ಹಾಸನ: ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಕಚೇರಿಯಲ್ಲಿ ಪಾರ್ಸೆಲ್ ಬಂದಿದ್ದ ಮಿಕ್ಸಿ ಸ್ಫೋಟವಾಗಿರುವ ಘಟನೆ ಸಂಬಂಧ ಹಾಸನ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ.
ಘಟನೆಯಲ್ಲಿ ಅಂಗಡಿ ಮಾಲೀಕ ಶಶಿ ಗಂಭೀರ ಗಾಯಗೊಂಡಿದ್ದು, ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎರಡು ದಿನಗಳ ಹಿಂದೆ ಡಿಟಿಡಿಸಿ ಕೊರಿಯರ್ ಕಚೇರಿಗೆ ಮಿಕ್ಸಿ ಬಾಕ್ಸ್ ಪಾರ್ಸೆಲ್ ಗೆ ಬಂದಿತ್ತು. ಅಂಗಡಿ ಮಾಲೀಕ ಶಶಿ ಬಾಕ್ಸ್ನಲ್ಲಿ ನಮೂದಿಸಲಾದ ಹೆಸರಿಗೆ ನೀಡಿದ್ದರು. ಆದರೆ ಆ ವ್ಯಕ್ತಿ ಎರಡು ದಿನಗಳ ಬಳಿಕ ಮಿಕ್ಸಿ ಸೂಕ್ತ ವಿಳಾಸದಿಂದ ಬಂದಿಲ್ಲ ಎಂದು ಡಿಟಿಡಿಸಿ ಅಂಗಡಿಗೆ ವಾಪಾಸ್ ನೀಡಿದ್ದಾನೆ. ವಾಪಸ್ ಪಡೆಯುವ ವೇಳೆ ಶಶಿ ಮಿಕ್ಸಿ ಆನ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಮಿಕ್ಸಿ ಏಕಾಏಕಿ ಸ್ಫೋಟಗೊಂಡಿದೆ.
ಸ್ಫೋಟಗೊಂಡ ತೀವ್ರತೆಗೆ ಕೊರಿಯರ್ ಕಚೇರಿಯ ಗ್ಲಾಸ್ ಪುಡಿಪುಡಿಯಾಗಿದ್ದು, ಗೋಡೆಗಳಿಗೂ ಹಾನಿಯಾಗಿದೆ. ಘಟನೆಯಲ್ಲಿ ಮಾಲೀಕ ಶಶಿ ಅವರ ಕೈ, ತಲೆ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿದೆ. ಹಾಸನ ಬಡಾವಣೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಎಸ್ಪಿ ಹರಿರಾಮ್ ಶಂಕರ್ ಆಸ್ಪತ್ರೆಗೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಎಸ್ಪಿ ಹರಿರಾಮ್ ಶಂಕರ್, “ಕೊರಿಯರ್ ಆಫೀಸ್ನಲ್ಲಿ ಕೆಲಸ ಮಾಡುವ ವ್ಯಕ್ತಿಗೆ ದೇಹದ ನಾಲ್ಕು ಭಾಗದಲ್ಲಿ ಪೆಟ್ಟಾಗಿದೆ. ಯಾವುದೇ ಪ್ರಾಣಾಪಾಯ ಇಲ್ಲ. ಮಿಕ್ಸಿಯ ಬ್ಲೇಡ್ನಿಂದ ಅವರಿಗೆ ಪೆಟ್ಟಾಗಿದೆ ʼʼ ಎಂದು ತಿಳಿಸಿದ್ದಾರೆ.
“ಮೈಸೂರಿನಿಂದ ಎಫ್ಎಸ್ಎಲ್ ಅಧಿಕಾರಿಗಳು ಹಾಸನಕ್ಕೆ ಆಗಮಿಸಿದ್ದು ಮಿಕ್ಸಿ ಯಾಕೆ ಮತ್ತು ಹೇಗೆ ಬ್ಲಾಸ್ಟ್ ಆಗಿದೆ ಎಂದು ಪರಿಶೀಲನೆ ನಡೆಯುತ್ತದೆ. ಕೊರಿಯರ್ ಎಲ್ಲಿಂದ ಬಂತು ಎನ್ನುವ ಮಾಹಿತಿ ಇದೆ. ಎಲ್ಲವನ್ನು ನಾವು ಪರಿಶೀಲನೆ ನಡೆಸುತ್ತಿದ್ದೇವೆ. ಯಾರೂ ಊಹಾಪೋಹಗಳಿಗೆ ಒಳಗಾಗಿ ಗೊಂದಲ ಆಗುವುದು ಬೇಡ. ಮಿಕ್ಸಿ ಶಾರ್ಟ್ ಸರ್ಕ್ಯೂಟ್ನಿಂದ ಸ್ಫೋಟಗೊಂಡಿದೆಯೋ ಅಥವಾ ಬೇರೆ ಕಾರಣ ಎನ್ನುವುದು ತನಿಖೆ ಬಳಿಕ ಗೊತ್ತಾಗಲಿದೆ. ಸದ್ಯಕ್ಕೆ ಯಾವುದೇ ಆತಂಕ ಇಲ್ಲ,” ಎಂದು ಎಸ್ ಪಿ ತಿಳಿಸಿದ್ದಾರೆ.