ಮುಂಬೈ: ಸಿಂಗಾಪುರದ ಸರಕಾರಿ ಸ್ವಾಮ್ಯದ ಟೆಮಾಸೆಕ್ ಹೋಲ್ಡಿಂಗ್ಸ್ ಕಂಪನಿಯು ಕರ್ನಾಟಕದ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಶೇ. 59ರಷ್ಟು ಷೇರುಗಳನ್ನು ಖರೀದಿಸಿದೆ. ಸುಮಾರು 40,000 ಕೋಟಿ ರೂ.ಗಳ ಬೃಹತ್ ಮೊತ್ತದ ಖರೀದಿ ಒಪ್ಪಂದ ಇದಾಗಿದೆ ಎಂದು ಮೂಲಗಳು ತಿಳಿಸಿವೆ. ಇದರ ಅಧಿಕೃತ ಪ್ರಕಟಣೆಯು ಮುಂದಿನ ವಾರ ಹೊರಬೀಳುವ ನಿರೀಕ್ಷೆ ಇದೆ.
ಮಣಿಪಾಲ್ ಹಾಸ್ಪಿಟಲ್ಸ್ ಭಾರತದ ಆರೋಗ್ಯ ವಲಯದಲ್ಲಿ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಹೊಸ ಡೀಲ್ ಮೂಲಕ ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನಲ್ಲಿನ ಬಹುತೇಕ ಷೇರುಗಳನ್ನು ಟೆಮಾಸೆಕ್ ಹೋಲ್ಡಿಂಗ್ಸ್ ತನ್ನ ವಶಕ್ಕೆ ಪಡೆದಂತಾಗಿದೆ.
ಟೆಮಾಸೆಕ್ ಅಧೀನದ ಶಿಯಾರ್ಸ್ ಹೆಲ್ತ್ ಈ ಮೊದಲು ಮಣಿಪಾಲ್‌ನ ಶೇ. 18ರಷ್ಟು ಷೇರುಗಳನ್ನು ಹೊಂದಿತ್ತು. ಈಗ ಮತ್ತೆ ಶೇಕಡಾ 41ರಷ್ಟು ಷೇರುಗಳನ್ನು ಖರೀದಿಸಿದ್ದು, ಒಟ್ಟು ಮಣಿಪಾಲ್‌ನ ಶೇ. 59ರಷ್ಟು ಷೇರುಗಳು ಈಗ ಅದರ ಬಳಿ ಇವೆ.
ಈ ಖರೀದಿ ವಹಿವಾಟಿನ ಬಳಿಕ, ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್‌ನ ಪ್ರವರ್ತಕ ರಂಜನ್ ಪೈ ಮತ್ತು ಅವರ ಕುಟುಂಬದ ಬಳಿ ಷೇರುಗಳ ಸಂಖ್ಯೆ ಶೇ. 30ರಷ್ಟು ಉಳಿಯಲಿವೆ. ಟಿಪಿಜಿ ಇಂಕ್ ಬಳಿ ಶೇ. 11ರಷ್ಟು ಷೇರುಗಳು ಇರಲಿವೆ.
ಈ ಖರೀದಿ ವ್ಯವಹಾರದ ಬಗ್ಗೆ ‘ಎಕನಾಮಿಕ್ ಟೈಮ್ಸ್’ ಕಳೆದ ವರ್ಷದ ಅಕ್ಟೋಬರ್‌ನಲ್ಲಿಯೇ ವರದಿ ಮಾಡಿತ್ತು. ಇದೀಗ ಒಪ್ಪಂದ ಅಂತಿಮ ಹಂತಕ್ಕೆ ಬಂದಿದ್ದರು, ಕರ್ನಾಟಕ ಉಡುಪಿ ಮೂಲದ ಮಣಿಪಾಲ್ ಹಾಸ್ಪಿಟಲ್ಸ್ ವಿದೇಶಿ ಕಂಪನಿ ತೆಕ್ಕೆಗೆ ಜಾರುತ್ತಿದೆ.
ಉಡುಪಿಯ ಮಣಿಪಾಲ ಮೂಲದ ಪೈ ಕುಟುಂಬವು ಭಾರತದ ಮೊದಲ ಖಾಸಗಿ ಮೆಡಿಕಲ್ ಕಾಲೇಜನ್ನು ಕರ್ನಾಟಕದ ಮಣಿಪಾಲದಲ್ಲಿ 1953ರಲ್ಲಿ ಆರಂಭಿಸಿತ್ತು. ಮಣಿಪಾಲ್ ಹಾಸ್ಟಿಟಲ್ಸ್ ಎನ್ನುವುದು ಅಪೋಲೋ ಹಾಸ್ಪಿಟಲ್ಸ್ ನಂತರದ ಸ್ಥಾನದಲ್ಲಿದ್ದು, ದೇಶದ ಎರಡನೇ ದೊಡ್ಡ ಆಸ್ಪತ್ರೆಗಳ ಸರಣಿಯಾಗಿದೆ. ಇದು ಮಣಿಪಾಲ್ ಎಜುಕೇಷನ್ ಮತ್ತು ಮೆಡಿಕಲ್ ಗ್ರೂಪ್‌ನ ಭಾಗವಾಗಿದೆ.
ಮಣಿಪಾಲ್ ಖರೀದಿ ವ್ಯವಹಾರ
ಮಣಿಪಾಲ್ ಹೆಲ್ತ್ ಎಂಟರ್‌ಪ್ರೈಸಸ್ ಇತ್ತೀಚೆಗಷ್ಟೇ ಕೋಲ್ಕೊತಾ ಮೂಲದ ಎಎಂಆರ್‌ಐ ಹಾಸ್ಪಿಟಲ್ಸ್ ಅನ್ನು 2,400 ಕೋಟಿ ರೂ.ಗೆ ಖರೀದಿಸಿತ್ತು. 2020ರಲ್ಲಿ ಭಾರತದಲ್ಲಿನ ಕೊಲಂಬಿಯಾ ಏಷ್ಯಾ ಹಾಸ್ಪಿಟಲ್ಸ್ ಅನ್ನು 2,100 ಕೋಟಿ ರೂ.ಗಳಿಗೆ ಖರೀದಿಸಿತ್ತು. ಜತೆಗೆ ಬೆಂಗಳೂರಿನ ವಿಕ್ರಂ ಹಾಸ್ಪಿಟಲ್ ಸೇರಿ ಹಲವು ಆಸ್ಪತ್ರೆಗಳನ್ನು ಖರೀದಿಸಿತ್ತು. ಹೀಗೆ ಹಲವು ಖರೀದಿ, ಸ್ವಾಧೀನಗಳ ಮೂಲಕ ಭಾರತದ ಎರಡನೇ ಅತಿದೊಡ್ಡ ಆಸ್ಪತ್ರೆಗಳ ಸಮೂಹವಾಗಿ ಬೆಳೆದಿದ್ದ ಮಣಿಪಾಲ್ ಹಾಸ್ಪಿಟಲ್ಸ್ ಇದೀಗ ಸಿಂಗಾಪುರ ಕಂಪನಿಯ ವಶವಾಗುತ್ತಿದೆ.