Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಹಿಂದೂ ಸಮಾಜದ ಅನಿಷ್ಟಗಳಿಗೆ ಮುಸ್ಲಿಮರ ಆಕ್ರಮಣವೇ ಕಾರಣ : ಆರ್‌ಎಸ್ಎಸ್‌ ಮುಖಂಡ

ನವದೆಹಲಿ : ಹಿಂದೂ ಸಮಾಜದ ಅನಿಷ್ಟಗಳಿಗೆ ಮುಸ್ಲಿಮರ ಆಕ್ರಮಣವೇ ಕಾರಣ ಎಂದು ಆರ್‌ಎಸ್‍ಎಸ್ ಜಂಟಿ ಪ್ರಧಾನ ಕಾರ್ಯದರ್ಶಿ ಕೃಷ್ಣ ಗೋಪಾಲ್ ವ್ಯಾಖ್ಯಾನಿಸಿದ್ದಾರೆ.

ನಾರಿ ಶಕ್ತಿ ಸಂಗಮ್‌ನ ಆಶ್ರಯದಲ್ಲಿ ದೆಹಲಿ ವಿಶ್ವವಿದ್ಯಾಲಯದಲ್ಲಿ ಮಹಿಳಾ ಸಬಲೀಕರಣದ ಕುರಿತು ಮಾತನಾಡಿದ ಅವರು, 12 ನೇ ಶತಮಾನದ ಮೊದಲು, ಮಹಿಳೆಯರು ಸ್ವತಂತ್ರರಾಗಿದ್ದರು ಮತ್ತು ಭಾರತೀಯ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದ್ದರು. ಬಾಲ್ಯ ವಿವಾಹ, ಸತಿಪದ್ದತಿ, ವಿಧವಾ ವಿವಾಹ ನಿಷೇಧದಂತಹ ಸಾಮಾಜಿಕ ಅನಿಷ್ಟಗಳು ಭಾರತಕ್ಕೆ ಬರಲು ಇಸ್ಲಾಮಿಕ್ ಆಕ್ರಮಣವೇ ಕಾರಣ. ಮಧ್ಯಕಾಲೀನ ಅವಧಿಯಲ್ಲಿ ಮುಸ್ಲಿಂ ಆಕ್ರಮಣಕಾರರಿಂದ ಮಹಿಳೆಯರನ್ನು ರಕ್ಷಿಸಿಕೊಳ್ಳಲು ಅವರ ಮೇಲೆ ನಾನಾ ನಿರ್ಬಂಧ ಹೇರಲಾಗುತ್ತಿತ್ತು ಎಂದರು.

ಮಧ್ಯಯುಗದಲ್ಲಿ ದೇವಸ್ಥಾನಗಳನ್ನು ಧ್ವಂಸ ಮಾಡಲಾಯಿತು. ವಿಶ್ವವಿದ್ಯಾನಿಲಯಗಳನ್ನು ನಾಶಪಡಿಸಲಾಯಿತು ಮತ್ತು ಮಹಿಳೆಯರು ಅಪಾಯದಲ್ಲಿದ್ದರು. ಲಕ್ಷಗಟ್ಟಲೆ ಮಹಿಳೆಯರನ್ನು ಅಪಹರಿಸಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಲಾಯಿತು. ಅಹ್ಮದ್ ಷಾ ಅಬ್ದಾಲಿ, ಮಹಮ್ಮದ್ ಘೋರಿ, ಮಹಮ್ಮದ್ ಘಜ್ನಿ ಸೇರಿದಂತೆ ಎಲ್ಲರೂ ಇಲ್ಲಿಂದ ಮಹಿಳೆಯರನ್ನು ಕದ್ದು ಮಾರಾಟ ಮಾಡಿದ್ದರು. ಅದೊಂದು ಮಹಾ ಅವಮಾನದ ಯುಗ. ಆದ್ದರಿಂದ ನಮ್ಮ ಮಹಿಳೆಯರನ್ನು ರಕ್ಷಿಸಲು ನಮ್ಮದೇ ಸಮಾಜವು ಅವರ ಮೇಲೆ ಅನೇಕ ನಿರ್ಬಂಧಗಳನ್ನು ಹಾಕಿತ್ತು ಎಂದು ಗೋಪಾಲ್ ಹೇಳಿದರು.

ರಾಮ ಮತ್ತು ಕೃಷ್ಣ ಒಂದು ನಿರ್ದಿಷ್ಟ ವಯಸ್ಸನ್ನು ತಲುಪಿದ ನಂತರ ವಿವಾಹವಾಗಿದ್ದರು. ಆದರೆ ಇಸ್ಲಾಮಿಕ್ ಆಕ್ರಮಣಕಾರರಿಂದ ಬಾಲ್ಯ ವಿವಾಹ ಪ್ರಾರಂಭವಾಯಿತು. ಇಸ್ಲಾಮಿಕ್ ಆಕ್ರಮಣಗಳ ಮೊದಲು ಭಾರತದಲ್ಲಿ ಸತಿ ಸಂಪ್ರದಾಯವೇ ಇರಲಿಲ್ಲ ಎಂದು ಅವರು ಹೇಳಿದರು.

ಮುಸ್ಲಿಮರ ದಾಳಿಯಿಂದ ಮಹಿಳೆಯರು ಕ್ರಮೇಣ ಅಶಿಕ್ಷಿತರಾದರು ಮತ್ತು ಬಾಲ್ಯ ವಿವಾಹದಂತಹ ಸಂಪ್ರದಾಯಗಳು ಹರಿದಾಡಿದವು. ವಿಧವೆಯ ಮರುವಿವಾಹವನ್ನು ನಿಲ್ಲಿಸಲಾಯಿತು ಮತ್ತು ಮಹಿಳೆಯರ ಮೇಲೆ ಬಹು ನಿರ್ಬಂಧಗಳನ್ನು ಹಾಕಲಾಯಿತು. ಈ ನಿರ್ಬಂಧಗಳು ನಮ್ಮ ಸಮಾಜದ ನಿಯಮಗಳಲ್ಲ. ಆದರೆ ತುರ್ತು ಪರಿಸ್ಥಿತಿ ಯನ್ನು ಎದುರಿಸಲು ಸಮಾಜವೇ ಹೇರಿದ ನಿರ್ಬಂಧ. ಈ ನಿರ್ಬಂಧಗಳ ಹೊರತಾಗಿಯೂ, 12 ಮತ್ತು 18ನೇ ಶತಮಾನದ ನಡುವೆ ಸಮಾಜದಲ್ಲಿ ಮಹಿಳೆಯರು ದೊಡ್ಡ ಪಾತ್ರವನ್ನು ವಹಿಸಿದ್ದರು ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ