Mysore
23
overcast clouds
Light
Dark

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಉದ್ದೇಶವಿಲ್ಲ : ಉಲ್ಟಾ ಹೊಡೆದ ಕನಕಪುರ ಬಂಡೆ

ಬೆಂಗಳೂರು : ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಉದ್ದೇಶವಿಲ್ಲ. ಕನಕಪುರ, ರಾಮನಗರ, ಚನ್ನಪಟ್ಟಣ ಸಂಬಂಧ ಉಳಿಸಿಕೊಳ್ಳಬೇಕು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ತಮ್ಮ ಹೇಳಿಕೆಗೆ ಈಗ ಉಲ್ಟಾ ಹೊಡೆದಿದ್ದಾರೆ.

ಈ ಮೊದಲು ಕನಕಪುರವನ್ನು ಬೆಂಗಳೂರಿಗೆ ಸೇರಿಸುತ್ತೇನೆ ಎಂದು ಡಿ.ಕೆ. ಶಿವಕುಮಾರ್‌ ನೀಡಿದ್ದ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಕೋಲಾಹಲ ಸೃಷ್ಟಿಗೆ ಕಾರಣವಾಗಿತ್ತು. ಅಲ್ಲದೆ ಒಕ್ಕಲಿಗ ನಾಯಕರ ನಡುವೆ ಕನಕಪುರ ವಿಚಾರದಲ್ಲಿ ಮಾತಿನ ವಾಗ್ಯುದ್ದವೇ ನಡೆದಿತ್ತು.

ಇದೆಲ್ಲದರ ನಡುವೆ ಇದ್ದಕ್ಕಿದ್ದಂತೆ ಒಂದೇ ದಿನದಲ್ಲಿ ಡಿಕೆಶಿ ಉಲ್ಟಾ ಹೊಡೆದಿದ್ದೇಕೆ? ಎಂಬ ಪ್ರಶ್ನೆ ಮೂಡಿದ್ದು, ರಾಜ್ಯ ರಾಜಕಾರಣದಲ್ಲಿ ಕನಕಪುರ ಯುದ್ದಕಣದ ಕಾವು ಜೋರಾಗಿ ಒಕ್ಕಲಿಗ ನಾಯಕರ ನಡುವೆ ರಣಾಂಗಣವೇ ಸೃಷ್ಟಿಯಾಗಿತ್ತು.

ಕನಕಪುರವನ್ನು ಬೆಂಗಳೂರಿಗೆ ಸೇರಿಸುವ ಕುರಿತು ಯಾವಾಗ ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರೋ, ಆಗಲೇ ಇದೇ ವಿಚಾರಕ್ಕೆ ರಾಜಕೀಯ ಕೆಸರೆರಚಾಟ ಜೋರಾಗಿ, ದಳಪತಿ ಹೆಚ್.ಡಿ.ಕುಮಾರಸ್ವಾಮಿ ಡಿಸಿಎಂ ವಿರುದ್ಧ ಹಿಗ್ಗಾ-ಮುಗ್ಗಾ ವಾಗ್ದಾಳಿ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದರು.

ಅಲ್ಲದೆ ಡಿಕೆ ಶಿವಕುಮಾರ್ ನಡೆಯಿಂದ ಸಿಟ್ಟಿಗೆದ್ದಿರುವ ಕುಮಾರಸ್ವಾಮಿ, ಡಿಸಿಎಂ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ ಆಕ್ರೋಶವನ್ನು ಹೊರಹಾಕಿದ್ದಾರೆ. ಇತ್ತ ಡಿಕೆ ಶಿವಕುಮಾರ್ ಹೇಳಿಕೆಗೆ ಕಾಂಗ್ರೆಸ್‌ನಲ್ಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ಸ್ವತಃ ಈ ವಿಚಾರದಲ್ಲಿ ಎಳ್ಳಷ್ಟೂ ಆಸಕ್ತಿ ತೋರದ ಸಿಎಂ ಸಿದ್ದರಾಮಯ್ಯ, ರಾಮನಗರ ವಿಚಾರವನ್ನು ಅವರನ್ನೇ ಕೇಳಿ ಎನ್ನುವ ಮೂಲಕ ಡಿಕೆ ಶಿವಕುಮಾರತ್ತ ಬೊಟ್ಟು ಮಾಡಿದ್ದರು.

ಇದೀಗ ಇದ್ದಕ್ಕಿದಂತೆ ತಮ್ಮ ಹೇಳಿಕೆಯಿಂದ ಯೂಟರ್ನ್ ಹೊಡೆದಿರುವ ಡಿಕೆ ಶಿವಕುಮಾರ್ ರಾಮನಗರವನ್ನು ಬೆಂಗಳೂರಿಗೆ ಸೇರಿಸುವ ವಿಚಾರದಲ್ಲಿ ಹಿಂದಡಿ ಇಟ್ಟಿರುವುದನ್ನು ನೋಡಿದಾಗ ತಾವೇ ಹುಟ್ಟಿಸಿ ರಾಜಕೀಯ ಟೀಕೆ, ಟಪ್ಪಣಿಗಳಿಗೆ ಕಾರಣವಾಗಿದ್ದ ವಿವಾದಕ್ಕೆ ತಾವೇ ಅಂತ್ಯ ಹಾಡಿದ್ದಾರೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ