Mysore
24
haze

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಕರ್ನಾಟಕ ಬಂದ್‌ಗೆ ಅವಕಾಶವಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

ಬೆಂಗಳೂರು: ಕಾವೇರಿ ವಿಚಾರವಾಗಿ ಕರ್ನಾಟಕ ಬಂದ್ ಗೆ ಅವಕಾಶವಿಲ್ಲ, ಆದರೆ ಪ್ರತಿಭಟನೆಗೆ ಅಡ್ಡಿ ಉಂಟು ಮಾಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ಅವರು, ಕರ್ನಾಟಕ ಬಂದ್‌ಗೆ ಕರೆ ನೀಡಿದ ಹಿನ್ನೆಲೆ ನಾವು ಪ್ರತಿಭಟನಾಕಾರರಿಗೆ ಅಡ್ಡಿ ಮಾಡುವುದಿಲ್ಲ. ಆದರೆ, ನಾವು ಸಾರ್ವಜನಿಕರನ್ನು ರಕ್ಷಣೆ ಮಾಡಲೇಬೇಕು. ನಾವು ಜನತೆಗೆ ರಕ್ಷಣೆ ಕೊಟ್ಟೇ ಕೊಡ್ತೀವಿ ಎಂದರು.

ಸುಪ್ರೀಂ ಕೋರ್ಟ್ ಬಂದ್ ಮಾಡಬಾರದು ಅಂತ ಹೇಳಿದೆ. ಹೀಗಾಗಿ ಬಂದ್ ಮಾಡಲು ಅವಕಾಶ ಇಲ್ಲ. ಶುಕ್ರವಾರ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮೀಟಿಂಗ್ ಇದೆ, ನಮ್ಮ ಅಧಿಕಾರಿಗಳಿಗೆ ವರ್ಚುಯಲ್ ಮೂಲಕ ಬೇಡ, ನೀವೇ ಖುದ್ದು ಹಾಜರಾಗಿ ಅಂತ ಹೇಳಿದ್ದೇವೆ ಎಂದು ತಿಳಿಸಿದರು.

ಸಿಎಂ‌ ಅಧ್ಯಕ್ಷತೆಯಲ್ಲಿ ಕಾನೂನು ತಜ್ಞರು, ಹಿರಿಯರ ಸಭೆ ಮಾಡ್ತೀವಿ. ಈಗ ಎರಡು ಸಾವಿರ ಕ್ಯೂಸೆಕ್ ಹೋಗ್ತಿರಬಹುದು. ನಾಳೆ ಮೀಟಿಂಗ್ ತೀರ್ಪು ನೋಡಿಕೊಂಡು ಕೋರ್ಟ್‌ಗೆ ಹೋಗ್ತೀವಿ ಎಂದರು.

ಇತರ ಪಕ್ಷಗಳ ನಾಯಕರು ಕಾಂಗ್ರೆಸ್ ಸೇರ್ಪಡೆ ಬಗ್ಗೆ ಸಿಎಂ ಸಿದ್ದರಾಮಯ್ಯ ಬಳಿ ಮಾತುಕತೆ ನಡೆಸುತ್ತೇನೆ. ಬಿಜೆಪಿ ಮತ್ತು‌ ಜೆಡಿಎಸ್ ಮೈತ್ರಿಯ ಬಗ್ಗೆ ಸಾಕಷ್ಟು ಜನರಿಗೆ ಆಕ್ರೋಶ ಇದೆ. ನಮ್ಮ ಪಕ್ಷದ ನಿಲುವಿನ ಬಗ್ಗೆ ನಾವು ಮೊದಲು ಮಾತನಾಡಿ ನಂತರದಲ್ಲಿ ಮುಂದಿನ ನಿರ್ಧಾರಕ್ಕೆ ಬರುತ್ತೇವೆ ಎಂದರು.

ಜೊತೆಗೆ ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆಯೂ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.

ಪದವೀಧರ, ಶಿಕ್ಷಕರ ಕ್ಷೇತ್ರದ ಎಂಎಲ್ಸಿ ಚುನಾವಣೆ ಬಗ್ಗೆ ‌ಮಾತಾಡುತ್ತಿದ್ದೇನೆ. ಹಿರಿಯ ನಾಯಕರನ್ನು ಕರೆದು ಈ ಕುರಿತಾಗಿ ಮಾತಾಡುತ್ತಿದ್ದೇನೆ. ಸಚಿವರಾದ ಈಶ್ವರ್ ಖಂಡ್ರೆ, ಪ್ರಿಯಾಂಕ್, ರಾಮಲಿಂಗರೆಡ್ಡಿ ಅವರ ಜೊತೆ ಮಾತಾಡುತ್ತಿದ್ದೇನೆ. ಎಲೆಕ್ಷನ್ ಗೆ ನಾವು ಅಭ್ಯರ್ಥಿಗಳನ್ನು ಘೋಷಣೆ ಮಾಡಬೇಕಿದೆ ಎಂದರು.

ಇನ್ನು ಇದೇ ವೇಳೆ ಬಿ.ಕೆ ಹರಿಪ್ರಸಾದ್ ಅವರ ಭೇಟಿಯ ಕುರಿತಾಗಿ ಪ್ರತಿಕ್ರಿಯೆ ನೀಡಿ, ಲೋಕಸಭೆ ಚುನಾವಣೆ ಮುನ್ನ ಕೆಲವರನ್ನು ನೇಮಕ‌ ಮಾಡಬೇಕು. ವರ್ಕಿಂಗ್ ಕಮಿಟಿ ಸದಸ್ಯರನ್ನು ನೇಮಕ ಮಾಡಲು ಆಗಿಲ್ಲ. ಅಭ್ಯರ್ಥಿಗಳ ವಿಚಾರದಲ್ಲಿ ಹಿರಿಯ ನಾಯಕರ ಅಭಿಪ್ರಾಯ ಪಡೆಯಯತ್ತಿದ್ದೇನೆ ಎಂದು ಡಿಕೆ ಶಿವಕುಮಾರ್ ತಿಳಿಸಿದರು.

ಶುಕ್ರವಾರ ಕರ್ನಾಟಕ ಬಂದ್‌!

ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಹಲವು ಸಂಘಟನೆಗಳು ಶುಕ್ರವಾರ ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು, ಖಾಸಗಿ ಸಾರಿಗೆ ಒಕ್ಕೂಟಗಳು, ಕಾರ್ಮಿಕ ಸಂಘಟನೆಗಳು ಸೇರಿ ನೂರಾರು ಸಂಘಟನೆಗಳು ಬೆಂಬಲ ನೀಡಿವೆ. ಇದರಿಂದ ಶುಕ್ರವಾರ ಕರ್ನಾಟಕ ಸಂಪೂರ್ಣ ಸ್ತಬ್ಧಗೊಳ್ಳುವ ಸಾಧ್ಯತೆ ಇದೆ. ಅಗತ್ಯ ಸೇವೆಗಳ ಜೊತೆ ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸಂಚಾರ ಇರುವ ನಿರೀಕ್ಷೆ ಇದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ