ಚಿಕ್ಕಮಗಳೂರು : ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮುಂದಿನ ಮುಖ್ಯಮಂತ್ರಿ ಆಗಲಿ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ನಿಡಘಟ್ಟಗ್ರಾಮದಲ್ಲಿ ಮಂಗಳವಾರ ನಡೆದ ಬಿಜೆಪಿ ಕಾರ್ಯಕರ್ತರ ಸಮಾವೇಶ ಮಾತನಾಡಿದ ಕೆ.ಎಸ್.ಈಶ್ವರಪ್ಪ ಈ ಚುನಾವಣೆಯಲ್ಲಿ ಸಿ.ಟಿ.ರವಿ ಅವರನ್ನು ನೀವು ಗೆಲ್ಲಿಸಬೇಕು, ಅವರು ಮುಂದಿನ ಮುಖ್ಯಮಂತ್ರಿ ಆಗಬೇಕು ಎಂದು ಹೇಳಿದರು.
ಸೋಮವಾರ ಮೈಸೂರಿನಲ್ಲಿ ಸಿ.ಟಿ.ರವಿ ಮಾತನಾಡುವ ವೇಳೆಯಲ್ಲಿ ನಾನೂ ಕೂಡ ಸಿಎಂ ಸ್ಥಾನದ ಆಕಾಂಕ್ಷಿ. ಎಲ್ಲ ಕಡೆಯಲ್ಲೂ ನಾನು ಸಿಎಂ ಆಗಬೇಕೆಂಬ ಅಪೇಕ್ಷೆ ಕಾರ್ಯಕರ್ತರಿಂದ ಕೇಳಿ ಬರುತ್ತಿದೆ ಎಂದಿದ್ದನ್ನು ಇಲ್ಲಿ ಸ್ಮರಿಸಬಹುದು.
ಡಿಕೆಶಿ, ಸಿದ್ದುಗೆ ಜೈಲು ಖಚಿತ : ಇನ್ನು ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಕೆ.ಎಸ್.ಈಶ್ವರಪ್ಪ, ಜಾಮೀನಿನ ಮೇಲಿರುವ ಡಿ.ಕೆ.ಶಿವಕುಮಾರ್ ಅರ್ಕಾವತಿ ಬಡಾವಣೆ ಹಗರಣದಲ್ಲಿ ಸಿದ್ದರಾಮಯ್ಯ ಮುಂದೊಂದು ದಿನ ಜೈಲಿಗೆ ಹೋಗುವುದು ಖಚಿತ ಎಂದರು. ಸಿದ್ದರಾಮಯ್ಯ ಅವರು ಅರ್ಕಾವತಿ ಬಡಾವಣೆ ಹಗರಣದಲ್ಲಿ .8000 ಕೋಟಿ ಲೂಟಿ ಹೊಡೆದಿದ್ದಾರೆ ಎಂದು ನಿವೃತ್ತ ನ್ಯಾಯಾಧೀಶ ಕೆಂಪಯ್ಯ ವರದಿ ಕೊಟ್ಟಿದ್ದಾರೆ. ಇದನ್ನು ಕಾಂಗ್ರೆಸ್ ಮುಚ್ಚಿಟ್ಟಿದೆ. ಡಿ.ಕೆ.ಶಿವಕುಮಾರ್ ತಿಹಾರ್ ಜೈಲಿನಲ್ಲಿದ್ದು ಬಂದವರು. ಇವರು ಜೈಲಿಗೆ ಹೋಗುವುದು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.





