ಬೆಂಗಳೂರು: ಕಾವೇರಿ ನೀರಿನ ವಿಚಾರಕ್ಕೆ ತಮಿಳುನಾಡಿನೊಂದಿಗೆ ನಡೆಯುವ ಮುಸುಕಿನ ಗುದ್ದಾಟ ಇಂದು ನಿನ್ನೆಯದಲ್ಲ. ಕಳೆದ ಹಲವು ದಶಕಗಳಿಂದಲೇ ನಡೆಯುತ್ತಲೇ ಬಂದಿದೆ. ಆದರೆ, ಈವರೆಗೂ ತಾರ್ತಿಕ ಅಂತ್ಯ ಮಾತ್ರ ಕಂಡಿಲ್ಲ. ಈ ನಡುವೆ ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ಮೇಕೆದಾಟು ಯೋಜನೆಯನ್ನು ಜಾರಿಗೆ ತಂದೇ ತರ್ತೀವಿ ಅನ್ನೋ ನಿರ್ಧಾರಕ್ಕೆ ಬಂದಿದೆ. ಅದಕ್ಕಾಗಿ ಇಂದು (ಜುಲೈ 7) ಮಂಡಣೆಯಾದ ಬಜೆಟ್‌ನಲ್ಲಿ ಮೇಕೆದಾಟು ಯೋಜನೆ ಸಲುವಾಗಿಯೇ ಸಾಕಷ್ಟು ಅನುದಾನವನ್ನೂ ನಿಗದಿಪಡಿಸಿದೆ.
ಈ ಯೋಜನೆ ಒಂದು ವೇಳೆ ಸಾಕಾರಗೊಂಡರೆ, ಮೇಕೆದಾಟುವಿನಿಂದ 90 ಕಿ. ಮೀ ದೂರವಿರುವ ಬೆಂಗಳೂರು ನಗರಕ್ಕೆ ಕುಡಿಯುವ ನೀರಿನ ದಾಹ ನೀಗಲಿದೆ. ಇದೀಗ ಈ ಯೋಜನೆಯ ಅನುಷ್ಠಾನಕ್ಕೆ ಹೊಸ ಸರ್ಕಾರದ ಈ ಅವಧಿಯಲ್ಲಿ ಬಜೆಟ್ ಮೂಲಕ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಿದ್ದಾರೆ . ಈ ಬಗ್ಗೆ ಪರ ವಿರೋಧ ಚರ್ಚೆಗಳೂ ಮುನ್ನೆಲೆಗೆ ಬರುತ್ತಿವೆ. ಇದೀಗ ನಟ, ಸಾಮಾಜಿಕ ಕಾರ್ಯಕರ್ತ ಚೇತನ್ ಅಹಿಂಸಾ ಸಹ ಪ್ರತಿಕ್ರಿಯೆ ನೀಡಿದ್ದಾರೆ.
ಇದೊಂದು ಕೆಟ್ಟ ಯೋಜನೆ: ರಾಜಕೀಯ ಸೇರಿ ಹಲವು ವಿಚಾರಗಳ ಬಗ್ಗೆ ಸದಾ ತಮ್ಮ ಹೇಳಿಕೆಯನ್ನು ದಾಖಲಿಸುವ ನಟ ಚೇತನ್ ಅಹಿಂಸಾ, ಮೇಕೆದಾಟು ಯೋಜನೆಗೆ ಈ ಸಲದ ಬಜೆಟ್‌ನಲ್ಲಿ 1000 ಕೋಟಿ ಅನುದಾನವನ್ನು ಕಾಂಗ್ರೆಸ್ ಸರ್ಕಾರ ಮೀಸಲಿಟ್ಟಿದೆ. ಹೀಗೆ ಮೀಸಿಲಿಟ್ಟಿದ್ದೇ ತಡ, “ಈ ಮೇಕೆದಾಟು ಯೋಜನೆಯೇ ಒಂದು ಕೆಟ್ಟ ಯೋಜನೆ, ಇದರಿಂದ ಅನುಕೂಲಕ್ಕಿಂತ ಅನಾನುಕೂಲವೇ ಅಧಿಕ ಎಂದು ಚೇತನ್, ತಮ್ಮ ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದಾರೆ.
ಚೇತನ್ ಪೋಸ್ಟ್: “ಮೇಕೆದಾಟು ಯೋಜನೆಗೆ ಅನುಮತಿ ಪಡೆಯಲು ಕ್ರಮ ಕೈಗೊಳ್ಳಲಾಗುವುದು ಎಂದು ಬಜೆಟ್ ಭಾಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದ್ದಾರೆ. ಇದೊಂದು ಕೆಟ್ಟ ಯೋಜನೆ. ವಿಪರ್ಯಾಸವೆಂದರೆ, ‘ಪರಿಸರ’ ಮತ್ತು ‘ಪ್ರವಾಹ ನಿರ್ವಹಣೆ’ಯೇ ನಮ್ಮ ಸರ್ಕಾರವು ಜಯಿಸಲು ಪ್ರಯತ್ನಿಸುತ್ತಿರುವ ಮುಖ್ಯ ಸವಾಲುಗಳು. ಮೇಕೆದಾಟು ಅಣೆಕಟ್ಟು ಪರಿಸರವನ್ನು ನಾಶಪಡಿಸುತ್ತದೆ. ಬೆಂಗಳೂರಿನ ಬಳಿಯ ಹಳ್ಳಿಗಳಲ್ಲಿ ಇದರಿಂದ ಪ್ರವಾಹ ಸಂಭವಿಸುತ್ತದೆ” ಎಂದು ಹೇಳಿಕೊಂಡಿದ್ದಾರೆ.