ಮಂಗಳೂರು : ಬುಧವಾರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಹಿಂದೂ ಯುವತಿಯ ಜೊತೆಯಲ್ಲಿದ್ದ ಕಾರಣಕ್ಕೆ ಮುಸ್ಲಿಂ ಯುವಕನ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಜರಂಗದಳದ ಕಾರ್ಯಕರ್ತರು ಎಂದು ಶಂಕಿಸಲಾದ ನಾಲ್ವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಒಳಮೊಗ್ರು ಗ್ರಾಮದ ನಿವಾಸಿ ಎಸ್ ಪ್ರದೀಪ್ (19), ಕೆದಂಬಾಡಿಯ ದಿನೇಶ್ ಗೌಡ (25), ಗುತ್ತುಮನೆಯ ನಿಶಾಂತ್ ಕುಮಾರ್ (19) ಮತ್ತು ಆರ್ಯಾಪು ಗ್ರಾಮದ ಪ್ರಜ್ವಲ್ (23) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮರೇಲ್ ಕಾಡುಮನೆ ನಿವಾಸಿ ಮೊಹಮ್ಮದ್ ಫರೀಷ್ (18) ತನ್ನ ಸಹಪಾಠಿ ಹಿಂದೂ ಯುವತಿಯೊಂದಿಗೆ ಅಂಗಡಿಯೊಂದರಲ್ಲಿ ಜ್ಯೂಸ್ ಕುಡಿಯುತ್ತಿದ್ದಾಗ ಜನರ ಗುಂಪೊಂದು ದಾಳಿ ಮಾಡಿದೆ.ಭೀಕರ ಹಲ್ಲೆಯಿಂದ ಫರೀಷ್ ಅವರ ದೇಹದ ಮೇಲೆ ಆಳವಾದ ಗಾಯಗಳಾಗಿವೆ. ಫರೀಷ್ ಮತ್ತು ಹಿಂದೂ ಯುವತಿ ಪುತ್ತೂರಿನ ಕಬಕ ಸರ್ಕಾರಿ ಕಾಲೇಜಿನ ವಿದ್ಯಾರ್ಥಿಗಳು. ಸದ್ಯ ಫರೀಷ್ ಪುತ್ತೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.