Mysore
24
overcast clouds

Social Media

ಮಂಗಳವಾರ, 24 ಜೂನ್ 2025
Light
Dark

ಕೇರಳಕ್ಕೆ ನಂದಿನಿ : ಮಿಲ್ಮಾ ವಿರೋಧ

ತಿರುವನಂತಪುರ : ಗುಜರಾತ್‌ನ ‘ಅಮುಲ್’ ಉತ್ಪನ್ನಗಳ ಮಾರಾಟ– ಪ್ರಚಾರಕ್ಕೆ ಕರ್ನಾಟಕದಲ್ಲಿ ತೀವ್ರ ಪ್ರತಿರೋಧ ಎದುರಾಗಿರುವ ನಡುವೆ, ನಂದಿನಿ ಬ್ರಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡಲು ಕೇರಳದಲ್ಲಿ ಮಳಿಗೆಗಳನ್ನು ತೆರೆಯುತ್ತಿರುವ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ಧಾರಕ್ಕೆ ಮಿಲ್ಮಾ ಬ್ರಾಂಡ್ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸುವ ಕೇರಳ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟ (ಕೆಎಂಎಂಎಫ್‌) ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಮಿಲ್ಮಾ ಅಧ್ಯಕ್ಷ ಕೆ.ಎಸ್. ಮಣಿ ಅವರು, ಗುಜರಾತ್ ಸಹಕಾರಿ ಹಾಲು ಮಾರುಕಟ್ಟೆ ಒಕ್ಕೂಟದ ಅಮುಲ್ ಉತ್ಪನ್ನಗಳು ಕರ್ನಾಟಕ ಪ್ರವೇಶಿಸುವುದಕ್ಕೆ ಆಕ್ಷೇಪಿಸುವ ಕೆಎಂಎಫ್‌, ಇದೇ ಸಮಯದಲ್ಲಿ ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆಯುತ್ತಿರುವ ನಿಲುವನ್ನು ಪ್ರಶ್ನಿಸಿದ್ದಾರೆ.

ಕಳೆದ ಕೆಲವು ತಿಂಗಳಿಂದ ಕೇರಳದ ಮಲಪ್ಪುರಂನ ಮಂಜೇರಿಯಲ್ಲಿ ಮತ್ತು ಕೊಚ್ಚಿಯ ವೈಟ್ಟಿಲ್ಲಾದಲ್ಲಿ ನಂದಿನಿಯ ಎರಡು ಮಳಿಗೆಗಳನ್ನು ತೆರೆಯಲಾಗಿದೆ. ಅಲ್ಲದೇ ಕೇರಳದಲ್ಲಿ ಸುಮಾರು 100 ಫ್ರಾಂಚೈಸಿಗಳಿಗಾಗಿ ಕೆಎಂಎಫ್‌ ಅರ್ಜಿಗಳನ್ನು ಆಹ್ವಾನಿಸಿದೆ.

ಕೇರಳದಲ್ಲಿ ನಂದಿನಿ ಉತ್ಪನ್ನಗಳ ಮಳಿಗೆಗಳನ್ನು ತೆರೆಯುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ, ಈಗಾಗಲೇ ಕೆಎಂಎಫ್ ಅಧ್ಯಕ್ಷರಿಗೆ ಪತ್ರ ಬರೆಯಲಾಗಿದೆ. ಆದರೆ, ಇನ್ನೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಮಣಿ ತಿಳಿಸಿದರು.

‘ಕೇರಳದಲ್ಲಿ ಹೆಚ್ಚುವರಿ ಹಾಲು ಇದ್ದಾಗಲೂ ಇತರ ರಾಜ್ಯಗಳಿಗೆ ಮಿಲ್ಮಾ ಕಾಲಿಡಲಿಲ್ಲ. ಆದರೆ, ನಮ್ಮ ರಾಜ್ಯದಲ್ಲಿ ಕೆಎಂಎಫ್‌ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಳಿಗೆಗಳನ್ನು ತೆರೆಯುತ್ತಿರುವ ನಿರ್ಧಾರವು ಅನೈತಿಕ ಮತ್ತು ಸಹಕಾರಿ ತತ್ವಗಳಿಗೆ ವಿರುದ್ಧವಾಗಿದೆ. ಇದು ಅನಾರೋಗ್ಯಕರ ಸ್ಪರ್ಧೆಗೆ ಕಾರಣವಾಗುತ್ತದೆ’ ಎಂದು ಮಣಿ ಹೇಳಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!