಲೆ ನಾನು ವಿದೇಶಕ್ಕೆ ಬಂದೆ. ಅವತ್ತು ನನ್ನ ಮೇಲೆ ಯಾವುದೇ ದೂರು ದಾಖಲಾಗಿರಲಿಲ್ಲ. ವಿದೇಶಕ್ಕೆ ಹೋಗುವ ಪ್ಲಾನ್‌ ಮುಂಚೆಯೇ ಇತ್ತು. ಅದರಂತೆ ನಾನು ಅವತ್ತು ವಿದೇಶಕ್ಕೆ ಹೋಗಿದ್ದೆ. ವಿದೇಶಕ್ಕೆ ಹೋದ ಮೂರು ನಾಲ್ಕು ದಿನಗಳ ಬಳೀಕ ಯುಟ್ಯೂಬ್‌ ಚಾನಲ್ ನೋಡಿದ ಸಂಧರ್ಭದಲ್ಲಿ ನನ್ನ ಮೇಲೆ ದೂರು ದಾಖಲಾಗಿರುವುದು ತಿಳಿಯಿತು. ಅಷ್ಟೋತ್ತಿಗಾಗಲೇ ಎಸ್‌ಐಟಿ ರಚನೆಯಾಗಿತ್ತು. ಹಾಗಾಗಿ ಏಳು ದಿನಗಳ ಒಳಗೆ ಎಸ್‌ಐಟಿ ಮುಂದೆ ಹಾಜರಾಗುತ್ತೇನೆ ಎಂದಿದ್ದೆ.

ಬಳಿಕ ಕಾಂಗ್ರೆಸ್ ಹಿರಿಯ ನಾಯಕರಾದ ರಾಹುಲ್ ಗಾಂಧಿ‌ ಹಾಗೂ ಕಾಂಗ್ರೆಸ್‌ ನಾಯಕರು ನನ್ನ ವಿರುದ್ಧ ಪಿತೂರಿ ಶುರು ಮಾಡಿದ್ರು, ಬಹಿರಂಗ ವೇದಿಕೆಗಳಲ್ಲಿ ನನ್ನ ವಿರುದ್ಧ ಮಾತನಾಡುತ್ತಿದ್ದರು. ಇದರಿಂದ ನಾನು ಡಿಪ್ರೇಶನ್‌ಗೆ ಹೋದೆ. ಇದಾದ ಬಳಿಕ ಹಾಸನದಲ್ಲೂ ಕೂಡ ಕೆಲ ಶಕ್ತಿಗಳು ಒಟ್ಟಿಗೆ ಸೇರಿಕೊಂಡು ನನ್ನ ಮೇಲೆ ರಾಜಕೀಯ ಪಿತೂರಿ ಮಾಡುವ ಕೆಲಸ ಮಾಡಿದ್ರು, ರಾಜಕೀಯವಾಗಿ ಬೆಳೆಯುತ್ತಿರುವ ನನ್ನನ್ನು ಕುಗ್ಗಿಸುವುದಕ್ಕಾಗಿ ಈ ಪ್ರಕರಣದಲ್ಲಿ ಎಲ್ಲಾರೂ ಭಾಗಿಯಾಗಿ ಪಿತೂರಿ ಮಾಡುವ ಕೆಲಸ ಮಾಡಿದ್ದಾರೆ. ಪ್ರಕರಣ ಈ ಹಂತಕ್ಕೆ ತಲುಪಿದ್ದರು ನಾನು ವಿದೇಶದಲ್ಲೇ ಉಳಿದಿದ್ದೇನೆ  ಎಂದು ಯಾರು ತಪ್ಪು ತಿಳಿಯುವುದು ಬೇಡಿ. ಮೇ .31 ರಂದು ಎಸ್‌ಐಟಿ ಮುಂದೆ ಬಂದು ಹಾಜರಾಗ್ತೆನೆ. ತನಿಖೆಗೆ ಸಂಪೂರ್ಣವಾಗಿ ಸಹಕರಿಸುತ್ತೇನೆ. ನ್ಯಾಯಲಯದ ಮೇಲೆ ನನಗೆ ನಂಬಿಕೆ ಇದೆ. ಖಂಡಿತವಾಗಿಯೂ ಈ ಸುಳ್ಳು ಪ್ರಕರಣದಿಂದ ಹೊರಬರುತ್ತೇನೆ ಎನ್ನುವ ನಂಬಿಕೆ ಇದೆ.

ನ್ಯಾಯಲದ ಮೇಲೆ ನನಗೆ ನಂಬಿಕೆ. ದೇವರು, ಕುಟುಂಬ, ಜನರ ಆರ್ಶೀವಾದ ನನ್ನ ಮೇಲಿರಲಿ.  ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಿಂದಲೇ ನ್ಯಾಯ ಪಡೆಯುತ್ತೇನೆ ಎಂದು ತಿಳಿಸಿದ್ದಾರೆ.